Exam preparation: ಗೆಲುವಿನ ಗುಟ್ಟು!


Team Udayavani, Feb 25, 2024, 1:08 PM IST

Exam preparation: ಗೆಲುವಿನ ಗುಟ್ಟು!

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲು ಕೇವಲ ಐದು ದಿನಗಳಷ್ಟೇ ಬಾಕಿ ಉಳಿದಿವೆ. ಅದು ಮುಗಿಯುತ್ತಿದ್ದಂತೆಯೇ ಎಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಪರಿಣಾಮ, ಬೇಸಿಗೆಯ ಬಿಸಿಲಿನಷ್ಟೇ ತೀವ್ರವಾಗಿ ಪರೀಕ್ಷಾ ಜ್ವರವೂ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕಾಡುತ್ತಿದೆ. ವಿದ್ಯಾರ್ಥಿಗಳು ಕಡೇ ಕ್ಷಣದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಪರೀಕ್ಷೆ ಎಂಬ ಗುಮ್ಮನನ್ನು ಎದುರಿಸುವುದು ಹೇಗೆ? ಹೆಚ್ಚಿನ ಅಂಕಗಳನ್ನು ಪಡೆಯುವುದು ಹೇಗೆ? ಪರೀಕ್ಷೆಯಲ್ಲಿ ಜಯಶಾಲಿಯಾಗುವುದು ಹೇಗೆ ಎಂಬುದೇ ಎಲ್ಲರ ಪ್ರಶ್ನೆ. ಪ್ರತಿ ವರ್ಷವೂ ಎಲ್ಲರನ್ನೂ ಹೆದರಿಸುವ ಪರೀಕ್ಷೆಯಲ್ಲಿ, ಗೆಲುವಿನ ಧ್ವಜ ಹಾರಿಸಲು ಹೇಗೆ ತಯಾರಾಗಬೇಕು ಎಂಬ ಕುತೂಹಲದ ಪ್ರಶ್ನೆಗೆ ಇಲ್ಲಿ ಉತ್ತರವಿದೆ…

ಪರೀಕ್ಷೆಯ ಸಮಯ ಬಂತೆಂದರೆ ಬೇಸಿಗೆಯ ಬಿಸಿಲಿನ ತಾಪದೊಂದಿಗೆ ಪೋಷಕರ ಮತ್ತು ಶಿಕ್ಷಕರ ಒತ್ತಡವೂ ಏರಿ ಬೆವರು ಹರಿಯತೊಡಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಆತಂಕಕ್ಕೆ ಒಳಗಾಗುತ್ತಾರೆ. ಪರೀಕ್ಷೆ ಎನ್ನುವುದು ವಾರ್ಷಿಕ ಪೆಡಂಭೂತ ಏನಲ್ಲ. ಪರೀಕ್ಷೆಗಳು ನಡೆಯುವುದು ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಗುರುತಿಸಲೇ ಹೊರತು, ಅವರಿಗೆ ತೊಂದರೆ ಕೊಡುವ ಉದ್ದೇಶದಿಂದ ಅಲ್ಲ. ಪ್ರಸ್ತುತದಲ್ಲಿ ಅಂಕ ಗಳಿಕೆಗಿಂತ ವಿದ್ಯಾರ್ಥಿ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾನೆ ಎಂಬುದನ್ನು ತಿಳಿಯಲು ನಮಗಿರುವ ಮಾರ್ಗ ಪರೀಕ್ಷೆ ಒಂದೇ. ಆದ್ದರಿಂದ, ಕೇವಲ ಅಂಕಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ ಪರೀಕ್ಷೆಯನ್ನು ಎದುರಿಸಬಾರದು. ಅಂಕ ಗಳಿಕೆಯೇ ಮುಖ್ಯ ಎಂದು ಭಾವಿಸಬಾರದು.

