ತೆಲಂಗಾಣ ಎನ್ ಕೌಂಟರ್ ನಡೆದ ಸ್ಥಳಕ್ಕೆ ಎನ್ ಎಚ್ ಆರ್ ಸಿ ಸತ್ಯಶೋಧನಾ ತಂಡ ಭೇಟಿ, ತನಿಖೆ
Team Udayavani, Dec 7, 2019, 1:06 PM IST
ಹೈದರಾಬಾದ್: ದಿಶಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಶುಕ್ರವಾರ ಮುಂಜಾನೆ ತೆಲಂಗಾಣ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿರುವ ಘಟನೆ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸತ್ಯ ಶೋಧನಾ ತಂಡ (ಎನ್ ಎಚ್ ಆರ್ ಸಿ) ಶನಿವಾರ ಬೆಳಗ್ಗೆ ಹೈದರಾಬಾದ್ ಗೆ ಆಗಮಿಸಿದೆ.
ವರದಿಯ ಪ್ರಕಾರ, ಎನ್ ಎಚ್ ಆರ್ ಸಿ ತಂಡದ ಇಬ್ಬರು ಸದಸ್ಯರು ಮೊದಲು ಚಟಾನ್ ಪಲ್ಲಿ ಸಮೀಪದ ಶಾದ್ ನಗರಕ್ಕೆ ಭೇಟಿ ನೀಡಲಿದ್ದಾರೆ. ಚಟಾನ್ ಪಲ್ಲಿ ಸೇತುವೆ ಸಮೀಪ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ನಡೆಸಿದ ಸ್ಥಳ ಇದಾಗಿದೆ ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸತ್ಯ ಶೋಧನಾ ತಂಡ ಎನ್ ಕೌಂಟರ್ ನಡೆದ ಸ್ಥಳದಲ್ಲಿ ತನಿಖೆ ನಡೆಸಿ, ಮಾಹಿತಿಯನ್ನು ಕಲೆ ಹಾಕಲಿದೆ. ನಂತರ ತಂಡ ಮೆಹಬೂಬನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಾಲ್ವರು ಆರೋಪಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.