ಇಂದು ಪ್ರಧಾನಿ ನರೇಂದ್ರಮೋದಿ ಭೇಟಿ ಮಾಡಲಿರುವ ಸಿಎಂ
Team Udayavani, Nov 11, 2021, 6:40 AM IST
ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ರಾಜ್ಯದ ಅಭಿವೃದ್ಧಿ ಯೋಜನೆಗಳು, ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಪ್ರಧಾನಿಯವರ ಜತೆ ಸಮಾಲೋಚನೆ ನಡೆಸಲಿದ್ದು ರಾಜ್ಯಕ್ಕೆ ಬರಬೇಕಿರುವ ಅನುದಾನ ಕುರಿತು ಮನವಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಬೆಳಗ್ಗೆ 11 ಗಂಟೆಗೆ ಪ್ರಧಾನಿಯವರ ನಿವಾಸದಲ್ಲಿ ಭೇಟಿಗೆ ಸಮಯ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಭೇಟಿಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಯ ಕೋರಿದ್ದು, ಅವಕಾಶ ಸಿಕ್ಕರೆ ಭೇಟಿ ಯಾಗುವ ಸಾಧ್ಯತೆಯಿದೆ.
ನಡ್ಡಾ ಅವರನ್ನು ಭೇಟಿಯಾದರೆ ಸಂಪುಟ ವಿಸ್ತರಣೆಗೆ ಅನುಮತಿ ಕೇಳಲಿದ್ದು, ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಬುಧವಾರ ದೆಹಲಿ ತಲುಪಿದ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಸಚಿವ ಉಮೇಶ್ ಕತ್ತಿ ಸಾಥ್ ನೀಡಿದರು.
ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಪಡೆದುಕೊಂಡಿರುವ ಒರಿಸ್ಸಾದ ಮಂದಕರಿ ಗಣಿ ಕಾರ್ಯಾಚರಣೆಗಾಗಿ ಪರಿಸರ ಇಲಾಖೆ ಅನುಮತಿ ಸಿಕ್ಕಿದೆ. ಕಳೆದ ಬಾರಿ ಭೇಟಿ ನೀಡಿದಾಗ ಮನವಿ ಮಾಡಿದ್ದೆವು. ಇದು ರಾಜ್ಯಕ್ಕೆ ಒಳ್ಳೆಯ ಸುದ್ದಿ, ಅನುಮತಿ ಲಭ್ಯವಾಗಿದೆ. ನಮ್ಮ ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ:ಐಎನ್‌ಕ್ಸ್ ಮೀಡಿಯಾ ಪ್ರಕರಣ: ದಾಖಲೆ ಪರಿಶೀಲಿಸಲು ಚಿದು, ಪುತ್ರಗೆ ಅವಕಾಶ
ಮಹಾರಾಷ್ಟ್ರದಿಂದ ಗಣಿಯಿಂದ ಹೆಚ್ಚುವರಿ ಪೂರೈಕೆಗೆ ಕೇಳಿದ್ದೆವು. ಅದಕ್ಕೂ ಪ್ರಹ್ಲಾದ್ ಜೋಶ್ ಒಪ್ಪಿದ್ದಾರೆ. ಪ್ರಸ್ತುತ ಕಲ್ಲಿದ್ದಲು ಸಮಸ್ಯೆ ಇಲ್ಲ ಮುಂದಿನ ದಿನಗಳಲ್ಲಿಯೂ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸಹಕಾರಿಯಾಗಲಿದೆ.ರಾಜ್ಯದಲ್ಲಿ ವಿದ್ಯುತ್ ಅಭಾವ ಇಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಮೇಕೆದಾಟು ಕುರಿತು ಪ್ರತಿಕ್ರಿಯಿಸಿ, ಮೊದಲು ಸಿಡಬ್ಲ್ಯೂಸಿ ಅನುಮತಿ ಬೇಕು. ಕಾವೇರಿ ನಿರ್ವಹಣಾ ಮಂಡಳಿಯಿಂದ ಒಪ್ಪಿಗೆ ಪಡೆಯಬೇಕು ಎಂದು ಕಾವೇರಿ ನಿರ್ವಹಣಾ ಮಂಡಳಿ ಸಹ ಸೂಚನೆ ನೀಡಿತ್ತು. ಮುಂದಿನ ಸಭೆಯಲ್ಲಿ ಇತ್ಯರ್ಥವಾಗುವ ಸಾಧ್ಯತೆಯಿದೆ. ಹಿರಿಯ ವಕೀಲರ ಗುರುವಾರ ಮಾತನಾಡಲಿದ್ದೇನೆ ಎಂದು ಹೇಳಿದರು.
ಬೆಳಗ್ಗೆ ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ದೆಹಲಿಯಲ್ಲಿ ಅಂತಾರಾಜ್ಯ ಜಲ ವಿವಾದಗಳ ಕುರಿತು ಹಾಗೂ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್
ಶ್ರೀರಂಗಪಟ್ಟಣ : ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ
ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ
ಕೋವಿಡ್ ನಿಯಮ ಉಲ್ಲಂಘನೆ: ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ಸೇರಿ 29 ಮಂದಿಗೆ ಸಮನ್ಸ್
ತಿರುಚಿದ ನಾಡಗೀತೆ ಸಾಲು: ರೋಹಿತ್ ಚಕ್ರತೀರ್ಥ ಕ್ಷಮೆಗೆ ಒಕ್ಕಲಿಗರ ಸಂಘ ಆಗ್ರಹ