ಜ್ಞಾಪಕ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಇಷ್ಟವಾದ ವಿಷಯಗಳು ತಾವಾಗಿಯೇ ಮನಸ್ಸಿನಲ್ಲಿ ಉಳಿಯುತ್ತವೆ. ಜೊತೆಗೆ, ಆಗಾಗ ಲಘು ಪರೀಕ್ಷೆಗಳನ್ನು ಬರೆದಿದ್ದರೆ ವಿಷಯ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ವಾರ್ಷಿಕ ಪರೀಕ್ಷೆಯನ್ನು ಲೀಲಾಜಾಲವಾಗಿ ಎದುರಿಸಬಹುದು. ಶಾಲೆ/ಕಾಲೇಜಿನಲ್ಲಿ ಪಾಠ ಕೇಳುವುದು, ಅರ್ಥ ಮಾಡಿಕೊಳ್ಳುವುದು, ಮತ್ತೂಮ್ಮೆ ಓದಿ ಮನದಟ್ಟು ಮಾಡಿಕೊಳ್ಳುವುದು ಮತ್ತು ಸಹಪಾಠಿಗಳೊಂದಿಗೆ ಕಲಿತ ವಿಷಯಗಳನ್ನು ಚರ್ಚಿಸುವುದು… ಇವೆಲ್ಲವೂ ಆಗಿದ್ದರೆ ಪರೀಕ್ಷೆಯಲ್ಲಿ ಯಶಸ್ಸು ಖಚಿತ. ಒಂದೊಮ್ಮೆ ಯಾವುದೋ ಕಾರಣದಿಂದ ವಿದ್ಯಾರ್ಥಿ ಆರಂಭದಿಂದ ಪರೀಕ್ಷೆಯನ್ನು ಎದುರಿಸಲು ಸಿದ್ಧತೆ ಮಾಡಿಲ್ಲವೆಂದುಕೊಂಡರೂ, ಪರೀಕ್ಷಾ ವೇಳಾಪಟ್ಟಿ ಪ್ರಕಟವಾದ ದಿನದಿಂದಲೇ ಸರಿಯಾದ ತಯಾರಿ ಮಾಡಿಕೊಂಡಿದ್ದರೆೆ ಯಶಸ್ಸು ಪಡೆಯಲು ಸಾಧ್ಯ.

ಪಕ್ಕಾ ಅನ್ನಿಸುವಂಥ ಪ್ಲ್ರಾನ್‌ ಇರಲಿ…

ಮೊದಲನೆಯದಾಗಿ ಪ್ರಶ್ನೆ ಪತ್ರಿಕೆಯ ಬ್ಲೂಪ್ರಿಂಟ್‌ ನೋಡಿದಾಗ ಯಾವ ಅಧ್ಯಾಯದ ಮೇಲೆ ಎಷ್ಟು ಅಂಕದ ಪ್ರಶ್ನೆ ಬರುತ್ತದೆ ಎಂಬುದು ತಿಳಿಯುತ್ತದೆ. ಅದನ್ನು ಆಧರಿಸಿ ಹೆಚ್ಚಿನ ಅಂಕ ನಿಗದಿಯಾಗಿರುವ ಅಧ್ಯಾಯಗಳಿಗೆ ಹೆಚ್ಚಿನ ಸಮಯ ಮತ್ತು ಪರಿಶ್ರಮವನ್ನು ಮೀಸಲಿರಿಸಿ, ಕಡಿಮೆ ಅಂಕಗಳ ಅಧ್ಯಾಯಕ್ಕೆ ಕಡಿಮೆ ಸಮಯವನ್ನು ನೀಡಬಹುದು. ಇದರ ಅರ್ಥ, ಕೆಲವನ್ನು ಆಯ್ದುಕೊಂಡು ಕೆಲವನ್ನು ಬಿಡುವುದು ಎಂದಲ್ಲ. ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಹೇಗೆ ಸಮಯ ಹೊಂದಿಸಿಕೊಳ್ಳಬೇಕು ಎಂಬುದಕ್ಕೆ ಇಲ್ಲಿ ಉತ್ತರವಿದೆ, ಅಷ್ಟೆ.

