ಗುಡ್ಡೆಕೊಪ್ಲ ಮೊಗವೀರ ಸಂಘ ಮುಂಬಯಿ: ಅಧ್ಯಕ್ಷರಾಗಿ ಎಚ್. ಕೃಷ್ಣ ಸುವರ್ಣ ಅವಿರೋಧ ಆಯ್ಕೆ
Team Udayavani, Apr 9, 2022, 11:48 AM IST
ಮುಂಬಯಿ: ಹಿರಿಯ ಸಂಸ್ಥೆಗಳಲ್ಲೊಂದಾದ ಗುಡ್ಡೆಕೊಪ್ಲ ಮೊಗವೀರ ಸಂಘ ಮುಂಬಯಿ ವಾರ್ಷಿಕ ಮಹಾಸಭೆ ಎ. 3ರಂದು ಬೊರಿವಲಿ ಪಶ್ಚಿಮದ ಗೊರೈ ಖಾಡಿಯಲ್ಲಿರುವ ಹೊಟೇಲ್ ಬೇ ವ್ಯೂನಲ್ಲಿ ಸಂಘದ ಅಧ್ಯಕ್ಷ ನರೇಂದ್ರ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕ್ಷೇತ್ರಾಡಳಿತ ಸಮಿತಿಯ ರಮೇಶ್ ಗುರಿಕಾರ್ ಅವರ ನೇತೃತ್ವದಲ್ಲಿ ಊರಿನ ಬಬ್ಬರ್ಯ, ಬಬ್ಬರ್ಯ ಬಂಟ, ಶ್ರೀ ಜಾರಂದಾಯ ಪರಿವಾರ ದೈವ, ಶ್ರೀರಾಮ ದೇವರಿಗೆ ಹಾಗೂ ಮೊಗವೀರ ಕುಲಗುರು ಶ್ರೀ ಮಾಧವ ಮಂಗಳ ಪೂಜ್ಯರಿಗೆ ಪ್ರಾರ್ಥನೆ ಸಲ್ಲಿಸಿ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಲಾಯಿತು. ಗತ ವರ್ಷದಲ್ಲಿ ನಿಧನ ಹೊಂದಿದ ಜಯ ಗುರಿಕಾರ, ಬಬ್ಬರ್ಯ ದೈವಸ್ಥಾನದ ಮೂಲ ಪೂಜಾರಿಗಳಾದ ಭೋಜ ಪೂಜಾರಿ, ಸಂಘದ ಉಪಾಧ್ಯಕ್ಷರಾಗಿದ್ದ ಉಮೇಶ್ ಕುಂದರ್ ಹಾಗೂ ಸಂಘದ ಸದಸ್ಯರು, ಸದಸ್ಯ ಬಾಂಧವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗತ ವರ್ಷದ ವರದಿಯನ್ನು ಜತೆ ಕಾರ್ಯದರ್ಶಿ ಗಿರೀಶ್ ಕರ್ಕೇರ ವಾಚಿಸಿದರು. ಗತ ವರ್ಷದ ಆಯವ್ಯಯ ಪಟ್ಟಿಯನ್ನು ಕೋಶಾಧಿಕಾರಿ ಪ್ರಕಾಶ್ ಕುಂದರ್ ಮಂಡಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.
ಕಳೆದ ಎರಡು ವರ್ಷಗಳ ಶೈಕ್ಷಣಿಕ ಸಾಲಿನ ಸಾಧಕ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರಣಯ ರವಿ ಸಾಲ್ಯಾನ್, ಎಚ್‌ಎಸ್‌ಸಿಯ ಸಾಧಕಿ ಶರಣ್ಯಾ ಗಿರೀಶ್ ಕರ್ಕೇರ, ಬಿ.ಟೆಕ್ ಪದವೀಧರೆ ಶ್ರೇಯಾ ಗಿರೀಶ್ ಕರ್ಕೇರ, ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಕ್ಷಾ ಸುರೇಶ್ ಕಾಂಚನ್, ಎಂಬಿಎ ಪದವೀಧರೆ ಶ್ರುತಿ ಮುರಳೀಧರ ಕುಂದರ್ ಅವರನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಎಚ್. ಕೃಷ್ಣ ಸುವರ್ಣ ಅವರು ಪ್ರಧಾನ ಸಭೆಯಿಂದ ಬಂದ ಪತ್ರಗಳನ್ನು ಓದಿದರು.
