ಮತ್ತೆ ಉಗ್ರರ ಕೆಂಗಣ್ಣು: ಕಾಶ್ಮೀರದಲ್ಲಿ ಹೈಅಲರ್ಟ್‌

ಪುಲ್ವಾಮಾದಲ್ಲಿ ಸ್ಫೋಟಕ ತುಂಬಿದ ವಾಹನದ ಮೂಲಕ ದಾಳಿ: ಪಾಕ್‌ ಮಾಹಿತಿ

Team Udayavani, Jun 17, 2019, 6:00 AM IST

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಯಿದೆ ಎಂಬ ಮಾಹಿತಿಯನ್ನು ಪಾಕಿಸ್ಥಾನವು ಭಾರತದೊಂದಿಗೆ ಹಂಚಿಕೊಂಡಿದ್ದು, ರಾಜ್ಯಾದ್ಯಂತ ಹೈಅಲರ್ಟ್‌ ಘೋಷಿಸಲಾಗಿದೆ.

ಅವಂತಿಪೋರಾ ಪ್ರದೇಶದ ಸಮೀಪದಲ್ಲೇ ಎಲ್ಲಾದರೂ ಉಗ್ರರು ಸುಧಾರಿತ ಸ್ಫೋಟಕಗಳು ತುಂಬಿದ ವಾಹನಗಳ ಮೂಲಕ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ಪಾಕಿ ಸ್ತಾನ ಮಾಹಿತಿ ನೀಡಿದೆ ಎಂದು ದಿ ಇಂಡಿಯನ್‌ ಎಕ್‌ ಪ್ರಸ್‌ ವರದಿ ಮಾಡಿದೆ. ಇದೇ ಮಾಹಿತಿಯನ್ನು ಅಮೆರಿಕ ದೊಂದಿಗೂ ಹಂಚಿಕೊಳ್ಳಲಾಗಿದೆ.

ಮೂಸಾ ಹತ್ಯೆಗೆ ಪ್ರತೀಕಾರ: ಅಲ್‌ಖೈದಾದ ಅಂಗ ಸಂಸ್ಥೆಯಾದ ಅನ್ಸಾರ್‌ ಗಜ್ವತ್‌-ಉಲ್‌-ಹಿಂದ್‌ನ ನೇತೃತ್ವ ವಹಿಸಿದ್ದ ಉಗ್ರ ಝಾಕೀರ್‌ ಮೂಸಾನನ್ನು ಕಳೆದ ತಿಂಗಳಷ್ಟೇ ತ್ರಾಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯಲಾಗಿತ್ತು. ಆತನ ಹತ್ಯೆಗೆ ಪ್ರತೀಕಾರ ತೀರಿಸುವ ಸಲುವಾಗಿ ಉಗ್ರರು ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಕಳೆದ ಫೆಬ್ರವರಿಯಲ್ಲಷ್ಟೇ ಪುಲ್ವಾಮಾದಲ್ಲಿ ಜೈಶ್‌-ಎ- ಮೊಹಮ್ಮದ್‌ ಉಗ್ರರು ನಡೆಸಿದ ಭೀಕರ ದಾಳಿಗೆ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಈಗ ಮತ್ತೂಮ್ಮೆ ಪುಲ್ವಾಮಾದಲ್ಲೇ ಉಗ್ರರು ದಾಳಿಗೆ ಸಂಚು ರೂಪಿಸಿರುವ ವಿಚಾರ ಬಹಿರಂಗವಾಗುತ್ತಲೇ, ರಾಜ್ಯಾ ದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಅಮರನಾಥ ಯಾತ್ರೆಗೆ ತೊಂದರೆಯಿಲ್ಲ: ಜುಲೈ 1ರಿಂದ ವಾರ್ಷಿಕ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಯಾತ್ರೆಗೆ ಯಾವುದೇ ಬೆದರಿಕೆಯಿಲ್ಲ ಎಂದು ಕಾಶ್ಮೀರದ ಪ್ರತ್ಯೇಕತಾವಾದಿಗಳು ರವಿವಾರ ಹೇಳಿದ್ದಾರೆ. ಜತೆಗೆ, ಜಮ್ಮು-ಕಾಶ್ಮೀರಕ್ಕೆ ಆಗಮಿಸುವ ಪ್ರವಾಸಿಗರು ಮತ್ತು ಯಾತ್ರಿ ಗಳು ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರಿ ಎಂದೂ ಮನವಿ ಮಾಡಿಕೊಂಡಿದ್ದಾರೆ.

