ಒಳಿತು ಎಂಬುದು ಕೆಡುಕಿನ ಒಳಗಿನಿಂದಲೇ ಪ್ರಕಟಗೊಳ್ಳುವುದು!

ಉಪನಿಷತ್ತುಗಳ ಹತ್ತಿರದಿಂದ

Team Udayavani, Jun 9, 2019, 6:00 AM IST

c-7

ರೇಖಾಚಿತ್ರ : ಎಂ. ಎಸ್‌. ಮೂರ್ತಿ

ಅದೊಂದು ಕಾಲವಿತ್ತು. ಹಿಂದಣ ಒಂದು ಕಾಲ. ಆಗ ಎಲ್ಲ ತುಂಬ ಚೆನ್ನಾಗಿತ್ತು. ಎಲ್ಲೆಡೆ ಒಳಿತೇ ತುಂಬಿತ್ತು. ಕೆಡುಕು ಎನ್ನುವುದೇ ಇರಲಿಲ್ಲ. ಚಂದಿರನಲ್ಲೂ ಕಲಂಕ ಇರಲಿಲ್ಲವೇನೋ! ಇಂಥದೊಂದು ಕಾಲವಿತ್ತು ಎನ್ನುವುದು ಆ ಕಾಲದಲ್ಲಿ ಉಪನಿಷತ್ತಿನ ಜ್ಞಾನ ಪ್ರಕಟಗೊಂಡಿತು ಎಂಬುದೊಂದು ದೊಡ್ಡ ಬ್ರಾಂತಿ. ಈ ಬ್ರಾಂತಿಯೇ ಒಂದು ರೀತಿಯಲ್ಲಿ ಕೆಡುಕು ಎನ್ನಬಹುದು. ಇಂಥ ಭ್ರಮೆಗಳನ್ನು ಹರಿಯುವುದನ್ನೇ ಉಪನಿಷತ್ತು ಉದ್ದೇಶಿಸಿದೆ. “ಒಳಿತು’ ಎನ್ನುವುದು ಪ್ರಕಟವಾಗುವುದಾದರೆ ಅದು ಕೆಡುಕಿನ ಒಳಗಿನಿಂದಲೇ ಪ್ರಕಟಗೊಳ್ಳುವುದು! ಕೆಡುಕನ್ನು ಒಪ್ಪಿಯೇ, ಒಪ್ಪಿ ಅದನ್ನು ಸೀಳಿಯೇ, ತನ್ನೊಳಗೆ ಇದು ಇತ್ತೇ ಎಂದು ಕೆಡುಕೇ ಪಶ್ಚಾತ್‌ಚಕಿತವಾಗುವಂತೆ ಒಳಿತು ಪ್ರಕಟವಾಗುವುದು. ಅದು ಪ್ರಕಟವಾಗುವುದು ಒಂದು ಧೀರ ಆದರೆ ಯಾತನಾಮಯ ಸನ್ನಿವೇಶದಲ್ಲಿ. ಧೀರ ನಿಲುವನ್ನು ತಳೆದುದಕ್ಕಾಗಿ ಪಟ್ಟ- ಪಡಲೇಬೇಕಾದ- ಯಾತನೆಯು ಸಾರ್ಥಕ ಎಂಬ ಅರಿವೇ ಒಳಿತಿನ ಸ್ವರೂಪ!- ಕಠೊಪನಿಷತ್ತಿನ ಮೊದಲ ಭಾಗವನ್ನೇ ನೋಡಬಹುದು.

