ಪುಣೆಯಲ್ಲಿ ಗಣೇಶೋತ್ಸವಕ್ಕೆ ಅದ್ದೂರಿ ಚಾಲನೆ

Team Udayavani, Sep 4, 2019, 12:40 PM IST

ಪುಣೆ, ಸೆ. 3: ಗಣೇಶ ಚತುರ್ಥಿ ನಿಮಿತ್ತ ಸೋಮವಾರದಂದು ಮಂಗಳಮಯ ವಾತಾವರಣ ದೊಂದಿಗೆ ಪುಣೆ ಉತ್ಸವ ಎಂದೇ ಕರೆಯಲ್ಪಡುವ ಗಣೇಶನ ಉತ್ಸವಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.

ಹನಿಹನಿ ಮಳೆಯ ನಡುವೆ ಎಲ್ಲೆಲ್ಲೂ ವಾದ್ಯ, ತಾಳ, ಘೋಷಗಳೊಂದಿಗೆ ಗಣಪತಿ ಬಪ್ಪಾ ಮೋರ್ಯಾ ಉದ್ಘೋಷದೊಂದಿಗೆ ಸಾಂಸ್ಕೃತಿಕ ನಗರಿಗೆ ಭಕ್ತಿ ಸಂಭ್ರಮದ ಕಲೆ ತುಂಬಿತ್ತು.

ಪುಣೆಯ ಗ್ರಾಮದೇವತೆ ಎಂದೇ ಪ್ರಸಿದ್ಧವಾಗಿರುವ ಮಾನಾಚಾ ಪಹಿಲಾ ಗಣಪತಿ (ಗೌರವದ ಮೊದಲ ಗಣಪತಿ) ಬಿರುದಾಂಕಿತ ಕಸಬಾ ಗಣಪತಿಯನ್ನು ಭವ್ಯ ಮೆರವಣಿಗೆ ಯೊಂದಿಗೆ ತಂದು ಪ್ರತಿಷ್ಠಾಪಿಸುವ ಮೂಲಕ ಪುಣೆಯ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು.

ಈ ಮೆರವಣಿಗೆಯಲ್ಲಿ ಭಕ್ತರು ಪಾರಂಪರಿಕ ವೇಷಭೂಷಣಗಳನ್ನು ತೊಟ್ಟು ಬಹು ಸಂಖ್ಯೆಯಲ್ಲಿ ಸೇರಿದ್ದು ಡೋಲು, ವಾದ್ಯ ಘೋಷಗಳೊಂದಿಗೆ ಭಕ್ತಿ ಭಾವದೊಂದಿಗೆ ಗಣೇಶನನ್ನು ಬರಮಾಡಿಕೊಂಡರು. ಅನಂತರದ ಪ್ರಸಿದ್ಧ ಮಂಡಳಿಗಳಾದ ತಾಂಬಡಿ ಜೋಗೇಶ್ವರಿ, ತುಳಶೀಬಾಗ್‌ ಗಣಪತಿ, ಗುರೂಜಿ ತಾಲೀಮ್‌, ಕೇಸರೀವಾಡ ಗಣಪತಿ ಮಂಡಳಿಗಳ ಪ್ರತಿಷ್ಠಾಪನೆ ಮಾಡಲಾಯಿತು. ವಿಶೇಷವಾಗಿ ಪುಣೆಯಲ್ಲಿ ಇತಿಹಾಸ ಪ್ರಸಿದ್ಧ ಡಗ್ಡುಶೇಟ್ ಹಲ್ವಾಯಿ ಗಣಪತಿ ಮಂದಿರದ ವತಿಯಿಂದ ಪೂಜಿಸಲ್ಪಡುವ ಗಣೇಶ ಉತ್ಸವವು ಬಹು ವಿಜೃಂಭಣೆಯಿಂದ ಪ್ರತಿಷ್ಠಾಪನೆಗೊಂಡಿದ್ದು ಸಾವಿರಾರು ಸಂಖ್ಯೆಯಲ್ಲಿ ಬೆಳಗ್ಗಿನಿಂದಲೇ ಮೈಲುದ್ದದ ಸಾಲಿನಲ್ಲಿ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದರು.

