ವನಿತಾ ಏಷ್ಯಾ ಕಪ್ ಕ್ರಿಕೆಟ್; ಮಲೇಷ್ಯಾವನ್ನು ಮಣಿಸಿದ ಪಾಕ್
Team Udayavani, Oct 2, 2022, 5:07 PM IST
ಬಾಂಗ್ಲಾದೇಶ: ವನಿತಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ರವಿವಾರದ ಮುಖಾಮುಖಿಯಲ್ಲಿ ಪಾಕಿಸ್ಥಾನ ದುರ್ಬಲ ಮಲೇಷ್ಯಾವನ್ನು 9 ವಿಕೆಟ್ಗಳಿಂದ ಸುಲಭದಲ್ಲಿ ಮಣಿಸಿದೆ.
ಮಲೇಷ್ಯಾ ಪೂರ್ತಿ 20 ಓವರ್ ಎದುರಿಸಿ ನಿಂತಿತಾದರೂ ಗಳಿಸಿದ್ದು 9ಕ್ಕೆ 57 ರನ್ ಮಾತ್ರ. ಪಾಕಿಸ್ಥಾನ 9 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 61 ರನ್ ಮಾಡಿತು.
ಮಲೇಷ್ಯಾ ಸರದಿಯಲ್ಲಿ ಎಲ್ಸಾ ಹಂಟರ್ ಅಜೇಯ 29 ರನ್ ಮಾಡಿದರು. ಇದಕ್ಕೆ ತೆಗೆದುಕೊಂಡದ್ದು 51 ಎಸೆತ. ಹೊಡೆದದ್ದು 3 ಬೌಂಡರಿ. ಹಂಟರ್ ಹೊರತುಪಡಿಸಿ ಮಲೇಷ್ಯಾ ಪರ ಯಾರಿಂದಲೂ ಬೌಂಡರಿ ದಾಖಲಾಗಲಿಲ್ಲ. ಪಾಕ್ ಪರ ಒಮೈಮಾ ಸೊಹೈಲ್ 19ಕ್ಕೆ 3, ತುಬಾ ಹಸನ್ 13ಕ್ಕೆ 2 ವಿಕೆಟ್ ಕೆಡವಿದರು.
ಪಾಕಿಸ್ಥಾನ ತಂಡ ಸಿದ್ರಾ ಅಮೀನ್ (31) ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮುನೀಬಾ ಅಲಿ 21 ಹಾಗೂ ನಾಯಕಿ ಬಿಸ್ಮಾ ಮರೂಫ್ 8 ರನ್ ಮಾಡಿ ಅಜೇಯರಾಗಿ ಉಳಿದರು.