ಕಾರ್ಕಳ-ಅಂಕೋಲಾಗಳ ನಡುವೆ ಪೂರ್ಣಕುಂಭಗಳು


Team Udayavani, Nov 11, 2018, 6:00 AM IST

7.jpg

    ಕನ್ನಡ ರಾಜ್ಯೋತ್ಸವದ ಆಚರಣೆಯು ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಅಭೂತಪೂರ್ವವಾಗಿ ಮೊದಲ ಬಾರಿ ಸಂಭವಿಸಿದ್ದು 1971ರಲ್ಲಿ ಕಾರ್ಕಳದಲ್ಲಿ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಹೆಸರಿನಲ್ಲಿ ಜಿಲ್ಲೆಯೊಂದರಲ್ಲಿ ಸಾಹಿತ್ಯಸಮ್ಮೇಳನ ನಡೆಸುವ ಹೊಸ ಉಪಕ್ರಮಕ್ಕೆ ನಾಂದಿ ಹಾಡಿದ ಜಿಲ್ಲಾ ಸಾಹಿತ್ಯ ಸಮ್ಮೇಳನ 1971 ಅಕ್ಟೋಬರ 31 ಮತ್ತು ನವೆಂಬರ 1ರಂದು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ನಡೆಯಿತು. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸಾಹಿತಿಗಳ ಸಹಿತ ಎಲ್ಲ ಕ್ಷೇತ್ರಗಳ ಜನರು ಸಂಘಸಂಸ್ಥೆಗಳು ಕಲೆತು ಕನ್ನಡದ ಅಭಿಮಾನವನ್ನು ನಿಜಮಾಡಿದ ಆ ಸಮ್ಮೇಳನದಲ್ಲಿ ಪ್ರೊ. ಎಸ್‌. ವಿ. ಪರಮೇಶ್ವರ ಭಟ್ಟರ  ನೇತೃತ್ವದಲ್ಲಿ ಮಂಗಳಗಂಗೋತ್ರಿಯ ಕನ್ನಡ ವಿಭಾಗದವರು ನಾವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣವಾಗಿ ತೊಡಗಿಸಿಕೊಂಡೆವು. ಸಮ್ಮೇಳನದ ಸರ್ವಾಧ್ಯಕ್ಷರಾದ ಜಿ. ಪಿ. ರಾಜರತ್ನಂ ಅವರ ಅದ್ಭುತ ಸಾಹಿತ್ಯಕ ಭಾಷಣದ ನುಡಿಗಳು ಇಂದಿಗೂ ಅನುರಣಿಸುತ್ತಿವೆ. ಕುಲಪತಿ ದೇ. ಜವರೇಗೌಡರಿಂದ ಉದ್ಘಾಟನೆ, ಪೇಜಾವರ ಶ್ರೀ ವಿಶ್ವೇಶ ಸ್ವಾಮೀಜಿಯವರಿಂದ ದಿಬ್ಬಣ ಸ್ಮರಣಸಂಚಿಕೆ ಬಿಡುಗಡೆ. ಬಳಿಕ ರಾಜರತ್ನಂ ಭಾಷಣ ಸಾಗುತ್ತಿದ್ದಂತೆ ಬಹಳ ಮಂದಿ ಊಟಮಾಡುತ್ತಲೇ ಮತ್ತೆ ಬಂದು ಭಾಷಣ ಆಲಿಸಲು  ಕುಳಿತುಕೊಳ್ಳುತ್ತಿದ್ದರು. ಸಂಜೆ ಪ್ರೊ. ಎಂ. ಮರಿಯಪ್ಪ ಭಟ್ಟರ ಅಧ್ಯಕ್ಷತೆಯಲ್ಲಿ ಸಾಹಿತ್ಯಗೋಷ್ಠಿ. ಉಪನ್ಯಾಸಕರು: ಉದ್ಯಾವರ ಮಾಧವ ಆಚಾರ್ಯ, ಆನಂದಿ ಸದಾಶಿವರಾವ್‌, ರಾಮಚಂದ್ರ ಉಚ್ಚಿಲ, ತೆಕ್ಕುಂಜ ಗೋಪಾಲಕೃಷ್ಣ ಭಟ್ಟ, ಕುಡಿ³  ವಾಸುದೇವ ಶೆಣೈ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪಿ.ಕೆ. ನಾರಾಯಣ. ಮರುದಿನ ನವೆಂಬರ 1ರಂದು ಬೆಳಗ್ಗೆ ಕಯ್ನಾರ ಕಿಞ್ಞಣ್ಣ ರೈಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ. ಬಳಿಕ ಪ್ರೊ. ಎಂ. ಆರ್‌. ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಯಕ್ಷಗಾನ ಗೋಷ್ಠಿಯಲ್ಲಿ ತೆಂಕುತಿಟ್ಟು ಬಗ್ಗೆ ಕುಕ್ಕಿಲ ಕೃಷ್ಣಭಟ್ಟ , ಬಡಗುತಿಟ್ಟು ಬಗ್ಗೆ ಎ. ಸದಾನಂದ ಹೆಬ್ಟಾರ್‌ ಅವರ ಉಪನ್ಯಾಸಗಳು. ಅಪರಾಹ್ನ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ 14 ಹಿರಿಯ ಸಾಧಕರಿಗೆ ಮತ್ತು ಬಾಲಸಾಹಿತ್ಯ ಮಂಡಲಕ್ಕೆ ಸನ್ಮಾನ ಸಮಾರಂಭ. ಡಾ. ಟಿ. ಎಂ. ಎ. ಪೈ ಅವರಿಂದ ಸ್ವಾಗತ. ಬಳಿಕ ಎಚ್‌. ಎಲ್‌. ನಾಗೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್‌ವಿಪಿ ಅವರ ವಿಶೇಷ ಉಪನ್ಯಾಸ. ರಾತ್ರಿ ಜಿ. ಪಿ. ರಾಜರತ್ನಂ ಅವರಿಂದ ಸಮಾರೋಪದ ಅಧ್ಯಕ್ಷ ಭಾಷಣ. ಬಿ. ಎಂ. ಇದಿನಬ್ಬ ಅವರು ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಈ ಸಮ್ಮೇಳನದ ಸ್ವಾಗತ ಸಮಿತಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷರಾಗಿದ್ದು, ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಂ. ರಾಮಚಂದ್ರ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೀಕಾನ ರಾಮಚಂದ್ರರು ಕಾರ್ಯದರ್ಶಿಗಳಾಗಿ ಇದ್ದು ಸಮ್ಮೇಳನದ ಯಶಸ್ಸಿನ ಚಾಲಕ ಶಕ್ತಿಗಳಾದರು. ಎಂ. ರಾಮಚಂದ್ರರ ಸಂಘಟನೆಯ ಸಾಮರ್ಥ್ಯದ ವಿರಾಟ್‌ದರ್ಶನ ಮೊದಲು ಅನಾವರಣ ಆದದ್ದು ಈ ಕಾರ್ಕಳ ಸಮ್ಮೇಳನದಲ್ಲಿ. ದಿಬ್ಬಣ ಸ್ಮರಣಸಂಚಿಕೆ ಸಮಿತಿಯ ಅಧ್ಯಕ್ಷರು ಎಸ್‌. ವಿ. ಪರಮೇಶ್ವರ ಭಟ್ಟರು, ಉಪಾಧ್ಯಕ್ಷರು ಏರ್ಯ ಲಕ್ಷ್ಮೀನಾರಾಯಣ ಆಳ್ವರು. ಸಮಿತಿಯಲ್ಲಿ ನಾವು ಮೂವರು ಕನ್ನಡ ಅಧ್ಯಾಪಕರು- ಎಚ್‌. ಜೆ. ಲಕ್ಕಪ್ಪ ಗೌಡರು, ಗುಂಡ್ಮಿ ಚಂದ್ರಶೇಖರ ಐತಾಳರು ಮತ್ತು ನಾನು ಕೂಡಾ ಇದ್ದೆವು. ಇದರಲ್ಲಿನ ಟಿ. ಚಂದ್ರರಾಜ ಶೆಟ್ಟಿ ಸಿದ್ಧಕಟ್ಟೆ ಅವರು ಸಿದ್ಧಪಡಿಸಿದ ದ.ಕ. ಜಿಲ್ಲೆ ಮತ್ತು ಕಾಸರಗೋಡು ಗ್ರಂಥಕರ್ತರ ಬಳಗದ ವಿವರವಾದ ಪಟ್ಟಿ ಅಮೂಲ್ಯವಾದುದು. ದಿಬ್ಬಣದಲ್ಲಿ ನನ್ನ ಲೇಖನ “ತುಳು ಸಾಹಿತ್ಯ ಸಮೀಕ್ಷೆ’. ಕಾರ್ಕಳ ಸಮ್ಮೇಳನದ ಉಪನ್ಯಾಸಗಳು ಮತ್ತು ಚಿತ್ರಸಹಿತವಾದ ವರದಿಯನ್ನು ಒಳಗೊಂಡ ಗ್ರಂಥ ಬಾಸಿಗ (ಸಂ. ಎಂ. ರಾಮಚಂದ್ರ: ಕಾರ್ಕಳ, 1972) ಜಿಲ್ಲಾ ಸಮ್ಮೇಳನದ ಒಂದು ಅಪೂರ್ವ ದಾಖಲೆ. 

