ನಿಫಾ ವೈರಸ್‌ ಹಾವಳಿ ಮುನ್ನೆಚ್ಚರಿಕೆಯೇ ಮದ್ದು

Team Udayavani, Jun 7, 2019, 6:00 AM IST

ನಿಫಾ ವೈರಸ್‌ ಮರಳಿ ಕೇರಳಕ್ಕೆ ದಾಳಿಯಿಟ್ಟಿದೆ. ಈಗಾಗಲೇ ಇಬ್ಬರಲ್ಲಿ ಈ ವೈರಾಣು ಇರುವುದು ದೃಢಪಟ್ಟಿದ್ದು, ಸುಮಾರು 350 ಮಂದಿಯನ್ನು ವಿಶೇಷ ನಿಗಾದಲ್ಲಿ ಇರಿಸಲಾಗಿದೆ. ಜೊತೆಗೆ ಕರ್ನಾಟಕದಲ್ಲೂ ನಿಫಾ ವೈರಸ್‌ ಭೀತಿ ಕಾಣಿಸಿಕೊಂಡಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ನಿಫಾ ಕಟ್ಟೆಚ್ಚರ ಘೋಷಿಸಲಾಗಿದೆ. ಕೇರಳದಲ್ಲಿ ನಿಫಾ ವೈರಸ್‌ ಮೊದಲು ಕಾಣಿಸಿಕೊಂಡದ್ದು ಕಳೆದ ವರ್ಷ. 17 ಜನರನ್ನು ಬಲಿತೆಗೆದುಕೊಂಡ ಬಳಿಕ ಈ ರೋಗವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿತ್ತು. ಆದರೆ ಇದೀಗ ಮಳೆ ಶುರುವಾಗುವ ಕಾಲಕ್ಕೆ ಸರಿಯಾಗಿ ಮತ್ತೂಮ್ಮೆ ವೈರಾಣು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಮಲೇರಿಯಾ, ಡೆಂ , ಚಿಕುನ್‌ಗುನ್ಯಾ ಮುಂತಾದ ವೈರಾಣುಗಳು ತಂಪು ವಾತಾವರಣದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಮಳೆಗಾಲದಲ್ಲಿ ಈ ವೈರಾಣುಗಳ ಉಪಟಳ ಸಾಮಾನ್ಯ. ಇದರ ಜತೆಗೆ ನಿಫಾ ಕೂಡಾ ಸೇರಿಕೊಂಡರೆ ಪರಿಸ್ಥಿತಿ ಕೈಮೀರಿ ಹೋಗಬಹುದು. ಈ ಕಾರಣಕ್ಕೆ ಈ ಸಲ ಕೇರಳ ಸರಕಾರ ನಿಫಾ ಹಾವಳಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರವೂ ತಕ್ಷಣ ತಜ್ಞರ ತಂಡವೊಂದನ್ನು ಕೇರಳಕ್ಕೆ ರವಾನಿಸಿ ಸಕಾಲಿಕವಾದ ನೆರವು ಒದಗಿಸಿದೆ.

ನಿಫಾ ಹಣ್ಣು ತಿನ್ನುವ ಬಾವಲಿಗಳಿಂದ ಹರಡುವ ಒಂದು ಅಪಾಯಕಾರಿ ವೈರಸ್‌. ಹಂದಿ, ಕೋಳಿಯಂಥ ಸಾಕುಪ್ರಾಣಿಗಳಿಂದಲೂ ಹರಡುವ ಸಾಧ್ಯತೆಯಿದ್ದರೂ ಇದರ ಮುಖ್ಯ ವಾಹಕ ಬಾವಲಿಗಳು. ಹೀಗಾಗಿ ಇದನ್ನು ಬಾವಲಿ ಜ್ವರ ಅಂತಲೂ ಕರೆಯುತ್ತಾರೆ. 1998ರಲ್ಲಿ ಮಲೇಶ್ಯಾ ಮತ್ತು 1999ರಲ್ಲಿ ಸಿಂಗಾಪುರದಲ್ಲಿ ಮೊದಲು ಈ ವೈರಸ್‌ ಕಾಣಿಸಿತ್ತು. 2007ರಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಿಫಾ ಕಾಣಿಸಿಕೊಂಡಾಗ ಭಾರತೀಯರು ಇದರ ಹೆಸರನ್ನು ಮೊದಲು ಕೇಳಿದ್ದು. ಅನಂತರ ಕಳೆದ ವರ್ಷ ಕೇರಳದಲ್ಲಿ ಬಹಳಷ್ಟು ಹಾಹಾಕಾರ ಎಬ್ಬಿಸಿದೆ. ಇದೀಗ ಇಲ್ಲಿ ವೈರಸ್‌ ಮರುಕಳಿಸಿರುವುದು ಮಾತ್ರ ಚಿಂತೆಗೆ ಕಾರಣವಾಗಿದೆ.

