ರಾಸಾಯನಿಕ ದಾಳಿ ಪಾಕಿಸ್ಥಾನ ಸಂಚು; ಕಾಶ್ಮೀರದಲ್ಲಿ ತೀವ್ರ ಕಟ್ಟೆಚ್ಚರ

Team Udayavani, Jul 13, 2017, 3:30 AM IST

ಹೊಸದಿಲ್ಲಿ: ಕಾಶ್ಮೀರದಲ್ಲಿ ಉಗ್ರ ನಿಗ್ರಹಕ್ಕೆ ‘ಹೊಡಿ- ಬಡಿ’ ವಿಧಾನ ಅನುಸರಿಸುತ್ತಿರುವ ಭದ್ರತಾ ಪಡೆಗಳ ಬದಲಾದ ಕಾರ್ಯತಂತ್ರ ಪಾಕಿಸ್ಥಾನ ಮತ್ತು ಪಾಕ್‌ ಪ್ರೇರಿತ ಉಗ್ರರನ್ನು ಕಂಗಾಲಾಗಿಸಿದ್ದು, ಈಗ ಪ್ರತೀಕಾರಕ್ಕೆ ರಾಸಾಯನಿಕ ದಾಳಿಗೆ ಸಿದ್ಧತೆ ನಡೆಸಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕಳೆದ ಕೆಲವು ತಿಂಗಳಿಂದ 90 ಉಗ್ರರನ್ನು ಭದ್ರತಾ ಪಡೆಗಳು ಸದೆಬಡಿದಿದ್ದು, ಇದು ಉಗ್ರರ ಪಾಳಯಕ್ಕೆ ಇನ್ನಿಲ್ಲದ ಆಘಾತ ತಂದೊಡ್ಡಿದೆ. ಪರಿಣಾಮ ರಾಸಾಯನಿಕ ದಾಳಿಗೆ ಸಿದ್ಧತೆ ನಡೆಸಲಾಗಿದ್ದು, ಪಾಕ್‌ ಈಗಾಗಲೇ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಯ ಉಗ್ರರಿಗೆ ರಾಸಾಯನಿಕ ಒಳಗೊಂಡಿರುವ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಭೇದಿಸಲಾದ ಉಗ್ರರ ಮಾತುಕತೆಯ ಟೆಲಿಫೋನ್‌ ಆಡಿಯೋ ತುಣುಕೊಂದರಲ್ಲಿ ಈ ಮಾಹಿತಿ ಲಭಿಸಿದ್ದು, ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿ ಇರುವಂತೆ ಮಾಡಿದೆ. ನ್ಯೂಸ್‌ 18 ವಾಹಿನಿ ವರದಿ ಪ್ರಕಾರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಹೊರತಾಗಿ ಭದ್ರತಾ ಪಡೆಗಳ ಮೇಲೆ ದಾಳಿಗೆ ಉಗ್ರರು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಟೆಲಿಫೋನ್‌ನಲ್ಲಿ ಮಾತನಾಡುತ್ತ ‘ನಮಗೆ ಪಾಕ್‌ನಿಂದ ಸಾಕಷ್ಟು ಬೆಂಬಲ ಸಿಗುತ್ತಿದೆ. ಇದರ ಪರಿಣಾಮ ಗಡಿಯಲ್ಲಿ ಕಾಣಬಹುದಾಗಿದೆ. ಮುಂದಿನ ದಿನಗಳಲ್ಲಿ ಪಾಕಿಸ್ಥಾನ, ಭಾರತ ವಿರೋಧಿ ಆಟವನ್ನು ಶುರುಮಾಡಲಿದೆ’ ಎಂದು ಹಿಜ್ಬುಲ್‌ ಉಗ್ರನೊಬ್ಬ ಹೇಳಿದ್ದಾನೆ.

ಇನ್ನೊಂದು ಟೇಪ್‌ನಲ್ಲಿ ‘ಈಗ ನಾವು ಗ್ರೆನೇಡ್‌ ಲಾಂಚರ್‌ ಬಳಸುತ್ತಿದ್ದೇವೆ. ಇದರಿಂದ ಭಾರತೀಯ ಸೇನೆಯ ಮೂರ್‍ನಾಲ್ಕು ಮಂದಿ ಸಾಯುತ್ತಿದ್ದರು, ಕೆಲವರು ಗಾಯಗೊಳ್ಳುತ್ತಿದ್ದರು. ಆದರೆ ಈಗ ಕಾರ್ಯತಂತ್ರ ಬದಲಾಗಿದೆ. ನಾವು ರಾಸಾಯನಿಕ ಶಸ್ತ್ರಗಳನ್ನು ಬಳಸಲಿದ್ದೇವೆ. ಇದರಿಂದ ಎಷ್ಟಾಗುತ್ತದೆಯೋ ಅಷ್ಟು ಮಂದಿಯನ್ನು ಕೊಲ್ಲಬಹುದು’ ಎಂದು ಉಗ್ರ ಮಾತನಾಡಿರುವುದು ಸ್ಪಷ್ಟವಾಗಿದೆ.

ಈ ವರದಿ ಕುರಿತಂತೆ ಬಿಜೆಪಿ ನಾಯಕ ಆರ್‌.ಕೆ. ಸಿಂಗ್‌ ಅವರು ಪ್ರತಿಕ್ರಿಯಿಸಿದ್ದು, ಹಿಜ್ಬುಲ್‌ ಉಗ್ರರು ಇಂಥ ದುಸ್ಸಾಹಸ ಮಾಡಿದ್ದೇ ಆದಲ್ಲಿ ಅದು ಯುದ್ಧಕ್ಕೆ ಕಾರಣವಾಗಬಲ್ಲದು. ಹಿಜ್ಬುಲ್‌ ಹಿಂದಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜತೆಗೆ ಈ ಕೃತ್ಯಕ್ಕೆ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಬಹುದು’ ಎಂದಿದ್ದಾರೆ.

ಅಮರನಾಥ ಯಾತ್ರೆಗೆ ಬಿಗುಭದ್ರತೆ
ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ ಬಳಿ ಅತಿಬಿಗು ಭದ್ರತೆ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಮತ್ತು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹನ್ಸರಾಜ್‌ ಆಹಿರ್‌ ಅವರ ತಂಡ ಕಾಶ್ಮೀರಕ್ಕೆ ಭೇಟಿ ನೀಡಿ ವ್ಯಾಪಕ ಭದ್ರತಾ ಪರಾಮರ್ಶೆ ನಡೆಸಿದ್ದು, ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.

ಪಾಕ್‌ ದಾಳಿ, ಇಬ್ಬರು ಯೋಧರ ಸಾವು
ಬುಧವಾರ ಪಾಕ್‌ ಕದನ ವಿರಾಮ ಉಲ್ಲಂಘಿಸಿದ್ದು, ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಕೆರೆನ್‌ ಸೆಕ್ಟರ್‌ನಲ್ಲಿ ಅಪ್ರಚೋದಿತ ದಾಳಿ ನಡೆಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ. ಆದರೆ ಮೃತರ ಗುರುತಿನ ವಿವರ ತಿಳಿದುಬಂದಿಲ್ಲ.

ಮೂವರು ಹಿಜ್ಬುಲ್‌ ಉಗ್ರರ ಹತ್ಯೆ
ಉಗ್ರರ ಬೇಟೆಯನ್ನು ಭದ್ರತಾ ಪಡೆಗಳು ಮುಂದುವರಿಸಿದ್ದು, ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಮೂವರು ಹಿಜ್ಬುಲ್‌ ಮುಜಾಹಿದೀನ್‌ ಉಗ್ರರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಮಂಗಳವಾರ ಇಲ್ಲಿನ ರೇಡ್‌ಭಾಗ್‌ ಪ್ರದೇಶದಲ್ಲಿ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದವು. ರಾತ್ರಿ ಉಗ್ರರು ಪರಾರಿಯಾಗದಂತೆ ಭದ್ರತಾ ಪಡೆಗಳು ವ್ಯೂಹ ರಚಿಸಿದ್ದು, ಬೆಳಗ್ಗಿನ ಜಾವ ಕಾಳಗದಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ. ಜತೆಗೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡ್ರ್ಯಾಗನ್‌ ಸಂಧಾನದ ಮಾತು
ಕಾಶ್ಮೀರ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಭಾರತ ಮತ್ತು ಪಾಕ್‌ ಸಂಬಂಧ ವೃದ್ಧಿಗೆ ಚೀನ ಬೇಕಾದರೆ ರಚನಾತ್ಮಕ ಪಾತ್ರ ವಹಿಸಲು ಸಿದ್ಧವಿದೆ ಎಂದು ಅದು ಹೇಳಿದೆ. ಈ ಮೂಲಕ ಎರಡೂ ದೇಶಗಳ ಮಧ್ಯೆ ಸಂಧಾನಕ್ಕೆ ನಿಲ್ಲುವ ಮಾತನಾಡಿದೆ. ದೈನಂದಿನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚೀನ ವಿದೇಶಾಂಗ ಖಾತೆ ವಕ್ತಾರ ಗೆಂಗ್‌ ಶೌಂಗ್‌, ನಿಯಂತ್ರಣ ರೇಖೆ ಸನಿಹದ ವಿವಾದಗಳು ಶಾಂತಿಗೆ ಭಂಗ ತರುತ್ತಿವೆ. ಭಾರತ ಮತ್ತು ಪಾಕ್‌ ದಕ್ಷಿಣ ಏಷ್ಯಾದ ಬಹುಮುಖ್ಯ ದೇಶಗಳಾಗಿವೆ ಎಂದು ಹೇಳಿದ್ದಾರೆ. ಆದರೆ ಅಮರನಾಥ ಯಾತ್ರಿಗಳ ಮೇಲೆ ಉಗ್ರ ದಾಳಿ ಬಗ್ಗೆ ಅವರು ತುಟಿಪಿಟಿಕ್ಕೆಂದಿಲ್ಲ!


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