ದಾಖಲೆ ಮುಂದುವರಿಯುತ್ತದೆ: ಭಾರತದ ವಿರುದ್ಧದ ವಿಶ್ವಕಪ್ ಸೋಲಿನ ಕಾರಣ ಬಿಚ್ಚಿಟ್ಟ ಪಾಕ್ ಆಟಗಾರ
Team Udayavani, May 3, 2020, 9:40 AM IST
ಲಾಹೋರ್: ಟೀಂ ಇಂಡಿಯಾ ಮತ್ತು ಪಾಕಿಸ್ಥಾನ ಕ್ರಿಕೆಟ್ ಲೋಕದ ಸಾಂಪ್ರದಾಯಿಕ ಎದುರಾಳಿಗಳು. ಉಭಯ ತಂಡಗಳ ಪಂದ್ಯಾಟ ಎಲ್ಲೇ ನಡೆದರೂ ಹೈವೋಲ್ಟೇಜ್ ನಿಂದ ಕೂಡಿರುತ್ತದೆ. ಅದರಲ್ಲೂ ವಿಶ್ವಕಪ್ ಪಂದ್ಯಗಳ ಚಿತ್ರಣವೇ ಬೇರೆ. ಆದರೆ ವಿಶ್ವಕಪ್ ನಲ್ಲಿ ಪಾಕಿಸ್ಥಾನ ಇದುವರೆಗೆ ಭಾರತನ್ನು ಸೋಲಿಸಿಲ್ಲ. ಭಾರತದ್ದೇ ಅಜೇಯ ಓಟ.
ವಿಶ್ವಕಪ್ ಗಳಲ್ಲಿ ಪಾಕಿಸ್ಥಾನದ ಈ ಸೋಲಿಗೆ ಮಾಜಿ ಆಲ್ ರೌಂಡರ್ ಅಬ್ದುಲ್ ರಜಾಕ್ ಕಾರಣ ಹುಡುಕಿದ್ದಾರೆ. ಭಾರತ ಮತ್ತು ಪಾಕಿಸ್ಥಾನ ಪಂದ್ಯವೆಂದರೆ ತುಂಬಾ ಒತ್ತಡವಿರುತ್ತದೆ. ನಮ್ಮ ಆಟಗಾರರು ಒತ್ತಡ ಎದುರಿಸಲಾಗದೆ ಸೋಲುತ್ತಾರೆ ಎಂದು ರಜಾಕ್ ಹೇಳಿದ್ದಾರೆ.
ಪಿಟಿಐ ಜೊತೆಗಿನ ಮಾತುಕತೆಯಲ್ಲಿ ಈ ಮಾತುಗಳನ್ನು ಹೇಳಿದ ರಜಾಕ್, ಮೊದಲೆಲ್ಲಾ ನಾವು ಭಾರತದ ವಿರುದ್ಧದ ಸರಣಿಗಳಲ್ಲಿ ಗೆಲ್ಲುತ್ತಿದ್ದೆವು. ಈಗ ದ್ವಿಪಕ್ಷೀಯ ಸರಣಿ ಇಲ್ಲ. ಕೇವಲ ವಿಶ್ವಕಪ್ ನಲ್ಲಿ ಮುಖಾಮುಖಿಯಾಗುತ್ತಿದ್ದೇವೆ. ಮಾಧ್ಯಮಗಳ, ಜನರ ಒತ್ತಡ ತುಂಬಾ ಇರುತ್ತದೆ. ಹಾಗಾಗಿ ನಮ್ಮ ಹುಡುಗರಿಗೆ ಸೋಲಾಗುತ್ತದೆ. ಇದು ಹೀಗೆ ಮುಂದುವರಿಯುತ್ತದೆ ಎಂದಿದ್ದಾರೆ.
ಅಬ್ದುಲ್ ರಜಾಕ್ ಪಾಕಿಸ್ಥಾನದ ಆಲ್ ರೌಂಡರ್ ಆಗಿದ್ದರು. 1999,2003 ಮತ್ತು 2011ರಲ್ಲಿ ಭಾರತ ಪಾಕಿಸ್ಥಾನ ವಿಶ್ವಕಪ್ ಪಂದ್ಯದಲ್ಲಿ ಭಾಗಿಯಾಗಿದ್ದರು.