ನಿಫಾ, ಹಂದಿಜ್ವರ ಸೇರಿದಂತೆ ವಿವಿಧ ರೀತಿಯ ವೈರಾಣುಗಳ ಹಾವಳಿ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚುತ್ತಿದ್ದರೂ ಇದನ್ನು ಎದುರಿಸಲು ಸಾಕಷ್ಟು ಮೂಲ ಸೌಕರ್ಯಗಳ ನಿರ್ಮಾಣವಾಗುತ್ತಿಲ್ಲ. ದೇಶದಲ್ಲಿ ವೈರಾಣು ಪರೀಕ್ಷೆ ಕೇಂದ್ರವಿರುವುದು ಪುಣೆ ಮತ್ತು ಹೈದರಾಬಾದ್‌ನಲ್ಲಿ ಮಾತ್ರ. ವ್ಯಾಪಕವಾಗಿ ವೈರಾಣು ರೋಗ ಹರಡಿದಾಗ ಈ ಎರಡು ಪ್ರಯೋಗಾಲಯಗಳು ಕೆಲಸದ ಒತ್ತಡದಿಂದ ಬಳಲುತ್ತವೆ. ಸಕಾಲಿಕವಾಗಿ ವರದಿ ಕೈಸೇರದೆ ಸಾಧ್ಯವಾಗದೆ ವೈದ್ಯರು ಒದ್ದಾಡಬೇಕಾಗುತ್ತದೆ. ಇನ್ನಷ್ಟು ಪ್ರಯೋಗಾಲಯಗಳನ್ನು ನಿರ್ಮಿಸುವುದಾಗಿ ಸರಕಾರ ಹೇಳಿದ್ದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಕಳೆದ ವರ್ಷ ಕೇರಳದಲ್ಲಿ ನಿಫಾ ವೈರಸ್‌ ನಿಯಂತ್ರಣಕ್ಕೆ ಬಂದ ಬಳಿಕ ರಾಜ್ಯ ಮತ್ತು ಕೇಂದ್ರ ಸರಕಾರ ಇದೊಂದು ಸ್ಥಳೀಯ ಸಮಸ್ಯೆ ಎಂದು ಪರಿಗಣಿಸಿ ಅದರ ಮೇಲೆ ನಿಗಾ ಇಡುವುದನ್ನು ಬಿಟ್ಟಿದ್ದವು. ದೇಶದಲ್ಲಿ ಬಾವಲಿಗಳು ಎಲ್ಲೆಂದರಲ್ಲಿ ಇವೆ. 58 ಜಾತಿಯ ಬಾವಲಿಗಳು ನಮ್ಮ ದೇಶದಲ್ಲಿಯೇ ಇವೆ. ಈ ಬಾವಲಿಗಳು ಯಾವ ಕಾಲದಲ್ಲೂ ನಿಫಾ ವೈರಸ್‌ ಹರಡಬಲ್ಲವು. ದೇಶದ ಯಾವುದೇ ಕಡೆ ನಿಫಾ ವೈರಸ್‌ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದು, ನಮ್ಮನ್ನಾಳುವವರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು.

