ಕೆಜಿಎಫ್ ಕುತೂಹಲ ಮತ್ತು ಫ್ಯಾನ್ಸ್ ರಿಲೀಸ್ ತವಕ
Team Udayavani, May 28, 2021, 12:22 PM IST
ನಟ ಯಶ್ ಅಭಿನಯದ “ಕೆಜಿಎಫ್-2′ ಚಿತ್ರ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ. ಅದು ಟೀಸರ್, ಪೋಸ್ಟರ್ ಜೊತೆಗೆ ಕಲಾವಿದರ ಬರ್ತ್ಡೇ ದಿನ ಚಿತ್ರ ತಂಡ ರಿವೀಲ್ ಮಾಡುವ ಗೆಟಪ್ಗಳು ಸಿನಿಮಾದ ಕುತೂಹಲ ಹೆಚ್ಚಿಸುತ್ತಿವೆ. ಈಗ ಚಿತ್ರತಂಡ ಚಿತ್ರದ ಪ್ರಮುಖ ಪಾತ್ರವೊಂದನ್ನು ಅನಾವರಣಗೊಳಿಸಿದೆ.
“ಕೆಜಿಎಫ್-2′ ಚಿತ್ರದಲ್ಲಿ ನಟ ರಾವ್ ರಮೇಶ್ ಅವರು ಪ್ರಮುಖ ಪಾತ್ರ ಮಾಡಿದ್ದು, ಅವರ ಹುಟ್ಟುಹಬ್ಬಕ್ಕೆ ಚಿತ್ರ ತಂಡ, ಅವರ ಪಾತ್ರ ರಿವೀಲ್ ಮಾಡಿದೆ. ಚಿತ್ರದಲ್ಲಿ ರಾವ್ ರಮೇಶ್ ಅವರು ಸಿಬಿಐ ಅಧಿಕಾರಿಯಾಗಿ ನಟಿಸಿದ್ದಾರೆ. ನರಾಚಿ ಸಾಮ್ರಾಜ್ಯಕ್ಕೆಎಂಟ್ರಿಕೊಡುವ ಅವರು “ಕೆಜಿಎಫ್’ ಅನ್ನು ರಕ್ಷಿಸಲು ಬರುತ್ತಾರಾ ಅಥವಾ ರಾಕಿಯನ್ನು ಹಿಡಿಯಲು ಬರುತ್ತಾರಾ ಎಂಬ ಕುತೂಹಲವನ್ನು ಸಿನಿ ಪ್ರೇಮಿಗಳಿಗೆ ಬಿಟ್ಟಿದ್ದಾರೆ.
ಇನ್ನು “ಕೆಜಿಎಫ್-2′ ಚಿತ್ರ ತಂಡ ಜುಲೈ 16ಕ್ಕೆ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿದೆ. ಚಿತ್ರದ ಪೋಸ್ಟ್ ಪ್ರೊಡ ಕ್ಷನ್ ಕೆಲಸಗಳು ಕೂಡಾ ಮುಗಿದಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಜುಲೈನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಕೋವಿಡ್ ಕಡಿಮೆಯಾಗಿ ಚಿತ್ರ ಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆಯಬೇಕು ಮತ್ತು ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ಸಿಗಬೇಕು. ಅಲ್ಲಿವರೆಗೆ ಸಿನಿಮಾ ಬಿಡುಗಡೆ ಮಾಡಲು ಸಿನಿಮಾ ಮಂದಿ ಮುಂದೆ ಬರೋದಿಲ್ಲ ಎಂಬ ಮಾತು ಕೇಳಿಬರುತ್ತಿದೆ.