ಜೋಗೇಶ್ವರಿ ಮಂತ್ರಾಲಯ : ಅಕ್ಷಯ ತೃತೀಯ ಗಂಧಲೇಪನ ಕಾರ್ಯಕ್ರಮ

Team Udayavani, May 9, 2019, 2:45 PM IST

ಮುಂಬಯಿ: ಅಕ್ಷಯ ತೃತೀಯ ದಿವಸದ ಪ್ರಯುಕ್ತ ಸರ್ವ ಭಕ್ತರು ವಿಶೇಷವಾಗಿ ದೇವಸ್ಥಾನಗಳಿಗೆ ಹೋಗಿ ರಾಯರ ಅಂತ ರ್ಯಾಮಿಯಾಗಿ ಇರತಕ್ಕಂತಹ ಮೂಲ ರಾಮಚಂದ್ರ ದೇವರು, ಶ್ರೀದೇವಿ-ಭೂದೇವಿ ಸಹಿತನಾದಂತಹ ವೆಂಕಟೇಶ ದೇವರಲ್ಲಿ ನಾವು ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ ಪ್ರಾರ್ಥನೆಗೈದಾಗ ನಮಗೆ ಅಕ್ಷಯ ಪುಣ್ಯ ಲಭಿಸುತ್ತದೆ. ಆದ್ದರಿಂದ ಇವತ್ತಿನ ದಿವಸ ಯಾವ ಭಕ್ತರು ದೇವಸ್ಥಾನಗಳಿಗೆ ಹೋಗಿ ವಿಶೇಷವಾಗಿ ದಾನ, ಧರ್ಮ ಮತ್ತು ಪೂಜಾದಿಗಳನ್ನು ಮಾಡುತ್ತಾರೋ ಅವರಿಗೆ ಅಕ್ಷಯ ಪ್ರತಿಫಲ ಸಿಗುತ್ತದೆ ಎಂದು ಜೋಗೇಶ್ವರಿ ಗುಲ್ಶನ್‌ ನಗರದ ಶ್ರೀ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರಬಂಧಕ, ಅರ್ಚಕ ಶ್ರೀ ಪ್ರಹ್ಲಾದಾಚಾರ್ಯ ಅವರು ನುಡಿದರು.

ಆದರೆ ಕೆಲವು ಜನರಲ್ಲಿ ಒಂದು ಮೂಢನಂಬಿಕೆ ಎಂದರೆ ಅಕ್ಷಯದ ದಿನ ಬಂಗಾರ ಖರೀದಿಸಬೇಕು ಎಂಬುವುದು. ಇದು ನಿಜವಾಗಿಯೂ ಶುದ್ಧ ತಪ್ಪು ಕಲ್ಪನೆಯಾಗಿದೆ. ಇವತ್ತಿನ ದಿನ ನಾವು
ದಾನ, ಧರ್ಮ, ಮಾಡಬೇಕು. ದೇವರಿಗೆ ಸಮರ್ಪಣೆ ಮಾಡುವ ಯಾವುದೇ ಸೇವೆಯಲ್ಲೂ ಅಕ್ಷಯ ಪುಣ್ಯ ಲಭಿಸುತ್ತದೆ ಎಂದವರು ನುಡಿದರು.

ಮೇ 7ರಂದು ಅಕ್ಷಯ ತೃತೀಯ ಅಂಗವಾಗಿ ಜೋಗೇಶ್ವರಿ ಗುಲ್ಶನ್‌ ನಗರದ ಶ್ರೀ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ವಿಶೇಷ ಪೂಜಾ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ಬಂಗಾರದಲ್ಲಿ ಕಲಿ ನೆಲೆಯಾಗಿರುತ್ತಾನೆ. ಆದ್ದರಿಂದ ಕಲಿಯನ್ನು ನಾವು ಮನೆಯಲ್ಲಿ ತಂದು ಇಟ್ಟುಕೊಂಡಂತಾಗುತ್ತದೆ. ಅಕ್ಷಯ ತೃತೀಯ ದಿವಸದಂತೆ ದೇವರ ದರ್ಶನ, ವಿಶೇಷವಾಗಿ ಅರ್ಚನೆ, ಹವನ, ಪೂಜೆ, ಹಿರಿಯರಿಂದ ಆಶೀರ್ವಾದ, ದಾನ-ಧರ್ಮಗೈದಾಗ ಅಕ್ಷಯ ಫಲವನ್ನು ಪಡೆಯಲು ಸಾಧ್ಯವಿದೆ. ಸಕಲ ಭಕ್ತಾದಿಗಳು ಸದಾ ಕಾಲ ಕೂಡಿ ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ಎಲ್ಲ ರಿಗೂ ದೇವರ ಅನುಗ್ರಹ ಪ್ರಾಪ್ತಿಯಾಗುವಂತೆ ಮಾಡಬೇಕು ಎಂದು ನುಡಿದರು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ಜೋಗೇಶ್ವರಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗಂಧಲೇಪನ, ವಿವಿಧ ಪೂಜೆಗಳು, ಸೇವಾ ಪೂಜೆಗಳು, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಮಠದ ಪ್ರಧಾನ ಅರ್ಚಕ ವ್ಯಾಸಾಚಾರ್ಯ, ರಾಘವೇಂದ್ರಾಚಾರ್ಯ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಇದೇ ಸಂದರ್ಭದಲ್ಲಿ ಮೀರಾರೋಡ್‌ನ‌ ರಾಯರ ಬಳಗದ ಗಿರೀಶ್‌ ಕರ್ಕೇರ ಅವರಿಗೆ ವಿಶೇಷ ಪ್ರಸಾದವನ್ನಿತ್ತು ಗೌರವಿಸಲಾಯಿತು. ವ್ಯಾಸಚಾರ್ಯರು ವಂದಿಸಿದರು. ತುಳು-ಕನ್ನಡಿಗ, ಅನ್ಯಭಾಷಿಕ‌ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