ಭಾರತ ಸರಣಿಗೆ ಆಸ್ಟ್ರೇಲಿಯ ಸಿದ್ಧ: ಆರನ್ ಫಿಂಚ್
Team Udayavani, Jan 10, 2020, 12:01 AM IST
ಸಿಡ್ನಿ: ಭಾರತ ವಿರುದ್ಧದ ಸರಣಿಗೆ ನಾವು ಸಜ್ಜಾಗಿದ್ದೇವೆ, ಇದಕ್ಕಾಗಿ ಸಂಪೂರ್ಣ ತಯಾರಿ ನಡೆಸಿದ್ದೇವೆ ಎಂಬುದಾಗಿ ಆಸೀಸ್ ಏಕದಿನ ತಂಡಗಳ ನಾಯಕ ಆರನ್ ಫಿಂಚ್ ಹೇಳಿದ್ದಾರೆ.
ಒಂದು ವರ್ಷದ ಹಿಂದೆ ಭಾರತಕ್ಕೆ ಪ್ರವಾಸ ಬಂದಿದ್ದ ಆಸ್ಟ್ರೇಲಿಯ ಏಕದಿನ ಸರಣಿಯನ್ನು 3-2 ಅಂತರದಿಂದ ಗೆದ್ದಿತ್ತು. ಇದೇ ಸ್ಫೂರ್ತಿಯಲ್ಲಿ ಭಾರತಕ್ಕೆ ಮತ್ತೂಮ್ಮೆ ಕಠಿನ ಸವಾಲೊಡ್ಡಲು ಕಾಂಗರೂ ಪಡೆ ತಯಾರಿ ನಡೆಸಿದೆ ಎಂಬುದಾಗಿ ಫಿಂಚ್ ಹೇಳಿದ್ದಾರೆ.
“ಭಾರತೀಯ ಉಪಖಂಡದಲ್ಲಿ ಸರಣಿ ಆಡಲು ತೆರಳುವಾಗ ಸಾಮಾನ್ಯವಾಗಿ ನಮ್ಮ ರಣತಂತ್ರದ ಬಗ್ಗೆ ಅಳುಕು ಇದ್ದೇ ಇರುತ್ತದೆ. ಏಕೆಂದರೆ ತವರಿನಲ್ಲಿ ಭಾರತ, ಪಾಕಿಸ್ಥಾನ ಅಥವಾ ಶ್ರೀಲಂಕಾ ತಂಡಗಳು ಹೆಚ್ಚು ಅಪಾಯಕಾರಿಯಾಗಿರುತ್ತವೆ. ನನ್ನ ಪ್ರಕಾರ ತಂತ್ರಗಾರಿಕೆಯ ಜತೆಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ನಾವು ಭಾರತ ವಿರುದ್ಧ ಉತ್ತಮ ನಿರ್ವಹಣೆ ನೀಡಲಿದ್ದೇವೆ’ ಎಂದು ಫಿಂಚ್ ವಿಶ್ವಾಸ ವ್ಯಕ್ತಪಡಿಸಿದರು.