ಅಂತರ್ ವಲಯ ಬ್ಯಾಡ್ಮಿಂಟನ್: ಆಳ್ವಾಸ್ಗೆ ಪ್ರಶಸ್ತಿ
Team Udayavani, Apr 3, 2019, 5:50 AM IST
ಮೂಡಬಿದಿರೆ: ಒಡಿಶಾದ ಖಾಲಿಕೋಟ್ನಲ್ಲಿ ನಡೆದ ಐದನೇ ರಾಷ್ಟ್ರೀಯ ಅಂತರ್ ವಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕರ್ನಾಟಕ ಮಹಿಳಾ ತಂಡವು ಪ್ರಶಸ್ತಿ ಗೆದ್ದುಕೊಂಡಿದೆ. ಐದು ವಲಯಗಳ 10 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಫೈನಲ್ನಲ್ಲಿ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು 35-19, 35-31 ಅಂಕಗಳಿಂದ ಸೋಲಿಸಿ ಎರಡನೇ ಬಾರಿ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.
ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಸ್ಪರ್ಧೆ ನಡೆದಿತ್ತು. ಲೀಗ್ನಲ್ಲಿ ಕರ್ನಾಟಕ ತಂಡವು ಹರಿಯಾಣ, ಮುಂಬಯಿ, ಒಡಿಶಾ ಮತ್ತು ಛತ್ತೀಸ್ಗಢ ತಂಡವನ್ನು ಸೋಲಿಸಿತ್ತು. ಸೆಮಿಫೈನಲ್ನಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡವನ್ನು 35-12, 35-16 ನೇರ ಸೆಟ್ಗಳಿಂದ ಕೆಡಹಿತ್ತು. ಇನ್ನೊಂದು ಸೆಮಿಫೈನಲ್ನಲ್ಲಿ ತಮಿಳುನಾಡು ತಂಡವು ಛತ್ತೀಸ್ಗಢ ತಂಡವನ್ನು ಸೋಲಿಸಿತ್ತು.
ಈ ಹಿಂದೆ ತಮಿಳುನಾಡಿನ ದಿಂಡಿಗಲ್ನಲ್ಲಿ ನಡೆದ ದಕ್ಷಿಣ ವಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕರ್ನಾಟಕ ಪ್ರಶಸ್ತಿ ಜಯಿಸಿದ್ದರೆ ತಮಿಳುನಾಡು ರನ್ನರ್ ಅಪ್ ಸ್ಥಾನ ಪಡೆದಿತ್ತು. ಜಯಲಕ್ಷ್ಮೀ ನೇತೃತ್ವದ ಕರ್ನಾಟಕ ತಂಡ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್ಶಿಪ್ನಲ್ಲೂ ಪ್ರಶಸ್ತಿ ಗೆದ್ದ ಸಾಧನೆ ಮಾಡಿತ್ತು.