ಮಂಜಿನ ಹನಿಗಳ ನಡುವೆ ಸುಂದರ ಮುಂಜಾನೆ

ಮೈ ರೋಮಾಂಚನಗೊಳಿಸಿದ ನಂದಿ ಹಿಲ್ಸ್‌ ಪಯಣ

Team Udayavani, Sep 12, 2019, 5:32 AM IST

ಕತ್ತಲೆ ಸರಿದು ಕೊಂಚ ಕೊಂಚವೇ ಬೆಳಕು ಹರಿಯುವ ಸಮಯ, ಮುಂಜಾನೆಯನ್ನು ಸ್ವಾಗತಿಸುತ್ತಾ ಹಕ್ಕಿಗಳು ಮಾಡುವ ಕಲರವ, ಎಲೆಗಳ ಮೇಲೆ ಬಿದ್ದ ಇಬ್ಬನಿ, ಬೆಟ್ಟವನ್ನೇ ಬಿಗಿದಪ್ಪಿಕೊಂಡ ಮಂಜು, ಮೈಸೋಕುವ ತಂಗಾಳಿ ಪ್ರಕೃತಿಯ ಮಡಿಲಿನಲ್ಲಿ ಮಲಗಲು ಬಯಸುವ ಮನಸ್ಸುಗಳಿಗೆ ಇವಿಷ್ಟು ಸಾಕು. ಇಂತಹ ಸುಂದರ ತಾಣ ಚಿಕ್ಕಬಳ್ಳಾಪುರದ ನಂದಿ ಬೆಟ್ಟ.

ಕೆಲಸಕ್ಕಾಗಿ ಬೆಂಗಳೂರಿನ ಕಡೆ ಮುಖ ಮಾಡಿ ವರ್ಷಗಳಾದವು. ಅಲ್ಲಿನ ಮನೋರಂಜನಾ ಜೀವನ ಶೈಲಿಯನ್ನು ಒಪ್ಪಿಕೊಂಡು ಕೆಲಸದೊಂದಿಗೆ ಒಂದು ಚೂರು ಮೋಜು, ಮಸ್ತಿಗೆ ಸಮಯ ಮೀಸಲಿಟ್ಟಿದ್ದೆ. ಹೀಗೆ ಒಂದು ದಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬೇಕೆಂದು ಮನಸ್ಸು ಬಯಸಿ ಸ್ನೇಹಿತೆಯ ಬಳಿ ಹೇಳಿಕೊಂಡಾಗ ಅವಳಿಂದ ಬಂದ ಉತ್ತರ- ನಂದಿ ಹಿಲ್ಸ್‌!

ಸಮಾನ ಮನಸ್ಕರ ಬಳಿ ನಮ್ಮ ಯೋಜನೆಯನ್ನು ತಿಳಿಸಿ ಅವರನ್ನು ಬರುವಂತೆ ಒಪ್ಪಿಸಿ ಒಂದು ತಂಡವಾಗಿ ನಂದಿ ಬೆಟ್ಟಕ್ಕೆ ಪಯಣ ಬೆಳೆಸುವುದಾಗಿ ನಿರ್ಧರಿಸಲಾಯಿತು. ಎರಡು ದಿನಗಳ ಕಾಲ ಹೇಗೆ, ಯಾವ ವಾಹನ, ಬಜೆಟ್‌ ಎಷ್ಟು, ಆಹಾರ ಹೀಗೆ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸಿ ಪ್ರವಾಸಕ್ಕೆ ಒಂದು ರವಿವಾರವನ್ನು ನಿಗದಿ ಪಡಿಸಿದ್ದಾಯಿತು.

ಬೆಂಗಳೂರಿನ ಬ್ಯುಸಿ ಲೈಫ್ನಲ್ಲಿ, ಟ್ರಾಫಿಕ್‌ ಕಿರಿಕಿರಿಯಿಂದ ಹೊರಬಂದು ಪ್ರಶಾಂತತೆ ಹಾಗೂ ಏಕಾಂತದಲ್ಲಿ ಕಾಲ ಕಳೆಯ ಬಯಸುವವರಿಗೆ ಹೇಳಿ ಮಾಡಿಸಿದ ಜಾಗ ಚಿಕ್ಕಬಳ್ಳಾಪುರದಲ್ಲಿರುವ ನಂದಿ ಹಿಲ್ಸ್‌.

