ರಿಯಲ್ ಎಸ್ಟೇಟ್: ಜಿಎಸ್ಟಿ ಕಡಿತಕ್ಕೆ ಸಚಿವರ ಸಮಿತಿ ನಿರ್ಧಾರ
Team Udayavani, Jan 11, 2019, 12:30 AM IST
ಹೊಸದಿಲ್ಲಿ: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ವಿಧಿಸಲಾಗಿರುವ ಜಿಎಸ್ಟಿ ಪ್ರಮಾಣ ಬದಲು ಮಾಡುವ ಬಗೆಗಿನ ವಿಚಾರಕ್ಕೆ ಸಂಬಂಧಿಸಿದಂತೆ ಏಳು ಮಂದಿ ಸಚಿವರ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಇರುವ ಭಿನ್ನಾಭಿಪ್ರಾಯವನ್ನು ಸಮಿತಿ ಬಗೆ ಹರಿಸಿ ನಿರ್ಧಾರ ಕೈಗೊಳ್ಳಲಿದೆ. ಮನೆ, ಅಪಾರ್ಟ್ಮೆಂಟ್ ಖರೀದಿ ಮಾಡುವವರಿಗೆ ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ನಿರೀಕ್ಷಿತ ಸಿಹಿ ಸುದ್ದಿ ಸಿಕ್ಕಿಲ್ಲ. ಇದೇ ವೇಳೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಇರುವ ಜಿಎಸ್ಟಿ ಮಿತಿಯನ್ನು ಹಾಲಿ 20 ಲಕ್ಷ ರೂ.ಗಳಿಂದ 40 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಈಶಾನ್ಯ ರಾಜ್ಯಗಳಿಗೆ ಅದರ ಪ್ರಮಾಣವನ್ನು 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಜಿಎಸ್ಟಿ ಮಂಡಳಿ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಮಾಹಿತಿ ನೀಡಿದ್ದಾರೆ. ಶೇ 1ರಷ್ಟು ತೆರಿಗೆ ಅನ್ವಯವಾಗುವ ಸಣ್ಣ ಉದ್ದಿಮೆಗಳ ವಾರ್ಷಿಕ ವಹಿವಾಟಿನ ಮಿತಿಯನ್ನು 1 ಕೋಟಿ ರೂ.ಗಳಿಂದ 1.50 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರವಾಹದಿಂದ ಕಂಗೆಟ್ಟಿರುವ ಕೇರಳಕ್ಕೆ ಮುಂದಿನ ಎರಡು ವರ್ಷಗಳ ಕಾಲ ಅಂತಾರಾಜ್ಯ ವ್ಯಾಪಾರ ವಹಿವಾಟಿನ ಮೇಲೆ ಶೇ.1ರಷ್ಟು ಸೆಸ್ ವಿಧಿಸಲು ಮಂಡಳಿ ಒಪ್ಪಿದೆ.