ಪ್ರಥಮ/ದ್ವಿತೀಯ ಭಾಷೆ, ಸಮಾಜ ವಿಜ್ಞಾನ ಇತ್ಯಾದಿ ವಿಷಯಗಳನ್ನು ಓದುವಾಗ ಪಠ್ಯದ ಸಾರಾಂಶ ಗ್ರಹಿಸಲು ಪ್ರಯತ್ನಿಸಬೇಕು. ಅಂದರೆ ಪದ್ಯವೋ, ಪಾಠವೋ ಆಗಿದ್ದಾಗ ಲೇಖಕರ ಹೆಸರು ಮತ್ತು ಯಾವ ಕೃತಿಯಿಂದ ಅದನ್ನು ಆಯ್ದುಕೊಳ್ಳಲಾಗಿದೆ ಎಂಬುದನ್ನು ಗುರುತು ಮಾಡಿಕೊಳ್ಳಬೇಕು. ಪದ್ಯದ ಅಥವಾ ಪಾಠದ ಮೂಲ ಆಶಯವನ್ನು ಒಂದೇ ವಾಕ್ಯದಲ್ಲಿ ಬರೆದಿಟ್ಟುಕೊಳ್ಳಬೇಕು. ಯಾವ ಯಾವ ಅಂಶಗಳನ್ನು ಕುರಿತಂತೆ ಪದ್ಯ ಅಥವಾ ಪಾಠ ಬೆಳೆಯುತ್ತಾ ಹೋಗಿದೆ ಎಂಬುದನ್ನು ಟಿಪ್ಪಣಿ ಮಾಡಿಕೊಳ್ಳಬೇಕು. ಹೀಗೆ ಒಮ್ಮೆ ಆಮೂಲಾಗ್ರವಾಗಿ ಓದಿದ ಮೇಲೆ, ಪುನರಾವರ್ತನೆ ಮಾಡುವಾಗ ಟಿಪ್ಪಣಿಗಳ ಮೇಲೆ ಕಣ್ಣಾಡಿಸಿದರೆ ಸಾಕು; ಇಡೀ ವಿಷಯದ ವಿಸ್ತಾರ ರೂಪ ಮನಸ್ಸಿನಲ್ಲಿ ಮೂಡುತ್ತದೆ.

ವಿಜ್ಞಾನ, ಗಣಿತ ಮೊದಲಾದ ವಿಷಯಗಳನ್ನು ಓದುವಾಗ ಪ್ರಮೇಯಗಳನ್ನು ಮತ್ತೆ ಮತ್ತೆ ಬರೆದು ಅಭ್ಯಾಸ ಮಾಡಬೇಕು. ಮಾದರಿ ಲೆಕ್ಕಗಳನ್ನು ಮತ್ತು ಮಾದರಿ ಪ್ರಶ್ನೆಗಳನ್ನು ಗಮನಿಸಬೇಕು. ಯಾವುದೇ ವಿಚಾರವನ್ನಾಗಲಿ ಒಂದು ಟೇಬಲ್‌ ರೂಪದಲ್ಲಿ ಸಿದ್ಧಪಡಿಸಿಕೊಳ್ಳುವ ತಂತ್ರವನ್ನು ಕಲಿಯಬೇಕು. ವಿಜ್ಞಾನದ ವಿಷಯಗಳಲ್ಲಿ ಈ ಟೇಬಲ್‌ಗ‌ಳು ವಿಚಾರಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಬಹಳ ನೆರವಾಗುತ್ತವೆ.

ಪರೀಕ್ಷೆ ಹತ್ತಿರ ಬಂದಾಗ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ವಿಶೇಷ ನೆರವಿನ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇವುಗಳನ್ನು ನೋಡಬೇಕು ಮತ್ತು ಕೇಳಿಸಿಕೊಳ್ಳಬೇಕು. ಬಹುತೇಕ ಸಂದರ್ಭದಲ್ಲಿ ಇಲ್ಲಿ ಚರ್ಚಿತವಾಗುವ ವಿಷಯಗಳು ಪರೀಕ್ಷಾ ದೃಷ್ಟಿಯಿಂದ ಸಹಾಯಕವಾಗಿರುತ್ತವೆ. ಪರಿಣಿತ‌ ಅಧ್ಯಾಪಕರು ಮತ್ತು ಪ್ರಶ್ನೆಪ‌ತ್ರಿಕೆ ರೂಪಿಸುವವರು ಈ ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಸಲಹೆ- ಸೂಚನೆಗಳನ್ನು ಕೊಡುತ್ತಾರೆ.

