ಬೇರೆ ತಂಡದಲ್ಲಿ ಆಡುವುದನ್ನು ಯೋಚಿಸಲೂ ಸಾಧ್ಯವಿಲ್ಲ: ವಿರಾಟ್ ಕೊಹ್ಲಿ
Team Udayavani, Sep 20, 2021, 10:40 AM IST
ದುಬೈ: ಕೆಲ ದಿನಗಳ ಹಿಂದೆ ಭಾರತೀಯ ಟಿ20 ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದ ವಿರಾಟ್ ಕೊಹ್ಲಿ ಇದೀಗ ತನ್ನ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೂ ವಿದಾಯ ಹೇಳಿದ್ದಾರೆ. ರವಿವಾರ ರಾತ್ರಿ ವಿಡಿಯೋ ಸಂದೇಶದಲ್ಲಿ ವಿರಾಟ್ ಈ ಬಗ್ಗೆ ಹೇಳಿದ್ದು, ಮುಂದಿನ ಸೀಸನ್ ನಲ್ಲಿ ಕೇವಲ ಆಟಗಾರನಾಗಿ ಮುಂದುವರಿಯಲಿದ್ದೇನೆ ಎಂದಿದ್ದಾರೆ.
ನಾಯಕತ್ವ ತ್ಯಜಿಸುವುದಾದರೂ ಆರ್ ಸಿಬಿ ತಂಡದಲ್ಲೇ ಮುಂದುವರಿಯುವುದಾಗಿ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ. “ಆರ್ಸಿಬಿಯ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್. ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ನಾನು ಆರ್ಸಿಬಿ ಆಟಗಾರನಾಗಿ ಮುಂದುವರಿಯುತ್ತೇನೆ. ನನ್ನನ್ನು ನಂಬಿದ್ದಕ್ಕಾಗಿ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲ ಆರ್ಸಿಬಿ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಆರ್ಸಿಬಿ ನಾಯಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾನು ಕ್ರಿಕೆಟ್ ಆಟದಿಂದ ನಿವೃತ್ತನಾಗುವವರೆಗೂ ಆರ್ ಸಿಬಿಯಲ್ಲೇ ಇರುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಇಂದು ಆರ್ ಸಿಬಿ ತಂಡವು ಕೆಕೆಆರ್ ವಿರುದ್ಧ ಅಬುಧಾಬಿಯಲ್ಲಿ ಪಂದ್ಯವಾಡಲಿದೆ. ಆರ್ ಸಿಬಿ ಇದುವರೆಗೆ ಏಳು ಪಂದ್ಯವಾಡಿದ್ದು ಐದು ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.