ಸರ್ಜಿಕಲ್‌ ದಾಳಿ ಪಡೆ: ಗಡಿಯಾಚೆಗೆ ದಾಳಿ ನಡೆಸುವುದೇ ಪ್ರಮುಖ ಗುರಿ 

Team Udayavani, Dec 5, 2018, 8:47 AM IST

ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ ಪಾಕಿಸ್ಥಾನದ ಗಡಿಯೊಳಕ್ಕೆ ರಾತೋರಾತ್ರಿ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದ ಭಾರತೀಯ ಸೇನೆ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಇಂಥ “ಸರ್ಜಿಕಲ್‌ ದಾಳಿ’ ನಡೆಸುವುದಕ್ಕೆಂದೇ ವಿಶೇಷ ಪಡೆಯೊಂದನ್ನು ರೂಪಿಸಲು ಮುಂದಾಗಿದೆ.

ಈ ವಿಶೇಷ ಪಡೆಯು ಗಡಿಯಾಚೆಗೆ ಹಠಾತ್‌ ದಾಳಿ ನಡೆಸಿ ಶತ್ರುವಿಗೆ ತಕ್ಕ ಪಾಠ ಕಲಿಸಲಿದೆ. ಮಿಂಚಿನ ದಾಳಿ ನಡೆಸುವ ಈ ಪಡೆ, ಅಷ್ಟೇ ಕ್ಷಿಪ್ರವಾಗಿ ಯುದ್ಧ ಸನ್ನಿವೇಶದಿಂದ ಮಾಯವಾಗಲಿದೆ. 2016ರಲ್ಲಿ ಯಾವ ರೀತಿ ದಾಳಿಯನ್ನು ಸೇನೆ ಯೋಜಿಸಿತ್ತೋ ಅದೇ ರೀತಿಯ ದಾಳಿಗಳನ್ನು ಈ ಪಡೆ ನಡೆಸಲಿದೆ.

ಎಲ್ಲ ಪಡೆಗಳ ಆಯ್ದ ಯೋಧರು
ಸರ್ಜಿಕಲ್‌ ಸ್ಟ್ರೈಕ್‌ ನಡೆಸಲು ವಿಶೇಷ ಸಾಮರ್ಥ್ಯದ ಪ್ರತ್ಯೇಕ ತಂಡವೊಂದು ಅಗತ್ಯವಿದೆ ಎಂದು ಕೇಂದ್ರ ಸರಕಾರ ಭಾವಿಸಿದ ಹಿನ್ನೆಲೆಯಲ್ಲಿ ಈ ತಂಡ ರೂಪುಗೊಂಡಿದೆ. ಇದಕ್ಕಾಗಿ ಸೇನೆಯ ಮೂರು ಪಡೆ(ಭೂಸೇನೆ,ನೌಕಾಸೇನೆ,
ವಾಯುಸೇನೆ)ಗಳಿಂದಲೂ ಆಯ್ದ ಯೋಧರನ್ನು ಸೇರಿಸಿಕೊಳ್ಳಲಾಗುತ್ತದೆ. ಇವರಿಗೆ ಅಮೆರಿಕದ ನೇವಿ ಸೀಲ್‌ಗ‌ಳು ಹೊಂದಿರುವಂತಹ ವಿಶೇಷ ಪರಿಣತಿಯನ್ನು ಒದಗಿಸಲಾಗುತ್ತದೆ. 

ಎರಡು ವಿಭಾಗ
ಈ ಪಡೆಯು “ಯೋಜನೆ’ ಹಾಗೂ  ದಾಳಿ’ ಎಂಬ ಎರಡು ವಿಭಾಗಗಳನ್ನು ಹೊಂದಿರುತ್ತದೆ. ದಾಳಿ ವಿಭಾಗದಲ್ಲಿ 124 ಯೋಧರು ಹಾಗೂ ಯೋಜನೆ ವಿಭಾಗದಲ್ಲಿ 96 ಯೋಧರು ಇರುತ್ತಾರೆ. ಎರಡು ತಂಡಗಳಲ್ಲಿ ಒಂದು ತಂಡ ದಾಳಿ ನಡೆಸಿದರೆ, ಇನ್ನೊಂದು ತಂಡವು ಬೆಂಬಲವಾಗಿ ಇರುತ್ತದೆ.

ಅತ್ಯಾಧುನಿಕ ಕೌಶಲ
“ದಾಳಿ’ ವಿಭಾಗದಲ್ಲಿನ ಯೋಧರು ಉತ್ತಮ ಕೌಶಲ ಹೊಂದಿರುತ್ತಾರೆ. ವಾಯುಪಡೆಯ ತಂಡ ನೀಡುವ ಸೂಚನೆಗಳಿಗೆ ಅನುಗುಣವಾಗಿ ಕೆಲಸ ಮಾಡುವುದು, ಅವರೊಂದಿಗೆ ಉತ್ತಮ ಸಹಕಾರ ಸಾಧಿಸುವುದು ಮುಂತಾದ ವಿಶೇಷ ಕೌಶಲವನ್ನು ಈ ಯೋಧರು ಹೊಂದಿರುತ್ತಾರೆ. 

ದೋವಲ್‌ ಕನಸಿನ ಯೋಜನೆ
ಹಠಾತ್‌ ದಾಳಿಗೆಂದೇ ಪ್ರತ್ಯೇಕ ಪಡೆಯನ್ನು ರಚಿಸುವುದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಕನಸಿನ ಯೋಜನೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂಪುಟ ವರದಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಗಡಿಯಲ್ಲಿ  ಮತ್ತು ಕರಾವಳಿಯಲ್ಲಿ ಉಗ್ರರ ದಾಳಿ ಹಾಗೂ ದಾಳಿ ಭೀತಿ ಇತ್ತೀಚೆಗೆ ಹೆಚ್ಚುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತ್ಯೇಕ ಬಜೆಟ್‌
ಸದ್ಯದ ಮಟ್ಟಿಗೆ ಈಗ ಲಭ್ಯವಿರುವ ಮೂಲಸೌಕರ್ಯಗಳನ್ನೇ ಈ ತಂಡ ಬಳಸಿಕೊಳ್ಳಲಿದೆ. ಆದರೆ ಎಲ್ಲಿ ಈ ತಂಡ ನೆಲೆಯೂರುತ್ತದೆ ಎಂಬುದು ತಿಳಿದುಬಂದಿಲ್ಲ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಬಜೆಟ್‌ ಅನ್ನು ಇದಕ್ಕಾಗಿ ನಿಗದಿಪಡಿಸಲಾಗುತ್ತದೆ.

ಪಾಕ್‌ ಉಗ್ರ ನೆಲೆ ಗುರಿ
ಈ ತಂಡ ರೂಪಿಸಿರುವುದರ ಮೂಲ ಉದ್ದೇಶವೇ ಪಾಕ್‌ ಗಡಿ ಭಾಗದಲ್ಲಿರುವ ಉಗ್ರ ನೆಲೆಗಳನ್ನು ಧ್ವಂಸಗೊಳಿಸುವುದಾಗಿದೆ. ಆದರೆ ಇಂಥದ್ದೊಂದು ತಂಡ ರಚಿಸುವ ಮೂಲಕ ಶತ್ರುಗಳನ್ನು ಮಾನಸಿಕವಾಗಿ ಕುಗ್ಗಿಸುವ ತಂತ್ರವೂ ಅಡಗಿದೆ ಎಂದು ಹೇಳಲಾಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