ಕಳೆದ ವರ್ಷ ನಿಫಾ ವೈರಸ್‌ ಕಾಣಿಸಿಕೊಂಡ ಬಳಿಕ ಸಾವಿರಾರು ಬಾವಲಿಗಳನ್ನು ಸಾಮೂಹಿಕವಾಗಿ ಸಾಯಿಸಲಾಗಿತ್ತು. ತಮ್ಮದಲ್ಲದ ತಪ್ಪಿಗಾಗಿ ಬಾವಲಿಗಳು ಪ್ರಾಣ ತೆರಬೇಕಾಗಿ ಬಂತು. ಹಾಗೇ ನೋಡಿದರೆ ನಿಫಾ ವೈರಸ್‌ ಹರಡಲು ಮೂಲ ಕಾರಣ ಮನುಷ್ಯರು. ಬಾವಲಿಗಳ ವಾಸಸ್ಥಾನಗಳನ್ನು ಅವ್ಯಾಹತವಾಗಿ ನಾಶ ಮಾಡಿದ ಕಾರಣ ಅವುಗಳೀಗ ಮನುಷ್ಯರು ವಾಸವಾಗಿರುವ ಪ್ರದೇಶಗಳಿಗೆ ಅನಿವಾರ್ಯವಾಗಿ ಬರುವಂತಾಗಿದೆ. ಸ್ಥಿತ್ಯಂತರದಿಂದಾಗಿ ಬಾವಲಿಗಳ ಮೂಲ ಸ್ವಭಾವದಲ್ಲೂ ಬದಲಾವಣೆಗಳಾಗಿವೆ. ಹಸಿವು ಮತ್ತು ಒತ್ತಡದಿಂದ ಬಳಲುತ್ತಿರುವ ಅವುಗಳೀಗ ವೈರಸ್‌ಗಳನ್ನು ಸಾಗಿಸುವ ಜೀವಂತ ವಾಹಕಗಳಾಗಿ ಬದಲಾಗಿವೆ. ಅವುಗಳ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಮೂತ್ರ ಮತ್ತು ಜೊಲ್ಲಿನಲ್ಲಿ ವೈರಾಣುಗಳು ಸುಲಭವಾಗಿ ಮನುಷ್ಯರಿಗೆ ವರ್ಗಾವಣೆಯಾಗುತ್ತವೆ. ಇದು ಬಾವಲಿ ಎಂದಲ್ಲ ಎಲ್ಲ ಪ್ರಾಣಿ ಪಕ್ಷಿಗಳ ಕತೆಯೂ ಹೌದು. ಮಾನವ ಚಟುವಟಿಕೆ ಮಿತಿಮೀರಿದ ಪರಿಣಾಮವಾಗಿ ಪ್ರಾಣಿ ಪಕ್ಷಿಗಳು ನೆಲೆ ಕಳೆದುಕೊಳ್ಳುತ್ತಿವೆ. ತಮ್ಮ ತಾಣಗಳಲ್ಲಿ ನೆಮ್ಮದಿಯಿಂದಿದ್ದ ಅವುಗಳೀಗ ಮನುಷ್ಯರಿರುವ ಪ್ರದೇಶಗಳಿಗೆ ನುಗ್ಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಕೃತಿಯ ಸಮತೋಲನ ತಪ್ಪಿದರೆ ಯಾವ್ಯಾವ ರೀತಿಯಲ್ಲಿ ಅನಾಹುತಗಳು ಎದುರಾಗಬಹುದು ಎನ್ನುವುದಕ್ಕೆ ನಿಫಾ ಕೂಡಾ ಒಂದು ಉದಾಹರಣೆಯಾಗಬಲ್ಲದು.

ನಿಫಾಕ್ಕೆ ಇನ್ನೂ ಔಷಧಿ ಕಂಡುಕೊಳ್ಳಲಾಗಿಲ್ಲ. ಆ್ಯಂಟಿ ಬಯೋಟಿಕ್‌ಗಳ ಮೂಲಕವೇ ಇದನ್ನು ನಿಯಂತ್ರಣಕ್ಕೆ ತರುತ್ತಾರೆ. ನಿಫಾ ಸೇರಿದಂತೆ ಯಾವುದೇ ವೈರಸ್‌ ಎಚ್ಚರಿಸಲು ಮುನ್ನೆಚ್ಚರಿಕೆ ವಹಿಸುವುದೊಂದೇ ಮಾರ್ಗ. ಆಡಳಿತದ ಜನರು ಕೂಡಾ ರೋಗ ಹರಡುವುದನ್ನು ತಡೆಯಲು ಸಕ್ರಿಯವಾಗಿ ಸಹಭಾಗಿಗಳಾಗಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೇಘಾಲಯ ರಾಜ್ಯವು ಹಿಮಾಲಯದ ವಿಶೇಷ ಅನುಗ್ರಹಕ್ಕೊಳಗಾದ ಸುಮಸುಂದರ ತರುಲತೆಗಳ ನಾಡು. ಈ ರಾಜ್ಯದ ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯೇ...

  • ಪಾಶ್ಚಾತ್ಯ ವಾದ್ಯಕ್ಕೆ ಭಾರತೀಯ ಸಂಸ್ಕಾರ ಕೊಟ್ಟವರು ಕದ್ರಿ ಗೋಪಾಲನಾಥರು ವಿದ್ಯಾ ಭೂಷಣ ನಮ್ಮ ಊರಿನವರು. ಅಂದರೆ, ದಕ್ಷಿಣಕನ್ನಡ ಜಿಲ್ಲೆಯವರು ಎಂದು ಹೇಳುವುದಕ್ಕೆ...

