ಬಂಟರ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವ ಪೂರ್ವಭಾವಿ ಸಭೆ

Team Udayavani, Jan 4, 2019, 7:25 AM IST

ಮುಂಬಯಿ: ಬಂಟ ಬಾಂಧವರಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆಯು ಸದಾ ಕಾಲ ಉಳಿಯಬೇಕು ಎಂಬ ಉದ್ದೇಶದಿಂದ ಬಂಟರ ಸಂಘವು ಪ್ರತೀ ವರ್ಷ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ವರ್ಷ ಕ್ರೀಡಾ ಸಮಿತಿಯು ಕಾರ್ಯಾಧ್ಯಕ್ಷ ವಿಠಲ ಎಸ್‌. ಆಳ್ವರ ನೇತೃತ್ವದಲ್ಲಿ 32ನೇ ಕ್ರೀಡಾ ಸಂಭ್ರಮವನ್ನಾಚರಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಬಂಟರಲ್ಲಿ ಕ್ರೀಡಾಭಿಮಾನ, ಕ್ರೀಡಾ ಸ್ಪೂರ್ತಿ ತುಂಬಿ ಹರಿಯುತ್ತಿರುವುದು ಸಂತಸದ ವಿಚಾರವಾಗಿದೆ. ಸ್ಪರ್ಧೆಯಲ್ಲಿ ಗೆಲ್ಲುವುದು, ಭಾಗವಹಿಸುವುದು ಒಂದೇ ಆಗಿದೆ. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರೆಂಬ ಭಾವನೆ ತಳೆದು ಆಡುವುದು ಮುಖ್ಯವೇ ಹೊರತು ಯಾವುದೇ ದ್ವೇಷ, ವೈಷಮ್ಯ ಜಗಳಕ್ಕೆ ಇಲ್ಲಿ ಆಸ್ಪದವಿಲ್ಲ. ಭಾಗವಹಿಸುವ ಕ್ರೀಡಾಗಳೆಲ್ಲರೂ ಶಿಸ್ತನ್ನು ಪಾಲಿಸಬೇಕು. ಜೊತೆಗೆ  ಕ್ರೀಡಾ ಸಮಿತಿಯ ಕಾನೂನು ಮತ್ತು ನಿಯಮಕ್ಕೆ ಬದ್ಧರಾಗಿಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.

ಜ. 2ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಕಬೆತ್ತಿಗುತ್ತು ಕಾಶಿ ಸಿದ್ಧು ಶೆಟ್ಟಿ ಕಿರುಸಭಾಗೃಹದಲ್ಲಿ ಜರಗಿದ ಸಂಘದ ಕ್ರೀಡಾ ಸಮಿತಿಯ 32ನೇ ವಾರ್ಷಿಕ ಕ್ರೀಡೋತ್ಸವನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾರ್ಷಿಕ ಕ್ರೀಡಾಕೂಟವು ಈ ವರ್ಷ ಜನವರಿ 20 ರಂದು ಬೆಳಗ್ಗೆ ಕಾಂದಿವಲಿ ಪಶ್ಚಿಮದ ಪೊಯಿಸಾರ್‌ ಜಿಮಾVನದ ನೇತಾಜಿ ಸುಭಾಶ್ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಜರಗಲಿದ್ದು, ಕ್ರೀಡಾಕೂಟ ಸಮಾರಂಭದ ಉದ್ಘಾಟಕರಾಗಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಬೆಂಗಾಲ್‌ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಪದ್ಮಶ್ರೀ ಸೌರಭ್‌ ಗಂಗೂಲಿ ಅವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸದ ಗೋಪಾಲ್‌ ಶೆಟ್ಟಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂಟರ ಸಂಘರ ಸಂಘದ ಮಾಜಿ ಅಧ್ಯಕ್ಷ ಹಾಗೂ ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ ಮಾಜಿ ಜೊತೆ ಕಾರ್ಯದರ್ಶಿ ಡಾ| ಪಿ. ವಿ. ಶೆಟ್ಟಿ, ಗೌರವ ಅತಿಥಿಯಾಗಿ ವಿ. ಕೆ. ಗ್ರೂಪ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕರುಣಾಕರ ಎಂ. ಶೆಟ್ಟಿ ಆಗಮಿಸಲಿದ್ದಾರೆ. ಸಂಘದ ಪದಾಧಿಕಾರಿಗಳು, ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು ಸಮಾರಂಭದಲ್ಲಿ ಅತಿಥಿ-ಗಣ್ಯರುಗಳಾಗಿ ಉಪಸ್ಥಿತರಿದ್ದಾರೆ. ಬಂಟ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಬಂಟರ ಸಂಘ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಠಲ ಎಸ್‌. ಆಳ್ವ ಅವರು ಮಾತನಾಡಿ, ಕ್ರೀಡಾಕೂಟದ ವ್ಯವಸ್ಥೆಯ ಬಗ್ಗೆ ವಿವರಿಸಿ, ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಲ್ಯಗುತ್ತು ಪ್ರಕಾಶ್‌ ಶೆಟ್ಟಿ  ಅವರ ನೇತೃತ್ವದಲ್ಲಿ ಸಮಿತಿಯು ಉಪಾಹಾರ, ಚಹಾ, ಊಟದ ಸಂಪೂರ್ಣ ಪ್ರಾಯೋಜಕತ್ವವವನ್ನು ವಹಿಸಿಕೊಂಡಿದೆ. ವಿ. ಕೆ. ಗ್ರೂಪ್‌ನ ಸಿಎಂಡಿ ಕರುಣಾಕರ ಶೆಟ್ಟಿ ಅವರು ಕ್ರೀಡಾ ಬಹುಮಾನಗಳ ಪ್ರಾಯೋಜಕತ್ವ, ಡಾ| ಪಿ. ವಿ. ಶೆಟ್ಟಿ ಅವರು ಎಕ್ಸಿಕ್ಯೂಟಿವ್‌ ಪ್ರಾಯೋಜಕತ್ವ ಹಾಗೂ ಬಂಟರ ಸಂಘದ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆ, ಶಂಕರ್‌ ಬಿ. ಶೆಟ್ಟಿ ವಿರಾರ್‌, ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ, ತುಂಗಾ ಹೊಟೇಲ್ಸ್‌ನ ಸಿಎಂಡಿ ಸುಧಾಕರ ಎಸ್‌. ಹೆಗ್ಡೆ, ಸಾಯಿ ಪ್ಯಾಲೇಸ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ನ ಸಿಎಂಡಿ ರವಿ ಎಸ್‌. ಶೆಟ್ಟಿ, ಸಂಘದ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ ಅವರು ಟೀ ಶರ್ಟ್‌ ಪ್ರಾಯೋಜಕತ್ವ, ಸಂಘದ ಆಡಿಟ್‌ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ಅವರು ಟೀ ಶರ್ಟ್‌ ಪ್ರಾಯೋಜಕತ್ವವನ್ನು ವಹಿಸಿದ್ದಾರೆ ಎಂದು ತಿಳಿಸಿದರು.