ಅದು ಯಜ್ಞಯಾಗಾದಿ ಆಚರಣೆಗಳು ಮೆರೆಯುತ್ತಿದ್ದ ಕಾಲ. ವಾಜಶ್ರವಸ ಎಂಬವನೊಬ್ಬನಿದ್ದ. ದೊಡ್ಡದೊಂದು ಯಾಗವನ್ನು ಏರ್ಪಡಿಸಿದ್ದ. “ವಾಜಶ್ರವಸ’ ಎಂಬ ಹೆಸರೇ ಯಜ್ಞಗಳಲ್ಲಿ ದಾನಮಾಡಿ ಪ್ರಸಿದ್ಧನಾದವನು ಎಂಬರ್ಥವನ್ನು ಸೂಚಿಸುತ್ತದೆ. ಪ್ರಸಿದ್ಧನೇನೋ ಹೌದು. ಆದರೆ, ಮುದಿ ಹಸುಗಳನ್ನೂ ಹಾಲು ಕರೆಯದ ಹಸುಗಳನ್ನೂ ಅಂದರೆ ದಾನಯೋಗ್ಯವಲ್ಲದ ಹಸುಗಳನ್ನು ಈತ‌ ದಾನವೀಯುತ್ತಿದ್ದ. ಇಂಥ ಹಸುಗಳನ್ನು ಯಾವುದೋ ಆಸೆ; ದಾಕ್ಷಿಣ್ಯಗಳಿಂದ ದಾನ ಸ್ವೀಕರಿಸುವವರು, ಇದ್ದರು! ಅಲ್ಲಿ ಜನ ಸೇರಿದ್ದರು. ಆದರೆ, ಯಾರೂ ಏನೂ ಮಾತೆತ್ತದೆ ಎಲ್ಲವೂ ಸರಿ ಇದೆ ಎಂಬಂತೆ ಎಲ್ಲವೂ ನಡೆಯುತ್ತಿತ್ತು ! ತಿಳಿಯದೆ ಮಾಡಿದ ತಪ್ಪು-ಪ್ರಮಾದ. ತಿಳಿದಾಗ ಅದನ್ನು ಸರಿಪಡಿಸಿಕೊಳ್ಳಬಹುದು. ತಪ್ಪು-ಸರಿಗಳ ಈ ತಿದ್ದುಪಾಟುಗಳಿಂದಲೇ ಬದುಕು ಪ್ರಯೋಗಾತ್ಮಕವಾಗಿ ಮುನ್ನಡೆಯುವುದು. ಆದರೆ, ತಿಳಿದು ಮಾಡಿದ-ಮಾಡುತ್ತಿರುವ- ತಪ್ಪು? ಈ ಎಚ್ಚರಗೇಡಿತನ, ಈ ಜಡತೆ, ಇಳಿಜಾರಿನಲ್ಲಿ ಯಾರ-ಯಾವ ನೆರವೂ ಬೇಕಿಲ್ಲದೆ ತಾನಾಗಿ ಚಕ್ರ ಉರುಳುತ್ತಿರುವಂಥ ಯಾಂತ್ರಿಕ-ಪ್ರಾಕೃತ-ನಿರ್ಭಾವುಕ ಸ್ಥಿತಿ? ಇದು ಸಂಸ್ಕೃತಿಯ ಅವನತಿಯ ಸೂಚನೆ. ಇಂಥ ಜಡ್ಡುಗಟ್ಟಿದ ಸ್ಥಿತಿಯು ಎಲ್ಲ ತಿಳುವಳಿಕೆಗಳನ್ನೇ ಪ್ರಶ್ನಾರ್ಹವಾಗಿ ಮಾಡಿ ಬಿಡುತ್ತದೆ.

ಆದರೆ, ಅಲ್ಲೇ ಸಂಸ್ಕೃತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳನ್ನೆಲ್ಲ ಬಿಡುಗಣ್ಣಾಗಿ ನೋಡುತ್ತಿದ್ದ ಹುಡುಗನೊಬ್ಬನಿದ್ದ. ಅವನು “ನಚಿಕೇತ’. ಯಜ್ಞದ ನೇತಾರನಾಗಿದ್ದ ಸ್ವಯಂ ವಾಜಶ್ರವಸನ ಮಗ. ಇದನ್ನೆಲ್ಲ ನೋಡುತ್ತಿದ್ದಂತೆ- ನಚಿಕೇತನಲ್ಲಿ “ಶ್ರದ್ಧೆ’ ಕುಡಿಯೊಡೆಯಿತು ಎಂದು ಮಾರ್ಮಿಕವಾಗಿ ಹೇಳಿತು ಉಪನಿಷತ್ತು. ತಂ ಹ ಶ್ರದ್ಧಾ—ವಿವೇಶ. “ಆವಿವೇಶ’ ಎಂದರೆ ಆಳವಾಗಿ ಒಳಹೊಕ್ಕಿತು- ಒಳಗನ್ನೆಲ್ಲ ಆವರಿಸಿತು ಎಂಬರ್ಥವಾದರೂ “ಶ್ರದ್ಧೆ’ಯು ನಮ್ಮ ಸ್ವಭಾವ ಸಂಬಂಧಿಯಾಗಿ ತೀರ ಆಂತರಿಕವಾದುದರಿಂದ ಶ್ರದ್ಧೆಯ ಜಾಗೃತಿ ಎಂದರೆ ಒಳಗಿನ ಜಾಗೃತಿ. ಅಂತಃಕರಣದ ಜಾಗೃತಿ. ಹೃದಯ ಎಚ್ಚರಗೊಂಡ ಗಳಿಗೆ. ಈ ಗಳಿಗೆಗಾಗಿ ಉಪನಿಷತ್ತು ಬಹುಕಾಲ ಕಾದುಕೊಂಡಿದ್ದಿರಬೇಕು! ಇದು ಉಪನಿಷತ್ತು ಹುಟ್ಟಿಕೊಂಡ ಗಳಿಗೆಯೂ ಹೌದು.