ಆ ಕಾಲದಲ್ಲಿ ದಕ್ಷಿಣಕನ್ನಡ ಜಿಲ್ಲೆಗೆ ಯಾರೇ ಸಾಹಿತಿ ಬಂದರೂ ಅವರನ್ನು ಎಸ್‌ವಿಪಿಯವರು ನಮ್ಮ ಕನ್ನಡವಿಭಾಗಕ್ಕೆ ಕರೆಸಿ ಕಾರ್ಯಕ್ರಮ ನಡೆಸುತ್ತಿದ್ದರು. ಹಾಗೆಯೇ ಕಾರ್ಕಳಕ್ಕೆ ಬಂದಿದ್ದ ಜಿ. ಪಿ. ರಾಜರತ್ನಂ ಅವರನ್ನು ವಿಭಾಗಕ್ಕೆ ಕರೆಸಿದರು. ರಾಜರತ್ನಂ ಅವರ ಭಾಷಣವನ್ನು ನಮ್ಮ ಕರಂಗಲಪಾಡಿಯ ಕಟ್ಟಡದ ಹೊರಜಗಲಿಯಲ್ಲಿ ಹತ್ತಿರದಿಂದ ಕೇಳುವ ಅವಕಾಶ ದೊರೆತ ಹಾಗೆಯೇ ಅವರ ಜೊತೆಗೆ ಊಟ ಮಾಡಿದ, ಮಾತುಕತೆ ಆಡಿದ ಕ್ಷಣಗಳನ್ನು ನೆನಪಿಸಿಕೊಂಡಾಗ ಮನಸ್ಸು ಮುದಗೊಳ್ಳುತ್ತದೆ. ಕಾರ್ಕಳ ಸಮ್ಮೇಳನದಲ್ಲಿ ಸಮ್ಮಾನಿತರಾದ ಕವಿ ಪಾಂಡೇಶ್ವರ ಗಣಪತಿರಾಯರೂ ನಮ್ಮ ಕನ್ನಡವಿಭಾಗಕ್ಕೆ ಬಂದರು. ಚೆಂಗಲವೆ ಕವನಸಂಕಲನ, ಮಾರಾವತಾರ ಏಕವ್ಯಕ್ತಿ ಯಕ್ಷಗಾನ ಕೃತಿಗಳ ಕವಿ ಪಾಂಡೇಶ್ವರರ ಕವನವಾಚನದ ಶೈಲಿ ನಾನು ಮರೆಯಲಾಗದ ನಾಟಕೀಯ ನೋಟ. ಸ್ವಲ್ಪ ಗಿಡ್ಡಗಾತ್ರದ, ವೆಸ್ಟ್‌ಕೋಟು ಧರಿಸಿದ ಅವರು ಅಂದು ವಾಚಿಸಿದ ಕವನ ಆರಂಭವಾದದ್ದು  ಬಂದು ಬಹಳ ದಿವಸವಾಯ್ತು ಮರಳಬೇಕು ಮನೆಗೆ ಎಂಬ ಸಾಲುಗಳಿಂದ. ಈ ಸಾಲುಗಳನ್ನು ನಾಟಕೀಯವಾಗಿ ಓದಿ ಪಾಂಡೇಶ್ವರರು ಪಕ್ಕಕ್ಕೆ ತಿರುಗಿದರು, ಅಲ್ಲಿಂದ ಹೊರಡುವ ಹಾಗೆ. ನಾವು ಅಂದುಕೊಂಡೆವು- ಅವರು ಅಲ್ಲಿಂದ  ಹೊರಡುತ್ತಾರೆ, ಮನೆಗೆ ಮರಳುತ್ತಾರೆ ಎಂದು! ಅಷ್ಟು ಹೇಳಿದ ಮೇಲೆ ಮತ್ತೆ ಸ್ವಸ್ಥಾನಕ್ಕೆ ಬಂದು ಮುಂದುವರಿಸಿದರು, ಮೆತ್ತಗಿನ ಸ್ವರದಲ್ಲಿ- ಬಂದು ಬಹಳ ಸಮಯವಾಯ್ತು ಮರಳಬೇಕು ಮನೆಗೆ. ಕನ್ನಡ ಕವಿಗಳ ಕವನವಾಚನದ ಅನೇಕ ಮಾದರಿಗಳನ್ನು ನಾನು ಕಂಡಿದ್ದೇನೆ ಆಲಿಸಿದ್ದೇನೆ. ಅವುಗಳಲ್ಲಿ ಬೇಂದ್ರೆಯವರದ್ದು ಒಂದು ಮಾದರಿಯಾದರೆ, ಪಾಂಡೇಶ್ವರ ರದ್ದು ಇನ್ನೊಂದು ವಿಶಿಷ್ಟ ಮಾದರಿ. ಆ ಶೈಕ್ಷಣಿಕ ವರ್ಷದಲ್ಲಿ ನಮ್ಮ ವಿಭಾಗಕ್ಕೆ ಬಂದು ಉಪನ್ಯಾಸ ಕೊಟ್ಟವರು ಕನ್ನಡ ಸಾಹಿತ್ಯ ಸಂಶೋಧನೆ ಚಳುವಳಿಯ ಡಾ. ಸರೋಜಿನಿ ಮಹಿಷಿ ಮತ್ತು ಮೈಸೂರಿನ ಪ್ರಾಧ್ಯಾಪಕ ಕವಿ-ವಿಮರ್ಶಕ ಹೃದಯಸಂವಾದದ ಗಾಂಧಿವಾದಿ ಸುಜನಾ. 

