ಜೂನೊಂದು ನೆನಪು, ಎದೆಯಾಳದಿಂದ…


Team Udayavani, May 28, 2017, 3:45 AM IST

school.jpg

ಸ್ಕೂಲ್‌ವ್ಯಾನ್ನಲ್ಲಿ ಓಡಾಡುವ ಈ ಕಾಲದ ಮಗುವಿಗೆ ಇಂಥಾದ್ದೊಂದು ಆತ್ಮೀಯ ಪತ್ರ ಅಸಂಗತವೆನಿಸೀತು. ಆದರೂ ಇರಲಿ !

ಮಗೂ,
ಶಾಲೆ ಸುರುವಾಗಿದೆ. ಅರ್ಧ ವರ್ಷ ಕಳೆದು ಕ್ಯಾಲೆಂಡರು ತನ್ನ ಮುಖ ಮಗುಚಿ ಹೊಸ ಪುಟಕ್ಕೆ ತೆರೆದುಕೊಳ್ಳುವ ಹೊತ್ತಿಗೆ, ಸುಡುಬಿಸಿಲಿಗೆ ಕಾದು ಗಾರಾದ ನೆಲಕ್ಕೆ ಮೊದಲ ಮಳೆ ಬಿದ್ದು ವೆಲ್ವೆಟ್‌ ಹುಳಗಳು ಅಂಗಳವೆಲ್ಲ ಪುಟ್‌ಪುಟ್ಟ ಹೆಜ್ಜೆ ಇಡುತ್ತ ಓಡಾಡುವ ಹೊತ್ತಿಗೆ, ಹೊಲದಲ್ಲಿ ಗೊರಬು, ಕಾಡಲ್ಲಿ ಚಾತಕ ಪಕ್ಷಿ, ಸಿಟಿಯಲ್ಲಿ ರೈನ್‌ಕೋಟುಗಳು ಪ್ರತ್ಯಕ್ಷವಾಗುವ ಹೊತ್ತಿಗೆ ಶಾಲೆ ಸುರುವಾಗಿದೆ. ಶಾಲೆಯ ಮೊದಲ ದಿನವೆಂದರೆ ಬೆಂಗಳೂರಿನಂಥ ಸಿಟಿಯಲ್ಲಿ ಶಾಲೆಗಳಿರುವ ದಾರಿಗಳಲ್ಲಿ ಟ್ರಾಫಿಕ್‌ ಜಾಮು. ಹಸಿರು-ನೀಲಿ-ಕಂದು ಬಣ್ಣದ ಲಂಗ, ಪ್ಯಾಂಟುಗಳು, ಮಣಭಾರದ ಸ್ಕೂಲ್‌ ಬ್ಯಾಗುಗಳು, ಶಾಲೆಯ ಮುಂದಿನ ಅಂಗಳದಲ್ಲಿ ಜಮಾಯಿಸಿದ ಅಸೆಂಬ್ಲಿಗಳು, ಅಲ್ಲಿ ಮೊದಲ ದಿನ ಶಿಕ್ಷಕರು ಕೊಡುವ ಉಪದೇಶಾಮೃತ, ನೊಟೀಸ್‌ ಬೋರ್ಡಿನಲ್ಲಿ ವರ್ಷದ ಟೈಮ್‌ಟೇಬಲ್ಲು, ಹೊಸ-ಹಳೆ ಮುಖಗಳ ಸಮಾಗಮ.

ಮೂಡಿಗೆರೆ, ಸಾಸ್ತಾನ, ಕಬಕದಂಥ ಸಣ್ಣ ಊರುಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಮಳೆ ಬಿದ್ದ ಗದ್ದೆಯ ಬದುವಿನಲ್ಲಿ ಮೂಡಿದ ಚಪ್ಪಲಿಯ ಹೆಜ್ಜೆಗುರುತು. ಗಾಳಿಮಳೆಯ ಬೀಸಿಗೆ ಬಲಿಯಾಗಿ ಮೂಳೆ ಮುರಿದುಕೊಂಡು ಮುದುರಿಕೂತ ಕೊಡೆ. ಎರಡು ತಿಂಗಳಿಂದ ಬಣಗುಡುತ್ತಿದ್ದ ಶಾಲೆಯಂಗಳದಲ್ಲಿ “ಸ್ವಾಮಿದೇವನೆ ಲೋಕಪಾಲನೆ’ಯ ಅನುರಣನ. 

