ಸೋಶಿಯಲ್ ಮೀಡಿಯಾ ಹಬ್ಗ ಸುಪ್ರೀಂ ವಿರೋಧ
Team Udayavani, Jul 14, 2018, 6:00 AM IST
ನವದೆಹಲಿ: ಕೇಂದ್ರ ಸರ್ಕಾರ ಕಣ್ಗಾವಲು ರಾಷ್ಟ್ರ ಸೃಷ್ಟಿ ಮಾಡಲು ನೋಡುತ್ತಿದೆ…! ಇದು ಸೋಶಿಯಲ್ ಮೀಡಿಯಾ ಹಬ್ ರಚಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಪ್ರಸ್ತಾಪದ ಬಗ್ಗೆ ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿದ ಪರಿ. ವಾಟ್ಸ್ಆ್ಯಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶಗಳನ್ನು “ಓದುವ’ ಸಲುವಾಗಿ ಸೋಶಿಯಲ್ ಮೀಡಿಯಾ ಹಬ್ ರಚಿಸಲು ಕೇಂದ್ರ ಸರ್ಕಾರ ಈಗಾಗಲೇ ಟೆಂಡರ್ ಕರೆದಿದೆ. ಇದನ್ನು ವಿರೋಧಿಸಿ ಟಿಎಂಸಿ ಶಾಸಕ ಮಹುವಾ ಮೊಯಿತ್ರಾ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಈ ಕ್ರಮ ಭಾರತವನ್ನು ಕಣ್ಗಾವಲು ದೇಶವಾಗಿ ಬದಲಿಸಿದಂತೆ ಆಗುತ್ತದೆ ಎಂದ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದಲ್ಲದೇ 2 ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿತು.