ಗುಳೆ ಹೋದ ಹಳ್ಳಿಗಳೂ ನರಕವಾದ ನಗರಗಳೂ


Team Udayavani, Apr 2, 2017, 3:50 AM IST

01-SAPTAHIKA-6.jpg

ಐರಿಶ್‌ ಮೂಲದ ಇಂಗ್ಲಿಷ್‌ ಕವಿ, ಕಾದಂಬರಿಕಾರ, ನಾಟಕಕಾರ ಒಲಿವರ್‌ ಗೋಲ್ಡ್‌ ಸ್ಮಿತ್‌ (1738-1774) ಬರೆದ ಒಂದು ಪ್ರಸಿದ್ಧ ಕವಿತೆಯಿದೆ. The Deserted Village’  (ಗುಳೆ ಹೋದ ಹಳ್ಳಿ) ಎಂಬ ಹೆಸರಿನ ಈ 430 ಸಾಲುಗಳ ಈ ಕವಿತೆ 1770ರಲ್ಲಿ ಪ್ರಕಟವಾದ ತಕ್ಷಣವೇ ಪ್ರಸಿದ್ಧಿಯನ್ನು ಪಡೆಯಿತು. ಇದರಲ್ಲಿ ಗೋಲ್ಡ್‌ಸ್ಮಿತ್‌ ಇಂಗ್ಲೆಂಡಿನ ನಾಶವಾಗುತ್ತಿರುವ ಹಳ್ಳಿಗಳ ಕುರಿತು ಮನಮುಟ್ಟುವಂತೆ ಬರೆದಿದ್ದಾನೆ. ಅವನು ಉದಾಹರಿಸುವ ಆಬರ್ನ್ ಎಂಬ ಕಲ್ಪಿತ ಹೆಸರಿನ ಹಳ್ಳಿ ಅಂದಿನ ಇಂಗ್ಲೆಂಡಿನ ಯಾವುದೇ ಹಳ್ಳಿಯೂ ಆಗಬಹುದು. ಧನಿಕರ ಲೋಭದಿಂದಾಗಿ ಹೇಗೆ ಗ್ರಾಮೀಣ ಸಂಸ್ಕೃತಿ ನಶಿಸಿಹೋಗುತ್ತಾ ಇದೆ ಎನ್ನುವುದರ ಬಗ್ಗೆ ಕವಿ ಮರುಗುತ್ತಾನೆ. ಕಾಮನ್ಸ್‌ ಎಂಬ ಎಲ್ಲರಿಗೂ ಸೇರಿದ ಜಾಗಗಳನ್ನು ಶ್ರೀಮಂತರು ಕಬಳಿಸಿ ಅವುಗಳ ಸುತ್ತ ಬೇಲಿ ಹಾಕಿ ತಮ್ಮ ಭೋಗ್ಯವಸ್ತುಗಳನ್ನಾಗಿ ಮಾರ್ಪಡಿಸುತ್ತಿದ್ದ ಕಾಲ ಅದು. ಈ ಬೇಲಿ ಚಳವಳಿ (Inclosure Movement) ಗ್ರಾಮೀಣ ಪ್ರದೇಶಗಳ ಸಾವಯವ ಜನಜೀವನವನ್ನೇ ಧ್ವಂಸಗೊಳಿಸಿತು. ಅದುವರೆಗೆ ಹೊಂದಾಣಿಕೆಯಲ್ಲಿದ್ದ ಜನರು ಬಡವರು-ಬಲ್ಲಿದರು ಎಂದು ಇಬ್ಭಾಗವಾದರು. ಮುಕ್ತ ಪ್ರದೇಶಗಳು ಶ್ರೀಮಂತರ ಖಾಸಗಿ ಜಾಗಗಳಾದುವುಧಿ- ಶ್ರೀಮಂತರ ಪಾರ್ಕುಗಳಿಗೆ, ಸರೋವರಗಳಿಗೆ, ಮೃಗಯಾ ವಿನೋದಗಳಿಗೆ, ವಾಯುವಿಹಾರಗಳಿಗೆ, ಆಟೋಟಗಳಿಗೆ, ಕುದುರೆ ಸಾಕಣೆಗೆ. ಇಂಗ್ಲೆಂಡಿನ ಸುಖವೂ ದುಃಖವೂ ಆಗಿ ಸದ್ಯವೇ ಬರಲಿದ್ದ ಕೈಗಾರಿಕಾ ಕ್ರಾಂತಿ ಇನ್ನೇನು ಒಂದು ದಶಕ ಮಾತ್ರ ದೂರವಿತ್ತು. ಆಗಲೇ ಹಳ್ಳಿಯ ಜನ ತಮ್ಮ ಹುಟ್ಟೂರುಗಳಲ್ಲಿ ಜಾಗವಿಲ್ಲದೆ ಕೆಲಸ ಹುಡುಕುತ್ತ ನಗರಗಳಿಗೆ ವಲಸೆ ಹೋಗಲು ಸುರುಮಾಡಿದ್ದರು. ಕೆಲವರು ಸಮುದ್ರದಾಚೆಗೂ ತೆರಳುತ್ತಿದ್ದರು. Far, far away, thy children leave the land. ಹಳ್ಳಿಗರ ಕೌಟುಂಬಿಕ ಭದ್ರತೆ ಒಡೆಯಿತು, ಶತಮಾನಗಳಿಂದ ಬಂದ ಅವರ ಕರಕುಶಲ ಕಸುಬುಗಾರಿಕೆಗೆ ಆಘಾತವುಂಟಾಯಿತು. ಜನರು ಇದ್ದಲ್ಲೇ ಪರದೇಶಿಗಳಾಗಿಬಿಟ್ಟರು. ಒಂದು ದೇಶಕ್ಕೆ ಸ್ವಾಸ್ಥ್ಯಕ್ಕಿಂತ ಆರ್ಥಿಕತೆಯೇ ಮುಖ್ಯವಾದಾಗ ಏನಾಗುತ್ತದೆ ಎನ್ನುವುದನ್ನು  ಗೋಲ್ಡ್‌ಸ್ಮಿತ್‌ನ ಕವಿತೆ ತೋರಿಸುತ್ತದೆ. ದೇಶದ ಸ್ವಾಸ್ಥ್ಯ ಇರುವುದು ಹಳ್ಳಿಗಳಲ್ಲಿಯೇ ಎನ್ನುತ್ತಾನೆ ಕವಿ; ಅಲ್ಲಿ ಸುಖ ಸಂತೋಷ, ಸೌಂದರ್ಯ ಸಮಾಧಾನಗಳು ಇರುತ್ತವೆ, ಎಲ್ಲಕ್ಕಿಂತ ಮುಖ್ಯವಾಗಿ ಸಮೂಹ ಜೀವನವಿರುತ್ತದೆ. ಆದರೆ ಸಮಾಜ ಶ್ರೀಮಂತರು, ಬಡವರು ಎಂದು ಒಡೆದಾಗ, ಶ್ರೀಮಂತರ ಹರ್ಷ ವರ್ಧಿಸಿದಂತೆ ಬಡವರದ್ದು ಕ್ಷೀಣಿಸುತ್ತದೆ. The rich man’s joys encrease, the poor’s decay. 

    ಆಬರ್ನ್ನಲ್ಲಿ ಈಗ ಹಳೆ ಜನಜೀವನ ಇಲ್ಲ. ಅದು ಮೊದಲು ಹೇಗಿತ್ತು ಎನ್ನುವುದನ್ನು ಗೋಲ್ಡ್‌ಸ್ಮಿತ್‌ ಕೆಲವು ಉದಾಹರಣೆಗಳೊಂದಿಗೆ ಚಿತ್ರಿಸುತ್ತಾನೆ. ಅಲ್ಲೊಂದು ಚರ್ಚು, ಅದರಲ್ಲೋಬ್ಬ ಪಾದ್ರಿ, ಅವನು ಎಲ್ಲರಿಗೂ ಆಶ್ರಯದಾತನಂತೆ ಇದ್ದ, ಸಾಯುವ ಜೀವಗಳಿಗೆ ಸಾಂತ್ವನ ನೀಡುತ್ತಿದ್ದ, ಅವನ ಮನೆ ಭಿಕ್ಷುಕರಿಗೆ, ನಿವೃತ್ತ ಸೈನಿಕರಿಗೆ ತೆರೆದಿತ್ತು. ಒಂದು ಶಾಲೆಯಿತ್ತು, ಅಲ್ಲೊಬ್ಬ ಸ್ಕೂಲ್‌ ಮಾಸ್ಟರ್‌, ಅವನ ಅಲ್ಪ ಜ್ಞಾನವೇ ಊರವರಿಗೆ ಜ್ಞಾನಭಂಡಾರದ ಹಾಗೆ ಕಾಣಿಸುತ್ತಿತ್ತು. ಒಂದು ಮದ್ಯದ ಅಂಗಡಿಯಿತ್ತು. ಅಲ್ಲಿ ಊರವರೆಲ್ಲ ಬಂದು ಸಂಜೆ ಸೇರುತ್ತಿದ್ದರು, ಅದೊಂದು ಸುಖ ಸಮ್ಮಿಲನದ ತಾಣವಾಗಿತ್ತು. ಇವುಗಳನ್ನೆಲ್ಲ ಗೋಲ್ಡ್‌ಸ್ಮಿತ್‌ ವರ್ಣಿಸುವ ಬಗೆಯೇ ಆಪ್ಯಾಯಮಾನ. ಪ್ರೀತಿಸದೆ ಹಾಗೆ ವರ್ಣಿಸುವುದು ಸಾಧ್ಯವಿಲ್ಲ ಅನಿಸುತ್ತದೆ. ಆದರೆ ಆಬರ್ನ್ನಲ್ಲಿ ಈಗ ಈ ಯಾವುದೂ ಇಲ್ಲ ಎನ್ನುತ್ತಾನೆ. ಇದಕ್ಕೆ ಕಾರಣ ಧನ ಮತ್ತು ದಂಧೆೆ (ವ್ಯಾಪಾರ) ಎಂಬ ಎರಡು ಮೋಹಗಳು ಎನ್ನುತ್ತಾನೆ. ಕವಿತೆಯ ಕೊನೆಗೆ ಕವಿ ಶರಣಾಗುವುದು ಕವಿತೆಗೇ. 