ಬಿಡು, ಅವೆಲ್ಲ ಭಾರದ ಮಾತುಗಳಾದಾವ‌ು. ನಿನ್ನ ಮನಸ್ಸಿಗೆ ಅರ್ಥವಾಗುವಂಥ ಸಣ್ಣ ಶಬ್ದಗಳಲ್ಲಿ ದೊಡ್ಡ ವೇದಾಂತ ತರುವುದು ಹೇಗೆಂದು ಯೋಚಿಸುವೆ! ಅಥವಾ ಅದರ ಬದಲು ನನ್ನದೇ ಶಾಲಾದಿನಗಳ ಕತೆ ನಿನಗೆ ಹೇಳುವೆ. ಕತೆ ಎಂದರೆ ಬಾಯ್ಬಿಡದ ಮಕ್ಕಳು ಯಾರಿದ್ದಾರೆ ಅಲ್ಲವೆ? ನಾವು ಚಿಕ್ಕವರಿದ್ದಾಗ ಬಾಲವಾಡಿಗಳಿನ್ನೂ ಪ್ರಚಾರ ಪಡೆದಿರಲಿಲ್ಲ. ಹೆಚ್ಚಿನವರು ಎಲ್‌ಕೆಜಿ, ಯುಕೆಜಿಗಳ ಮುಖ ನೋಡದೆ ನೇರವಾಗಿ ಒಂದನೇ ತರಗತಿಗೆ ಜಮೆಯಾಗುತ್ತಿದ್ದವರು.

ಮೊದಲ ದಿನ ಒಂದನೇ ಕ್ಲಾಸಿಗೆ ಬಂದವರಿಗೆ ಅಳುವಿನ ವೃಂದಗಾಯನದ ಉಚಿತ ಪ್ರದರ್ಶನ ಕಾಣಸಿಗುತ್ತಿತ್ತು. ಪಾಪ ನಮ್ಮ ಟೀಚರುಗಳು ಆ ಅಳುಮುಂಜಿ ಮಕ್ಕಳನ್ನು ಸಮಾಧಾನಪಡಿಸಲು ಏನೆಲ್ಲ ಸರ್ಕಸ್ಸು ಮಾಡಬೇಕಾಗಿ ಬರುತ್ತಿತ್ತು! ಹಾಡು, ಕುಣಿತ, ಒಂದಷ್ಟು ಕಸರತ್ತು ಎಲ್ಲ ಮಾಡಿಸಿ ಶಾಲೆಯೆಂದರೆ ಜೈಲೋ ಯಾತನಾಶಿಬಿರವೋ ಗ್ಯಾಸ್‌ ಚೇಂಬರೋ ಅಲ್ಲ ಎಂಬುದನ್ನು ಮನದಟ್ಟು ಮಾಡಿಸುವಷ್ಟರಲ್ಲಿ ಟೀಚರುಗಳಿಗೇ ಬವಳಿ ಬರುತ್ತಿತ್ತೇನೋ. ಎಷ್ಟು ಅತ್ತರೂ ಶಾಲೆಯೆಂಬ ಪ್ರತಿದಿನದ ಬಂಧನದಿಂದ ಬಿಡುಗಡೆಯಿಲ್ಲ ಎಂಬುದು ನಿಧಾನವಾಗಿ ಅರ್ಥವಾಗುತ್ತ ಬಂದಂತೆ ಮಕ್ಕಳ ಅಳು ಕಡಿಮೆಯಾಯಿತು. ಒಂದೆರಡು ವಾರಗಳಾಗುವಷ್ಟರಲ್ಲಿ ನಾವು ಶಾಲೆಯೆಂಬ ವ್ಯವಸ್ಥೆಗೆ ಒಗ್ಗಿಕೊಂಡೆವು.