ನಡೆಯುತ್ತಿರುವ ವಿಪರ್ಯಾಸಗಳಿಗೆ-ಅಪಸವ್ಯಗಳಿಗೆ- ರೂಢಿಜಡ ಚಟುವಟಿಕೆಗಳಿಗೆ ನಮ್ಮನ್ನು ತನ್ನತ್ತ ಸೆಳೆದುಕೊಂಡು ಮೂಢರನ್ನಾಗಿಸುವ ಶಕ್ತಿ ಇರುವಂತೆಯೇ ನಮ್ಮೊಳಗಿನ ನೈಜ ಶ್ರದ್ಧೆಯನ್ನು ಉದ್ದೀಪಿಸುವ ಶಕ್ತಿಯೂ ಇದೆ. ಇದು ವಿಶೇಷ. ಬದುಕು ನಮಗೆ ಕಾಣದಂತೆ ನಮ್ಮ ಮೇಲೇ ಪ್ರಯೋಗ ನಡೆಸುತ್ತಿದೆಯೇನು?

ಶ್ರದ್ಧೆಯ ಜಾಗೃತಿ ಎಂದರೇನೆಂದು ಉಪನಿಷತ್ತು ಬೇರೆ ಮಾತುಗಳಲ್ಲಿ ವಿವರಿಸಹೊರಡಲಿಲ್ಲ. ನಚಿಕೇತನ ಹೃದಯವು ಎಚ್ಚರಗೊಂಡ ಪರಿಣಾಮವನ್ನು ಎರಡೇ ಎರಡು ಮಾತುಗಳಲ್ಲಿ ಅದು ನಮ್ಮ ಮುಂದಿಡುವುದು. ಮೊದಲ ಮಾತು ಇದು. “”ಸೋ—ಮನ್ಯತ’- ಅಂದರೆ ಹುಡುಗನಲ್ಲಿ ಅವನದ್ದೇ ಆದ ಮನಸ್ಸೊಂದು ಅರಳಿಕೊಂಡಿತು. ಅಲ್ಲಿ ಅವನದೇ ಚಿಂತನೆಯೊಂದು ರೂಪುಗೊಳ್ಳುತ್ತಿತ್ತು. ಆ ಚಿಂತನೆಯ ದಿಕ್ಕು ಮಾತ್ರ ಅಪೂರ್ವವಾಗಿತ್ತು. ಯಾರೂ ಊಹಿಸಲಾಗದಂತೆ ಇತ್ತು. ಹೇಗೆಂದರೆ- ನಚಿಕೇತ ತನ್ನ ತಂದೆಯೊಡನೆ ಹೀಗೆ ಕೇಳಿದನಂತೆ: “ತಾತ, ಕಸ್ಮೆ ಮಾಂ ದಾಸ್ಯಸಿ?’ ಅಂದರೆ- ತಂದೆ, ನನ್ನನ್ನು ಯಾರಿಗೆ ದಾನವೀಯುವೆ? ಯಾರ ಕೈಗೆ ನನ್ನನ್ನು ಒಪ್ಪಿಸುವೆ? ಇದು ಎರಡನೆಯ ಮಾತು. ಇದು ಜೀವಾಳದ ಮಾತು. ಅರ್ಥಗಳ ಹೆದ್ದೆರೆಗಳನ್ನೇ ಎಬ್ಬಿಸಬಲ್ಲ ಸುಳಿಗಾಳಿಯಂಥ ಮಾತು. ಸುಪ್ತವಾಗಿರುವ ಭಾವಗಳನ್ನು ಮೀಟಬಲ್ಲ ಮಾತು- ಹಾಗೆ ಕೇಳಬಲ್ಲವರಿಗೆ!