ಕವಿತೆಯೇ ಹೋಗಿ ಜನಕ್ಕೆ ಹೇಳು: 
Teach erring man to spurn the rage of gain; 
Teach him, that states of native strength possest, 
Tho’ very poor, may still be very blest; 
(The Deserted Village)
ಕವಿ ಕವಿತೆಯನ್ನು ಆಶ್ರಯಿಸದೆ ಇನ್ನೇನು ಆಶ್ರಯಿಸಲು ಸಾಧ್ಯ? ಯಾಕೆಂದರೆ ಕವಿತೆಯೆಂದರೆ, ಗೋಲ್ಡ್‌ಸ್ಮಿತ್‌ನ ಮಾತಿನಲ್ಲಿ, guide by which the nobler arts excell. 

    ಆದರೆ, 1770ರ ಈ ಕವಿತೆಯ ಸಂದೇಶವನ್ನು ದೇಶ ತೆಗೆದುಕೊಂಡಿತೇ? ಮುಂದೆ ನಾಲ್ಕೇ ವರ್ಷಗಳಲ್ಲಿ ಗೋಲ್ಡ್‌ಸ್ಮಿತ್‌ ಅಕಾಲಿಕವಾಗಿ ತೀರಿಕೊಳ್ಳುತ್ತಾನೆ. ಅನಂತರದ ದಶಕದಲ್ಲೇ ಸುರುವಾದ್ದು ಇತಿಹಾಸಪ್ರಸಿದ್ಧ ಕೈಗಾರಿಕಾ ಕ್ರಾಂತಿ. ಅದೇನೂ ಥಟ್ಟಂತ ಸುರುವಾದ್ದಲ್ಲ. ನಿಧನಿಧಾನವಾಗಿ ಹಲವು ಹಂತಗಳಲ್ಲಿ ಸುರುವಾಯಿತು, ಬೆಳೆಯಿತು, ಬೆಳೆಯುತ್ತ ಹೋಯಿತು. ಕೈಗಾರಿಕಾ ಕ್ರಾಂತಿಯ ಅವಧಿಯಲ್ಲಿ ಬೆಳೆದ ಕ್ಷೇತ್ರಗಳೆಂದರೆ ನೇಯ್ಗೆ, ಕಬ್ಬಿಣ ಮತ್ತು ಉಕ್ಕು, ಹಾಗೂ ಇದ್ದಿಲು. ಇವು ಬೆಳೆಯಲು ಅನುಕೂಲವಾದುದು ಕಡಿಮೆ ಸಂಬಳಕ್ಕೆ ಧಾರಾಳವಾಗಿ ಸಿಗುತ್ತಿದ್ದ ಕೂಲಿ ಕೆಲಸದವರು. ಹಿಂದೆ ಹಳ್ಳಿ ಹಳ್ಳಿಗಳಲ್ಲಿ ಕುಶಲಕರ್ಮಿಗಳಾಗಿ ಮರ್ಯಾದೆಯಿಂದ ಕೆಲಸ ಮಾಡುತ್ತಿದ್ದವರು ಈಗ ಕೈಗಾರಿಕಾ ಸ್ಥಾವರಗಳಲ್ಲಿ ಕೂಲಿ ಕೆಲಸದವರಾದರು! ಇದು ಸಾಧ್ಯವಾದುದಕ್ಕೆ ಕಾರಣ ಹೊಸ ಹೊಸ ಯಂತ್ರಗಳ ಆವಿಷ್ಕಾರ ಮತ್ತು ಬಿರುಸಿನ ವಾಣಿಜ್ಯ. ಬಡಜನತೆ ಒಂದು ವಿಷ ವರ್ತುಲದಲ್ಲಿ ಸಿಲುಕಿಕೊಂಡಿತು: ಯಂತ್ರಗಳು ಹೆಚ್ಚಾದಂತೆ ಕುಶಲಕರ್ಮ ಹಿಂದಕ್ಕೆ ಸರಿಯಿತು, ಕುಶಲಕರ್ಮ ಹಿಂದಕ್ಕೆ ಸರಿದಂತೆ ಹಳ್ಳಿಗರು ಕೆಲಸ ಹುಡುಕಿ ಪೇಟೆಗೆ ಬರಬೇಕಾಯಿತು, ಹಾಗೂ ಇದು ಕಾರ್ಖಾನೆಗಳಿಗೆ, ಗಿರಣಿಗಳಿಗೆ, ಗಣಿಗಳಿಗೆ ಚೀಪ್‌ ಲೇಬರ್‌ ಒದಗಿಸಿತು. 