ಭಾಷೆಯೆಂದರೇನೆಂದೇ ಗೊತ್ತಿಲ್ಲದಿದ್ದರೂ ಅ, ಆ, ಇ, ಈ ಎಂದು ಸ್ಲೇಟಿನಲ್ಲಿ ತಿದ್ದಿದೆವು. ಗಣಿತವೆಂದರೇನೆಂದೇ ತಿಳಿಯದಿದ್ದರೂ “ಒಂದೂ ಎರಡೂ ಬಾಳೆಲೆ ಹರಡೂ’ ಎಂದು ರಾಗಬದ್ಧವಾಗಿ ಹಾಡಿದೆವು. ಕಲಿಕೆ ಎಂಬುದರ ಪ್ರಾಥಮಿಕ ಪರಿಚಯ ಇಲ್ಲದೆ ಹೋದರೂ ಕಲಿಯುವುದನ್ನು ಪ್ರಾರಂಭಿಸಿದೆವು. ಅದು ಹಕ್ಕಿ, ಇದು ಉಭಯವಾಸಿ, ಮರವೂ ಉಸಿರಾಡುತ್ತದೆ, ಡಜನಿನಲ್ಲಿ ಹನ್ನೆರಡು ಬಾಳೇಹಣ್ಣಿರುತ್ತದೆ, ದೋಸೆ ವೃತ್ತಾಕಾರ, ಗಡಿಯಾರದ ದೊಡ್ಡ ಮುಳ್ಳು ದಿನಕ್ಕೆರಡು ಸಲ ಸುತ್ತುತ್ತದೆ ಎಂಬ ಎಲ್ಲ ಸಂಗತಿಗಳನ್ನು ನಿಧಾನವಾಗಿ ಕಲಿಯುತ್ತ ಬಂದೆವು. ಶಾಲೆಗೆ ಹೋದರೆ ಹೀಗೆ ಪ್ರತಿದಿನವೂ ಏನಾದರೊಂದು ಹೊಸ ಸಂಗತಿ ಕಲಿಯಬಹುದು ಎಂಬುದು ಗೊತ್ತಾಯಿತು. ಜಗತ್ತಿನಲ್ಲಿ ನಮಗೆ ಗೊತ್ತಿಲ್ಲದ ಅದೆಷ್ಟು ಸಂಗತಿಗಳಿವೆ, ನಮ್ಮ ಟೀಚರಿಗೆ ಅದೆಷ್ಟೆಲ್ಲ ಗೊತ್ತಿದೆ- ಎಂದು ಅಚ್ಚರಿಯಾಗುತ್ತಿತ್ತು. ಅವರಷ್ಟೇ ತಿಳಿವಳಿಕೆ ನಮಗೆ ಯಾವಾಗ ಬರುವುದೋ ಎಂಬ ಕಾತರ ಹುಟ್ಟುತ್ತಿತ್ತು. ಶಾಲೆ ನಮ್ಮ ಅಕ್ಷರ ತಿದ್ದಿತು. ಬೆರಳು ಮಡಚದೆ ಲೆಕ್ಕ ಹಾಕುವುದನ್ನು ಕಲಿಸಿತು. ರಾಗವಾಗಿ ವೃಂದಗಾಯನ ಹಾಡುವುದನ್ನು ಹೇಳಿಕೊಟ್ಟಿತು.

ಟೊಪ್ಪಿಯಾಟದಿಂದ ಹಿಡಿದು ಕ್ರಿಕೆಟ್ಟಿನವರೆಗಿನ ಹತ್ತಾರು ಆಟಗಳ ಪರಿಚಯ ಮಾಡಿಸಿತು. ಮೇಲಕ್ಕೆ ಧಿಗಣ ಹಾರಿದವನು ಕೆಳಗೆ ಬಿದ್ದು ಮೈ ತರಚಿಕೊಳ್ಳುತ್ತಾನೆ ಎಂಬುದನ್ನು ಶಾಲೆಯ ಮೈದಾನ ಹೇಳಿಕೊಟ್ಟರೆ, ನಿಧಾನವಾಗಿ ಕಲಿವವನೂ ನಿರಂತರವಾಗಿ ಪ್ರಯತ್ನಿಸಿದರೆ ಎಲ್ಲರನ್ನೂ ಹಿಂದಿಕ್ಕಬಹುದೆಂಬುದನ್ನು ಕ್ಲಾಸ್‌ರೂಮು ಹೇಳಿಕೊಟ್ಟಿತು. ಶಾಲೆ ನಮ್ಮಲ್ಲಿ  ಸ್ಪರ್ಧಾಮನೋಭಾವ ಬೆಳೆಸಿತು. ಆದರೆ, ಇಬ್ಬರ ನಡುವೆ ಇರಲೇಬೇಕಾದ ಗೆಳೆತನಗಳನ್ನೂ ಉಳಿಸಿತು.