ಹೀಗೆ ನಮ್ಮ ಯೋಜನೆಯಂತೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕ್ಯಾಬ್‌ನಲ್ಲಿ ಬೆಳಗ್ಗೆ 4 ಗಂಟೆಗೆ ಪಯಣ ಆರಂಭಿಸಿದೆವು. ನಂದಿ ಹಿಲ್ಸ್‌ನ ಸೌಂದರ್ಯವನ್ನು ನೋಡಬೇಕಾದರೆ ಬೆಳಗ್ಗಿನ ಜಾವ 5ರಿಂದ 6 ಗಂಟೆಯೊಳಗಾಗಿ ಅಲ್ಲಿರಬೇಕು. ಮುಂಜಾನೆಯ ಮಂಜಿನಲ್ಲಿ ಅಲ್ಲಿನ ರಮಣೀಯ ದೃಶ್ಯ ಕಣ್ಣಿಗೂ, ಮನಸ್ಸಿಗೂ ಖುಷಿ ನೀಡುವುದರಲ್ಲಿ ಸಂಶಯವಿಲ್ಲ.

ಎಂದೂ ನೋಡದ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ನನ್ನ ಮನಸ್ಸು ನವಿಲಿನಂತೆ ನರ್ತಿಸುತ್ತಿತ್ತು. ಹೀಗಾಗಿ ಮುಂಜಾನೆ 4ರ ಹೊತ್ತಿಗೆ ಬೆಂಗಳೂರು ಬಿಟ್ಟ ನಾವು ನಮ್ಮ ಯೋಜನೆಯಂತೆ 5.30ಕ್ಕೆ ನಂದಿ ಹಿಲ್ಸ್‌ ನ ಆವರಣ ತಲುಪಿದೆವು. ಅಲ್ಲಿನ ಗೇಟ್‌ ಓಪನ್‌ ಆಗುವುದು 6 ಗಂಟೆಗೆ. ರಾತ್ರಿ ಹತ್ತು ಗಂಟೆಯವರೆಗೆ ನಂದಿಹಿಲ್ಸ್‌ ತೆರೆದಿರುತ್ತದೆ. ಕಾರಿನಲ್ಲಿ ಹೋಗುವ ಬದಲು ಬೈಕ್‌ ರೈಡ್‌, ಸೈಕಲ್‌ ರೈಡ್‌ ಅಥವಾ ದಟ್ಟವಾಗಿ ಹರಡಿರುವ ಮಂಜಿಗೆ ಮೈಯೊಡ್ಡಿ ಕಾಲ್ನಡಿಗೆಯಲ್ಲೇ ಹೋದರೆ ಅವಿಸ್ಮರಣೀಯ ಅನುಭವವನ್ನು ಸವಿಯಬಹುದು. ಫೋಟೋಗ್ರಫಿ, ಚಾರಣ, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಸ್ಥಳ ಈ ನಂದಿ ಹಿಲ್ಸ್‌.

