ಮುಂದಿನ ತಿಂಗಳಿಂದ ದೇಶಿ ಕ್ರಿಕೆಟ್
Team Udayavani, Jul 4, 2019, 5:47 AM IST
ಹೊಸದಿಲ್ಲಿ: ಭಾರತದ 2019-20ನೇ ಸಾಲಿನ ದೇಶಿ ಕ್ರಿಕೆಟ್ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಬುಧವಾರ ಬಿಡುಗಡೆ ಮಾಡಿದೆ. ಅದರಂತೆ ಮುಂದಿನ ತಿಂಗಳು ದುಲೀಪ್ ಟ್ರೋಫಿ ಕ್ರಿಕೆಟ್ ಕೂಟದೊಂದಿಗೆ ಕ್ರಿಕೆಟ್ ಋತು ಆರಂಭಗೊಳ್ಳಲಿದೆ. ಇದು ಆ. 17-ಸೆ. 8ರ ನಡುವೆ ನಡೆಯಲಿದೆ.
ಪ್ರತಿಷ್ಠಿತ ರಣಜಿ ಟ್ರೋಫಿ ಪಂದ್ಯಾವಳಿ ಡಿಸೆಂಬರ್-ಮಾರ್ಚ್ ತಿಂಗಳ ನಡುವೆ ಸಾಗಲಿದೆ. ಇದು ಡಿ. 9ರಿಂದ ಮೊದಲ್ಗೊಂಡು ಮಾ. 13ರ ತನಕ ನಡೆಯಲಿದೆ.
ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿಯಲ್ಲಿ ವನಿತಾ ಕ್ರಿಕೆಟ್ ಪಂದ್ಯಾವಳಿ ಕೂಡ ಸೇರಿದೆ. ಅಕ್ಟೋಬರ್ನಲ್ಲಿ ಟಿ20 ಸರಣಿಯೊಂದಿಗೆ ಇದು ಮೊದಲ್ಗೊಳ್ಳಲಿದೆ.
ಏಕದಿನ ಸರಣಿಯಾಗಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ಸೆ. 24ರಿಂದ ಅ. 25ರ ತನಕ. ದೇವಧರ್ ಟ್ರೋಫಿ ಕೂಟ ಅ. 31ರಿಂದ ನ. 4ರ ತನಕ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ನ. 8-ಡಿ. 1ರ ತನಕ, ಇರಾನಿ ಟ್ರೋಫಿ ಕ್ರಿಕೆಟ್ ಮಾ. 18ರಿಂದ 22ರ ತನಕ ನಡೆಯಲಿದೆ.