ಪಾಕ್‌ನಿಂದ ಬಂದ ಹಣ ಪ್ರತ್ಯೇಕತಾವಾದಿಗಳ ಜೇಬಿಗೆ!
ಕಾಶ್ಮೀರದಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸಲು ಪಾಕಿಸ್ಥಾನ ಸಹಿತ ವಿದೇಶಗಳಿಂದ ಭಾರೀ ಪ್ರಮಾಣದಲ್ಲಿ ಹಣಕಾಸು ಪಡೆದಿರುವುದನ್ನು ಪ್ರತ್ಯೇಕತಾವಾದಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ. ಹುರಿಯತ್‌ ಕಾನ್ಫರೆನ್ಸ್‌ ಸೇರಿದಂತೆ ಅನೇಕ ಪ್ರತ್ಯೇಕತಾವಾದಿ ಸಂಘಟನೆಗಳ ನಾಯಕರನ್ನು ಹಲವು ತಿಂಗಳಿಂದ ವಿಚಾರಣೆಗೊಳಪಡಿಸುತ್ತಿರುವ ಎನ್‌ಐಎ ರವಿವಾರ ಈ ವಿಚಾರ ಬಹಿರಂಗಪಡಿಸಿದೆ. ವಿದೇಶಗಳಿಂದ ಹಣಕಾಸು ನೆರವು ಪಡೆಯುತ್ತಿದ್ದ ನಾಯಕರು, ಅದನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಆಸ್ತಿ ಖರೀದಿಸಲು, ಉದ್ದಿಮೆ ಕೈಗೊಳಕ್ಷೆು ಹಾಗೂ ತಮ್ಮ ಮಕ್ಕಳಿಗೆ ವಿದೇಶಗಳಲ್ಲಿ ವಿದ್ಯಾಭ್ಯಾಸ ಕಲ್ಪಿಸಲು ಈ ಹಣವನ್ನು ಬಳಕೆ ಮಾಡಿದ್ದರು. ಕಲ್ಲು ತೂರಾಟಗಾರರ ಪೋಸ್ಟರ್‌ ಬಾಯ್‌ ಎನಿಸಿಕೊಂಡಿರುವ ಮಸಾರತ್‌ ಆಲಂ, “ಪಾಕ್‌ ಮೂಲದ ಏಜೆಂಟರು ಹವಾಲಾ ಮೂಲಕ ಹಣವನ್ನು ಸೈಯದ್‌ ಶಾ ಗಿಲಾನಿಯಂಥ ಪ್ರತ್ಯೇಕತಾವಾದಿ ನಾಯಕರಿಗೆ ರವಾನಿಸುತ್ತಿದ್ದರು. ಒಮ್ಮೊಮ್ಮೆ ಹಣ ಸಂಗ್ರಹಕ್ಕೆ ಸಂಬಂಧಿಸಿ ಇವರ ನಡುವೆ ಜಗಳವೂ ಆಗುತ್ತಿತ್ತು’ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಎಫ್ಎಟಿಎ ಕೆಂಗಣ್ಣಿಗೆ ಪಾಕ್‌ ಮತ್ತೆ ಗುರಿ
ಪ್ಯಾರಿಸ್‌: ಉಗ್ರವಾದಕ್ಕೆ ಗುಪ್ತ ಮಾರ್ಗಗಳಲ್ಲಿ ಬರುವ ಆರ್ಥಿಕ ಸಹಾಯಗಳ ಮೇಲೆ ಹದ್ದಿನ ಕಣ್ಣಿಡುವ, ವಿವಿಧ ದೇಶಗಳ ಸರಕಾರಗಳ ಅಂತಾರಾಷ್ಟ್ರೀಯ ಸಂಸ್ಥೆಯಾದ
“ಫಿನಾನ್ಶಿಯಲ್‌ ಆ್ಯಕ್ಷನ್‌ ಟಾಸ್ಕ್ ಫೋರ್ಸ್‌’ನ (ಎಫ್ಎಟಿಎ) ಕೆಂಗಣ್ಣಿಗೆ ಪಾಕಿಸ್ಥಾನ ಮತ್ತೆ ಗುರಿಯಾಗುವ ಸಂಭವ ಹೆಚ್ಚಿದೆ.

ಉಗ್ರರಿಗೆ ಆರ್ಥಿಕ ಸಹಕಾರ ಕೊಡುವ ಆಪಾದನೆ ಹೊತ್ತಿರುವ ಪಾಕಿಸ್ಥಾನವನ್ನು 2018ರ ಜೂನ್‌ನಲ್ಲಿ ತನ್ನ “ಗ್ರೇ ಲಿಸ್ಟ್‌’ಗೆ ಸೇರಿಸಿದ್ದ ಎಫ್ಎಟಿಎ, ಅಮೆರಿಕದಿಂದ ಪಾಕಿಸ್ಥಾನಕ್ಕೆ ಬಂದಿದ್ದ 48 ಕೋಟಿ ರೂ. ಧನಸಹಾಯವು ಉಗ್ರರಿಗೆ ಸಂದಾಯವಾಗಿರುವ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ಕುರಿತಂತೆ, ತಾನು ಸೂಚಿಸುವ 27 ಅಂಶಗಳನ್ನು ಅಳವಡಿಸಿಕೊಂಡು ಉಗ್ರ ಸಂಘಟನೆಗಳಿಗೆ ಹಣ ಹೋಗಿರುವ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕೆಂದು ಸೂಚಿಸಿತ್ತು.

ವರದಿ ಸಲ್ಲಿಕೆಗೆ 15 ತಿಂಗಳುಗಳ ಗಡುವು ವಿಧಿಸಲಾಗಿದ್ದು, ಅದು ಇದೇ ಅಕ್ಟೋಬರ್‌ಗೆ ಮುಕ್ತಾಯವಾಗಲಿದೆ. ಆದರೆ, 27ರ ಪೈಕಿ 25 ಸೂಚನೆಗಳನ್ನು ಪಾಲಿಸುವಲ್ಲಿ ಪಾಕಿಸ್ಥಾನ ವಿಫ‌ಲವಾಗಿದೆ ಎಂಬುದನ್ನು ಎಫ್ಎಟಿಐ ಮನಗಂಡಿದೆ. ಇದು, ಫ್ಲೋರಿಡಾದಲ್ಲಿ ರವಿವಾರದಿಂದ ಶುರುವಾಗಿರುವ ಸಂಸ್ಥೆಯ ಮಹಾ ಸಮ್ಮೇಳನದಲ್ಲಿ ಚರ್ಚೆಗೆ ಬರಲಿದ್ದು, ಪಾಕಿಸ್ಥಾನ ವಿರುದ್ಧ ಉಗ್ರ ಕ್ರಮ ಜಾರಿಯಾಗುವ (ಕಪ್ಪು ಪಟ್ಟಿಗೆ ಸೇರ್ಪಡೆ) ಸಂಭವವಿದೆ ಎನ್ನಲಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