ಕುವೆಂಪು ಅವರ 67ನೆಯ ಹುಟ್ಟುಹಬ್ಬದ ನೆನಪಿನಲ್ಲಿ ಮಂಗಳಗಂಗೋತ್ರಿಯ ಕನ್ನಡ ವಿದ್ಯಾರ್ಥಿಗಳು ಕುವೆಂಪು ಸಾಹಿತ್ಯದ ಬಗ್ಗೆ ಬರೆದ ಲೇಖನಗಳ ಸಂಕಲನ ರಸಋಷಿ (ಸಂ. ಎಚ್‌.ಜೆ.  ಲಕ್ಕಪ್ಪ ಗೌಡ; ಕನ್ನಡ ಸಂಘ, ಮಂಗಳಗಂಗೋತ್ರಿ) 1972 ಫೆಬ್ರವರಿಯಲ್ಲಿ ಬಿಡುಗಡೆ ಆಯಿತು. ಇದರಲ್ಲಿ ಶಾರದಾ ಮಾಣೈ ಅವರ ಕವನ ಮತ್ತು ಬಿ. ರಾಜಶೇಖರಪ್ಪ, ಎ.ಎಸ್‌. ಕಾಳೇಗೌಡ, ಅನಂತಕೃಷ್ಣ ಹೆಬ್ಟಾರ್‌, ಕೇಶವ ರಾವ್‌, ಪದ್ಮಿನಿ, ಕೆ. ಸುಬ್ರಹ್ಮಣ್ಯ ಭಟ್ಟ, ಕೆ.ವಿ. ಕೃಷ್ಣೇಗೌಡ, ಎಸ್‌. ಜಯರಾಮ ರೈ, ಕೆ. ಸುಬ್ರಹ್ಮಣ್ಯ ಕೆದ್ಲಾಯ, ಹರಿನಾರಾಯಣ ಮಾಡಾವು, ಎಚ್‌.ಎಸ್‌. ಸುಜಾತಾ, ಎಡ್ವರ್ಡ್‌ ನೊರೊನ್ಹಾ, ವೀರಣ್ಣ, ಮುರಳೀಧರ ಉಪಾಧ್ಯ, ರಾ. ಲಕ್ಷ್ಮೀನಾರಾಯಣ, ಎಸ್‌. ಶಿವಾಜಿ ಜೋಯಿಸ್‌ ಅವರ ಲೇಖನಗಳಿವೆ. ಬಿ. ರಾಜಶೇಖರಪ್ಪನವರು ನಡೆಸಿದ ಕುವೆಂಪು ಸಂದರ್ಶನ ಕೂಡ ಇದೆ.

