ಹಳೆಯ ವಾಹನಗಳಿಗೆ ನಿಷೇಧ

Team Udayavani, Oct 30, 2018, 8:26 AM IST

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಮತ್ತೆ ಕಾಣಿಸಿಕೊಂಡಿದ್ದು, ದೆಹಲಿಯ ಜನರನ್ನು ಆತಂಕಕ್ಕೆ ನೂಕಿದೆ. ಈ ಹಿನ್ನೆಲೆಯಲ್ಲಿ, 15 ವರ್ಷಗಳಷ್ಟು ಹಳೆಯ ಪೆಟ್ರೋಲ್‌ ವಾಹನ ಮತ್ತು 10 ವರ್ಷಗಳಷ್ಟು ಹಳೆಯ ಡೀಸೆಲ್‌ ವಾಹನಗಳಿಗೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಿಷೇಧ ಹೇರಿ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ. ಒಂದು ವೇಳೆ, ಆದೇಶದ ಹೊರತಾಗಿಯೂ ಅಂಥ ವಾಹಗಳು ರಸ್ತೆಗಿಳಿದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಪ್ರಸ್ತುತ ಪರಿಸ್ಥಿತಿಯು ಗಂಭೀರಗಿದೆ ಎಂದು ಬಣ್ಣಿಸಿರುವ ನ್ಯಾಯಾಲಯ, ಇಂಥ ವಾಹನಗಳ ಪಟ್ಟಿಯನ್ನು ಸಿದ್ಧಪಡಿಸಿ, ಸಾರಿಗೆ ಇಲಾಖೆ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು, ಪತ್ರಿಕೆಗಳಲ್ಲಿ ಈ ಕುರಿತು ಜಾಹೀರಾತು ನೀಡಬೇಕು ಎಂದು ಸೂಚಿಸಿದೆ. ಅಲ್ಲದೆ, ಸಿಬಿಸಿಪಿ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು, ಅದರಲ್ಲಿ ಮಾಲಿನ್ಯದ ಕುರಿತು ನೇರವಾಗಿ ದೂರು ನೀಡಲು ನಾಗರಿಕರಿಗೆ ಅವಕಾಶ ಕಲ್ಪಿಸ ಬೇಕೆಂದೂ ಕೋರ್ಟ್‌ ನಿರ್ದೇಶಿಸಿದೆ.

113 ಕೈಗಾರಿಕೆಗಳು ಬಂದ್‌: ಏತನ್ಮಧ್ಯೆ, ದೆಹಲಿಯಲ್ಲಿ 113 ಕೈಗಾರಿಕೆಗಳನ್ನು ಮುಚ್ಚು ವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಪಿಎನ್‌ಜಿ(ಪೈಪ್ಡ್ ನ್ಯಾಚುರಲ್‌ ಗ್ಯಾಸ್‌)ಗೆ ಬದಲಿಸಿ ಕೊಳ್ಳುವಂತೆ ಸೂಚಿಸಿದ್ದರೂ, ಅದನ್ನು ಅನುಸರಿಸದೇ ಮಾಲಿನ್ಯಕ್ಕೆ ಎಡೆ ಮಾಡಿಕೊಟ್ಟ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮಕ್ಕಳ ಮೇಲೆ ಪರಿಣಾಮ: ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಶೇ. 98 ರಷ್ಟು ಮಕ್ಕಳು ವಾಯುಮಾಲಿನ್ಯಕ್ಕೆ ತಮ್ಮನ್ನು ಒಡ್ಡಿ ಕೊಳ್ಳುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ. ವಾಯು ಮಾಲಿನ್ಯ ಹಾಗೂ ಮಕ್ಕಳ ಆರೋಗ್ಯ ಎಂಬ ಶೀರ್ಷಿಕೆಯ ವರದಿ ಬಿಡುಗಡೆ ಮಾಡಿರುವ ಡಬ್ಲೂéಎಚ್‌ಒ, 2016ರಲ್ಲಿ ವಿಶ್ವದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ 6 ಲಕ್ಷ ಮಕ್ಕಳು ಸಾವನ್ನಪ್ಪಿದ್ದಾರೆ. ಇದಕ್ಕೆ ವಾಯುಮಾಲಿನ್ಯ ಪರೋಕ್ಷ ಕಾರಣ ಎಂಬ ಆಘಾತಕಾರಿ ಮಾಹಿತಿ ನೀಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