ಲಂಕಾಶಯರ್‌, ಬರ್ಮಿಂಗ್‌ಹ್ಯಾಮ್‌ ಮುಂತಾದ ನಗರಗಳ ಹೊರವಲಯಗಳು ಕೈಗಾರಿಕಾ ವಲಯಗಳಾಗಿ ಮಾರ್ಪಟ್ಟವು. ಇಲ್ಲಿನ ಕೆಲಸಗಾರರ ವಸತಿಗಳ ದಾರುಣ ಸ್ಥಿತಿಯ ಕುರಿತಾದ ವಿವರಗಳನ್ನು ಇಂದು ನಾವು ಓದಿದರೆ ಇದು ಸಾಧ್ಯವೇ ಎಂದು ಅಚ್ಚರಿಯಾಗುತ್ತದೆ. ಇದು ಬರಹಗಾರರ ಕಲ್ಪನೆಯಾಗಿರಬೇಕು ಎನಿಸುತ್ತದೆ. ನಿಜ, ಡಿಕೆನ್ಸ್‌ , ಡಿಸ್ರೇಲಿ ಮುಂತಾದವರು ಈ ಕುರಿತು ತಮ್ಮ ಕಾದಂಬರಿಗಳಲ್ಲಿ ಬರೆದಿದ್ದಾರೆ; ಆದರೆ ಕಾದಂಬರಿಕಾರರಲ್ಲದವ ಫ್ರೆಡ್ರಿಕ್‌ ಎಂಗೆಲ್ಸ್‌ನಂಥವರೂ ಬರೆದಿದ್ದಾರೆ: ಫಿಕ್ಷನ್‌ ಮತ್ತು ರಿಯಾಲಿಟಿಯಲ್ಲಿ ವ್ಯತ್ಯಾಸವೇನೂ ಇಲ್ಲ. ಮಿಲಿಟರಿ ಬ್ಯಾರಕ್‌ನಂಥ ವಸತಿ ಸಮುಚ್ಚಯಗಳು, ಒಂದು ಮನೆಗೆ ಎರಡೇ ಕೋಣೆಗಳು, ಪ್ರೈವೆಸಿಗೆ ಅವಕಾಶವೇ ಇಲ್ಲ; ಮಲಮೂತ್ರ ವಿಸರ್ಜನೆ ಬೀದಿಯಲ್ಲೇ; ಕೊಳೆ ಕೊಚ್ಚೆಗಳ ಪ್ರವಾಹ; ಅಷ್ಟು ದೂರಕ್ಕೆ ಬಡಿಯುವ ನಾತ; ನದಿಗಳಲ್ಲಿ ಸ್ವತ್ಛ ನೀರೇ ಇಲ್ಲ. ಆರೋಗ್ಯ ವ್ಯವಸ್ಥೆ, ಮಕ್ಕಳಿಗೆ ಶಾಲೆಗಳು ಎಂಬಿತ್ಯಾದಿ ಪ್ರಶ್ನೆಯೇ ಇಲ್ಲ. ಹೆಂಗಸರು, ಮಕ್ಕಳು ಎಂಬಂತೆ ಎಲ್ಲರೂ ಕಾರ್ಮಿಕರು. ಬಹುಶಃ ಕಾರ್ಮಿಕ ವರ್ಗ ಎಂಬ ಕೆಟಗರಿಯೊಂದು ಸುರುವಾದುದು ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಎಂದು ಕಾಣುತ್ತದೆ. ಹೆಂಗಸರು, ಮಕ್ಕಳು ಇದ್ದಿಲು ಗಣಿಗಳಲ್ಲೂ ಕೆಲಸ ಮಾಡುತ್ತಿದ್ದರು. ನಸುಕಿನಿಂದ ರಾತ್ರಿಯ ತನಕ ಕೆಲಸ. 