1972 ಫೆಬ್ರವರಿ 8: ಎಸ್‌.ವಿ. ಪರಮೇಶ್ವರ ಭಟ್ಟರಿಗೆ 58 ವರ್ಷ ತುಂಬಿದ ನೆನಪಿನಲ್ಲಿ ಅವರ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ಗುಂಡ್ಮಿ ಚಂದ್ರಶೇಖರ ಐತಾಳರ ಸಂಪಾದಕತ್ವದಲ್ಲಿ ಸಿದ್ಧಪಡಿಸಿ ಅರ್ಪಿಸಿದ ಮಹತ್ವದ ಸಂಭಾವನಾ ಗ್ರಂಥ ಪೂರ್ಣಕುಂಭ. ಪೂರ್ಣಕುಂಭದ ಎಲ್ಲ ಲೇಖಕರು ಮಂಗಳಗಂಗೋತ್ರಿಯ ಕನ್ನಡವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು. ಕವನಕಾಣಿಕೆಯಲ್ಲಿ ಐದು ಕವನಗಳಿವೆ. ಐತಾಳರ ಕವನ ಉಪ್ಪು ಕಡಲಿಗೆ ನನ್ನೊಂದು ಹಿಡಿಯುಪ್ಪು. ವ್ಯಕ್ತಿತ್ವ ವಿಭಾಗದ ಏಳು ಲೇಖನಗಳಲ್ಲಿ ಮೊದಲನೆಯದು ಎಸ್‌ವಿಪಿ ಅವರ ಸಮಗ್ರ ವ್ಯಕ್ತಿತ್ವವನ್ನು ಅನಾವರಣ ಮಾಡುವ ಎಚ್‌. ಜೆ. ಲಕ್ಕಪ್ಪ ಗೌಡರ ಬರಹ ನೋವುಂಡು ನಗೆ ಚೆಲ್ಲುವ ಅಜಾತಶತ್ರು. ಸ್ವತಂತ್ರ ಕೃತಿಗಳು ಭಾಗದ ಹನ್ನೆರಡು ಲೇಖನಗಳಲ್ಲಿ ಎಸ್‌ವಿಪಿ ಸೃಷ್ಟಿಕ್ರಿಯೆಯ ವಿವೇಚನೆ ಇದೆ. ಅನುವಾದ ಕೃತಿಗಳು ಶೀರ್ಷಿಕೆಯಲ್ಲಿ ಆರು ಬರಹಗಳಿವೆ. ಇತರ ಎನ್ನುವ ವ್ಯಾಪ್ತಿಯಲ್ಲಿ ಎಸ್‌ವಿಪಿ ಕೃತಿಗಳ ಬಹುಮುಖೀ ಅಧ್ಯಯನದ ಹದಿನೈದು ಚಿಂತನೆಗಳಿವೆ. ನನ್ನ ಲೇಖನ- ಎಸ್‌.ವಿ. ಪರಮೇ ಶ್ವರ ಭಟ್ಟರ ಕವನಗಳಲ್ಲಿ ಕಾವ್ಯಮೀಮಾಂಸೆ. ಅನುಬಂಧದಲ್ಲಿ ಎಸ್‌ವಿಪಿ ಕೃತಿಗಳು, ಜೀವನದ ಘಟ್ಟಗಳು ಇತ್ಯಾದಿ ಮಾಹಿತಿ ಇದೆ. ಪೂರ್ಣಕುಂಭ ಸಂಭಾವನಾ ಗ್ರಂಥದ ಬಿಡುಗಡೆ ಸಮಾರಂಭವು ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆಯಿತು. ಮೈಸೂರು ವಿವಿ ಕುಲಪತಿ ದೇ. ಜವರೇಗೌಡರು ಪೂರ್ಣಕುಂಭ ವನ್ನು ಬಿಡುಗಡೆ ಮಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆ ಗ್ರಂಥವನ್ನು ಎಸ್‌. ವಿ. ಪರಮೇಶ್ವರ ಭಟ್ಟರಿಗೆ ವಿಧ್ಯುಕ್ತವಾಗಿ ಅರ್ಪಿಸಿದರು.

1971ರಲ್ಲಿ ಕಾರ್ಕಳದಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಡಾ | ಟಿ. ಎಂ . ಎ. ಪೈ ಅವರು ಶಿವರಾಮ ಕಾರಂತರನ್ನು ಸ್ವಾಗತಿಸುವ ಉಲ್ಲಾಸದ ಭಂಗಿ.  (ಫೊಟೊ ಕೃಪೆ : “ಬಾಸಿಗ’ -ಕಾರ್ಕಳ , 1972)

1970-72 ತಂಡದ ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಂಘಟನೆಯಿಂದ ಮಂಗಳೂರಿನಲ್ಲಿ “ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ’ ನಡೆಯಿತು. ಆ ಸಮ್ಮೇಳನದ ಉದ್ಘಾಟನೆ ಮಾಡಿದವರು ಯು. ಆರ್‌. ಅನಂತಮೂರ್ತಿ. ವಿದ್ಯಾರ್ಥಿಗಳೇ ಆಯ್ಕೆ ಮಾಡಿದ್ದ ಸಮ್ಮೇಳನಾಧ್ಯಕ್ಷರು ಉಪ್ಪಂಗಳ ರಾಮ ಭಟ್ಟರು. ಅವರು ಆಗ ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ವಿದ್ಯಾರ್ಥಿ ಆಗಿದ್ದರು. ಆ ವಿದ್ಯಾರ್ಥಿ ಸಮ್ಮೇಳನದಲ್ಲಿ ನಮ್ಮ ವಿಭಾಗದ ವಿದ್ಯಾರ್ಥಿಗಳು ಪ್ರಬಂಧಗಳನ್ನು ಸಿದ್ಧಪಡಿಸಿ ಮಂಡಿಸಿದರು. ಇತರ ಕಾಲೇಜುಗಳ ವಿದ್ಯಾರ್ಥಿಗಳೂ ಪಾಲುಗೊಂಡಿದ್ದರು. 