ಬಂಟರ ಸಂಘ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಠಲ ಎಸ್‌. ಆಳ್ವ ಅವರು ಕ್ರೀಡಾಕೂಟದ ಪ್ರಾಯೋಜತ್ವ ವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕ್ರೀಡೆಯಲ್ಲಿ ಭಾಗವಹಿಸುಲಿಚ್ಛಿಸುವ ಕ್ರೀಡಾಳುಗಳು ಬಂಟರ ಸಂಘ ಗುರುತುಪತ್ರ ಹಾಗೂ ಆಧಾರ್‌ಕಾರ್ಡ್‌ ಖಡ್ಡಾಯವಾಗಿ ಹೊಂದಿರಬೇಕು. 18 ವರ್ಷಕ್ಕಿಂತ ಕೆಳಗಿನ ಮಕ್ಕಳು ಅವರ ಪಾಲಕರ ಸದಸ್ಯತ್ವದ ಗುರುತು ಪತ್ರ ಹಾಗೂ ಆಧಾರ್‌ಕಾರ್ಡ್‌ನ್ನು ತೋರಿಸತಕ್ಕದ್ದು. ಸಂಘದ ಸದಸ್ಯರು ಬೆಳಗ್ಗೆ ಟೀ ಶರ್ಟ್‌ ಮತ್ತು ಕಪ್ಪು ಬಣ್ಣನ ಪ್ಯಾಂಟ್‌ನ್ನು ಹಾಗೂ ಸಮಾರೋಪ ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳೆಲ್ಲರೂ ಸೂಟ್‌ ಧರಿಸುವಂತೆ ವಿನಂತಿಸಿದರು. ಬಂಟ ಕ್ರೀಡಾ ಪ್ರೇಮಿಗಳು ಕ್ರೀಡೋತ್ಸವಕ್ಕೆ ಎಲ್ಲ ರೀತಿಯಿಂದಲೂ ಸಹಕಾರ ನೀಡುವಂತೆ ವಿನಂತಿಸಿದರು.

ಕ್ರೀಡಾ ಮೇಲ್ವಿಚಾರಕ ಹಾಗೂ ಮೈದಾನದ ಮೇಲ್ವಿಚಾರಕ ಜಯ ಎ. ಶೆಟ್ಟಿ ಅವರು ಮಾತನಾಡಿ, ವೈಯಕ್ತಿಕ ಅಹಂ ಇಲ್ಲದೆ, ಸಮಿತಿಯ ಕಾನೂನು ನಿಯಮಾವಳಿಗಳಿಗೆ ಅನುಸಾರವಾಗಿ ಕ್ರೀಡಾಳುಗಳು ಭಾಗವಹಿಸಬೇಕು. ಸಂಘದ ಸದಸ್ಯತ್ವ ಹಾಗೂ ಆಧಾರ್‌ ಕಾರ್ಡ್‌ ಇಲ್ಲದವರು ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಗುರುತುಪತ್ರ ಮತ್ತು ಆಧಾರ್‌ಕಾರ್ಡ್‌ ಪರೀಕ್ಷಿಸುವ ವಿಶೇಷ ಮೆಷಿನ್‌ಗಳನ್ನು ಅಳವಡಿಸಲಾಗುವುದು ಎಂದು ನುಡಿದರು.

