ಇಂದು ಭಾರತ-ಆಸೀಸ್ ದಿಕ್ಸೂಚಿ ಪಂದ್ಯ
Team Udayavani, Nov 17, 2018, 6:05 AM IST
ಪ್ರಾವಿಡೆನ್ಸ್ (ಗಯಾನ): ಮಹಿಳಾ ಟಿ20 ವಿಶ್ವಕಪ್‌ನ ಲೀಗ್ ಹಂತದ 2 ಔಪಚಾರಿಕ ಪಂದ್ಯಗಳು ಶನಿವಾರ ನಡೆಯಲಿವೆ. ಎರಡೂ ಪಂದ್ಯಗಳು ಬಿ ಗುಂಪಿಗೆ ಸೇರಿವೆ.
ಒಂದು ಪಂದ್ಯ ಆಸ್ಟ್ರೇಲಿಯ-ಭಾರತ, ಇನ್ನೊಂದು ಪಂದ್ಯ ನ್ಯೂಜಿಲೆಂಡ್-ಐರೆಲಂಡ್ ನಡುವೆ ನಡೆಯಲಿದೆ. ಭಾರತ-ಆಸೀಸ್ ತಂಡಗಳು ಈಗಾಗಲೇ ಸೆಮಿಫೈನಲ್ ತಲುಪಿರುವುದರಿಂದ ಈ ಎರಡೂ ಪಂದ್ಯಗಳಿಗೆ ಯಾವುದೇ ಮಹತ್ವವಿಲ್ಲ. ಆದರೆ ಬಿ ಗುಂಪಿನ ಅಗ್ರಸ್ಥಾನಿ ಯಾರು ಎನ್ನುವುದಕ್ಕೆ ಹಾಗೂ ಸೆಮಿಫೈನಲ್ ಹಂತದ ಪಂದ್ಯಗಳು ಹೇಗಿರುತ್ತವೆ ಎನ್ನುವುದಕ್ಕೆ ಈ ಪಂದ್ಯಗಳು ದಿಕ್ಸೂಚಿಯಂತಿರುತ್ತವೆ.
ಭಾರತ ತಾನು ಇದುವರೆಗೆ ಆಡಿರುವ ಮೂರೂ ಪಂದ್ಯಗಳನ್ನು ಗೆಲ್ಲುವ ಮೂಲಕ ಬಲಿಷ್ಠ ತಂಡವೆಂದು ಸಾರಿ ಹೇಳಿದೆ. ಆದರೆ ಈ ಮೂರೂ ತಂಡಗಳು ಭಾರತಕ್ಕೆ ಹೋಲಿಸಿದರೆ ದುರ್ಬಲ. ಈ ಗೆಲುವು ತಂಡದ ಸಾಮರ್ಥ್ಯದ ನೈಜ ಪ್ರತಿಫಲನಗಳಲ್ಲ. ಆಸ್ಟ್ರೇಲಿಯ ಮತ್ತು ಭಾರತ ತಂಡಗಳು ಶನಿವಾರ ಪೂರ್ಣ ಸಾಮರ್ಥ್ಯದ ತಂಡವನ್ನು ಕಣಕ್ಕಿಳಿಸಿ ಆಡಿದರೆ ಎರಡೂ ತಂಡಗಳು ಯಾವ ಹಂತದಲ್ಲಿವೆ ಎನ್ನುವುದು ತಿಳಿಯುತ್ತದೆ. ಪ್ರಬಲ ತಂಡಗಳ ವಿರುದ್ಧ ಗೆಲ್ಲುವ ಭಾರತದ ಸಾಮರ್ಥ್ಯ ಶನಿವಾರ ಗೊತ್ತಾಗಲಿದೆ.
ಈ ಕೂಟದಲ್ಲಿ ಭಾರತ ಇದುವರೆಗೆ ಗೆದ್ದಿರುವುದು ಪರವಾಗಿಲ್ಲ ಎನ್ನುವಂತಹ ತಂಡಗಳ ವಿರುದ್ಧವೇ ಆದರೂ, ಇತ್ತೀಚೆಗಿನ ವರ್ಷಗಳಲ್ಲಿ ಭಾರತ ಗಣನೀಯವಾಗಿ ಸುಧಾರಿಸಿದೆ. 2017ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಫೈನಲ್‌ಗೇರಿ, ಅಲ್ಲಿ ಸೋಲನ್ನಪ್ಪಿತ್ತು. ಅಲ್ಲಿ ಕಡೆಯ ಕ್ಷಣದಲ್ಲಿ ಸ್ವಲ್ಪ ಅದೃಷ್ಟ ಕೈಹಿಡಿದಿದ್ದರೆ ಭಾರತ ಗೆಲ್ಲುತ್ತಿದ್ದರಲ್ಲಿ ಸಂಶಯವೇ ಇರಲಿಲ್ಲ. ಈ ಫಲಿತಾಂಶ ಭಾರತ ವಿಶ್ವಮಟ್ಟದಲ್ಲಿ ಪ್ರಭಾವಿ ತಂಡವೆಂಬುದನ್ನು ಸಾಬೀತುಪಡಿಸಿತ್ತು. ಇದೀಗ ಟಿ20 ವಿಶ್ವಕಪ್ ಜೈಸಿದರೆ ವಿಶ್ವಮಟ್ಟದಲ್ಲಿ ಪ್ರಭಾವಿ ತಂಡವಾಗಿ ಸ್ಥಾಪಿತಗೊಳ್ಳಲಿದೆ.
