ಉಗ್ರ ಪೋಷಕರಿಗೆ ಮೋದಿ ಬಿಸಿ ಪಾಠ

ಎಸ್‌ಸಿಒ ಶೃಂಗದಲ್ಲಿ ಪಾಕ್‌ಗೆ ಮೋದಿ ತಿವಿತ

Team Udayavani, Jun 15, 2019, 6:00 AM IST

ಶೃಂಗದಲ್ಲಿ ಮೋದಿ- ಇಮ್ರಾನ್‌ ಕುಶಲೋಪರಿ

ಬಿಷ್ಕೆಕ್‌: ಉಗ್ರರಿಗೆ ನೆರವು, ಉತ್ತೇಜನ ಮತ್ತು ಬೆಂಬಲ ನೀಡುತ್ತಿರುವ ದೇಶಗಳನ್ನೇ ಉಗ್ರ ಕೃತ್ಯಗಳಿಗೆ ಹೊಣೆ ಮಾಡಬೇಕು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಕಿರ್ಗಿಸ್ತಾನದಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ಭಯೋತ್ಪಾದನಾ ಮುಕ್ತ ಸಮಾಜವನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ವಿಶೇಷವೆಂದರೆ, ಈ ಶೃಂಗಸಭೆಯಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಭಾಗವಹಿಸಿದ್ದು, ಅವರ ಮುಂದೆಯೇ ನೆರೆ ದೇಶಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ಅಷ್ಟೇ ಅಲ್ಲ, ಉಗ್ರವಾದವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾಗತಿಕ ಸಮ್ಮೇಳನ ನಡೆಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎಸ್‌ಸಿಒ ರಾಷ್ಟ್ರಗಳ ಪರಿಶ್ರಮ ಹಾಗೂ ಬದ್ಧತೆ ಪ್ರಮುಖವಾಗಿದೆ. ಕಳೆದ ಭಾನುವಾರ ಶ್ರೀಲಂಕಾಗೆ ಭೇಟಿ ನೀಡಿದ್ದಾಗ ಸೇಂಟ್ ಆ್ಯಂಥನಿ ಚರ್ಚ್‌ಗೆ ಭೇಟಿ ನೀಡಿದ್ದೆ. ಅಲ್ಲಿ ನಾನು ಉಗ್ರವಾದದ ಕ್ರೌರ್ಯವನ್ನು ನೋಡಿದೆ ಎಂದಿದ್ದಾರೆ.

ಹೆಲ್ತ್ ಸೂತ್ರ: ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಸ್‌ಸಿಒ ರಾಷ್ಟ್ರಗಳ ಮಧ್ಯೆ ಇನ್ನಷ್ಟು ಉತ್ತಮ ಸಹಕಾರ ಅಗತ್ಯವಿದೆ. ಇದಕ್ಕಾಗಿ ಅವರು ಹೆಲ್ತ್ ಎಂಬ ಸೂತ್ರವನ್ನೂ ನೀಡಿದ್ದು, ಆರೋಗ್ಯ ಸೇವೆ, ಆರ್ಥಿಕ ಸಹಕಾರ, ಪರ್ಯಾಯ ಇಂಧನ, ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಉಗ್ರಚಟುವಟಿಕೆ ಮುಕ್ತ ಸಮಾಜ ಮತ್ತು ಮಾನವೀಯತೆಯ ವಿಭಾಗಗಳಲ್ಲಿ ದೇಶಗಳು ಹೆಚ್ಚಿನ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

ಅಲ್ಲದೆ ಈ ವಲಯದಲ್ಲಿ ರಕ್ಷಣಾತ್ಮಕ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಇದರ ಬದಲಿಗೆ ನೀತಿ ಆಧರಿತ ವಹಿವಾಟು ನಡೆಯಬೇಕಿದೆ ಎಂದಿದ್ದಾರೆ. ತಾರತಮ್ಯ ಇಲ್ಲದ ಹಾಗೂ ಎಲ್ಲ ಡಬ್ಲ್ಯೂಟಿಒ ದೇಶಗಳನ್ನೂ ಒಳಗೊಂಡ ವ್ಯಾಪಾರ ವ್ಯವಸ್ಥೆಯ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ಶಿಷ್ಟಾಚಾರ ಉಲ್ಲಂಘಿಸಿದ ಇಮ್ರಾನ್‌: ಎಸ್‌ಸಿಒ ಸಮ್ಮೇಳನದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಘಟನೆ ನಡೆದಿದೆ. ಶಾಂಘೈ ಸಹಕಾರ ಸಂಘದ ಮುಖ್ಯಸ್ಥರು ಸಭೆಗೆ ಆಗಮಿಸುವಾಗ ಎಲ್ಲ ಗಣ್ಯರೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿರುವಾಗ ಇಮ್ರಾನ್‌ ಖಾನ್‌ ಕುಳಿತುಕೊಂಡೇ ಇದ್ದರು. ಮಧ್ಯೆ ತಪ್ಪನ್ನು ಅರಿತು ಎದ್ದು ನಿಂತರಾದರೂ, ನಂತರ ಎಲ್ಲರೂ ಕುಳಿತುಕೊಳ್ಳುವ ಮೊದಲೇ ತಾವು ಕುಳಿತುಕೊಂಡಿದ್ದಾರೆ. ಈ ವಿಡಿಯೋವನ್ನು ಆಡಳಿತ ಪಕ್ಷ ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್ನ ಟ್ವಿಟರ್‌ ಪುಟದಲ್ಲೇ ಪ್ರಕಟಿಸಲಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಪ್ರತಿರೋಧದಿಂದ ಸಹಕಾರಕ್ಕೆ ಸನ್ನಿವೇಶ ಬದಲಾಗಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆಗೆ ಪಾಕ್‌ ಪ್ರಧಾನಿ ಖಾನ್‌ ಮಾತುಕತೆ ನಡೆಸಿದ್ದು, ಈ ವೇಳೆ ಭಾರತ ಮತ್ತು ಪಾಕ್‌ ಸಂಬಂಧ ಸುಧಾರಣೆಗೆ ಚೀನಾ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ. ಇನ್ನೊಂದೆಡೆ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಖಾನ್‌, ದಕ್ಷಿಣ ಏಷ್ಯಾದಲ್ಲಿ ಪ್ರತಿರೋಧದಿಂದ ಸಹಕಾರಕ್ಕೆ ಸನ್ನಿವೇಶ ಬದಲಾಗದಿದ್ದರೆ ಶಾಂತಿ, ಸಹಕಾರವು ಕನಸಾಗಿಯೇ ಉಳಿಯುತ್ತದೆ ಎಂದು ಭಾರತವನ್ನು ಪರೋಕ್ಷವಾಗಿ ಉಲ್ಲೇಖೀಸಿ ಹೇಳಿದ್ದಾರೆ.

ಶೃಂಗದ ನಿರ್ಣಯಗಳು
•ಎಲ್ಲ ರೂಪದ ಉಗ್ರ ಚಟುವಟಿಕೆಗಳಿಗೆ ವಿರೋಧ
•ಉಗ್ರವಾದ ವಿರುದ್ಧದ ಹೋರಾಟಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಸಹಕಾರ
•ಉಗ್ರ ಚಟುವಟಿಕೆ, ತೀವ್ರಗಾಮಿ ಚಟುವಟಿಕೆ, ಧಾರ್ಮಿಕ ಅಸಹಿಷ್ಣುತೆ ಮಧ್ಯೆ ಭೇದ ತೋರಿಸುವಂತಿಲ್ಲ •ಉಗ್ರ ಹಾಗೂ ತೀವ್ರಗಾಮಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಬಾರದು, ಅಂತಹ ಪರಿಸ್ಥಿತಿಗಳನ್ನು ಮಟ್ಟ ಹಾಕಬೇಕು
•ವಿದೇಶದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಅವಕಾಶ ಕೊಡದಿರುವುದು

 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