ಎಂಗೆಲ್ಸ್‌ ಒಂದು ವಿದ್ಯಮಾನವನ್ನು ಗಮನಿಸುತ್ತಾನೆ: ಇದುವರೆಗೆ ಗಂಡಸರು ಹೊರ ಕೆಲಸಕ್ಕೆ ಹೋಗುವುದು, ಹೆಂಗಸರು ಮನೆಯನ್ನು ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಎಂಬ ಕೌಟುಂಬಿಕ ವ್ಯವಸ್ಥೆ ಈಗ ಒಮ್ಮೆಲೆ ಅದಲು ಬದಲಾಗುತ್ತದೆ. ಈಗ ಹೆಂಗಸರು, ಮಕ್ಕಳು ಕೆಲಸಕ್ಕೆ ಹೋಗುವುದು, ಗಂಡಸರು ಮನೆಯಲ್ಲಿ ಕೂರುವುದು ಎಂದಾಗುತ್ತದೆ; ಯಾಕೆಂದರೆ ಹೆಂಗಸರು, ಮಕ್ಕಳ ಕೂಲಿ ಕಡಿಮೆಯಿದ್ದ ಕಾರಣ ಕೈಗಾರಿಕಾ ಸ್ಥಾವರಗಳಲ್ಲಿ ಬೇಡಿಕೆಯಿರುವುದು ಇವರಿಗೇ ಆಗಿರುತ್ತದೆ. ಗ್ರೆಶಾಮ್ಸ್‌ ಲಾದ ಪ್ರಕಾರ, bad money drives out good. ಅರ್ಥಾತ್‌ ಅಗ್ಗದ ಕೂಲಿಯೇ ಕೂಲಿಯ ಪ್ರಮಾಣವನ್ನು ನಿರ್ಧರಿಸುವುದು. ಹತ್ತೂಂಬತ್ತನೆಯ ಶತಮಾನದ ಎರಡನೆಯ ಅರ್ಧದ ಈ ವಿದ್ಯಮಾನ ಶ್ರೀಮಂತರ ಶ್ರೀಮಂತಿಕೆಯನ್ನೂ ಬಡವರ ಬಡತನವನ್ನೂ ಹೆಚ್ಚಿಸಿತು. ಡಿಸ್ರೇಲಿ (ಮುಂದೆ ಇಂಗ್ಲೆಂಡಿನ ಪ್ರಧಾನಿಯೂ ಆದವನು) ತನ್ನ “ಸಿಬಿಲ್‌’ (1845) ಎಂಬ ಕಾದಂಬರಿಯಲ್ಲಿ ಇದನ್ನು “ಎರಡು ರಾಷ್ಟ್ರಗಳು’ ಎಂದು ಕರೆಯುತ್ತಾನೆ: 

Two nations between whom there is no intercourse and no sympathy; who are ignorant of each other’s habits, thoughts and feelings, as if they were dwellers in different zones or inhabitants of different  planets; who are formed by different breeding, are fed by different food, are ordered by different manners, and are not governed by the same laws.     
THE RICH AND THE POOR.
 (Sybil, or The Two Nations)

ಏನಿದಕ್ಕೆ ಕಾರಣಗಳು? ಆರ್ಥರ್‌ ಬ್ರಯಂಟ್‌ ತನ್ನ English Saga 1840-1940 ಪುಸ್ತಕದಲ್ಲಿ ನೀಡುವ ಕಾರಣಗಳು ಕುತೂಹಲಕರವಾಗಿವೆ: ಅವೆಂದರೆ ಬ್ರಿಟಿಷರು ಬಲವಾಗಿ ನಂಬುವ ವ್ಯಕ್ತಿಸ್ವಾತಂತ್ರ್ಯ ಒಂದು, ಮುಕ್ತ ಮಾರುಕಟ್ಟೆ (laissez faire)  ಎಂಬ ಆಡಮ್‌ ಸ್ಮಿತ್‌ನ ಆರ್ಥಿಕ ಸಿದ್ಧಾಂತ ಇನ್ನೊಂದು. ಜೀತ ವ್ಯಾಪಾರವನ್ನು ಬಹಳ ಹಿಂದೆಯೇ ನಿಷೇಧಿಸಿದ ಬ್ರಿಟನ್‌ ಉದ್ಯಮಗಳ ಆಂತರಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಲು ಇಷ್ಟಪಡಲಿಲ್ಲ. (ಬ್ರಿಟನಿನಲ್ಲಿ ನೆಪೋಲಿಯನ್ನನನ್ನು ಸ್ವಾಗತಿಸಿದವರೂ  ವಿರೋಧಿಸಿದವರೂ ಸ್ವಾತಂತ್ರದ ಹೆಸರಿನಲ್ಲೇ ಹಾಗೆ ಮಾಡಿದರು ಎನ್ನುವುದೊಂದು ವಿಪರ್ಯಾಸ, ಆದರೆ ಸತ್ಯ!) ಇನ್ನು ಮುಕ್ತ ಮಾರುಕಟ್ಟೆ ಆರ್ಥಿಕ ಅಭಿವೃದ್ಧಿಗೆ ಅತ್ಯಗತ್ಯ ಎಂಬ ಸಿದ್ಧಾಂತವನ್ನು ಅದು ನಂಬಿತ್ತು. ಎಲ್ಲವೂ ತನ್ನಿಂತಾನೇ ಸುಧಾರಿಸುತ್ತದೆ ಎಂದು ಆಳುವ ವರ್ಗ ತಿಳಿದುಕೊಂಡಿತ್ತು. ವಾಸ್ತವವಾಗಿ, ಆಳುವ ವರ್ಗಕ್ಕೆ ಕಾರ್ಮಿಕ ವರ್ಗ ಹೇಗೆ ಜೀವಿಸುತ್ತದೆ ಎಂಬುದರ ಪರಿವೆಯೇ ಇದ್ದಹಾಗೆ ಅನಿಸುವುದಿಲ್ಲ. 