ಕಮಕೋಡು ನರಸಿಂಹ ಶಾಸ್ತ್ರಿಗಳು (ಕನ) ತೀರ್ಥಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌.ವಿ. ಪರಮೇಶ್ವರ ಭಟ್ಟರ ಗುರುಗಳಾಗಿದ್ದರು, 1903ರಲ್ಲಿ ಜನಿಸಿದ ಗುರುಗಳಿಗೆ 70 ವರ್ಷ ಆಗುವಾಗ ಸಂಭಾವನಾ ಗ್ರಂಥವೊಂದನ್ನು ಸಿದ್ಧಪಡಿಸುವ ಬಯಕೆಯಿಂದ ಎಸ್‌ವಿಪಿ “ಕಮಕೋಡು ನರಸಿಂಹಶಾಸ್ತ್ರಿ ವ್ಯಕ್ತಿ ಅಭಿವ್ಯಕ್ತಿ’ (ಕನ್ನಡ ಸಂಘ, ಮಂಗಳಗಂಗೋತ್ರಿ, 1972) ಎಂಬ ಗ್ರಂಥದ ಸಂಪಾದಕರಾಗಿ “ಕನ’ ವ್ಯಕ್ತಿತ್ವ ಮತ್ತು ಸಾಹಿತ್ಯಕೃತಿಗಳ ಬಗ್ಗೆ ತೀರ್ಥಹಳ್ಳಿ ಪರಿಸರದ “ಕನ’ ಶಿಷ್ಯರಿಂದ ಲೇಖನ ಬರೆಸಿದರು. ಹಾಗೆಯೇ ಮಂಗಳಗಂಗೋತ್ರಿಯ ತಮ್ಮ ಶಿಷ್ಯರಲ್ಲೂ “ಕನ’ ಕೃತಿಗಳ ಬಗ್ಗೆ ಬರಹಗಳನ್ನು ಬರೆಯಿಸಿದರು. ಗುರುಗಳ ಆಣತಿಯಂತೆ ನಾನು “ಕನ’ ಅವರ ಮೇಘಸಂದೇಶ ಅನುವಾದದ ಬಗ್ಗೆ ಲೇಖನ ಬರೆದುಕೊಟ್ಟೆ. ಆವರೆಗೆ ಶಾಸ್ತ್ರಿಗಳನ್ನು ನಾನು ಕಾಣದಿದ್ದರೂ ಅವರ ಶಿಷ್ಯರ ಶಿಷ್ಯ-ಪ್ರಶಿಷ್ಯ ಎಂದು ಹೆಮ್ಮೆಪಟ್ಟೆ. ಶಾಸ್ತ್ರಿಗಳನ್ನು ಕಂಡಿದ್ದ ನಮ್ಮ ವಿದ್ಯಾರ್ಥಿಗಳಾಗಿದ್ದ ತೀರ್ಥಹಳ್ಳಿ ಪರಿಸರದ ನಾಗರಾಜ್‌ ಜವಳಿ, ಶರತ್‌ ಕಲ್ಕೋಡ್‌, ಮಮತಾ ಬಿ. ಆರ್‌., ಪದ್ಮಿನಿ ಟಿ. ಆರ್‌., ಸಾಗರದ ಮಾಲತಿ ಎಸ್‌. ಅವರ ಲೇಖನಗಳೂ ಆ ಗ್ರಂಥದಲ್ಲಿ ಇವೆ. ಆ ಗ್ರಂಥದ ಪುಟಗಳನ್ನು ತಿರುವಿಹಾಕಿದಾಗ ಹೈಸ್ಕೂಲು ಮೇಷ್ಟ್ರು ಶಾಸ್ತ್ರಿಗಳ ಶಿಷ್ಯಪರಂಪರೆಯ ಹೆಸರುಗಳನ್ನು ನೋಡಿ ರೋಮಾಂಚನಗೊಂಡೆ. ತೀರ್ಥಹಳ್ಳಿ ಶಾಲೆಯಲ್ಲಿ ಶಾಸ್ತ್ರಿಗಳ ಪಾಠ ಕೇಳಿದವರಲ್ಲಿ ಎಸ್‌. ವಿ. ಪರಮೇಶ್ವರ ಭಟ್ಟ, ಹಾ.