ತಾಯಿಯನ್ನೇ ಕೊಂದು, ಹೃದಯ ತೆಗೆದು ಚಟ್ನಿ ಜತೆ ತಿಂದ ಮಗ!
Team Udayavani, Aug 29, 2017, 1:36 PM IST
ಪುಣೆ: ಕುಡಿದ ಮತ್ತಿನಲ್ಲಿದ್ದ 27 ವರ್ಷದ ಮಗ ತನ್ನ ತಾಯಿಯನ್ನು ಚೂರಿಯಿಂದ ಇರಿದು ಕೊಂದು, ಬಳಿಕ ಆಕೆಯ ಹೃದಯವನ್ನು ಕಿತ್ತು ಚಟ್ನಿ ಮತ್ತು ಮೆಣಸಿನ ಪುಡಿ ಜತೆ ಅದ್ದಿಕೊಂಡು ತಿಂದ ಆಘಾತಕಾರಿ ಘಟನೆ ಕೊಲ್ಲಾಪುರದಲ್ಲಿ ಸೋಮವಾರ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸುಮಾರು ಒಂದು ಗಂಟೆ ನಂತರ ರಕ್ತಸಿಕ್ತ ಕೈಗಳಿಂದ ಮನೆಯಿಂದ ಹೊರನಡೆದಿದ್ದ. ತಾಯಿಯನ್ನು ಕೊಂದ ಆರೋಪಿ ಮಹವಾಲಾ ನಿವಾಸಿ ಸುನಿಲ್ ಕುಂಚಕುರ್ಣಿ ಎಂಬಾತನನ್ನು ಶಾಹುಪುರಿ ಪೊಲೀಸರು ಬಂಧಿಸಿದ್ದಾರೆ. 65 ವರ್ಷದ ತಾಯಿ ಯೆಲಾವಾ ಎಂಬಾಕೆಯನ್ನು ಪುತ್ರ ಸುನಿಲ್ ಚೂರಿಯಿಂದ ಇರಿದು ಹತ್ಯೆಗೈದಿದ್ದ. ಸುನಿಲ್ ವಿರುದ್ಧ ಪೊಲೀಸರು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಹುಪುರಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಸಂಜಯ್ ಮೋರೆ ಮಿಡ್ ಡೇ ಜತೆ ಮಾತನಾಡುತ್ತ, ಸುನೀಲ್ ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳಗಳಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದ. ಸುನೀಲ್ ಗೆ ಮದುವೆಯಾಗಿದ್ದು, ಮೂವರು ಮಕ್ಕಳ ತಂದೆ. ಈತನ ಹೆಂಡತಿ ಮುಂಬೈನಲ್ಲಿರುವ ತನ್ನ ತಾಯಿ ಮನೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ.
ಘಟನೆ ನಡೆದ ದಿನದಂದು ಸುನೀಲ್ ಕಂಠಪೂರ್ತಿ ಕುಡಿದಿದ್ದ. ಮೊದಲು ಈತ ತನ್ನ ನೆರೆಮನೆಗೆ ಹೋಗಿ ಊಟ ಕೇಳಿದ್ದ. ಆದರೆ ಆತನಿಗೆ ಎಲ್ಲಿಯೂ ಊಟ ಸಿಕ್ಕಿರಲಿಲ್ಲವಾಗಿತ್ತು. ಹಸಿವಿನಿಂದ ಕಂಗೆಟ್ಟಿದ್ದ ಸುನೀಲ್ ನೇರ ಮನೆಗೆ ಬಂದು, ತಾಯಿ ಜತೆ ಜಗಳಕ್ಕಿಳಿದಿದ್ದ. ನಂತರ ದಿಢೀರ್ ಆಗಿ ತಾಯಿಯನ್ನು ಚೂರಿಯಿಂದ ಇರಿದು ಕೊಂದು, ತಾಯಿಯ ಹೃದಯವನ್ನು ಕಿತ್ತು ತೆಗೆದು ಪ್ಲೇಟ್ ಗೆ ಹಾಕಿ ಚಟ್ನಿ ಜತೆ ತಿಂದಿದ್ದ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.