ಸಾಧ್ಯವಾದರೆ ಮಾಸ್ಕ್ ಧರಿಸಿ; ತಪ್ಪಿದರೆ ಸ್ಮಶಾನದಲ್ಲಿ ಸಮಾಧಿ ಗುಂಡಿ ತೋಡಿ!
Team Udayavani, Sep 17, 2020, 8:48 PM IST
ಮಣಿಪಾಲ: ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ನಾನಾ ದೇಶಗಳು ಅನೇಕ ಕ್ರಮಗಳನ್ನು ಕೈಗೊಂಡಿವೆ. ಸೋಂಕು ಪ್ರಸರಣ ನಿಯಂತ್ರಣ ತಡೆಯುವಲ್ಲಿ ಮಾಸ್ಲ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳಿದ್ದು, ಸಾಕಷ್ಟು ಅಧ್ಯಯನಗಳು ನಡೆದಿವೆ.
ಮಾಸ್ಕ್ ಧರಿಸುವುದರಿಂದ ಸೋಂಕು ಪ್ರಸರಣ ಮಟ್ಟ ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗಬಹುದು ಎನ್ನುವ ಕಾರಣಕ್ಕೆ ಎಲ್ಲ ದೇಶಗಳಲ್ಲಿಯೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ಆದರೆ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸೋಂಕನ್ನು ನಿರ್ಲಕ್ಷಿಸಿ ಮುಖಕ್ಕೆ ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ದಂಡ ವಿಧಿಸಿದ್ದರೂ ಎಚ್ಚೆತ್ತಕೊಳ್ಳದ ಜನರು ಬೇಜಾವಬ್ದಾರಿತನ ಮೆರೆಯುತ್ತಿದ್ದಾರೆ.
ಆದರೆ ಹೀಗೆ ಮಾಸ್ಕ್ ಧರಿಸದೇ ಹೊರಬಂದವರಿಗೆ ಇಂಡೋನೇಷ್ಯಾ ಸರಕಾರ ವಿಭಿನ್ನ ಶಿಕ್ಷೆ ಜಾರಿ ಮಾಡಿದೆ.
ಇಂಡೋನೇಷ್ಯಾದ ಜಾವಾದಲ್ಲಿ ಮಾಸ್ಕ್ ಧರಿಸದೇ ಹೊರ ಬಂದವರಿಗೆ ಸಮಾಧಿ ಗುಂಡಿಗಳನ್ನು ತೊಡುವ ಶಿಕ್ಷೆ ವಿಧಿಸಲಾಗುತ್ತಿದೆ. ಅಚ್ಚರಿ ಎಂದರೆ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರನ್ನು ಹೂಳಲು ಗುಂಡಿಯನ್ನು ಅಗೆಯಲು ಈ ನಿಯಮ ಉಲ್ಲಂಘಿಸುವವರನ್ನು ಬಳಸಿಕೊಳ್ಳಲಾಗುತ್ತಿದೆ.
ಇನ್ನು ದೇಶದಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಸಮಾಧಿ ಅಗೆಯುವವರ ಕೊರತೆ ಇಲ್ಲಿದೆ. ಇದೆ ಕಾರಣಕ್ಕೆ, ಆ ಕೊರತೆಯನ್ನೂ ನೀಗಿಸಿದಂತಾಯಿತು, ಜತೆಗೆ ಮಾಸ್ಕ್ ಧರಿಸದೇ ಹೊರ ಬಂದವರಿಗೆ ಬುದ್ಧಿಯನ್ನೂ ಕಲಿಸಿದಂತಾಯಿತು ಎಂದು ಸರಕಾರ ಈ ಹೊಸ ಯೋಜನೆ ರೂಪಿಸಿದೆ.
ಯೋಜನೆಯನ್ನು ಇದಾಗಲೇ ಕಾರ್ಯಗತ ಮಾಡಲಾಗಿದ್ದು, ತಪ್ಪಿತಸ್ಥರಿಗೆ ಕಡ್ಡಾಯವಾಗಿ ಗುಂಡಿ ತೋಡಿಸಲಾಗುತ್ತಿದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸದೇ ಹೊರಕ್ಕೆ ಬರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಸರಕಾರ ತಿಳಿಸಿದೆ. ಇಂಡೋನೇಷ್ಯಾದಲ್ಲಿ 2,21,253 ಮಂದಿಗೆ ಸೋಂಕು ತಗುಲಿದ್ದು, ನಿನ್ನೆಯವರೆಗೆ ಸೋಂಕಿಗೆ 8,841 ಮಂದಿ ಮೃತಪಟ್ಟಿದ್ದಾರೆ.