ಪೂರ್ವ ಸಿದ್ಧತೆ ಇದ್ದರೆ ಆತಂಕ ಇರಲ್ಲ!:

ಪರೀಕ್ಷಾ ಪೂರ್ವದ ಸಿದ್ಧತೆ ಗಟ್ಟಿಯಾಗಿದ್ದರೆ ಪರೀಕ್ಷೆಯ ದಿನ ಆತಂಕವಾಗುವುದಿಲ್ಲ. ವಿದ್ಯಾರ್ಥಿಯು ಪರೀಕ್ಷಾ ದಿನಗಳಲ್ಲಿ ಆರೋಗ್ಯದ ಕಡೆ ಸೂಕ್ತ ಗಮನ ಕೊಡಬೇಕು. ಅನವಶ್ಯಕ ಓಡಾಟವನ್ನು ನಿಲ್ಲಿಸಬೇಕು. ಹೊರಗಿನ ತಿಂಡಿ, ಪಾನೀಯಗಳನ್ನು ಸೇವಿಸದೆ ಆರೋಗ್ಯಕರ ಆಹಾರವನ್ನು ಬಳಸಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಏಕೆಂದರೆ ನಿದ್ರೆ ಮಾಡುವ ಸಮಯದಲ್ಲಿ ಮೆದುಳು ಅಧ್ಯಯನದ ವಿಚಾರಗಳನ್ನು ನೆನಪಿನ ಕೋಶಗಳಾಗಿ ಪರಿವರ್ತಿಸುತ್ತದೆ. ಆದುದರಿಂದ ನಿದ್ದೆಗೆಟ್ಟು ಓದಬಾರದು. ಹಾಗೆ ಓದಿದರೂ ಅಂತಹ ವಿಚಾರಗಳು ನೆನಪಿನಲ್ಲಿ ಉಳಿಯುವ ಸಾಧ್ಯತೆಗಳು ಕಡಿಮೆ.

ಪಾಲಕ- ಪೋಷಕರ ಪಾತ್ರ…

ಪರೀಕ್ಷೆಯ ಕಾಲದಲ್ಲಿ ವಿದ್ಯಾರ್ಥಿಗೆ ಬೇಕಾದ ಒತ್ತಾಸೆ ಮತ್ತು ಸಹಕಾರವನ್ನು ಮನೆಯವರು ನೀಡಬೇಕು. ಅನಾವಶ್ಯಕವಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು. ಹಾಗೆಯೇ ವಿದ್ಯಾರ್ಥಿಯ ಬೇಜವಾಬ್ದಾರಿತನವನ್ನು ಕಡೆಗಣಿಸಬಾರದು. ಸೂಕ್ತ ಮಾರ್ಗದರ್ಶನ ನೀಡಿದರೆ ಪ್ರತಿಯೊಂದು ಮಗುವೂ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸುತ್ತದೆ.

ಮನೆಯ ಹಿರಿಯರು ಪರೀಕ್ಷಾ ದಿನಗಳಲ್ಲಿ ಟೀವಿ, ಸೀರಿಯಲ್‌ ನೋಡುವ, ರೇಡಿಯೋ ಕೇಳುವ ಕಾರ್ಯಕ್ರಮಗಳನ್ನು ತ್ಯಜಿಸಿ ವಿದ್ಯಾರ್ಥಿಗೆ ಧೈರ್ಯ ಹೇಳುತ್ತಾ ಪ್ರೋತ್ಸಾಹ ಕೊಡಬೇಕು. ಅವನು/ಳು ನೆರವು ಕೋರಿದರೆ ವಿಷಯದ ತಿಳಿವಳಿಕೆ ಮೂಡಿಸುವಲ್ಲಿ ಪ್ರಯತ್ನಿಸಬಹುದು. ಕೆಲವೊಮ್ಮೆ ಸುಮ್ಮನೆ ಮಕ್ಕಳೊಂದಿಗೆ  ಕುಳಿತರೂ ಅವರಿಗೆ ಆತಂಕ ಕಡಿಮೆಯಾಗುತ್ತದೆ.