ಶಾಲೆಯ ಜೀವನ ಮುಗಿಸಿ ಮೂರ್ನಾಲ್ಕು ದಶಕಗಳಾದ ಹೊತ್ತಲ್ಲಿ ಹಿಂತಿರುಗಿ ನೋಡಿದರೆ ಕಾಣುವುದೇನು? ಕ್ಲಾಸಿನೊಳಗೆ ಕೂತು ಕೇಳಿದ ಪಾಠಗಳಷ್ಟೇ ಅಲ್ಲ; ವರಾಂಡದಲ್ಲಿ ನಾವು ಹಾಕುತ್ತಿದ್ದ ಬಗೆಬಗೆಯ ಪಲ್ಟಿಗಳು, ಗೆಳೆಯರೊಡನೆ ಎಂದೂ ಬಗೆಹರಿಯದ ಜಗಳಗಳು, ಊಟದ ಹೊತ್ತಲ್ಲಿ ಬುತ್ತಿ ತೆರೆದಿಟ್ಟು ಕೂತು ಹೊಡೆಯುತ್ತಿದ್ದ ಪಟ್ಟಾಂಗಗಳು, ಲ್ಯಾಬಿನಲ್ಲಿ ಆ್ಯಸಿಡ್‌ನ‌ ಬಾಟಲು ತೆರೆಯಲು ಹೋಗಿ ಬಟ್ಟೆ ಸುಟ್ಟುಕೊಂಡದ್ದು, ಟ್ಯೂನಿಂಗ್‌ ಫೋರ್ಕನ್ನು ಮೇಜಿಗುಜ್ಜಿ ಕಿವಿಗೆ ಹಿಡಿದಾಗ ತಲೆ ತುಂಬಿಕೊಂಡಿದ್ದ “ಘೂಂ’ ಎಂಬ ನಾದ, ವಾರ್ಷಿಕೋತ್ಸವದ ನಾಟಕದಲ್ಲಿ ತಪ್ಪು$ದೃಶ್ಯದಲ್ಲಿ ರಂಗ ಪ್ರವೇಶಿಸಿ ಫ‌ಜೀತಿ ಪಟ್ಟದ್ದು… ಎಲ್ಲವೂ ಸಿನೆಮಾ ರೀಲಿನ ಚಿತ್ರಗಳಂತೆ ಮನಸ್ಸಿನಲ್ಲಿ ಹಾದುಹೋಗುತ್ತವೆ. ಅಕºರ ಪಾಣಿಪತದ ಯುದ್ಧ ಗೆದ್ದ ವರ್ಷ ನೆನಪಿಲ್ಲ. ಆದರೆ ಹಿಸ್ಟ್ರಿಯ ಮೇಷ್ಟ್ರು ಹೇಳುತ್ತಿದ್ದ ಪೋರ್ಚುಗೀಸರ ನಾವೆಗಳ ಮೇಲೆ ಅಬ್ಬಕ್ಕ ರಾಣಿ ಬೆಂಕಿಯ ಸೂಡಿ ಎಸೆದು ಸೋಲಿಸಿದ ಕತೆ ಇನ್ನೂ ಎದೆಯಲ್ಲಿದೆ.

