ಹಣತೆಯೊಳಗಿನ ಘನತೆ

Team Udayavani, Oct 27, 2019, 4:01 AM IST

ದೀಪಾವಳಿ ಆಚರಣೆಯ ಶುಭಾರಂಭವಾಗುವುದು ತ್ರೇತಾಯುಗದ ಮೊದಲ ದಿನ ಅಂದರೆ ಕಾರ್ತಿಕ ಮಾಸದ ಪ್ರತಿಪತ್‌ ಎಂದು ಹೇಳಲಾಗುತ್ತದೆ ಅಥವಾ ಆ ಪುಣ್ಯಯುಗವನ್ನು ದೀಪ ಬೆಳಗಿಸುವುದರ ಮೂಲಕ ಸ್ವಾಗತಿಸಿರಬೇಕು. ಅಂದಿನಿಂದ ಇಂದಿಗೂ ಈ ದಿನದಲ್ಲಿ ವಿಶೇಷವಾಗಿ ದೀಪಬೆಳಗಿಸಿ ಸಂಭ್ರಮಿಸುವ ಸಂಸ್ಕೃತಿ ಬೆಳೆದು ಬಂದಿದೆಯೆನ್ನಬಹುದು.

ಕಾರ್ತಿಕಮಾಸ ಬಹಳ ವೈಶಿಷ್ಟ್ಯಪೂರ್ಣವಾದುದು. ಮಾಸ ಪೂರ್ತಿ ದೀಪದ ದಿನಗಳ ಮೆರವಣಿಗೆಗೆ ಮೀಸಲು. ಬಲೀಂದ್ರ ಪೂಜೆ, ಕಾರ್ತಿಕದಾಮೋದರ ಪೂಜೆ, ಉತ್ಥಾನ ದ್ವಾದಶಿಯಂದು ತುಲಸೀ ಪೂಜೆ. ಅಂದು ಮಹಾವಿಷ್ಣು ಯೋಗನಿದ್ರೆಯಿಂದ ಎಚ್ಚೆತ್ತು ಭೂಲೋಕಕ್ಕೆ ಆಗಮಿಸುತ್ತಾನೆಂಬುದು ನಂಬಿಕೆ. ಕಾರ್ತಿಕ ಪೂರ್ಣಿಮೆಯಂದು ಪರಮೇಶ್ವರನು ತ್ರಿಪುರಾಸುರ ಸಂಹಾರ ಮಾಡಿದ ದಿನ. ಆಗ ಶಿವದೀಪಾರಾಧನೆ, ಅಮಾವಾಸ್ಯೆಯಂದು ದೇವಾಲಯಗಳಲ್ಲಿ ಲಕ್ಷದೀಪೋತ್ಸವ.

ಇನ್ನೊಂದು ಬಹಳ ವೈಶಿಷ್ಟ್ಯಪೂರ್ಣ ಸಂಗತಿಯೆಂದರೆ – ದೀಪಾವಳಿಯಂದು ಅಥವಾ ಕಾರ್ತಿಕ ಮಾಸದ ವಿಶೇಷ ದಿನಗಳಂದು ಆಕಾಶದೀಪಗಳನ್ನು ಬೆಳಗುವುದು. ಆಕಾಶದಲ್ಲಿರುವ (ದ್ಯುಲೋಕ) ದೇವಾನುದೇವತೆಗಳಿಗೆ ವೈಕುಂಠದಲ್ಲಿರುವ ಮಹಾವಿಷ್ಣುವಿಗೆ ಅಷ್ಟಕೋನಾಕೃತಿಯ ಆಕಾಶಬುಟ್ಟಿಗಳಲ್ಲಿ ದೀಪಗಳನ್ನು ಬೆಳಗಿಸಿ ವಂದನೆ ಸಲ್ಲಿಸಲಾಗುತ್ತದೆ. ದ್ಯುಲೋಕಕ್ಕೆ ದೀಪದಾರತಿ.