ಪರೀಕ್ಷಾ ಕೇಂದ್ರ ದೂರವಿದ್ದರೆ ಮಕ್ಕಳು ಸಕಾಲದಲ್ಲಿ ಪರೀಕ್ಷಾ ಕೇಂದ್ರ ತಲುಪಲು ನೆರವಾಗಬೇಕು. ಅಕಸ್ಮಾತ್‌ ವಿದ್ಯಾರ್ಥಿ ಅನಾರೋಗ್ಯಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ, ಪರೀಕ್ಷಾ ಕೇಂದ್ರದ ನಿರೀಕ್ಷಾ ತಾಣಗಳಲ್ಲಿ ಕುಳಿತು ತುರ್ತು ಸಂದರ್ಭದಲ್ಲಿ ನೆರವಾಗಲು ಸಿದ್ಧರಿರಬೇಕು.

ಪರೀಕ್ಷಾ ಗೆಲುವಿಗೆ ಇರುವುದು ಮೂರೇ ಸೂತ್ರ: ತಯಾರಿ, ಆತ್ಮವಿಶ್ವಾಸ ಮತ್ತು ಹಿರಿಯರ ಸಹಕಾರ.

ವಿಜಯಕ್ಕೆ ಐದು ಮೆಟ್ಟಿಲು…

  1. ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪುವುದನ್ನು ಪಕ್ಕಾ ಮಾಡಿಕೊಳ್ಳಲು ಹಿಂದಿನ ದಿನ ಒಮ್ಮೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟು, ಅಲ್ಲಿಗೆ ತಲುಪಲು ಬೇಕಾದ ಸಮಯದ ಅಂದಾಜು ಮಾಡಿಕೊಳ್ಳಬೇಕು.
  2. ಪರೀಕ್ಷೆಯ ದಿನದಂದು ಲಘು ಆಹಾರ ಸೇವಿಸಬೇಕು ಮತ್ತು ನಿರಾತಂಕವಾಗಿ ಪರೀಕ್ಷಾ ಕೇಂದ್ರ ತಲುಪಬೇಕು. ತನಗೆ ನಿಗದಿಯಾದ ಕೋಣೆ ಮತ್ತು ಸ್ಥಳದಲ್ಲಿ ಕುಳಿತು, ಪ್ರವೇಶ ಪತ್ರಿಕೆಯಲ್ಲಿ ನಮೂದಿತವಾದ ಸಂಖ್ಯೆಯೇ ತಾನು ಕುಳಿತ ಆಸನದ ಡೆಸ್ಕಿನ ಮೇಲಿದೆ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕು. ತಪ್ಪಾಗಿ ಯಾರದೋ ಸ್ಥಳದಲ್ಲಿ ಕೂರಬಾರದು ಅಥವಾ ತನ್ನ ರಿಜಿಸ್ಟರ್‌ ನಂಬರ್‌ ಅನ್ನು ತಪ್ಪಾಗಿ ಬರೆಯಬಾರದು.
  3. ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆ ದೊರೆತ ಕೂಡಲೇ ತಡಬಡಾಯಿಸಿ ಬರೆಯಲು ಆರಂಭಿಸಬಾರದು. ಎಷ್ಟೇ ತಯಾರಿ ಇದ್ದರೂ ಪರೀಕ್ಷೆಯ ವೇಳೆಯಲ್ಲಿ ಕೊಂಚ ಆತಂಕವಿರುತ್ತದೆ. ಅದು ಸಹಜವೇ. ಮೊದಲಿಗೆ ಒಂದೆರಡು ಬಾರಿ ದೀರ್ಘ‌ವಾಗಿ ಉಸಿರಾಡಿ ಆತಂಕವನ್ನು ಕಡಿಮೆ ಮಾಡಿಕೊಳ್ಳಬೇಕು.