ವರ್ಗಸಮೀಕರಣ ಬಿಡಿಸುವ ಸೂತ್ರದ ನೆನಪಿಲ್ಲ. ಆದರೆ ಹೋಮ್‌ವರ್ಕ್‌ ಮಾಡದೆ ಮೈಗಳ್ಳತನ ಮಾಡಿದ್ದಕ್ಕೆ ಮೇಷ್ಟ್ರು ಬೀಸಿದ ಪೆಟ್ಟಿಗೆ ಬೆನ್ನು ಚುರುಗುಟ್ಟಿದ್ದು, ಇನ್ನೆಂದೂ ಮನೆಗೆಲಸ ತಪ್ಪಿಸಬಾರದೆಂಬ ಎಚ್ಚರ ಮೂಡಿದ್ದು ಹಸಿರಾಗಿದೆ. ಅರಿಸಮಾಸದ ವಿಶೇಷವನ್ನು ಕನ್ನಡ ಟೀಚರು ಹೇಳಿದ್ದೆಲ್ಲ ಈಗ ಮಸುಕು ಮಸುಕು. ಆದರೆ, ಅದೇ ಟೀಚರು ವಾರಾಂತ್ಯದಲ್ಲಿ ಪಕ್ಕದ ಹಳ್ಳಿಗೆ ನಮ್ಮನ್ನೆಲ್ಲ ಕರೆದೊಯ್ದು ಮರಗಿಡಗಳ ಪರಿಚಯ ಮಾಡಿಕೊಟ್ಟದ್ದರಿಂದ ಇಂದು ಒಂದಿಷ್ಟಾದರೂ ಮರಗಳನ್ನು ಗುರುತಿಸುವ ಸಾಮರ್ಥ್ಯ ಉಳಿದಿದೆ. ಶಾಲೆ ನಮಗೆಂದೂ ಕ್ಲಾಸಿನ ಪಠ್ಯಕ್ಕೆ, ಪರೀಕ್ಷೆಯಲ್ಲಿ ಬರೆವ ಉತ್ತರಕ್ಕೆ ಅಥವಾ ಗಳಿಸುವ ಅಂಕಕ್ಕೆ ಸೀಮಿತವಾದ ಅನುಭವವಾಗಿರಲಿಲ್ಲ. ಶಾಲೆ ಎಂಬುದೇ ಒಂದು ಸಮಗ್ರ ಅನುಭವ. ಅಲ್ಲಿ, ಪ್ರತಿಕ್ಷಣವೂ ನಾವು ಕಲಿತೆವು, ಕಲಿತು ಬೆಳೆದೆವು ಎಂಬುದು ಆಗ ಅಲ್ಲ, ಈಗ ಅರ್ಥವಾಗುತ್ತಿದೆ.

ಮಗೂ, ಇದೆಲ್ಲ ನಿನಗೆ ಅರ್ಥವಾಗದ ಸಂಗತಿ. ಗೊತ್ತು. ಆದರೆ, ಇಷ್ಟಂತೂ ಹೇಳಬಲ್ಲೆ, ನಿನ್ನ ಬದುಕಿನ ಕನಿಷ್ಠ ಐದನೆಯ ಒಂದಂಶ ಶಾಲೆಯಲ್ಲೇ ಕಳೆದುಹೋಗುತ್ತದೆ! ಮನುಷ್ಯನ ಜೀವಿತ 60 ವರ್ಷ ಎನ್ನುವುದಾದರೆ ನಮ್ಮೆಲ್ಲರ ಬದುಕಿನ ನಾಲ್ಕನೇ ಒಂದಂಶವನ್ನು ಆವರಿಸಿಕೊಳ್ಳುವುದು ಶಾಲೆಯೇ. ಮಾತ್ರವಲ್ಲ, ನಮ್ಮ ಇಡೀ ಬದುಕನ್ನು ರೂಪಿಸುವ ಮಹತ್ತರ ಕೆಲಸವನ್ನೂ ಅದು ಮಾಡುತ್ತದೆ. ನಾವು ಮುಂದೆ ಹೇಗೆ ಬೆಳೆಯುತ್ತೇವೆ, ಹೇಗೆ ಯೋಚಿಸುತ್ತೇವೆ, ಏನೇನು ಸಾಧನೆ ಮಾಡುತ್ತೇವೆ ಎಂಬುದಕ್ಕೆಲ್ಲ ಶಾಲಾಜೀವನದಲ್ಲೇ ಬೀಜಾರೋಪಣವಾಗುತ್ತದೆ. ಶಾಲೆಯಲ್ಲಿ ನಡೆದುಹೋದ ಯಾವುದೋ ಕೆಟ್ಟ ಘಟನೆ ಜೀವನವೆಲ್ಲ ಕಾಡಬಹುದು. ಹಾಗೆಯೇ ಶಾಲೆಯಲ್ಲಿ ನಡೆದ ಸಿಹಿಘಟನೆಯೊಂದು ಬದುಕಿನ ಗತಿಯನ್ನೇ ಬದಲಿಸಿಹಾಕಬಹುದು. ನಾವು ಜೀವನದಲ್ಲಿ ಏನೇನು ಆಗಿದ್ದೇವೋ ಆಗಲಿದ್ದೇವೋ ಅವೆಲ್ಲಕ್ಕೂ ನಾವು ಶಾಲಾದಿನಗಳನ್ನು ಹೇಗೆ ಕಳೆದೆವು ಎಂಬ ಅಂಶ ತಳುಕು ಹಾಕಿಕೊಂಡಿದೆ ಎಂಬುದಂತೂ ಸತ್ಯ. ಹಾಗಾಗಿ ಶಾಲೆಯಲ್ಲಿ ತರಗತಿಯ ಒಳಗೂ ಹೊರಗೂ ಬಾಲ್ಯವೆಂಬ ಬದುಕನ್ನು ಅತ್ಯುತ್ತಮ ರೀತಿಯಲ್ಲಿ ನೀನು ಕಳೆಯುವಂತಾಗಲಿ. 

