ರಾಮಲಿಂಗಾರೆಡ್ಡಿಗೆ ಮಂತ್ರಿ ಸ್ಥಾನ: ಸಿದ್ದರಾಮಯ್ಯ
Team Udayavani, Jun 6, 2019, 3:04 AM IST
ಬೆಂಗಳೂರು: ಪಕ್ಷೇತರ ಶಾಸಕರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ನಾಯಕರ ವಿರುದ್ಧ ಬಹಿರಂಗ ಆರೋಪ ಮಾಡಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಈದ್ಗಾ ಮೈದಾನದಲ್ಲಿ ರಮ್ಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಎಲ್ಲರಿಗೂ ಅವಕಾಶ ಸಿಗಬೇಕು. ರಾಮಲಿಂಗಾರೆಡ್ಡಿಗೆ ಸಂಪುಟದಲ್ಲಿ ಸೇರಿಸಿಕೊಳ್ಳುವುದಾಗಿ ಹೇಳಿದ್ದೆ. ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾಗಿರುವ ಸ್ಥಾನವನ್ನು ರಾಮಲಿಂಗಾರೆಡ್ಡಿಗೆ ನೀಡಲಾಗುತ್ತದೆ. ಈ ಬಗ್ಗೆ ಗುರುವಾರ ರಾಮಲಿಂಗಾರೆಡ್ಡಿ ಜತೆ ಮಾತನಾಡುತ್ತೇನೆ ಎಂದು ಹೇಳಿದರು.
ಆದರೆ, ತಮ್ಮ ವಿರುದ್ಧ ನೇರವಾಗಿ ಆರೋಪ ಮಾಡಿರುವ ರೋಷನ್ ಬೇಗ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಅಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಅವರು ಬೇರೆ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್ನಲ್ಲಿ ಇಲ್ಲ. ಅವರ ಬಗ್ಗೆ ಜೆಡಿಎಸ್ ನಾಯಕರು ಮಾತನಾಡುತ್ತಾರೆ ಎಂದು ಹೇಳಿದರು.