ನಮ್ಮ ಎಲ್ಲ ಆಚರಣೆಗಳ ಹಿಂದೆಯೂ ಮುಖ್ಯ ತಣ್ತೀವೊಂದಿರುತ್ತದೆ. ಅದಕ್ಕೆ ಪೌರಾಣಿಕವಾದ ಕಥನಗಳ ಮೇಲುಹೊದಿಕೆಯಿರುತ್ತದೆ. ಏಕೆಂದರೆ, ತಣ್ತೀ ಚಿಂತನೆ ಸುಲಭವಾದರೂ ಅನುಷ್ಠಾನ ಕಷ್ಟ. ಸಿಪ್ಪೆ ತೆಗೆದು ಕಬ್ಬಿನ ರಸ ಹೀರಬೇಕು. ತೆಂಗಿನ ಕಾಯಿ ತಿನ್ನುವುದು ಎಂದರೆ ಕರಟವನ್ನಲ್ಲವಷ್ಟೆ. ತಣ್ತೀವರಿತು ಭಕ್ತಿ-ಭಾವದಿಂದ ಸರಳ ಹಾಗೂ ಅರ್ಥಪೂರ್ಣ ಆಚರಣೆ ಮಾಡಿದಾಗ ಯಾವುದೇ ಹಬ್ಬ ಹರಿದಿನಗಳ ಆಚರಣೆ ಸಾರ್ಥಕವಾದಂತೆ.

ವಿಶೇಷ ಪೂಜೆ, ವ್ರತ-ಕಥೆಗಳಲ್ಲಿ ಮೊದಲು ದೀಪಲಕ್ಷ್ಮಿಗೆ ನಮಸ್ಕಾರ ಸಲ್ಲುತ್ತದೆ. ಭೋ ದೀಪಲಕ್ಷ್ಮೀ ನಮಸ್ತುಭ್ಯಂ ಎಂದು ದೀಪಲಕ್ಷ್ಮೀಯನ್ನು ಮೊದಲು ಬೆಳಗಿಸುವವಳು ಗೃಹಲಕ್ಷ್ಮೀ ಅಥವಾ ಗೃಹಿಣಿ ಎಂಬುದು ವಿಶೇ ಷ‌. ಇಲ್ಲಿ ಬೆಳಕೇ ದೇವತೆ ! ತಾವು ಬೆಳಗಿ ಪ್ರಪಂಚಕ್ಕೆ ಬೆಳಕ ಕೊಡುವವರೇ ದೇವ-ದೇವತೆಗಳು.

ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ದಿವಾಕರಃ |
ದೀಪೇನ ಹರತೇ ಪಾಪಂ ಸಂಧ್ಯಾದೀಪ ನಮೋಸ್ತುತೇ ||
ಇದೊಂದು ಸೊಗಸಾದ ದೀಪಸ್ತುತಿ.

ಇಂತಹ ಬೆಳಕಿನ ದೇವತೆಯ ಆರಾಧನೆಯೇ ದೀಪಾವಳಿ. ಇದಕ್ಕಾಗಿ ಕಾರ್ತಿಕಮಾಸ ಮೀಸಲು. ಈ ತಿಂಗಳು ದೀಪಾರಾಧನೆಯೊಂದಿಗೆ ಪ್ರಾರಂಭವಾಗಿ ದೀಪಾರಾಧನೆಯಲ್ಲೇ ಮುಕ್ತಾಯವಾಗುತ್ತದೆ.
ಬಲಿಪಾಡ್ಯಮಿಗೆ ಎರಡು ದಿನಗಳಿಗೆ ಮುಂಚೆಯೇ ನರಕಚತುರ್ದಶಿ ಬರು ತ್ತದೆ. ಆಸುರೀ ಶಕ್ತಿಯ ವಿರುದ್ಧದ ಹೋರಾಟದಲ್ಲಿ ದೈವೀಶಕ್ತಿಯ (ಬೆಳಕು) ಜಯವನ್ನು ಇದು ಸಂಕೇತಿಸುತ್ತದೆ. ಮುಂದಿನ ದಿನ ಅಮಾವಾಸ್ಯೆಯಂದು ಸಂಪತ್ಸಮೃದ್ಧಿಯೆಂಬ ಬೆಳಕಿನ ಪ್ರತೀಕವಾದ ಲಕ್ಷ್ಮೀಯ ಆರಾಧನೆ.