ಇದುವರೆಗೆ ಸುಪ್ತವಾಗಿದ್ದ ಒಳಗಿನ ಶ್ರದ್ಧೆಯು ಎಚ್ಚರಗೊಳ್ಳುವುದೆಂದರೆ ಇದುವರೆಗಿನ ಅನುಭವಕ್ಕಿಂತ ಬೇರೆಯಾಗಿ ಇನ್ನೊಂದನ್ನು, “ಇಹ’ವನ್ನು ಮಾತ್ರವಲ್ಲ “ಇಹ’ಕ್ಕಿಂತ ಬೇರೆಯಾಗಿ “ಪರ’ವನ್ನು ಕೂಡ ಒಪ್ಪಲು ಸಜ್ಜಾದಂತೆ. “ಪರ’ದ ಬಗ್ಗೆ ಎಚ್ಚರಗೊಂಡಂತೆ! ಸುಪ್ತ ಮನಸ್ಸಿನ ಜಾಗೃತಿಗೂ “ಪರ’ದ ಕಾಣ್ಕೆಗೂ ನಿಕಟ ಸಂಬಂಧವಿದೆ. “ಇಹ’ ಜೀವನವು ಮಾತ್ರ ನಿಜವೆಂದು ತೋರಿಬರುವುದಕ್ಕೂ, ಮನಸ್ಸಿನ ಮೇಲ್ಪದರ ಅಥವಾ ಮನಸ್ಸಿನ ಒಂದು ಭಾಗ ಮಾತ್ರ ಎಚ್ಚರವಾಗಿರುವುದಕ್ಕೂ ಸಂಬಂಧವಿದೆ. ಪರದ ಕಾಣ್ಕೆಯೇ ಶ್ರದ್ಧೆಯ ಜಾಗ್ರತಿ.

ಇಹಜೀವನವು ಎಷ್ಟು ಮುಖ್ಯವೆಂದುಕೊಂಡರೂ ಇಲ್ಲಿ ತೋರಿಕೆಯ ಗುಣ, ಆಡಂಬರ, ಅಸಹಜತೆ, ನಿಜವನ್ನು ಮರೆಮಾಚುವ ಪ್ರವೃತ್ತಿ, ಬಹುಮಂದಿ ಒಪ್ಪಿದ್ದು ಸತ್ಯವೆನ್ನುವ ಧೋರಣೆ. ಆದುದರಿಂದ ಮಂದಿಯನ್ನು ಒಪ್ಪಿಸುವ ನಾಟಕೀಯತೆ, ಇನ್ನೊಬ್ಬರ ಮೇಲೆ ದಬ್ಟಾಳಿಕೆ ನಡೆಸುವುದು ನಿಜಕ್ಕೂ ದೌರ್ಬಲ್ಯವಲ್ಲದೆ, ಧೈರ್ಯವಲ್ಲ ಎಂದು ತಿಳಿಯಲಾಗದ ಅಸೂಕ್ಷ್ಮಗಳೆಲ್ಲ ತುಂಬಿಕೊಂಡಿವೆ. ಆದುದರಿಂದಲೇ ಇದಕ್ಕಿಂತ ಗುಣಾತ್ಮಕವಾಗಿ ಪೂರ್ತಿ ಭಿನ್ನವಾದ ಜೀವನವೊಂದು- ನಮ್ಮದೇ ಆದ ಜೀವನವೊಂದು- ಇರಲೇಬೇಕು. ಇದ್ದರೆ, ಅದು ಬರಿಯ ಊಹೆಯಾಗಿ ಮಾತ್ರವಲ್ಲ, ಅನುದಿನದ ಅನುಭವವಾಗಿ ಕಾಣಿಸಬೇಕು. ಹಾಗೆ ಕಾಣಿಸಬೇಕಾದರೆ ಮನುಷ್ಯ ಜೀವದ ಈ ಮನೋದೈಹಿಕ ಯಂತ್ರದಲ್ಲಿ ಇನ್ನೊಂದು ಬಾಗಿಲು ತೆರೆಯಬೇಕು. ತೆರೆಯಬೇಕಾದರೆ ಇಹದ ಮೇಲಿನ ಏಕೈಕ ನಂಬಿಕೆ ಕಳಚಬೇಕು. ಒಂದು ನಂಬಿಕೆ ಕಳಚದೆ, ಕನಿಷ್ಠ ಸಂದೇಹಿಲ್ಪಡದೆ ಇನ್ನೊಂದು ಬಾಗಿಲು ತೆರೆಯದು. ಶ್ರದ್ಧೆ ಎಚ್ಚರಗೊಳ್ಳುವುದೆಂದರೆ ಆ ಇನ್ನೊಂದು ಬಾಗಿಲು ತೆರೆದಂತೆ.

