ಬಾಲಿಯಲ್ಲಿ ಅಮ್ಮನಿಗೆ ಪೂಜೆ

Team Udayavani, May 12, 2019, 6:00 AM IST

ಇಂಡೋನೇಶ್ಯಾದ ಪ್ರಸಿದ್ಧ ದ್ವೀಪ ಬಾಲಿಯಲ್ಲಿ, ಭತ್ತದ ಗದ್ದೆ ನೋಡುತ್ತ ಹಳ್ಳಿಗಳನ್ನು ಸುತ್ತುವಾಗ, ದೇಗುಲಗಳನ್ನು ಸಂದರ್ಶಿ ಸುವಾಗ ಅಲ್ಲಲ್ಲಿ ಜನರು ಪೂಜಿಸುತ್ತಿದ್ದ ಶಿಲ್ಪವೊಂದು ಕಂಡು ಬಂತು. ನಂತರ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದ ಉಬುಡ್‌ನ‌ಲ್ಲಿ ಕಲಾವಿದರ ಕೆತ್ತನೆ, ಚಿತ್ರಗಳಲ್ಲಿಯೂ ಮತ್ತದೇ ವ್ಯಕ್ತಿ. ಅದರಲ್ಲಿದ್ದುದು ಮಹಿಳೆ ಮತ್ತು ಆಕೆಯನ್ನು ಸುತ್ತುವರಿದ ವಿವಿಧ ವಯಸ್ಸಿನ ಮಕ್ಕಳು. ಬೆನ್ನ ಮೇಲೆ, ಕಂಕುಳಲ್ಲಿ, ಕೈ-ಕಾಲ ಬಳಿ, ಎದೆ ಹಾಲು ಚೀಪುತ್ತ ಹೀಗೆ ಎಲ್ಲೆಡೆ ಮಕ್ಕಳು! ಆಶ್ಚರ್ಯದಿಂದ ಕಡೆಗೊಮ್ಮೆ ಅಲ್ಲಿದ್ದ ಕಲಾವಿದವರ‌ನ್ನು ವಿಚಾರಿಸಿದಾಗ, “ಅದು ಅಮ್ಮ ಬ್ರಾಯುತ್‌! ಬಾಲಿಯ ಗ್ರಾಮೀಣ ಮಹಿಳೆ. ಆಕೆಗಿಲ್ಲಿ ಪೂಜೆ ಸಲ್ಲುತ್ತದೆ’ ಎಂದು ವಿವರಿಸಿದ.

“ಬ್ರಾಯುತ್‌ಎಂಬುದು ಬಹುಮಕ್ಕಳ ಹೊರೆ ಹೊತ್ತ’ ಎಂಬ ಅರ್ಥ ಬರುವ ಕುಟುಂಬದ ಹೆಸರು. ಈ ಕುಟುಂಬದ ದಂಪತಿ, ಪಾನ್‌ ಮತ್ತು ಮೇನ್‌ ಬ್ರಾಯುತ್‌ (ಅಪ್ಪ-ಅಮ್ಮ).ಬಡ ಕುಟುಂಬ, ಹೊಟ್ಟೆಗೆ ಬಟ್ಟೆಗೆ ಕಷ್ಟಪಡುವ ಪರಿಸ್ಥಿತಿ. ಆದರೆ, ಮನೆ ತುಂಬಾ ಮಕ್ಕಳು, ಒಂದೆರಡಲ್ಲ, ಹದಿನೆಂಟು! ಮಕ್ಕಳನ್ನು ಹೆರುತ್ತ ಅವರನ್ನು ಸಾಕುವ ಸಂಪೂರ್ಣ ಹೊಣೆ ಹೊತ್ತ ಅಮ್ಮ ಬ್ರಾಯುತ್‌ ಗದ್ದೆಯ ಜತೆ ನೇಯುವ ಕೆಲಸವನ್ನೂ ಮಾಡುತ್ತಾಳೆ. ಇತ್ತ ಅಪ್ಪನನ್ನು ಅಂಗಳ ಗುಡಿಸಿ, ಪೂಜೆಗೆ ಬೇಕಾದ ವಿಶೇಷ ಖಾದ್ಯ ಸಿದ್ಧಪಡಿಸುವಂತೆ ಮನ ಒಲಿಸುತ್ತಾಳೆ. ಹೀಗೆ ಬಡತನ, ಕಷ್ಟವಿದ್ದರೂ ಕಂಗೆಡದೆ ಪತಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಗೆ-ಹೊರಗೆ ದುಡಿದು, ಮನೆಯಲ್ಲಿ ಶಾಂತಿ ಕಾಪಾಡಿಕೊಂಡು ತನ್ನ ಹದಿನೆಂಟು ಮಕ್ಕಳನ್ನು ಒಳ್ಳೆಯ ಸ್ಥಿತಿಗೆ ತರಲು ಅಮ್ಮ ಶ್ರಮಿಸುತ್ತಾಳೆ.ಆಕೆಯ ಶಿಸ್ತು ಮತ್ತು ಪ್ರೀತಿಯ ಕಣ್ಗಾವಲಲ್ಲಿ ಬೆಳೆದು ಮಕ್ಕಳು ದೊಡ್ಡವರಾಗುತ್ತಾರೆ. ತಮ್ಮದೇ ಕುಟುಂಬದ ನಾಟಕ ತಂಡವನ್ನು ಕಟ್ಟಿ ಬರೊಂಗ್‌ ನಾಟಕವನ್ನು ಪ್ರದರ್ಶಿಸುತ್ತಾರೆ. ಬರೊಂಗ್‌ ನಾಟಕವೆಂದರೆ ಒಳ್ಳೆಯ ಶಕ್ತಿ ಕೆಟ್ಟದ್ದನ್ನು ಮಣಿಸುವ ವಸ್ತುವುಳ್ಳದ್ದು.ಹೀಗೆ ಮಕ್ಕಳು ಶ್ರೀಮಂತರಾಗಿ, ಸಮಾಜದಲ್ಲಿ ಗಣ್ಯರೆನಿಸಿಕೊಂಡಾಗ ಅಮ್ಮನಿಗೆ ಹೆಮ್ಮೆ ಮತ್ತು ಸಂತೋಷ. ಆದರೆ ತನ್ನ ಕರ್ತವ್ಯ ಮುಗಿಯಿತೆಂದು ಆಕೆ ಪತಿಯೊಂದಿಗೆ ಈ ಲೌಕಿಕ ಜಗತ್ತಿನ ಮೋಹ ತೊರೆದು ವಾನಪ್ರಸ್ಥಕ್ಕೆ ತೆರಳುತ್ತಾಳೆ.