  • ಅಮರ್ತ್ಯ ಸೇನ್‌ ಅವರಂತೆ ಅಭಿಜಿತ್‌ ಬ್ಯಾನರ್ಜಿ ಅವರದ್ದು ಕೂಡ ಅಭಿವೃದ್ಧಿ ಕೇಂದ್ರಿತ ಸಂಶೋಧನೆ. ಕೊನೆಗೂ ಈ ಅಭಿವೃದ್ಧಿಯನ್ನು ಸಾಧಿಸುವ ಭಾಗವಾಗಿ ನಡೆಯುವ ಬಡತನ...

  • ಆ ಮುದಿಬ್ರಾಹ್ಮಣ ತನ್ನ ಕೈಗಳಲ್ಲಿ ಕರ್ಣನಿಂದ ದಾನವಾಗಿ ಪಡೆದ ಕರ್ಣಕುಂಡಲವನ್ನು ಹಿಡಿದುಕೊಂಡು ನಿಧಾನವಾಗಿ ಹೆಜ್ಜೆಗಳನ್ನು ಊರುತ್ತ ಹೋಗುತ್ತಿದ್ದ. ಅವನ ಹಣ್ಣು...

  • ನಮ್ಮ ಲೇಔಟಿನ ಚಿಕ್ಕ ದಾರಿಯ ಪಕ್ಕದಲ್ಲೊಂದು ಪುಟ್ಟ ಗಿಡ ದೊಡ್ಡದಾಯಿತು. ಹಸು, ಕುರಿ, ಮೇಕೆಗಳು ಗಿಡದ ರೆಂಬೆಗಳನ್ನು ತಿಂದು ಹಾಕಿದರೂ, ಸರಿಯಾಗಿ ನೀರುಣಿಸುವವರು...

ಹೊಸ ಸೇರ್ಪಡೆ

  • "ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ|' ಕನಕದಾಸರ ವ್ಯಂಗ್ಯಭರಿತ ಲೋಕಪ್ರಸಿದ್ಧ ಹಾಡು. "ಅಯ್ನಾ ಹುಟ್ಟಿದ ಮನುಜರೆಲ್ಲ ಹೊಟ್ಟೆ ಹೊಟ್ಟೆ ಎಂದು ಹೊಟ್ಟೆಗೆ...

  • ಕೇಂದ್ರೀಯ ಪ್ರತ್ಯಕ್ಷ ತೆರಿಗೆ ಮಂಡಳಿ ವಾರ್ಷಿಕ ತೆರಿಗೆ ಸಂಗ್ರಹದ ಅಂಕಿಅಂಶವನ್ನು ಇಂದು ಬಿಡುಗಡೆಗೊಳಿಸಿದೆ. ಮಹಾರಾಷ್ಟ್ರ, ದಿಲ್ಲಿ ಮತ್ತು ಕರ್ನಾಟಕ ಈ ಮೂರು...

  • ಉಡುಪಿ: ಮಣಿಪಾಲ ಕೆಎಂಸಿಯ ಫಾರ್ಮಕಾಲಜಿ ವಿಭಾಗ ಮತ್ತು ಎಂಐಟಿಯ ಮಾಹಿತಿ ಮತ್ತು ಸಂವಹನ ವಿಭಾಗಗಳು ರೋಗಿಗಳ ಸುರಕ್ಷೆಗಾಗಿ ಔಷಧಗಳ ಪ್ರತಿಕೂಲ ಪರಿಣಾಮಗಳನ್ನು ವರದಿ...

  • ಜಲಮುನಿಗಳು ಅನ್ನುವ ಒಬ್ಬ ಗುರುಗಳಿದ್ದರು. ಅವರು ನೀರಿನ ಮೇಲೆ ನಡೆದಾಡುವ, ಓಡುವ, ಕುಳಿತುಕೊಳ್ಳುವ, ನಿದ್ದೆ ಮಾಡುವ ಸಿದ್ದಿಯನ್ನು ಗಳಿಸಿಕೊಂಡಿದ್ದರು. ಅದನ್ನು...

  • ಮಂಗಳೂರು: ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರು ಚೆನ್ನೈಯ ಗೇರುಗಂಬಕ್ಕಂನಲ್ಲಿ ನಿರ್ಮಿಸುತ್ತಿರುವ ಬೃಹತ್‌ ಹನುಮಾನ್‌ ದೇವಸ್ಥಾನಕ್ಕೆ ಅಗತ್ಯವಾಗಿರುವ ಮರದ...