ಬದುಕಿನ ವಿಪರ್ಯಾಸಗಳಿಗೂ ಅದರಿಂದ ನಾವು ಕಂಗೆಡುವುದಕ್ಕೂ ನೋವನ್ನುಣ್ಣುವುದಕ್ಕೂ ನಮ್ಮ ಮನಸ್ಸು ಏನಿದರೆಲ್ಲದರ ಅರ್ಥವೆಂದು ಹತಾಶವಾಗಿ ಒಳಮುಖವಾಗುವುದಕ್ಕೂ ಒಂದು ಸಂಬಂಧವಿದೆ. ಮನಸ್ಸು ಒಳಮುಖವಾಗುವುದಕ್ಕೂ ಅದುವರೆಗೆ ಸುಪ್ತವಾಗಿದ್ದದ್ದು ಎಚ್ಚರಗೊಳ್ಳುವುದಕ್ಕೂ ಒಂದು ಸಂಬಂಧವಿದೆ. ಸುಪ್ತವು ಎಚ್ಚರಗೊಳ್ಳುವುದಕ್ಕೂ ಪರದ ಕಾಣೆRಗೂ ಸಂಬಂಧವಿದೆ. ಇದನ್ನೊಪ್ಪಿದರೆ, ಬದುಕಿನಲ್ಲಿ ನಡೆಯುವುದೆಲ್ಲವೂ- ಮುಚ್ಚಿದ ಬಾಗಿಲು ತೆರೆಯುವುದರತ್ತಲೇ ತುಡಿಯುವ ಒಂದಲ್ಲೊಂದು ಬಗೆಯ ಕ್ರಿಯಾ ಸರಣಿಗಳಂತೆ ಕಾಣಿಸುತ್ತವೆ. ಆದರೆ ಹೀಗೆಂದು ತಿಳಿಯುವುದು ಶ್ರದ್ಧೆಯು ಎಚ್ಚರಗೊಳ್ಳುವ ಸಂದರ್ಭದಲ್ಲಿ ಮಾತ್ರ. ಆದುದರಿಂದಲೇ ಶ್ರದ್ಧೆಯು ಜಾಗ್ರತಗೊಂಡವರು “ಇಹ’ಕ್ಕೆ ನಿಷ್ಠರಾದ ವ್ಯಕ್ತಿಗಳೊಡನೆ ವಿಶಿಷ್ಟವಾಗಿ ವರ್ತಿಸುವರು. ಇಹವನ್ನು ತಮಗಿಂತಲೂ ಹೆಚ್ಚು ಒಪ್ಪಿದಂತೆ ಕಾಣಿಸುವರು. ತಮ್ಮ ಮಾತೇ ನಡೆಯಬೇಕೆಂದುಕೊಂಡವರ ಯಜಮಾನಿಕೆಗೆ ವಿಧೇಯರಾಗಿರುವರು. ನಾನು ನಿಮ್ಮ ಅಧೀನ, ನಿಮ್ಮ ವಸ್ತುವಿದ್ದಂತೆ, ನಿಮಗೆ ಕಂಡಂತೆ ವಿನಿಯೋಗಿಸಬಹುದೆನ್ನುವರು. ವಿರೋಧದ ಮಾತನ್ನು ಸಾಮಾನ್ಯವಾಗಿ ಆಡಲಾರರು. ಅವರ ದೃಷ್ಟಿ ಎಲ್ಲವೂ ಈತನ ಒಳಗಿನ ಬಾಗಿಲು ಎಂದು ತೆರೆದೀತು ಎನ್ನುವುದರ ಕಡೆಗೇ ಇರುವುದರಿಂದ ಈ ಬಗೆಯ ನಡೆ! ದೇವರು, ಜೀವಿಯ ಒಳಗಿರುವುದು ಹೀಗೆಯೇ ಎಂದು ಅನ್ನಿಸುವುದು! ಪರವನ್ನು ಒಪ್ಪಿದವನ ಇಹದ‌ ನಡವಳಿಕೆ ಇಹವನ್ನು ಮಾತ್ರ ಒಪ್ಪಿದವನ ನಡೆಗಿಂತ ಭಿನ್ನವಾಗಿರುತ್ತದೆ. ಭಿನ್ನವಾಗಿರುವುದರಿಂದಲೇ ಇಹದ ಯಜಮಾನ ಈ ನಡವಳಿಕೆಗೆ ತುಸುವಾದರೂ ಚಕಿತನಾಗಬಹುದು, ಇಲ್ಲಿನ ವಿಪರ್ಯಾಸಗಳಿಗೆ ಕಂಗೆಟ್ಟು ತನ್ನ ಮನಸ್ಸು ಒಳಮುಖವಾದಂತೆ; ತನ್ನ ಈ ಬಗೆಯ ನಡವಳಿಕೆಯೇ ವಿಪರ್ಯಾಸವಾಗಿ ಕಂಡು ಈತನ ಮನಸ್ಸೂ ಒಳಮುಖವಾಗಬಹುದು ಎಂಬ ನಿರೀಕ್ಷೆ-ನಿರೀಕ್ಷೆಯಲ್ಲದ ನಿರೀಕ್ಷೆ- ಇರುತ್ತದೆ. ಇಲ್ಲವಾದರೆ, ನನ್ನನ್ನು ಯಾರಿಗೆ ಕೊಡುತ್ತಿ ಎಂದು ಯಾರಾದರೂ ಕೇಳುವುದುಂಟೆ? ಈ ಹುಡುಗನೇಕೆ ಕೇಳುತ್ತಿದ್ದಾನೆ? ಏನು ಇದರರ್ಥ? ಎಂದು ವಾಜಶ್ರವಸನಿಗೆ ಕುತೂಹಲವಾದರೂ ಉಂಟಾಗಬಾರದೆ?

