ಮಕ್ಕಳಿಗೆ ಧರ್ಮ ಸಂಸ್ಕೃತಿ ಶಿಕ್ಷಣದ ಅಗತ್ಯವಿದೆ: ಒಡಿಯೂರು ಶ್ರೀ

ಥಾಣೆ ಗುರು ಭಕ್ತಾಭಿಮಾನಿಗಳಿಂದ ಸಾರ್ವಜನಿಕ ಆಶೀರ್ವಚನ ಮತ್ತು ಗುರುವಂದನೆ

Team Udayavani, Aug 14, 2019, 5:47 PM IST

ಮುಂಬಯಿ, ಆ. 13: ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ದೊರೆತಾಗ ಮಾತ್ರ ಅವರು ದೇಶಪ್ರೇಮದೊಂದಿಗೆ ಉತ್ತಮ ನಾಗರಿಕರಾಗಲು ಸಾಧ್ಯ. ದೇಶದ ಶಿಕ್ಷಣ ನೀತಿ ಯಲ್ಲಿ ಪರಿವರ್ತನೆಯ ಅಗತ್ಯವಿದೆ. ಧರ್ಮ ಸಂಸ್ಕೃತಿಯ ಅರಿವನ್ನು ಮೂಡಿಸುವಂತಹ ಶಿಕ್ಷಣವು ಮಕ್ಕಳಿಗೆ ದೊರೆಯಬೇಕು ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು.

ಆ. 12ರಂದು ಥಾಣೆ ಪಶ್ಚಿಮದ ವುಡ್‌ಲ್ಯಾಂಡ್‌ ಹೊಟೇಲ್ನ ಸಭಾಗೃಹದಲ್ಲಿ ಥಾಣೆ ಗುರು ಭಕ್ತಾಭಿಮಾನಿಗಳ ವತಿಯಿಂದ ನಡೆದ ಸಾರ್ವಜನಿಕ ಆಶೀರ್ವಚನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಭಕ್ತಿ-ಶ್ರದ್ಧೆ, ಸಂಸ್ಕಾರದಿಂದ ಬೆಳೆದ ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ಯುವ ಜನತೆ ದಾರಿತಪ್ಪದಂತೆ ನೋಡಿಕೊಳ್ಳಬೇಕು. ಬದುಕನ್ನು ಪ್ರೀತಿಸಲು ಕಲಿಯಬೇಕು. ಭಗವದ್ಗೀತೆಯಂತಹ ಗ್ರಂಥಗಳು ಜೀವನದ ಮೌಲ್ಯಗಳನ್ನು ತೋರಿಸುತ್ತದೆ. ಇಂತಹ ಆಧ್ಯಾತ್ಮಿಕ ಗ್ರಂಥಗಳಿಂದ ಆಧ್ಯಾತ್ಮಿಕತೆಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಆಗ ನಮ್ಮ ಜೀವನ ಪಾವನವಾಗುವುದರಲ್ಲಿ ಸಂಶಯವಿಲ್ಲ. ಯಂತ್ರ-ತಂತ್ರಗಳ ಜತೆಗೆ ತತ್ವಜ್ಞಾನವು ನಮಗೆ ಬೇಕು. ಇದು ಆಧ್ಯಾತ್ಮಿಕತೆಯಿಂದ ನಮಗೆ ದೊರೆಯುತ್ತದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಕೀರ್ತಿ ಉದಯ್‌ ಶೆಟ್ಟಿ ಅವರು ಶ್ರೀಗಳನ್ನು ಫಲಪುಷ್ಪವನ್ನಿತ್ತು ಹಾರಾರ್ಪಣೆಗೈದು ಗೌರವಿಸಿದರು. ಸ್ಥಳೀಯ ಪುಟಾಣಿಗಳಿಂದ ಗಣೇಶಸ್ತುತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮವು ಪ್ರಾರಂಭಗೊಂಡಿತು. ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ಅವರು ಪ್ರಾರಂಭದಲ್ಲಿ ಪ್ರಾರ್ಥನೆಗೈದರು. ಶ್ರೀಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್‌ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಗುರುದೇವ ಸೇವಾ ಬಳಗದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಎಲ್. ಶೆಟ್ಟಿ, ಉಪಾಧ್ಯಕ್ಷ ಚಂದ್ರಹಾಸ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇವತಿ ವಾಮಯ್ಯ ಶೆಟ್ಟಿ, ವಾಮಯ್ಯ ಶೆಟ್ಟಿ, ದಾಮೋದರ ಶೆಟ್ಟಿ, ದಿವಾಕರ್‌ ಶೆಟ್ಟಿ ಕುರ್ಲಾ, ಥಾಣೆ ಪರಿಸರದ ಗುರುಭಕ್ತರಾದ ಗುಣಪಾಲ್ ಶೆಟ್ಟಿ, ಮನೋಜ್‌ ಹೆಗ್ಡೆ, ಮೋಹನ್‌ ಹೆಗ್ಡೆ, ಸುರೇಶ್‌ ಕೆ. ಶೆಟ್ಟಿ, ಶೇಖರ್‌ ಶೆಟ್ಟಿ, ಜಯರಾಮ್‌ ಟಿ. ಶಾಂತಾ, ದೇವದಾಸ್‌ ಶೆಟ್ಟಿ, ಹರೀಶ್‌ ಉದ್ಯಾವರ್‌, ಸುಹಾಸಿನಿ ಶೆಟ್ಟಿ, ಸುಧೀರ್‌ ತೋನ್ಸೆ, ಕುಶಲಾ ಶೆಟ್ಟಿ, ಶರ್ಮಿಳಾ ಎಸ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅಯ್ಯಪ್ಪ ಸೇವಾ ಸಮಿತಿ ಕಿಸನ್‌ನಗರ ಹಾಗೂ ನವೋದಯ ಶಾಲೆಯ ಸದಸ್ಯರಿಂದ ಭಜನ ಕಾರ್ಯಕ್ರಮ ನಡೆಯಿತು.

ಚಿತ್ರ-ವರದಿ : ಸುಭಾಷ್‌ ಶಿರಿಯಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