ಮೊತ್ತಮೊದಲ ಪಾಠ
ನಾವೆಷ್ಟು ಅತ್ತರೂ ಗೋಗರೆದರೂ ಕೆಲವೊಂದು ಘಟನೆಗಳನ್ನು ಬದಲಿಸಲು ಸಾಧ್ಯವಿಲ್ಲ ಎಂಬುದೇ ಶಾಲೆ ನಮಗೆ ಕಲಿಸಿಕೊಡುವ ಮೊತ್ತಮೊದಲ ಪಾಠ. ಹಾಗೆಯೇ ಯಾವುದೇ ಸಂಗತಿ ಕೂಡ ಬದುಕಿನಲ್ಲಿ ಶಾಶ್ವತವಲ್ಲ. ಈ ವರ್ಷವಿದ್ದ ಕ್ಲಾಸು, ಪುಸ್ತಕ, ಟೀಚರು, ಗೆಳೆಯರು ಮುಂದಿನ ವರ್ಷಕ್ಕೆ ಬದಲಾಗಬಹುದು; ಬದುಕು ಬದಲಾಗುತ್ತ ಹೋದಂತೆ ಅದಕ್ಕೆ ನಮ್ಮನ್ನು ಒಡ್ಡಿಕೊಳ್ಳುತ್ತ ಒಗ್ಗಿಕೊಳ್ಳುತ್ತ ಹೋಗಬೇಕು ಎಂಬ ಪಾಠವನ್ನು ಕಲಿಸುವುದೂ ಅದೇ ಶಾಲೆಯೇ. ಗೆಳೆಯರಲ್ಲಿ ವಿಶ್ವಾಸವಿರಿಸಬೇಕೆಂದು ತಿಳಿಸುವ ಶಾಲೆಯಲ್ಲಿಯೇ ಅತಿವಿಶ್ವಾಸದಿಂದ ಮೋಸ ಹೋಗುವ ಪ್ರಕರಣಗಳೂ ನಡೆಯಬಹುದು. ನಾವೆಷ್ಟೇ ಚೆನ್ನಾಗಿ ತಯಾರಾದರೂ ನಮ್ಮನ್ನು ಅಚ್ಚರಿಯಲ್ಲಿ ಬೀಳಿಸುವಂಥ ಪರೀಕ್ಷೆಗಳು ಇದ್ದೇ ಇರುತ್ತವೆ ಎಂಬುದನ್ನು ಕಲಿಸುವುದು ಶಾಲೆ. ಬದುಕೆಂಬುದು ನಿರಂತರ ಸ್ಪರ್ಧೆ; 99 ಅಂಕ ಪಡೆದಾತನ ಆಚೆಗೆ ನೂರಕ್ಕೆ ನೂರಂಕ ಪಡೆದ ಇನ್ನೊಬ್ಬ ಇರಬಹುದೆಂಬ ಎಚ್ಚರ ಮತ್ತು ವಿನಯವನ್ನು ಮೂಡಿಸುವುದು ಶಾಲೆ. ನಾವು ಹೇಗೆ ಮಾತಾಡಬೇಕು, ಬರೆಯಬೇಕು, ಯೋಚಿಸಬೇಕು, ನಡೆದುಕೊಳ್ಳಬೇಕು ಮತ್ತು ಅಂತಿಮವಾಗಿ ಹೇಗೆ ಗೌರವಯುತವಾಗಿ ಬದುಕಬೇಕು ಎಂಬುದನ್ನು ತಿಳಿಸಿಕೊಡುವ ಮಹತ್ತರ ಕೆಲಸವನ್ನು ಶಾಲೆ ಮಾಡುತ್ತದೆ. ಶಿಕ್ಷಿತರೆಲ್ಲ ವಿದ್ಯಾವಂತರಲ್ಲ ನಿಜ; ಆದರೆ ವಿದ್ಯಾವಂತರಾಗಲು ಬೇಕಾದ ಎಲ್ಲ ಸೌಕರ್ಯಗಳನ್ನೂ ಶಾಲೆ ಒದಗಿಸಿಕೊಡುತ್ತದೆ.

