ಉರಿ ಬಿಸಿಲಿನ ನಡುವೆಯೂ ಮತ ಚಲಾವಣೆ

Team Udayavani, May 20, 2019, 3:05 AM IST

ಕಲಬುರಗಿ/ಹುಬ್ಬಳ್ಳಿ: ಉರಿಬಿಸಿಲನ ನಡುವೆಯೂ ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದೆ.  ಚಿಂಚೋಳಿಯಲ್ಲಿ ಬೇಸಿಗೆ ಬಿಸಿಲಿನ ನಡುವೆ ಮತದಾರರು ಬೆಳಗ್ಗೆಯಿಂದಲೇ ಮತಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಕೆಲವು ಗ್ರಾಮಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಮತ್ತು ತಾಪಂ ಸದಸ್ಯರ ಮೇಲೆ ಹಲ್ಲೆ ನಡೆದಿವೆ. ಕೋಡ್ಲಿ ಮತ್ತು ಕಲ್ಲೂರ ಗ್ರಾಮಗಳಲ್ಲಿ ಮತದಾನ ವೇಳೆ ನಡೆದ ಕೂಗಾಟ, ಚೀರಾಟದಿಂದ ಬಿಜೆಪಿ ಕಾರ್ಯಕರ್ತರ ಮಧ್ಯೆ ಭಾರಿ ಗದ್ದಲ ಉಂಟಾಗಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರೂ ಹೊರ ಹಾಕಿದರು.

ತಾಲೂಕಿನ ಕುಂಚಾವರಂ, ಚಿಂಚೋಳಿ ಗಡಿ ಏರಿಯಾ, ನರನಾಳ, ಕೊಳ್ಳುರ, ಚಿಮ್ಮನಚೋಡ 1 ಮತ್ತು 2 ಮತದಾನ ಕೇಂದ್ರಗಳಲ್ಲಿ ಮತ್ತು ಐನೋಳಿ ಗ್ರಾಮದಲ್ಲಿ ಮತ ಯಂತ್ರಗಳು ಮತ್ತು ವಿವಿ ಪ್ಯಾಟ್‌ ಯಂತ್ರಗಳು ಸ್ಥಗಿತ ಆಗಿರುವುದರಿಂದ ಮತದಾರರು ಬಿಸಿಲಿನ ಧಗೆ ಮತ್ತು ಉರಿ ಬಿಸಿಲಿನಲ್ಲಿ ಸಾಕಷ್ಟು ತೊಂದರೆ ಪಡಬೇಕಾಯಿತು.

ತೀವ್ರ ಕುತೂಹಲ ಕೆರಳಿಸಿರುವ ಕುಂದಗೋಳ ಉಪ ಸಮರದಲ್ಲಿ ಮತದಾರ ಬೆಳಗಿನ ಸಮಯದಲ್ಲೇ ಮತ ಚಲಾವಣೆಗೆ ಹೆಚ್ಚು ಆಸಕ್ತಿ ತೋರಿದಂತಿತ್ತು. ಅಣಕು ಮತದಾನ ವೇಳೆ ಹಾಗೂ ಮತದಾನ ಆರಂಭವಾದ ನಂತರ ವಿವಿ ಪ್ಯಾಟ್‌ ಹಾಗೂ ಇವಿಎಂಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಬದಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ಬೆನಕನಹಳ್ಳಿಯಲ್ಲಿ ಇವಿಎಂದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷ ಮತದಾನ ವಿಳಂಬವಾಯಿತು. ಚಿಕ್ಕನರ್ತಿ ಸೇರಿದಂತೆ 7 ಮತಗಟ್ಟೆಗಳಲ್ಲಿ ವಿವಿ ಪ್ಯಾಟ್‌ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡಲೇ ಅವುಗಳನ್ನು ಬದಲಾಯಿಸಿದರು.

ಕಾರ್ಯಕರ್ತರಲ್ಲಿ ಜಿದ್ದಾಜಿದ್ದಿ: ಮತಗಟ್ಟೆ ಬಳಿ ಜಮಾಯಿಸಿದ್ದ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಸನ್ನೆ ಮೂಲಕ ಸೂಚಿಸುತ್ತಿರುವುದು ಕಂಡು ಬಂತು. ಕೇಸರಿ ಶಾಲು ಹಾಗೂ ಕೇಸರಿ, ಬಿಳಿ, ಹಸಿರು ಬಣ್ಣ ಮಿಶ್ರಿತ ಶಾಲು ಹಾಕಿದ ಕಾರ್ಯಕರ್ತರ ಭರಾಟೆ ಜೋರಾಗಿತ್ತು. ಮತಗಟ್ಟೆಯತ್ತ ಸುಳಿಯದಂತೆ ನೋಡಿಕೊಳ್ಳುವಷ್ಟರಲ್ಲಿ ಪೊಲೀಸರು ಬಸವಳಿದಿದ್ದರು. ಯಾವುದೇ ಅಹಿತಕರ ನಡೆಯದಂತೆ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರು. ಮತಗಟ್ಟೆಯಲ್ಲಿ ಪ್ರಚಾರಕ್ಕೆ ಮುಂದಾಗಿದ್ದ ಕೆಲವರನ್ನು ಹೊರ ಹಾಕಿದ ಘಟನೆಯೂ ನಡೆಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