ಮಾ. ನಾಯಕ, ಎಚ್‌. ತಿಪ್ಪೇರುದ್ರಸ್ವಾಮಿ, ಯು. ಆರ್‌. ಅನಂತಮೂರ್ತಿ ಮೊದಲಾದವರಿದ್ದಾರೆ. ರಾಜಕಾರಣಿ ಸಾಹಿತಿ ಕೋಣಂದೂರು ಲಿಂಗಪ್ಪ ತಮ್ಮ ಲೇಖನದಲ್ಲಿ “ಶ್ರೀ ಕ.ನ. ಅವರು ನನ್ನ ಗುರುಗಳು ಆಗಿದ್ದುದು ಮಾತ್ರವಲ್ಲ; ನನ್ನ ರಾಜಕೀಯ ಗುರುಗಳಾದ ಪೂಜ್ಯ ಶ್ರೀ ಗೋಪಾಲಗೌಡ ಶಾಂತವೇರಿ ಅವರ ಗುರುಗಳೂ ಆಗಿದ್ದರು’ ಎಂದು ಬರೆದಿದ್ದಾರೆ. ಹಾಮಾ ನಾಯಕರು ಶಾಸ್ತ್ರಿಗಳ ಬದುಕು-ಬರಹವನ್ನು ಅನನ್ಯವಾಗಿ ಕಟ್ಟಿಕೊಟ್ಟ ಲೇಖನ ಕೂಡ ಇದೆ. 

ನರಸಿಂಹ ಶಾಸ್ತ್ರಿಗಳ ಅಭಿನಂದನಾ ಕಾರ್ಯಕ್ರಮ ಮತ್ತು ಸಂಭಾವನಾ ಗ್ರಂಥದ ಬಿಡುಗಡೆ ತೀರ್ಥಹಳ್ಳಿಯಲ್ಲಿ ನಡೆಯಿತು. 1972 ಎಪ್ರಿಲ್‌ ಕೊನೆಯ ವಾರ ಎಂದು ನೆನಪು. ಗುರುಗಳು ಎಸ್ವಿಪಿ ಜೊತೆಗೆ ನಾನೂ ತೀರ್ಥಹಳ್ಳಿಗೆ ಹೋಗಿದ್ದೆ. ಅಲ್ಲಿ ಶಾಸ್ತ್ರಿಗಳ ಶಿಷ್ಯ ಸಮುದಾಯ, ಅಭಿಮಾನಿ ಬಳಗವನ್ನು ಕಂಡು ಬದುಕು ಸಾರ್ಥಕ ಅನ್ನಿಸಿತು. ಗೋಪಾಲ ಗೌಡರ ಸಮಾಜವಾದಿ ಒಲವಿನ ತರುಣರ ಹಾಗೆಯೇ ಮನುಷ್ಯ ಪ್ರೀತಿ-ಪ್ರಾಮಾಣಿಕತೆಗೆ ಬೆಲೆ ಕೊಡುವ ಪರಂಪರೆಯ ಹಿರಿಯರೂ ದೊಡ್ಡ ಸಂಖ್ಯೆಯಲ್ಲಿ ಇದ್ದರು. ಯು. ಆರ್‌. ಅನಂತಮೂರ್ತಿ ತಮ್ಮ ಭಾರತೀಯ ಸಂಸ್ಕೃತಿ ಮತ್ತು ಲೇಖಕ ಎಂಬ ಪ್ರಬಂಧವನ್ನು ಮೊದಲು ಓದಿದ್ದು ಆ ದಿನ. ಮೊದಲ ಬಾರಿ ಅವರ ಮಹಣ್ತೀದ ಉಪನ್ಯಾಸವನ್ನು ನಾನು ಕೇಳಿದ್ದು. ಬಳಿಕ ನಡೆದ ಚರ್ಚೆಯನ್ನು ಗಮನಿಸಿದಾಗ ಶಾಸ್ತ್ರಿಗಳಂತಹ ಹೈಸ್ಕೂಲು ಅಧ್ಯಾಪಕರು ಹೇಗೆ ಬಹುಚಿಂತನೆಗಳ ಸಂಗಮಬಿಂದುವಾಗಬಲ್ಲರು ಎನ್ನುವ ಹೊಸ ತಿಳುವಳಿಕೆಯನ್ನು ಪಡೆದೆ. ಶಾಸ್ತ್ರಿಗಳ ಭಾಷಣದಲ್ಲಿ ಇದ್ದ ಸಜ್ಜನಿಕೆ, ಪ್ರೀತಿ ಲೋಕಜ್ಞಾನದ ಜೊತೆಗೆ, ಮೆತ್ತಗಿನ ಧ್ವನಿಯಲ್ಲಿ ಮನವನ್ನು ಅರಳಿಸುವ ಅಗಾಧಶಕ್ತಿಯನ್ನು ಕಂಡೆ. 

