ವನಿತಾ ವಿಶ್ವಕಪ್ T20: ಭಾರತ-ನ್ಯೂಜಿಲ್ಯಾಂಡ್ ಮೊದಲ ಪಂದ್ಯ
Team Udayavani, Jun 26, 2018, 6:00 AM IST
ದುಬಾೖ: ಈ ವರ್ಷಾಂತ್ಯದಲ್ಲಿ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಭಾರತ-ನ್ಯೂಜಿಲ್ಯಾಂಡ್ ಸೆಣಸಾಡಲಿವೆ. ನ. 9ರಂದು ಗಯಾನಾದ “ಪ್ರೊವಿಡೆನ್ಸ್ ಸ್ಟೇಡಿಯಂ’ನಲ್ಲಿ ಈ ಪಂದ್ಯ ನಡೆಯಲಿದೆ.
ಮೊದಲ ದಿನ ಒಟ್ಟು 3 ಪಂದ್ಯ ನಡೆಯಲಿದ್ದು, 3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಹಾಗೂ ಪಾಕಿಸ್ಥಾನ ದ್ವಿತೀಯ ಪಂದ್ಯವನ್ನಾಡಲಿವೆ. ಬಳಿಕ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವನಿತೆಯರು ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ ತಂಡವನ್ನು ಎದುರಿಸಲಿರುವರು.
ಒಟ್ಟು 10 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿ ಸಲಿದ್ದು, ತಲಾ 5 ತಂಡಗಳ 2 ವಿಭಾಗಗಳನ್ನು ರಚಿಸಲಾಗಿದೆ. ಭಾರತ, ಪಾಕಿಸ್ಥಾನ “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿವೆ. ಈ ವಿಭಾಗದ ಉಳಿದ ತಂಡಗಳೆಂದರೆ ಆಸ್ಟ್ರೇಲಿಯ ಹಾಗೂ 2ನೇ ಕ್ವಾಲಿಫೈಯರ್ ತಂಡ.
ನಾರ್ತ್ಸೌಂಡ್ನ “ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ’ನಲ್ಲಿ ನ. 22ರಂದು 2 ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ನ. 24ರ ಫೈನಲ್ ಪಂದ್ಯ ಕೂಡ ಇದೇ ಅಂಗಳದಲ್ಲಿ ಸಾಗಲಿದೆ. ವನಿತಾ ಟಿ20 ವಿಶ್ವಕಪ್ನಲ್ಲಿ ಮೊದಲ ಸಲ ಡಿಆರ್ಎಸ್ ನಿಯಮ ಅಳವಡಿಕೆ ಈ ಕೂಟದ ವಿಶೇಷ.
ಅರ್ಹತಾ ಸುತ್ತಿನ ಪಂದ್ಯಗಳು
ಅರ್ಹತಾ ಸುತ್ತಿನ ಪಂದ್ಯಾವಳಿ ಜು. 7ರಿಂದ 14ರ ತನಕ ಹಾಲೆಂಡ್ನಲ್ಲಿ ನಡೆಯಲಿದೆ. ಬಾಂಗ್ಲಾದೇಶ, ಹಾಲೆಂಡ್, ಅಯರ್ಲ್ಯಾಂಡ್, ಪಪುವಾ ನ್ಯೂಗಿನಿ, ಸ್ಕಾಟ್ಲೆಂಡ್, ಥಾಯ್ಲೆಂಡ್, ಉಗಾಂಡ ಮತ್ತು ಯುಎಇ ತಂಡಗಳು ಇದರಲ್ಲಿ ಸೆಣಸಲಿವೆ. ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಗಳು ಪ್ರಧಾನ ಸುತ್ತಿನಲ್ಲಿ ಆಡುವ ಅದೃಷ್ಟ ಸಂಪಾದಿಸಲಿವೆ.
ಎ ವಿಭಾಗ: ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಕ್ವಾಲಿಫೈಯರ್-1
ಬಿ ವಿಭಾಗ: ಆಸ್ಟ್ರೇಲಿಯ, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ಥಾನ, ಕ್ವಾಲಿಫೈಯರ್-2