ಅಮ್ಮಂದಿರ ಪ್ರತಿನಿಧಿ
ಸಾಮಾನ್ಯ ಮಹಿಳೆಯೊಬ್ಬಳ ಜೀವನ ಕತೆ ಎಂದು ಭಾಸವಾದರೂ ಬಾಲಿಯ ಜನರಿಗೆ ಆಕೆ ಎಲ್ಲ ಅಮ್ಮಂದಿರ ಸಂಕೇತ. ಪುರುಷ ಪ್ರಧಾನ ಸಮಾಜವಾದ ಬಾಲಿಯಲ್ಲಿ ಮಳೆ ಅಡಿಗೆ-ಮನೆ-ಮಕ್ಕಳು ಎಂಬ ಪಾರಂಪರಿಕ ಪಾತ್ರವನ್ನು ನಿರ್ವಹಿಸುತ್ತಾ ಬಂದಿದ್ದಾಳೆ. ಮಕ್ಕಳು ಮನೆಯ ಸಂಪತ್ತು; ಹಾಗಾಗಿ, ಹೆಚ್ಚಿದ್ದಷ್ಟೂ ಒಳ್ಳೆಯದು ಎನ್ನುವ ನಂಬಿಕೆಯೂ ಜಾರಿಯಲ್ಲಿದೆ.ಇಂತಹ ಪರಿಸ್ಥಿತಿಯಲ್ಲಿ ಬಡ ಕುಟುಂಬದವಳಾದರೂ ಮೇನ್‌ ಬ್ರಾಯುತ್‌ ಕಂಗೆಡಲಿಲ್ಲ. ತನ್ನ ಕೆಲಸಗಳ ಜತೆ ಮಕ್ಕಳಿಗಾಗಿ ಪುರುಷರ ಕೆಲಸವನ್ನೂ ಮಾಡಿದಳು, ಬಿಡುವಿಲ್ಲದೇ ದುಡಿದಳು.ಗಂಡನ ಮೇಲಷ್ಟೇ ಹೊಣೆ ಹೊರಿಸಲಿಲ್ಲ, ಬದಲಾಗಿ ತಾನೇ ಹೊತ್ತಳು. ಕುಟುಂಬ ತೊರೆದು ಹೋಗದೇ ಎಲ್ಲವನ್ನೂ ಎದುರಿಸಿದಳು.