ಪರವನ್ನು ಒಪ್ಪಿದವನಿಗೆ ಅಂಜಿಕೆ ಇಲ್ಲ. ಅದು ತೋರುಗಾಣಿಕೆಯ ಬದುಕೂ ಅಲ್ಲ. ವಾಜಶ್ರವಸನಿಗೆ ವಿಧೇಯನಂತೆ ತೋರಿಸಿಕೊಂಡದ್ದು- ತೋರಿಕೆಯಲ್ಲ. “ಇಹ’ದಂತೆ “ಪರ’ವೂ ನಿಜವಾಗಿರುವುದರಿಂದ, ಒಂದು ರೀತಿಯಲ್ಲಿ ಇಹಕ್ಕಿಂತಲೂ ನಿಜವಾಗಿರುವುದರಿಂದ, “ಇಲ್ಲಿ’ ವಿರೋಧಿಸದೆ ವಿಧೇಯನಂತಿರುವುದು “ಅಲ್ಲಿ’ ವಿರೋಧಿಯ ಪರವಾಗಿ ವಿಶ್ವಶಕ್ತಿಯಲ್ಲಿ ಪ್ರಾರ್ಥನೆ ಸಲ್ಲಿಸಿದಂತೆ ಆಗುವುದು! ಪ್ರಾರ್ಥನೆಯು ತೋರಿಕೆಯಾಗಬಾರದು. ಆದುದರಿಂದ ವಿಧೇಯತೆಯೂ ತೋರಿಕೆಯಲ್ಲ. ಇಹವನ್ನು ಮಾತ್ರ ಒಪ್ಪಿ ಇಲ್ಲಿ ತೋರಿಸುವ ವಿಧೇಯತೆಯು ಒಂದೋ ಅಂಜಿಕೆ; ಅಥವಾ ತೋರಿಕೆ; ಅಥವಾ ಸಮಯಸಾಧಕತೆ ಅಥವಾ ಹೆಚ್ಚೆಂದರೆ ಸ್ವಾಮಿನಿಷ್ಠೆ. ಮುಗ್ಧತೆಯಂತೂ ಅಲ್ಲ. ಶ್ರದ್ಧೆಯು ಎಚ್ಚೆತ್ತು ಪರವನ್ನು ಒಪ್ಪಿದವನು ಮುಗ್ಧ ! ಈ ಮುಗ್ಧತೆಯೊಡನೆ ಹೇಗೆ ವ್ಯವಹರಿಸಬೇಕೆಂಬುದು ಕರ್ಮಕಾಂಡ ಪರಾಯಣರಾದ worldly wise ಮಂದಿಗೆ ಇನ್ನೂ ತಿಳಿದು ಬರದ ಕೌಶಲವೆನ್ನುದು ಉಪನಿಷತ್ತಿನ ಒಳನೋಟ.

ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.