ಮಧ್ಯ ಮುಂಬಯಿ ಪ್ರಾದೇಶಿಕ ಸಮಿತಿಯ ಸಮನ್ವಯಕ ದಿವಾಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಸದಸ್ಯರೆಲ್ಲರೂ ಕ್ರೀಡಾಕೂಟವನ್ನು ಬಂಟರ ಸ್ನೇಹ ಸಮ್ಮಿಲನ ಎಂಬಂದೆ ಭಾವಿಸಬೇಕು. ಯಾವುದೇ ವಿವಾದಗಳಿಗೆ ಆಸ್ಪದ ನೀಡಬಾರದು ಎಂದರು.
ಸಂಘದ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಎಂ. ಜಿ. ಶೆಟ್ಟಿ ಅವರು ಮಾತನಾಡಿ, ಕ್ರೀಡಾಸ್ಪರ್ಧೆಗಳ ಅಂಕಪಟ್ಟಿಯನ್ನು ಪ್ರತಿ ಪ್ರಾದೇಶಿಕ ಸಮಿತಿಗಳಿಗೆ ನೀಡುವಂತೆ ತಿಳಿಸಿದರು. ಇದೇ ಸಮಿತಿಯ ಪ್ರೇಮನಾಥ್‌ ಶೆಟ್ಟಿ ಅವರು ಈ ಬಗ್ಗೆ ಸಲಹು ನೀಡಿದರು. ಸಿಟಿ ಪ್ರಾದೇಶಿಕ ಸಮಿತಿಯ ಪ್ರಸಾದ್‌ ಶೆಟ್ಟಿ ಮುಂಡ್ಕೂರು ಅಂಗಡಿಗುತ್ತು ಅವರು ಮಾತನಾಡಿ, ವೈಯಕ್ತಿಕ ದೇಣಿಗೆ ನೀಡುವವರ ಹೆಸರನ್ನು ಎಲ್‌ಇಡಿಯಲ್ಲಿ ತೋರಿಸುವಂತೆ ವಿನಂತಿಸಿದರು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ವಂದಿಸಿದರು. ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರು, ಉಪಸಮಿತಿಗಳ ಕಾರ್ಯಾಧ್ಯಕ್ಷರು, ಪ್ರಾದೇಶಿಕ ಸಸಮಿತಿಗಳ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ  ಮುಂಡ್ಕೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಅರ್ಜಿದಾರರಿಗೆ ಲಿಖೀತ ದಾಖಲೆ ಸಲ್ಲಿಕೆಗೆ ಸುಪ್ರೀಂಕೋರ್ಟ್‌ ಅವಕಾಶ ನೀಡಿದೆ. ಮುಖ್ಯ ನ್ಯಾಯಮೂರ್ತಿ...

  • ಹೊಸದಿಲ್ಲಿ: ಪ್ರಸಕ್ತ ವರ್ಷ ಶೇ.3 ರಷ್ಟು ಕುಸಿತ ಕಂಡಿರುವ ವಿಶ್ವದ ಒಟ್ಟಾರೆ ಉತ್ಪನ್ನವು (ವಿಶ್ವ ಜಿಡಿಪಿ), 2024ರ ಹೊತ್ತಿಗೆ ಮತ್ತಷ್ಟು ಕುಸಿತ ಕಾಣಲಿದೆ. ಆ ಸಂದರ್ಭದಲ್ಲಿ...

  • ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನವು ನವೆಂಬರ್‌ 18ರಿಂದ ಡಿಸೆಂಬರ್‌ 13ರವರೆಗೆ ನಡೆಯಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಸಂಸದೀಯ ವ್ಯವಹಾರಗಳ...

  • ಬೀಜಿಂಗ್‌: ವಾಣಿಜ್ಯ ಉದ್ದೇಶಗಳಿಗಾಗಿ ಹಾರಿಬಿಡುವ ಉಪಗ್ರಹಗಳ ಉಡಾವಣೆಯು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಚೀನ, ಹೊಸ ತಲೆಮಾರಿನ ರಾಕೆಟ್‌ಗಳ...

  • ಗಡಿಯಾಚೆಗಿನಿಂದ ಸತತವಾಗಿ ಕದನ ವಿರಾಮ ಉಲ್ಲಂ ಸುತ್ತಾ ನಾಗರಿಕರನ್ನು ಮತ್ತು ಯೋಧರನ್ನು ಗುರಿ ಮಾಡಿಕೊಂಡು ಶೆಲ್‌ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ಥಾನಕ್ಕೆ...