ಭಾರತ ತಂಡ ಹೇಗಿದೆ?
ಪ್ರಸ್ತುತ ಮಹಿಳಾ ಟಿ20 ಕ್ರಿಕೆಟ್‌ನ ಸ್ಫೋಟಕ ಆಟಗಾರ್ತಿಯರ ಪೈಕಿ ಹರ್ಮನ್‌ಪ್ರೀತ್ ಕೌರ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಈ ಬಾರಿ ನ್ಯೂಜಿಲೆಂಡ್ ವಿರುದ್ಧ ಅವರು ಬಾರಿಸಿದ ಆಸ್ಫೋಟಕ ಶತಕವೇ ಅದಕ್ಕೆ ಸಾಕ್ಷಿ. ಇನ್ನೊಂದು ಕಡೆ ಅನುಭವಿ ಮಿಥಾಲಿ ರಾಜ್ ಇದ್ದಾರೆ. ಸತತ 2 ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ತಾನಿನ್ನೂ ಕಳೆಗುಂದಿಲ್ಲವೆಂದು ಮಿಥಾಲಿ ತೋರಿಸಿಕೊಟ್ಟಿದ್ದಾರೆ. ಇವರಿಗೆ ಸರಿ ಜೋಡಿಯಾಗಿ ಜೆಮಿಮಾ ರಾಡ್ರಿಗಸ್, ಸ್ಮತಿ ಮಂಧನ ಇದ್ದಾರೆ. ಇವರೆಲ್ಲ ಭಾರತದ ಬ್ಯಾಟಿಂಗ್ ಬಲಗಳು. ಬೌಲಿಂಗ್‌ನಲ್ಲಿ ಪೂನಂ ಯಾದವ್, ರಾಧಾ ಯಾದವ್, ದೀಪ್ತಿ ಶರ್ಮ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ.
ಆಸ್ಟ್ರೇಲಿಯ ತಂಡ ಹೇಗಿದೆ?
ಮಹಿಳಾ ಕ್ರಿಕೆಟ್‌ನ ಪ್ರಭಾವಿ ತಂಡ ಆಸೀಸ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ತಂಡದಲ್ಲಿ ಘಟಾನುಘಟಿ ಆಟಗಾರರ ಪಡೆಯೇ ಇದೆ. ಬೆಥ್ ಮೂನಿ, ಅಲಿಸ್ಸಾ ಹೀಲಿ, ನಾಯಕಿ ಮೆಗ್‌ಲ್ಯಾನಿಂಗ್ ಹಿಂದಿನ ಮೂರೂ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇವರು ತಂಡದ ಬ್ಯಾಟಿಂಗ್ ಬಲ. ಇದಕ್ಕೆ ಪೂರಕವಾಗಿ ಮೆಗಾನ್ ಶಟ್, ಎಲಿಸ್ ಪೆರ್ರಿ ವೇಗದ ಬೌಲಿಂಗ್ ಇದೆ. ಈ ಇಬ್ಬರು ಎದುರಾಳಿ ಬ್ಯಾಟ್ಸ್‌ವುಮನ್‌ಗಳ ಪಾಲಿಗೆ ಕಬ್ಬಿಣದ ಕಡಲೆ. ಇವರಿಗೆ ಸೋಫಿ ಮೊಲಿನೆಕ್ಸ್ ತಮ್ಮ ಸ್ಪಿನ್ ಮೂಲಕ ಬೆಂಬಲವಾಗಿದ್ದಾರೆ. ಈ ಹಿಂದಿನ ಮೂರೂ ಪಂದ್ಯಗಳಲ್ಲಿ ಇವರು ತಂಡದ ನೆರವಿಗೆ ನಿಂತಿದ್ದಾರೆ.
ತಂಡಗಳು
ಭಾರತ
ಮಿಥಾಲಿ ರಾಜ್, ಸ್ಮತಿ ಮಂಧನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ವೇದಾ ಕೃಷ್ಣಮೂರ್ತಿ, ದಯಾಳನ್ ಹೇಮಲತಾ, ದೀಪ್ತಿ ಶರ್ಮ, ರಾಧಾ ಯಾದವ್, ತಾನಿಯಾ ಭಾಟಿಯಾ, ಮಾನ್ಸಿ ಜೋಶಿ, ಪೂನಂ ಯಾದವ್
ಆಸ್ಟ್ರೇಲಿಯ
ಬೆಥ್ ಮೂನಿ, ಅಲಿಸ್ಸಾ ಹೀಲಿ (ವಿ.ಕೀ.), ಮೆಗ್‌ಲ್ಯಾನಿಂಗ್ (ನಾಯಕಿ), ಆಶೆÉ ಗಾಡ್ನìರ್, ಎಲಿಸ್ ವಿಲಾನಿ, ರಾಚೆಲ್ ಹೇಯ್ನ$Õ, ಎಲಿಸ್ ಪೆರ್ರಿ, ಸೋಫಿ ಮೊಲಿನೆಕ್ಸ್, ಡೆಲಿಸ್ಸಾ ಕಿಮಿನ್ಸ್, ಜಾರ್ಜಿಯಾ ವೇರ್‌ಹ್ಯಾಮ್, ಮೆಗಾನ್ ಶಟ್.
ಪಂದ್ಯಾರಂಭ: ರಾತ್ರಿ 8.30
ನೇರಪ್ರಸಾರ: ಸ್ಟಾರ್‌ನ್ಪೋರ್ಟ್ಸ್