  4. ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ ಅದನ್ನು ನಿಧಾನವಾಗಿ ಕನಿಷ್ಠ ಮೂರು ಬಾರಿ ಓದಿಕೊಳ್ಳಬೇಕು. ಅದಾದ ಬಳಿಕ ಸುಲಭವಾಗಿ ಉತ್ತರಿಸಬಲ್ಲ ಪ್ರಶ್ನೆಗಳನ್ನು ಮೊದಲಿಗೆ ಆಯ್ದುಕೊಂಡು ಉತ್ತರಿಸಬೇಕು. ತದನಂತರ ತನಗೆ ಸ್ವಲ್ಪ ಉತ್ತರ ತಿಳಿದಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದಾದ ಮೇಲೆ ತನಗೆ ತಿಳಿಯದಿರುವ ಪ್ರಶ್ನೆಗಳಿದ್ದರೂ, ಪರೀಕ್ಷಾ ಸಮಯ ಮುಗಿವ ಮೊದಲೇ ಎದ್ದು ಹೋಗಬಾರದು. ಮನಸ್ಸಿನಲ್ಲಿ ಕೆದಕಿ ನೆನಪನ್ನು ತಡಕಿ, ಕಷ್ಟದ ಪ್ರಶ್ನೆಗಳಿಗೆ ತಿಳಿದಷ್ಟನ್ನಾದರೂ ಬರೆಯಬೇಕು. ಯಾವುದೇ ಪ್ರಶ್ನೆಯನ್ನು ಬಿಡದಂತೆ ಉತ್ತರಿಸಬೇಕು. ಕನಿಷ್ಠ ಒಂದು ಸಾಲಿನ ಉತ್ತರವನ್ನಾದರೂ ಬರೆಯಬೇಕು. ಹೀಗೆ ಅಂಕ ಗಳಿಸುವ ಯಾವ ಅವಕಾಶವನ್ನೂ ಬಿಡದಂತೆ ಉತ್ತರಿಸಿ, ಆರಾಮವಾಗಿ ಪರೀಕ್ಷಾ ಕೇಂದ್ರದಿಂದ ಹೊರಬಂದು ಮುಂದಿನ ವಿಷಯಕ್ಕೆ ತಯಾರಿ ನಡೆಸ‌ಬೇಕು.
  5. ಒಂದು ಪರೀಕ್ಷೆ ಚೆನ್ನಾಗಿ ಬರೆದೆನೆಂದು ಬೀಗುತ್ತ ಉಳಿದ ಪರೀಕ್ಷೆಗಳ ಬಗ್ಗೆ ಉಪೇಕ್ಷೆ ಸಲ್ಲದು. ಹಾಗೆಯೇ, ಒಂದು ಪರೀಕ್ಷೆ ಚೆನ್ನಾಗಿ ಬರೆಯಲಿಲ್ಲವೆಂದು ದುಃಖದಿಂದ ಉಳಿದ ಪರೀಕ್ಷೆಗಳಿಗೆ ತಯಾರಿಯ ಕೈ ಬಿಡಬಾರದು. ಎಲ್ಲ ವಿಷಯಗಳನ್ನು ಸಮಾನ ವಾಗಿ ಪರಿಗಣಿಸಿ ಪರೀಕ್ಷೆ ಬರೆೆಯಬೇಕು.

ಪರೀಕ್ಷಾ ಭಯಕ್ಕೆ ಮದ್ದುಂಟು… :

ಕೆಲವು ಮಕ್ಕಳಿಗೆ ಪರೀಕ್ಷಾ ಆತಂಕ ಅಥವಾ ಪರೀಕ್ಷಾ ಭಯ ಅತಿಯಾಗಿ ಕಾಡುವುದುಂಟು. ಅಂತಹವರು ಮುಂಚಿತವಾಗಿ ಮನೆಯಲ್ಲಿಯೇ ಲಘು ಪರೀಕ್ಷೆಯಂತೆ ಮಾದರಿ ಪರೀಕ್ಷೆಗಳನ್ನು, ಅಲ್ಪಾವಧಿಯ ಟೆಸ್ಟ್‌ ಗಳನ್ನು ಬರೆಯಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆದು ಪ್ರಶ್ನೆ ಪತ್ರಿಕೆಯ ಆತಂಕವನ್ನು ದೂರ ಮಾಡಿಕೊಳ್ಳಬೇಕು.

-ಡಾ.ರಘು ವಿ.

ಟಾಪ್ ನ್ಯೂಸ್

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.