ಬೆಳಗ್ಗೆ ಗಣೇಶನ ಭವ್ಯ ಮೆರವಣಿಗೆಯು ಬುಧವಾರ ಚೌಕ್‌, ಅಪ್ಪಾ ಬಲವಂತ್‌ ಚೌಕ್‌, ಶನಿಪಾರ್‌ ಚೌಕ್‌, ಲೋಕಮಾನ್ಯ ತಿಲಕ್‌ ಚೌಕ್‌ ಮೂಲಕ ಸಾಗಿಬಂದು ಪ್ರಾಣಪ್ರತಿಷ್ಠೆಯನ್ನು ಮಾಡಲಾಯಿತು. ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ಪ್ರತೀ ವರ್ಷ ದೇಶದ ವಿವಿಧೆಡೆಯ ಪ್ರಸಿದ್ಧ ದೇವಾಲಯದ ಪ್ರತಿಕೃತಿಯನ್ನು ರಚಿಸಿ ಅದರಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಶ್ರೀಮಂತ ದಗ್ಡುಶೇಟ್ ಹಲ್ವಾಯಿ ಸಾರ್ವಜನಿಕ ಗಣಪತಿ ಟ್ರಸ್ಟ್‌ನ ಸುವರ್ಣಯುಗ ತರುಣ್‌ ಮಂಡಲ್ ವತಿಯಿಂದ ಆರಾಧಿಸಲ್ಪ ಡುವ 127 ನೇ ವಾರ್ಷಿಕ ಗಣಪತಿ ಉತ್ಸವಕ್ಕೆ ರಚಿಸಲಾದ ಆಕರ್ಷಕ ಮಂಟಪವನ್ನು ನಿರ್ಮಿಸಲಾಗಿದೆ.

ಈ ವರ್ಷ ಒರಿಸ್ಸಾದಲ್ಲಿನ ಶ್ರೀ ಗಣೇಶ ಸೂರ್ಯಮಂದಿರ ದೇವಸ್ಥಾನದ ಪ್ರತಿಕೃತಿಯನ್ನು ರಚಿಸಲಾಗಿದ್ದು ಲಕ್ಷಾಂತರ ಭಕ್ತಾದಿಗಳನ್ನು ಸೆಳೆಯು ತ್ತಿದ್ದು ಆಕರ್ಷಕ ವಿದ್ಯುದ್ದೀ ಪಾಲಂಕಾರಗಳನ್ನು ಮಾಡಲಾಗಿದೆ. ಹತ್ತು ದಿನಗಳ ಕಾಲ ಜರಗುವ ಪುಣೆ ಗಣೇಶೋತ್ಸವಕ್ಕೆ ಪುಣೆಯ ನಾಗರಿಕರು ಭವ್ಯ ಸ್ವಾಗತ ಕೋರಿದ್ದು ಲಕ್ಷಾಂತರ ಭಕ್ತಾದಿಗಳು ದರ್ಶನ ಪಡೆಯಲಿದ್ದಾರೆ. ಇದೇ ರೀತಿ ಪ್ರತೀ ಮನೆಗಳಲ್ಲೂ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಇಲ್ಲಿನ ಪದ್ಧತಿಯಾಗಿದೆ.

ಬೆಳಗ್ಗಿನಿಂದ ಸಂಜೆಯ ವರೆಗೆ ವಿವಿಧ ಮಂಡಳಿಗಳ ಹಾಗೂ ಮನೆಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಲಾಗಿದ್ದು ಗಣೇಶ್‌ ಮೂರ್ತಿ ಅಂಗಡಿಗಳಲ್ಲಿ, ಹೂವಿನ ಅಂಗಡಿಗಳಲ್ಲಿ ಹಾಗೂ ಸಿಹಿ ತಿಂಡಿಗಳ ಅಂಗಡಿಗಳಲ್ಲಿ ಬೆಳಗ್ಗಿನಿಂದಲೇ ಜನಸಂದಣಿ ಕಂಡುಬರುತ್ತಿತ್ತು. ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು ಮಹಾನಗರಪಾಲಿಕೆ ಹಾಗೂ ಪೊಲೀಸ್‌ ಇಲಾಖೆಯ ವತಿಯಿಂದ ಸರ್ವ ಸಿದ್ಧತೆಯನ್ನು ಮಾಡಲಾಗಿದೆ.

 

 

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