ಶಾಲೆಯಲ್ಲಿ ಲಭ್ಯವಿರುವ ಗೆಳೆಯರು, ಶಿಕ್ಷಕರು, ಮೈದಾನ, ಪ್ರಯೋಗಾಲಯ, ಲೈಬ್ರರಿ, ಸಭಾಂಗಣ – ಇವೆಲ್ಲವನ್ನೂ ಹೇಗೆ ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತೇವೆಂಬುದರ ಮೇಲೆ ನಮ್ಮ ಬದುಕಿನ ಯಶಸ್ಸು ನಿಂತಿದೆ. ನಾವು ನಾಳೆಯ ವಿಜ್ಞಾನಿಗಳ್ಳೋ ಓಟಗಾರರೋ ವಾಗ್ಮಿಗಳ್ಳೋ ನಟರೋ ಆಗುವುದಕ್ಕೆ ಕಾರಣವಾಗುವ ಪ್ರಾಥಮಿಕ ಅನುಭವ ಮತ್ತು ಅವಕಾಶ ಒದಗುವುದು ಶಾಲೆಯಲ್ಲಿಯೇ.  

ಹಾಗಾಗಿ ಮಗೂ, ಶಾಲೆಯನ್ನು ಪ್ರೀತಿಸು. ನಿನ್ನ ಶಿಕ್ಷಕರನ್ನು ಗೌರವಿಸು; ಆದರೆ ಪ್ರಶ್ನಿಸುವ ಅಧಿಕಾರವನ್ನೂ ಉಳಿಸಿಕೋ. ಗೆಳೆಯರನ್ನು ಪ್ರೀತಿಸು; ಆದರೆ ಅಂತರ ಕಾಯ್ದುಕೊಳ್ಳುವ ಎಚ್ಚರ ನಿನಗಿರಲಿ. ತಾನಾಗಿ ಒದಗಿ ಬರುವ ಅವಕಾಶಗಳನ್ನು ಕೈಚೆಲ್ಲಬೇಡ. ಹಾಗೆಂದು ಬೇರೆಯವರ ಅವಕಾಶಗಳನ್ನು ಕಬಳಿಸಿ ಬೆಳೆವ ಹಪಾಹಪಿಯೂ ಬೇಡ. ಎಲ್ಲರೊಂದಿಗೆ ಬೆರೆತು ಸಾಧಿಸುವ ಕೆಲಸದಲ್ಲಿ ನಂಬಿಕೆಯಿರಲಿ; ಆದರೆ ಪರೀಕ್ಷೆ ಬರೆವಾಗ ನಿನ್ನ ಸಾಮರ್ಥ್ಯವನ್ನಷ್ಟೇ ನೆಚ್ಚಿಕೊಳ್ಳುವ ಧೈರ್ಯವೂ ಬರಲಿ. ಗಣಿತ ಪಾಠದ ನಂತರ ಗೇಮ್ಸ್‌  ಪೀರಿಯೆಡ್‌ ಬರುವಂತೆ ಪ್ರತಿಯೊಂದು ಕಷ್ಟದ ನಂತರ ಸುಖದ ದಿನಗಳೂ ಬರುತ್ತವೆ ಎಂಬುದನ್ನು ಮರೆಯದಿರು. ಅರ್ಥವಾಗದ್ದನ್ನು