ಸಾಹಿತಿ, ಸಮಾಜವಾದಿ, ಚಿಂತಕ, ರೈತಹೋರಾಟಗಾರ ದಿನಕರ ದೇಸಾಯಿ ಅವರಿಗೆ ಅರುವತ್ತು ತುಂಬಿದ ನೆನಪಿನಲ್ಲಿ ಅವರ ಅಭಿಮಾನಿಗಳು ಅಂಕೋಲಾ ಕರ್ನಾಟಕ ಸಂಘದ ಹೆಸರಿನಲ್ಲಿ ಸಂಭಾವನಾ ಗ್ರಂಥ ದಿನಕರ ದರ್ಶನವನ್ನು ಸಿದ್ಧಪಡಿಸಿದ್ದರು. ಅಂಕೋಲಾದಲ್ಲಿ ಇದನ್ನು ಬಿಡುಗಡೆ ಮಾಡಲು ಎಸ್‌ವಿಪಿಯವರನ್ನು ಆಹ್ವಾನಿಸಿದರು. 1972 ಮೇ 26ರಂದು ಬಿಡುಗಡೆ ಸಮಾರಂಭಕ್ಕೆ ಹೋಗುವಾಗ ಗುರುಗಳ ಜೊತೆಗೆ ನಾನೂ ಅಂಕೋಲಾಕ್ಕೆ ಹೊರಟೆ. ಅಂಕೋಲಾಕ್ಕಿಂತ ಮೊದಲು ಗೋಕರ್ಣಕ್ಕೆ ಹೋಗಿ ಸಾಹಿತಿ, ದಾರ್ಶನಿಕ ಗೌರೀಶ ಕಾಯ್ಕಿಣಿ ಅವರ ದರ್ಶನ ಪಡೆದೆವು, ಮಾತುಕತೆ ಆಡಿದೆವು. ಅಂಕೋಲಾದಲ್ಲಿ ನನಗೆ ಆದ ಬಲುದೊಡ್ಡ ಲಾಭವೆಂದರೆ, ದಿನಕರ ದೇಸಾಯಿಯವರ ಜೊತೆಗೆ ನೇರವಾಗಿ ಮಾತಾಡಿದ್ದು. ಅವರು ತಮ್ಮ ಕೈಬರಹದಲ್ಲಿ “ಶ್ರೀ ವಿವೇಕ ರೈ ಇವರಿಗೆ ಪ್ರೀತಿಯ ಕಾಣಿಕೆ. ದಿನಕರ ದೇಸಾಯಿ, 26-5-1972′ ಎಂದು ಬರೆದುಕೊಟ್ಟ ಅವರ ಕವನಸಂಕಲನ ಹೂಗೊಂಚಲು ಈಗಲೂ ಅವರ ನೆನಪನ್ನು ಅಚ್ಚಳಿಯದೆ ಉಳಿಸಿದೆ. ದಿನಕರ ದರ್ಶನ ಗ್ರಂಥದ ಸಂಪಾದಕರು ಗೌರೀಶ ಕಾಯ್ಕಿಣಿ; ಕಾರ್ಯದರ್ಶಿ ವಿ. ಎ. ಜೋಶಿ. ಜೋಶಿ ಅವರು ನನಗೆ ಕೊಟ್ಟ ದಿನಕರ ದರ್ಶನದ ಪ್ರತಿಯನ್ನು ಆಗಾಗ ಓದುತ್ತ ದೇಸಾಯಿಯವರ ಬದುಕು-ಬರಹದ ಬೆಳಕನ್ನು ಕಾಣುತ್ತಿದ್ದೇನೆ. ಅವರ ಕವನ-ನನ್ನ ದೇಹದ ಬೂದಿಯ ಸಾಲುಗಳು…

ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಬೂದಿಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟುಸಾವಿನಲ್ಲಿ.

(ಫೊಟೊ ಕೃಪೆ : “ಅರುವತ್ತರ ಅರಳು’ -ಎಸ್‌. ವಿ. ಪರಮೇಶ್ವರ ಭಟ್ಟ , 1973)

ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.