ದಿಲ್ಲಿಯಲ್ಲಿ ದಾಖಲೆ 48 ಡಿಗ್ರಿ ತಾಪ
Team Udayavani, Jun 11, 2019, 6:10 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಸೋಮವಾರ ಕೆಲವು ಭಾಗಗಳಲ್ಲಿ ದಾಖಲೆಯ 48 ಡಿಗ್ರಿ ಸೆಲಿÏಯಸ್ಗೆ ತಲುಪಿತ್ತು. 2014ರ ಜೂನ್ 9 ರಂದು 47.8 ಡಿಗ್ರಿ ತಾಪಮಾನವೇ ಈವರೆಗಿನ ದಾಖಲೆ ಯಾಗಿತ್ತು. ಪಾಲಂನಲ್ಲಿ ಅತ್ಯಧಿಕ ತಾಪಮಾನ ಕಂಡುಬಂದಿದೆ.
ಪಶ್ಚಿಮ ಭಾಗದಿಂದ ಒಣ ಗಾಳಿ ಬೀಸಿದ್ದೇ ತಾಪಮಾನ ಏರಿಕೆಗೆ ಕಾರಣ ಎಂದು ದಿಲ್ಲಿ ಹವಾಮಾನ ಇಲಾಖೆ ನಿರ್ದೇಶಕ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ. ಮಂಗಳವಾರ ಒಂದೆರಡು ಡಿಗ್ರಿ ತಾಪಮಾನ ಕಡಿಮೆ ಯಾಗಬಹುದು. ಆದರೆ ಉಷ್ಣ ಹವೆ ಮುಂದುವರಿಯಲಿದೆ.
ಕೇರಳಕ್ಕೆ ಮಾನ್ಸೂನ್ ಕಾಲಿಟ್ಟಿದ್ದರೂ, ದಿಲ್ಲಿಗೆ ಮಾನ್ಸೂನ್ ಪರಿಣಾಮವಾಗಿ ಮಳೆಯಾಗಲು ಹಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜೂನ್ ಮಾಸಾಂತ್ಯದಲ್ಲಿ ಮಾನ್ಸೂನ್ ಮಾರುತಗಳು ದಿಲ್ಲಿಗೆ ತಲುಪುವ ಸಾಧ್ಯತೆಯಿದೆ.
ತಾಪಮಾನ ಸತತವಾಗಿ ಎರಡು ದಿನ ಗಳವರೆಗೆ 47 ಡಿಗ್ರಿ ಇದ್ದರೆ ಉಷ್ಣ ಹವೆ ಭಾರಿ ಪ್ರಮಾಣದಲ್ಲಿ ಬೀಸಲಿದೆ. ಕಳೆದ ಕೆಲವು ದಿನಗಳಿಂದ ತಾಪಮಾನ 45 ಡಿಗ್ರಿಗೆ ಇಳಿದಿದ್ದರಿಂದ ಉಷ್ಣ ಹವೆಯ ಪ್ರಭಾವ ಕಡಿಮೆಯಾಗಿತ್ತು.