ಇದೇ ಸಂದರ್ಭದಲ್ಲಿ 2022-2025ನೇ ಸಾಲಿನ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎಚ್. ಕೃಷ್ಣ ಸುವರ್ಣ, ಉಪಾಧ್ಯಕ್ಷರಾಗಿ ಹರೀಶ್ ಬಿ. ಶ್ರೀಯಾನ್, ಗೌರವ ಕಾರ್ಯದರ್ಶಿಯಾಗಿ ಗಿರೀಶ್ ಕರ್ಕೇರ, ಜತೆ ಕಾರ್ಯದರ್ಶಿಯಾಗಿ ಭಾಸ್ಕರ್ ಸಾಲ್ಯಾನ್, ಗೌರವ ಕೋಶಾಧಿಕಾರಿಯಾಗಿ ಪ್ರಕಾಶ್ ಕುಂದರ್, ಜತೆ ಕೋಶಾಧಿಕಾರಿಯಾಗಿ ಮುಕುಲ್ ಶ್ರೀಯಾನ್ ಅವರನ್ನು ನೇಮಿಸಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನರೇಂದ್ರ ಕರ್ಕೇರ, ಬಾಲಕೃಷ್ಣ ಬಂಗೇರ, ಓಂದಾಸ್ ಕುಂದರ್, ಮುರಳೀಧರ ಕುಂದರ್, ಜಗನ್ನಾಥ್ ಕಾಂಚನ್, ದೇವದಾಸ್ ಕರ್ಕೇರ, ಚೇತನ್ ಸಾಲ್ಯಾನ್, ಪ್ರದೀಪ್ ಕರ್ಕೇರ, ಚಂದ್ರಕಾಂತ್ ಸಾಲ್ಯಾನ್ ಆಯ್ಕೆಯಾದರು. ಕ್ಷೇತ್ರಾಡಳಿತ ಸಮಿತಿಗೆ ರಮೇಶ್ ಗುರಿಕಾರ್, ಲೆಕ್ಕ ಪರಿಶೋಧಕರಾಗಿ ಪಾಂಡುರಂಗ ಶ್ರೀಯಾನ್, ಸುಜಿತ್ ಸುವರ್ಣ ಅವರು ನೇಮಕಗೊಂಡರು.
ಗೌರವ ಪ್ರಧಾನ ಕಾರ್ಯದರ್ಶಿ ಎಚ್. ಕೃಷ್ಣ ಸುವರ್ಣ ಮಾತನಾಡಿ, ಎಲ್ಲ ಸದಸ್ಯರು ಮುಂದೆ ಬಂದು ಸಭಾದ ಏಳ್ಗೆಗಾಗಿ ಶ್ರಮಿಸಿ, ಸಭಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು. ಜತೆ ಕಾರ್ಯದರ್ಶಿ ಗಿರೀಶ್ ಕರ್ಕೇರ ಅವರು ಮಾತನಾಡಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ಅಮ್ಮನವರ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶ ಹಾಗೂ ಪುನರ್ ಪ್ರತಿಷ್ಠೆಗೆ ಧನಸಹಾಯ ನೀಡಿದ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ರಮೇಶ್ ಗುರಿಕಾರ ಅವರು, ಊರಿನ ದೈವ-ದೇವರನ್ನು ಪ್ರಾರ್ಥಿಸಿ ಗಂಧ-ಪ್ರಸಾದ ವಿತರಿಸಿದರು. ಕಾರ್ಯದರ್ಶಿ ಎಚ್. ಕೃಷ್ಣ ಸುವರ್ಣ ವಂದಿಸಿದರು.