ದೀಪವೊಂದು ಪ್ರತಿನಿಧಿಸುವ ಮೌಲ್ಯಕ್ಕೆ ಹಲವು ಮುಖಗಳು. ಹಾಗೆಯೇ ದೀಪಕ್ಕೂ ಹತ್ತಾರು ಮುಖಗಳು.
ನಾಮ-ರೂಪಗಳಿಂದ ದೀಪ ಬೇರೆ ಬೇರೆಯಾಗಿ ಕಂಡರೂ ಅದರ ಹಿಂದಿರುವ ತಣ್ತೀವೊಂದೇ, ಭಾವವೊಂದೇ. ಅದಕ್ಕಾಗಿಯೇ ಕವಿಯೊಬ್ಬ ಹಾಡಿದ್ದು- ಸೂರ್ಯ ಚಂದ್ರ ಲಾಂದ್ರ ಹಣತೆ, ಅವುಗಳ ಹಿಂದೆ ಮಾತ್ರ ಒಂದೇ ಘನತೆ… ಅಗ್ನಿಯೂ ಬೆಳಕಿನ ಮತ್ತೂಂದು ರೂಪ, ಮತ್ತೂಂದು ಶಕ್ತಿ. ವೇದೋಕ್ತ ಕರ್ಮಗಳಲ್ಲಿ ಅಗ್ನಿಯೇ ಪ್ರಧಾನ.

ಒಂದು ಮಣ್ಣಿನ ಹಣತೆ. ಅದರೊಳಗೆ ಎಣ್ಣೆ. ಅದಕ್ಕೆರಡು ಬತ್ತಿ. ಅದನ್ನು ಬೆಳಗಲು ಒಂದು ದೀಪ. ಅದನ್ನು ಬೆಳಗಲು ಒಬ್ಬ ವ್ಯಕ್ತಿ. ಇಲ್ಲಿ ನಡೆಯುವ ಕ್ರಿಯೆಯನ್ನು ಗಮನಿಸೋಣ- ಎಣ್ಣೆ ಬತ್ತಿಗೆ ತನ್ನನ್ನು ಕೊಟ್ಟುಕೊಳ್ಳುತ್ತದೆ. ಬತ್ತಿ ತನ್ನನ್ನು ತಾನು ಸುಟ್ಟುಕೊಂಡು ಬೆಳಕಾಗಿ ಬೆಳೆದು- ಬೆಳಗಿ ಕೊನೆಗೆ ಇಲ್ಲವಾಗುತ್ತದೆ. ಅಂದರೆ ಸಾರ್ಥಕತೆಯನ್ನು ಹೊಂದುತ್ತದೆ. ದೀಪವನ್ನು ಹಚ್ಚಿದ ವ್ಯಕ್ತಿಯೂ ಧನ್ಯತೆಯನ್ನು ಕಾಣುತ್ತಾನೆ.  ಪ್ರತಿದಿನ ದೇವರ ಮುಂದೆ ದೀಪ ಹಚ್ಚುತ್ತೇವೆ. ಇದು ದೇವರಿಗಾಗಿಯೋ ಅಥವಾ ನಮಗಾಗಿಯೋ? ಯಾರಿಗಾಗಿಯಾದರೂ ಆಗಿರಲಿ, ಅಲ್ಲೊಂದು ಸಂತೋಷ, ಧನ್ಯತೆ ನಮ್ಮದಾಗುತ್ತದೆ.

ವಿ ಶ್ವದ ಬೆಳಕಾಗಿರುವ, ವಿಶ್ವವನ್ನೇ ಬೆಳಗುವ ಬೆಳಕಿಗೆ ನಾವು ಬೆಳಕನ್ನು ಕೊಡುವುದಾದರೂ ಹೇಗೆ?
ಇಷ್ಟಕ್ಕೂ ಕತ್ತಲೆಯನ್ನು ಸೀಳುವ ಹೊರಗಿನ ಬೆಳಕನ್ನು ಕಾಣಲು ಕಣ್ಣಿನಲ್ಲಿ ಬೆಳಕಿದ್ದರೆ ಮಾತ್ರ ಸಾಧ್ಯ. ಕುರುಡನಿಗೆ ಕತ್ತಲೆಯೂ ಬೆಳಕೂ ಒಂದೆ.  ದೀಪವೆಂದರೆ ಅದು ಕೇವಲ ಬೆಳಕಲ್ಲ. ಅದು ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ನಡೆಸುವ ಪ್ರೇರಣೆಯೂ ಹೌದು.

ಹಾಗೆಂದೇ, ಅಸತೋ ಮಾ ಸದ್ಗಮಯ | ತಮಸೋ ಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂ ಗಮಯ | ಎಂದು ಬೃಹದಾರಣ್ಯಕ ಉಪನಿಷತ್ತು ಮುಕ್ತಿಮಾರ್ಗದ ಪ್ರಾರ್ಥನೆ ಮಾಡುತ್ತದೆ.

ಸಿ. ಎ. ಭಾಸ್ಕರ ಭಟ್ಟ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