ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ ರನ್ನರ್ ಅಪ್
Team Udayavani, Mar 20, 2022, 10:45 PM IST
ಬರ್ಮಿಂಗ್ಹ್ಯಾಮ್: ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಇತಿಹಾಸ ನಿರ್ಮಿಸುವ ಅವಕಾಶವೊಂದನ್ನು ಕಳೆದುಕೊಂಡರು.
ರವಿವಾರ ರಾತ್ರಿಯ ಪ್ರಶಸ್ತಿ ಕಾಳಗದಲ್ಲಿ ಅವರು ವಿಶ್ವದ ನಂ.1 ಆಟಗಾರ, ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಪರಾಭವಗೊಂಡರು. ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಕೂಡ ಆಗಿರುವ ಅಕ್ಸೆಲ್ಸೆನ್ 21-10, 21-15 ಅಂತರದಿಂದ ಭಾರತೀಯನಿಗೆ ಸೋಲುಣಿಸಿದರು.
ಲಕ್ಷ್ಯ ಸೇನ್ ಗೆದ್ದದ್ದೇ ಆದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನೆತ್ತಿದ ಭಾರತದ ಮೂರನೇ ಬ್ಯಾಡ್ಮಿಂಟನ್ ಆಟಗಾರನಾಗುತ್ತಿದ್ದರು. ಇದಕ್ಕೂ ಮೊದಲು 1980ರಲ್ಲಿ ಪ್ರಕಾಶ್ ಪಡುಕೋಣೆ, 2001ರಲ್ಲಿ ಪುಲ್ಲೇಲ ಗೋಪಿಚಂದ್ ಚಾಂಪಿಯನ್ ಆಗಿದ್ದರು.
ಇದು ಅಕ್ಸೆಲ್ಸೆನ್ ವಿರುದ್ಧ ಆಡಿದ 6 ಪಂದ್ಯಗಳಲ್ಲಿ ಲಕ್ಷ್ಯ ಸೇನ್ ಅನುಭವಿಸಿದ 5ನೇ ಸೋಲು. ಏಕೈಕ ಗೆಲುವು ಕಳೆದ ಜರ್ಮನ್ ಓಪನ್ ಸೆಮಿಫೈನಲ್ನಲ್ಲಿ ಬಂದಿತ್ತು.
ಯಮಾಗುಚಿ ಚಾಂಪಿಯನ್
ಈ ಕೂಟದ ವನಿತಾ ಸಿಂಗಲ್ಸ್ ಪ್ರಶಸ್ತಿ ಜಪಾನಿನ ಅಕಾನೆ ಯಮಾಗುಚಿ ಪಾಲಾಯಿತು. ನೇರ ಗೇಮ್ಗಳ ಫೈನಲ್ ಹೋರಾಟದಲ್ಲಿ ಅವರು ಕೊರಿಯಾದ ಅನ್ ಸೆ ಯಂಗ್ ವಿರುದ್ಧ 21-15, 21-15 ಅಂತರದಿಂದ ಗೆದ್ದು ಬಂದರು. ಪಂದ್ಯದುದ್ದಕ್ಕೂ ಪ್ರಭುತ್ವ ಸಾಧಿಸುತ್ತ ಹೋದ ಯಮಾಗುಚಿ ಬಹಳ ಸುಲಭದಲ್ಲಿ ಗೆಲುವು ಒಲಿಸಿಕೊಂಡರು.
ಭಾರತದ ಜೋಡಿ ಪರಾಭವ
ವನಿತಾ ಡಬಲ್ಸ್ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ತ್ರಿಷಾ ಜಾಲಿ-ಗಾಯತ್ರಿ ಗೋಪಿಚಂದ್ ಜೋಡಿ ಸೆಮಿಫೈನಲ್ನಲ್ಲಿ ಪರಾಭವಗೊಂಡಿತು. ಚೀನದ ಶು ಕ್ಸಿಯಾನ್ ಜಾಂಗ್-ಯು ಜೆಂಗ್ 21-17, 21-16 ನೇರ ಗೇಮ್ಗಳಿಂದ ಭಾರತದ ಜೋಡಿಯನ್ನು ಹಿಮ್ಮೆಟ್ಟಿಸಿದರು.