2020ರ ಮಾರ್ಚ್‌ನಿಂದ ಪುನಾರಂಭವಾಗಲಿದೆ ಸುವರ್ಣ ರಥ

ಪ್ರವಾಸೋದ್ಯಮ ಉತ್ತೇಜನವೇ ಮೂಲ ಉದ್ದೇಶ

Team Udayavani, Nov 20, 2019, 5:31 PM IST

ಹೊಸದಿಲ್ಲಿ: ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಸುವರ್ಣ ರಥ (ಗೋಲ್ಟನ್‌ ಚಾರಿಯಟ್‌) ಐಷಾರಾಮಿ ಪ್ರವಾಸಿ ರೈಲುನ್ನು ಪುನರಾಂಭಿಸಲು ರೈಲ್ವೆ ಇಲಾಖೆ ಮತ್ತು ರಾಜ್ಯ ಪ್ರವಾಸೋದ್ಯಮ ನಿರ್ಧರಿಸಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಮಾರ್ಚ್‌ನಿಂದ ಚಾಲನೆಗೊಳ್ಳಲಿದೆ ಎಂದು ಭಾರತೀಯ ರೈಲ್ವೆ ಮಂಗಳವಾರ ತಿಳಿಸಿದೆ.

ಸುವರ್ಣ ರಥ ರೈಲನ್ನು ಮಾರುಕಟ್ಟೆಗೆ ತರಲು ಮತ್ತು ಕಾರ್ಯ ನಿರ್ವಹಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, (ಕೆಎಸ್‌ಟಿಡಿಸಿ) ಭಾರತೀಯ ರೈಲ್ವೆ ಕ್ಯಾಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ದಾಖಲೆ ಪತ್ರಗಳಿಗೆ ಸಹಿ ಹಾಕಿದ ನಂತರ ಈ ಘೋಷಣೆ ಮಾಡಲಾಗಿದೆ.

ಎಲ್ಲಾ ವರ್ಗದ ಜನರು ಪ್ರಯಾಣಿಸಲು ಅನುಕೂಲವಾಗುವಂತೆ ಸುವರ್ಣ ರಥ ರೈಲಿನ ನಿಯಮಗಳನ್ನು ರೂಪಿಸುವಂತೆ ಚಿಂತನೆ ನಡೆಸಲಾಗಿದ್ದು, ಸೂಕ್ತ ದಿನಾಂಕಗಳನ್ನು ನಿಗದಿ ಮಾಡುವುದರಿಂದ ಹಿಡಿದು ಇತರೆ ಎಲ್ಲಾ ಹೊಣೆಗಾರಿಕೆಯನ್ನು ಐಆರ್‌ಸಿಟಿಸಿ ಮತ್ತು ಕೆಎಸ್‌ಟಿಡಿಸಿ ನೋಡಿಕೊಳ್ಳಲಿದೆ.

15 ಪ್ರವಾಸೋದ್ಯಮ ತಾಣಗಳ ಸಂಪರ್ಕ
ಈ ಕುರಿತು ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಮಾತನಾಡಿದ್ದು, ದೇಶದ 15 ಪ್ರವಾಸೋದ್ಯಮ ತಾಣಗಳನ್ನು ಸಂಪರ್ಕಿಸುವ ಉದ್ದೇಶವನ್ನು ಈ ರೈಲು ಹೊಂದಿದೆ. ಈ ಯೋಜನೆಯಿಂದ ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳ ಪ್ರವಾಸೋದ್ಯಮದ ಆದಾಯ ಹೆಚ್ಚಿಲಿದೆ ಎಂದಿದ್ದಾರೆ.

ದರ ಕಡಿತದ ಕುರಿತು ಯೋಚನೆ
ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ಇದಾಗಿದ್ದು, ಭಾರಿ ನಷ್ಟ ಅನುಭವಿಸಿದ ನಂತರ ಕರ್ನಾಟಕ ಸರಕಾರ ತಾತ್ಕಾಲಿಕವಾಗಿ ಇದರ ಸೇವೆಗಳನ್ನು ಸ್ಥಗಿತಗೊಳಿಸಿತು.ದರ ಏರಿಕೆಯಂತಹ ನಿಯಮಗಳು ಸ್ಥಗಿತಕ್ಕೆ ಪ್ರಮುಖ ಕಾರಣವಾಗಿದ್ದು, ದರ ಕಡಿತದ ಕುರಿತು ಯೋಚನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಶೇಷಗಳೇನು ?
2008ರಲ್ಲಿ ರಾಜ್ಯ ಸರಕಾರ ಮತ್ತು ಭಾರತೀಯ ರೈಲ್ವೆ ಜಂಟಿ ನೇತೃತ್ವದಲ್ಲಿ ಸುವರ್ಣ ರಥ ಪ್ರಾರಂಭವಾಗಿದ್ದು, ಇದು 44 ಅತಿಥಿ ಕೋಣೆಗಳೊಂದಿಗೆ 18 ಕೋಚ್‌ಗಳಿವೆ. ಕನಿಷ್ಠವೆಂದರೆ ಸುಮಾರು 84 ಪ್ರಯಾಣಿಕರು ಒಂದೇ ಸಮಯದಲ್ಲಿ ಈ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.

ಎಲ್ಲೆಲ್ಲಿ ಓಡಲಿದೆ ಗೋಲ್ಡನ್‌ ರಥ
ಕರ್ನಾಟಕ, ಕೇರಳ, ಪುದುಚೇರಿ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳ ಪ್ರವಾಸಿ ತಾಣಗಳನ್ನು ಸೇರಿದಂತೆ, ರಾಜ್ಯದ ಬಂಡೀಪುರ, ಮೈಸೂರು, ಹಳೇಬಿಡು, ಚಿಕ್ಕಮಗಳೂರು, ಹಂಪಿ, ಬಿಜಾಪುರ ಮತ್ತು ಗೋವಾವನ್ನು ವಿನೂತನವಾಗಿ ಸೇರಿಸಲು ಪ್ರಸ್ತಾವಣೆ ಸಲ್ಲಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