ಯಾರಲ್ಲದಿದ್ದರೂ ತನ್ನನ್ನು ದೈವ ಕಾಪಾಡುತ್ತದೆ ಎಂಬ ಅಚಲ ನಂಬಿಕೆಯೊಂದೇ ಆಕೆಗಿದ್ದ ಆಧಾರ. ಹಾಗಾಗಿ, ನಿತ್ಯವೂ ಪೂಜೆ ಮಾಡಿ ಕೆಲಸ ಮಾಡುತ್ತಿದ್ದಳು. ಮಕ್ಕಳ ಅಭ್ಯುದಯ ಆಕೆಯ ಏಕೈಕ ಗುರಿಯಾಗಿತ್ತು. ಅದನ್ನು ನಿಷ್ಠೆಯಿಂದ ಮಾಡಿ ಯಶಸ್ಸು ಪಡೆದಳು. ತನ್ನ ಕರ್ತವ್ಯ ಮುಗಿಸಿದ ನಂತರ ಮಕ್ಕಳಿಂದ ಏನನ್ನೂ ಅಪೇಕ್ಷಿಸದೇ ಯೋಗಸಮಾಧಿ ಪಡೆದದ್ದು ಎಲ್ಲರಿಗೂ ಆದರ್ಶ ಎಂದು ಅಲ್ಲಿನವರು ನಂಬುತ್ತಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದೂ ಧರ್ಮೀಯರ ಜತೆ ಬೌದ್ಧಧರ್ಮೀಯರೂ ಈಕೆಯನ್ನು ಮಕ್ಕಳನ್ನು ಕಾಪಾಡುವ ಹಾರಿತಿ ಎಂಬ ದೇವತೆಯನ್ನಾಗಿ ಪೂಜಿಸುತ್ತಾರೆ.

ಕೆ. ಎಸ್‌. ಚೈತ್ರಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ಪ್ರಸಿದ್ಧ ಕತೆಗಾರ ಕೆ. ಸದಾಶಿವರು "ನಲ್ಲಿಯಲ್ಲಿ ನೀರು ಬಂದಿತು' ಎಂಬ ಕತೆ ಬರೆದಿದ್ದರು. "ಹಳ್ಳಿ ಮಾರ್ಗದಲ್ಲಿ ಬಸ್ಸು ಬಂದಿತು' ಎಂಬ ಶೀರ್ಷಿಕೆಯಲ್ಲೇನಾದರೂ...

  • ಯಾಂತ್ರಿಕ ಜೀವನ', "ಕಾಂಕ್ರೀಟ್‌ ಕಾಡು' ಎಂಬ ಹುರುಳಿಲ್ಲದ ಅಪವಾದಗಳನ್ನು ಹೊತ್ತಿರುವ ಮುಂಬಯಿಯಲ್ಲಿ ಪಾರ್ಕುಗಳಿಗೇನೂ ಕೊರತೆ ಯಿಲ್ಲ. ನಮ್ಮ ಬಾಂದ್ರಾ ಪರಿಸರದಲ್ಲೇ-...

  • Trying to use words, and every attempt Is a wholly new start, and a different kind of failure ಕತೆ ಬರೆಯುವ ಪ್ರತಿಯೊಬ್ಬನಿಗೂ ಇದು ಗೊತ್ತಿರುತ್ತದೆ, ಆದರೆ ಟಿ. ಎಸ್‌. ಎಲಿಯಟ್‌ಗಿಂತ ಹೆಚ್ಚು ಯಾರಿಗೆ ತಾನೆ ಗೊತ್ತಿರುತ್ತದೆ?...

  • ರಬ್ಬಿಲ್‌ ಅವ್ವಲ್‌ ತಿಂಗಳ ಹದಿನಾಲ್ಕನೇ ತಿಯದಿ ಪೂರ್ಣ ಚಂದ್ರನ ಇರುಳು ಪ್ರಯಾಣಿಕರ ಸಣ್ಣ ಹಡಗೊಂದರಲ್ಲಿ ದ್ವೀಪಕ್ಕೆ ವಾಪಸು ಹೊರಟಿದ್ದೆ. ಎಲ್ಲಿಂದ ಎಂದು ದಯವಿಟ್ಟು...

  • ಎಂಎ ಓದುತ್ತಿರುವಾಗ ಸಾಹಿತಿ ಅರುಣ್‌ ಕೊಲಾಟ್ಕರ್‌ ಅವರ ಕವಿತೆಗಳನ್ನು ಓದಿದ್ದೆ. ಜೆಜುರಿ ಅನ್ನುವ ಕವಿತಾಸಂಕಲನ ಬಹಳ ಪ್ರಸಿದ್ಧ. ಮಾರ್ಮಿಕವಾಗಿ ಬರೆಯುವ, ಮರಾಠಿ...

ಹೊಸ ಸೇರ್ಪಡೆ