ದೇಗುಲಗಳಲ್ಲಿ ಗೋಪೂಜೆಗೆ ಅಧಿಕಾರಿಗಳ ನಿಯೋಜನೆ : ಸಚಿವ ಪ್ರಭು ಚವ್ಹಾಣ್
Team Udayavani, Nov 3, 2021, 6:15 PM IST
ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಗೋಪೂಜೆ ಕಾರ್ಯಕ್ರಮ ಸಾಂಗವಾಗಿ ನೆರವೇರುವಂತೆ ನೋಡಿಕೊಳ್ಳಲು ಆಯಾ ಜಿಲ್ಲೆಗಳ ಪಶುಸಂಗೋಪನಾ ಅಧಿಕಾರಿಗಳನ್ನು ಈಗಾಗಲೇ ಈ ಕಾರ್ಯಕ್ಕೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ (ಬಲಿಪಾಡ್ಯಮಿ ದಿನ) ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಮುಜುರಾಯಿ ಇಲಾಖೆಯ ಸಹಯೋಗದೊಂದಿಗೆ ಗೋಪೂಜೆ ಕಾರ್ಯಕ್ರಮವನ್ನು ಪಶುಸಂಗೋಪನೆ ಇಲಾಖೆಯಿಂದ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪೂಜೆಯ ದಿನದಂದು ಹಸುಗಳನ್ನು ಆ ದಿನ ದೇವಾಲಯಗಳಿಗೆ ಕರೆ ತರುವ ಮತ್ತು ಗೋಪೂಜೆ ನೆರವೇರಿಸುವ ಜವಾಬ್ದಾರಿಯನ್ನು ಪಶುಸಂಗೋಪನಾ ಅಧಿಕಾರಿಗಳು ನಿರ್ವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋವುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಗೋ ಉತ್ಪನ್ನಗಳ ಖರೀದಿಗೆ ಹೆಚ್ಚು ಒತ್ತು ನೀಡಲು ಪಶುಸಂಗೋಪನೆ ಇಲಾಖೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಗೋಮಯ ದೀಪ ಬಳಸಲು ಮನವಿ:
ಗೋಮಯದಿಂದ ಮಾಡಿದ ಪರಿಸರಸ್ನೇಹಿ ದೀಪಗಳನ್ನು ಬಳಸುವ ಮೂಲಕ ರಾಜ್ಯದ ರೈತರಿಗೆ, ಗೋಪಾಲಕರಿಗೆ ಉತ್ತೇಜನ ನೀಡುವ ಜೊತೆಗೆ ಜನರು ಈ ದೀಪಾವಳಿ ಹಬ್ಬವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.
ಪಶುಸಂಗೋಪನೆ ಇಲಾಖೆ ರಾಜ್ಯದ ಎಲ್ಲ ದೇಗುಲಗಳಲ್ಲಿ ಪೂಜೆ ನಡೆಸುತ್ತಿದ್ದು ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಬಲಿಪಾಡ್ಯದ ಗೋಪೂಜೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ ಎಂದು ಅವರು ಹೇಳಿದರು.