ಅಂತಾರಾಷ್ಟ್ರೀಯ ಆರ್ಚರಿ ಕೋಚ್ ನ್ಯಾನೋಮಾ ರಸ್ತೆ ಅಪಘಾತದಲ್ಲಿ ಸಾವು
Team Udayavani, Jun 2, 2020, 11:21 AM IST
ಜೈಪುರ: ಮಾಜಿ ಅಂತಾರಾಷ್ಟ್ರೀಯ ಆರ್ಚರ್, ಹಾಲಿ ತರಬೇತುಗಾರ ಜಯಂತಿ ಲಾಲ್ ನ್ಯಾನೋಮಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರವಿವಾರ ನಡೆದ ರಸ್ತೆ ಅಪಘಾತದಲ್ಲಿ 34 ವರ್ಷದ ನ್ಯಾನೋಮಾ ಮೃತರಾಗಿದ್ದಾರೆ.
2010ರ ಏಶ್ಯಾ ಕಪ್ ಮತ್ತು ಏಶ್ಯಾ ಗ್ರಾಂಡ್ ಪಿಕ್ಸ್ ನ ಪದಕ ವಿಜೇತರಾಗಿದ್ದರು. ರಾಜಸ್ಥಾನದವರಾದ ಇವರು, ಬನ್ಸ್ವಾರದಿಂದ ದುಂಗಾರ್ಪುರಕ್ಕೆ ಕಾರ್ ನಲ್ಲಿ ಮರಳುವ ವೇಳೆ ಈ ಅಪಘಾತ ಸಂಭವಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ನ್ಯಾನೋಮಾ ಅವರನ್ನು ಸಾಗ್ವಾರ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಅವರನ್ನು ಉದಯಪುರದ ಗೀತಾಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮೃತಪಟ್ಟಿದ್ದಾರೆ.
ದುಂಗಾರ್ಪುರ್ ಜಿಲ್ಲಾ ಕ್ರೀಡಾ ಅಧಿಕಾರಿಯಾಗಿ ಕೆಲಸ ಮಾಡುವ ನ್ಯಾನೋಮಾ ಅವರ ಗರಡಿಯಲ್ಲಿ ಬಹಳಷ್ಟು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಬೆಳಕಿಗೆ ಬಂದಿದ್ದಾರೆ.
ಭಾರತದ ರಾಷ್ಟ್ರೀಯ ತಂಡಕ್ಕೂ ತರಬೇತುಗಾರರಾಗಿ ಸೇವೆ ಸಲ್ಲಿಸಿರುವ ನ್ಯಾನೋಮಾ, ಪ್ರತಿಷ್ಠಿತ ಮಹಾರಾಣ ಪ್ರತಾಪ್ ಕ್ರೀಡಾ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.