ಮಂಜನ್ನೇ ಹೊದ್ದು ಮಲಗಿರುವ ಬೆಟ್ಟದ ನಡುವಿನಿಂದ ಮೆಲ್ಲನೆ ಉದಯಿಸುವ ರವಿಯನ್ನು ಸ್ವಾಗತಿಸುವ ಆ ಕ್ಷಣ ಹೊಸ ಅನುಭವವನ್ನೇ ನೀಡಿತ್ತು. ಹಚ್ಚಹಸುರಿನ ನಡುವೆ ಉದಿಸಿದ ಸೂರ್ಯನ ಕಿರಣಗಳು ಮೈ ಸ್ಪರ್ಶಿಸಿದಾಗ ಅದೇನೋ ಆನಂದ. ಅದರೊಂದಿಗೆ ಮರಗಳ ಎಲೆಯಿಂದ ಹನಿ ಹನಿಯಾಗಿ ಭೂಮಿ ಸೇರುವ ನೀರಿನ ಬಿಂದುಗಳಿಗೆ ಮುಖ ಕೊಟ್ಟು ನಿಂತಾಗ ಮನಸ್ಸಿಗೆ ಹಾಯ್‌ ಎನಿಸಿತ್ತು. ನಂದಿ ಬೆಟ್ಟದ ಸೌಂದರ್ಯವನ್ನು ನೋಡಿ ಅಲ್ಲಿದ್ದ ಹೊರಡುವ ಮನಸ್ಸಿರಲಿಲ್ಲ. ಆದರೆ ನಮ್ಮ ಯೋಜನೆಯಲ್ಲಿ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಬೇಕಾಗಿದ್ದರಿಂದ ಮಂಜಿನ ಶಿಖರಕ್ಕೆ ಗುಡ್‌ಬೈ ಹೇಳಿದೆವು.

ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು
·ಜರಮದಗು ಫಾಲ್ಸ್‌
·ಟಿಪ್ಪು ಪಾಯಿಂಟ್‌
(ಟಿಪ್ಪು ಡ್ರಾಪ್‌)
·ಬ್ರಹ್ಮಾಶ್ರಮ
·ಭೋಗ ನಂದೀಶ್ವರ ದೇವಾಲಯ
·ನಂದಿ ಹಿಲ್ಸ್‌ ಗುಹೆ
·ಚನ್ನಗಿರಿ ಹಿಲ್ಸ್‌
·ಯೋಗ ನಂದೀಶ್ವರ ಸ್ವಾಮಿ ದೇವಸ್ಥಾನ
·ಗಣೇಶ ದೇವಸ್ಥಾನ

ರೂಟ್‌ ಮ್ಯಾಪ್‌
·  ಬೆಂಗಳೂರಿನಿಂದ ನಂದಿ ಹಿಲ್ಸ್‌ಗೆ ಒಟ್ಟು 61.1 ಕಿ.ಮೀ.
·ನಂದಿ ಬೆಟ್ಟಕ್ಕೆ ನೇರ ಬಸ್‌ ಇಲ್ಲ. ಚಿಕ್ಕಬಳ್ಳಾಪುರಕ್ಕೆ ತೆರಳಿ ಅಲ್ಲಿಂದ ಬೇರೆ ಬಸ್‌ ಹಿಡಿಯಬೇಕು. ಕೆಲವೊಂದು ಬಸ್‌ಗಳು ನಂದಿ ಹಿಲ್ಸ್‌ನ ದ್ವಾರದ ವರೆಗೆ ಹೋಗುತ್ತವೆ. ಇನ್ನುಳಿದವು ನಂದಿ ಹಿಲ್ಸ್‌ ಸಿಗ್ನಲ್‌ ಬಳಿ ಇಳಿಸುತ್ತವೆೆ. ಅಲ್ಲಿಂದ ನಂದಿಹಿಲ್ಸ್‌ ದ್ವಾರಕ್ಕೆ ರಿಕ್ಷಾದಲ್ಲಿ ಹೋಗಬೇಕು
(8 ಕಿ.ಮೀ.)
·ಉತ್ತಮ ಅನುಭವಕ್ಕಾಗಿ ಬೈಕ್‌ನಲ್ಲಿ ತೆರಳುವುದು ಸೂಕ್ತ.
·ಅಲ್ಲೇ ಸುತ್ತಮುತ್ತ ಹೊಟೇಲ್‌ಗ‌ಳಿರುವ ಕಾರಣ ಆಹಾರ ಒಯ್ಯಬೇಕಾದ ಅಗತ್ಯವೇನೂ ಇಲ್ಲ. ಆದರೆ ದಾಹ ನೀಗಿಸಿಕೊಳ್ಳಲು ಶುದ್ಧ ನೀರಿನ ಬಾಟಲ್‌ಗ‌ಳು ನಿಮ್ಮ ಜತೆ ಇರಲಿ.

 ಆರ್‌.ಕೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