ತಿಳಿಯಲೇಬೇಕೆಂಬ ಹಠ ಬೆಳೆಸಿಕೋ. ಹೊಸ ವಿಷಯ ತಿಳಿದಾಗ ಆಗುವ ಖುಷಿಯ ಅನುಭವ ನಿನಗಿರಲಿ. ನೀನು ಬರೆದ ನೋಟ್ಸ್‌ ಪುಸ್ತಕದಲ್ಲಿ ಮೊದಲ ಪುಟದಂತೆಯೇ ಕೊನೆ ಪುಟವೂ ಇರಲಿ. ಬರಬರುತ್ತ ಅಕ್ಷರಗಳ ಮೇಲಿನ ನಿಷ್ಠೆ ತೆಳುವಾಗದಿರಲಿ. ಒಂದೇ ಒಂದು ತುಂಡು ಸೋಡಿಯಂ ಬಿದ್ದರೂ ಪ್ರಶಾಂತ ನೀರಿನ ಹೂಜಿಯಲ್ಲಿ ಹೊಗೆಯೇಳುವಂತೆ, ಒಂದೆರಡು ಕೆಟ್ಟ ವಿಚಾರಗಳೇ ಇಡೀ ಮನಸ್ಸನ್ನು ಕೆಡಿಸಿಬಿಡಬಹುದು ಎಂಬುದನ್ನು ಅರಿತುಕೋ. ಬದುಕಿಗೆ ಅಗತ್ಯವಾಗಿ ಬೇಕೇ ಬೇಕಾದ ಶಿಸ್ತನ್ನು ಶಾಲೆಯ ಟೈಮ್‌ಟೇಬಲ್‌ ನಿನಗೆ ತಿಳಿಸಿಕೊಡಲಿ. ಕೊನೆಯದಾಗಿ ಹೇಳಬೇಕೆಂದರೆ, ಜೀವನ ಎಂಬುದು ಬೆನ್ನಲ್ಲಿ ಹೊತ್ತ ಸ್ಕೂಲ್‌ ಬ್ಯಾಗಿನಂತೆ. ಕೆಲವರು ಅದನ್ನು ತೆರೆದು, ಓದಿ, ಅರ್ಥೈಸಿಕೊಂಡು ದಿನಗಳನ್ನು ಖುಷಿಖುಷಿಯಾಗಿ ಕಳೆಯುತ್ತಾರೆ. ಇನ್ನು ಕೆಲವರಿಗೆ ಅದು ಜೂನ್‌ನಿಂದ ಎಪ್ರಿಲ್‌ನವರೆಗೆ ಹೊತ್ತೇ ಹೊರಬೇಕಾದ, ಕೆಳಗಿಡಲಾರದ, ಅನಿವಾರ್ಯ ಭಾರವಾಗಿಯಷ್ಟೇ ಉಳಿಯುತ್ತದೆ. 

ಶಾಲೆಯ ಜೀವನ ಹೇಗಿರಬೇಕು? ಐವತ್ತು ವರ್ಷ ಕಳೆದು ಸ್ಮರಿಸಿದರೂ ಒತ್ತರಿಸಿಬರುವಂಥ ಹಲವು ಮಧುರ ಸ್ಮರಣೆಗಳನ್ನು ತರುವಂತಿರಬೇಕು.

– ಆರ್‌. ಸಿ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.