ಆದರೂ ಉಚ್ಚ ವರ್ಗದಲ್ಲೇ ಡಿಸ್ರೇಲಿ, ಎಂಗೆಲ್ಸ್‌ , ಆಶ್ಲಿಯಂಥ ಸಂವೇದನಾಶೀಲರೂ ಇದ್ದರು. ಅವರೆಲ್ಲರೂ ಕಾರ್ಮಿಕ ವರ್ಗದ ಹಿತರಕ್ಷಣೆಗೆ ಮುಂದಾದರು ಮತ್ತು ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡಿದರು. ಇನ್ನು ಕಾನೂನಾತ್ಮಕವಾಗಿ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ದೈನಂದಿನ ಕೆಲಸದ ಗರಿಷ್ಠ ಅವಧಿಯನ್ನು ಹತ್ತಕ್ಕೆ ಇಳಿಸಲು, ಮಕ್ಕಳನ್ನು ಮತ್ತು ಹೆಂಗಸರನ್ನು ಗಣಿಕೆಲಸಗಳಿಗೆ ಹಚ್ಚದೆ ಇರುವಂತೆ ಮಾಡಲು, ಕಾರ್ಮಿಕರ ಕನಿಷ್ಠ ವಯೋಮಿತಿಯನ್ನು ನಿರ್ಧರಿಸಲು ನಿಯಮಗಳನ್ನು ತರಲು ಪಾರ್ಲಿಮೆಂಟಿನ ಒಳಗೂ ಹೊರಗೂ ಲಾರ್ಡ್‌ ಆಶ್ಲಿಯಷ್ಟು ದುಡಿದವರು ಆ ಕಾಲದಲ್ಲಿ ಬೇರೊಬ್ಬರು ಇರಲಿಲ್ಲವೆಂದೇ ಹೇಳಬಹುದು. ರಾಜಕೀಯವಾಗಿ ಆಶ್ಲಿ ಒಬ್ಬ ಕನ್ಸರ್ವೇಟಿವ್‌ (ಟೋರಿ) ಆಗಿದ್ದರೂ ಮಾನವೀಯವಾಗಿ ಅವನು ಕಾರ್ಮಿಕವರ್ಗದ ವಕ್ತಾರನಾಗಿಯೇ ಇದ್ದ. ಯಾವ ಸುಧಾರಣೆಯೂ ತನ್ನಿಂತಾನೇ ಆಗುವುದಿಲ್ಲ, ಅದರ ಹಿಂದೆ ಮಾನವೀಯ ಕಾಳಜಿ ಇರಬೇಕಾಗುತ್ತದೆ. ಅದಿಲ್ಲದಷ್ಟೂ ಕಾಲ ಎರಡಾದ ರಾಷ್ಟ್ರ ಒಂದಾಗುವುದಿಲ್ಲ. 

ಕೆ. ವಿ. ತಿರುಮಲೇಶ್‌

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.