ಸಂವಿಧಾನ ಭಾರತೀಯರ ಬದುಕಿನ ಸುವಿಧಾನ


Team Udayavani, Jan 26, 2020, 5:39 AM IST

ras-9

ದೇಶಕ್ಕೊಂದು ಸಂವಿಧಾನವನ್ನು ರೂಪಿಸಿ ಅನುಮೋದಿಸಿದ್ದು 1949 ನವೆಂಬರ್‌ 26ರಂದು. ಹೀಗೆ ಅಂಗೀಕರಿಸಿದ ಸಂವಿಧಾನ ಜಾರಿಗೆ ಬಂದದ್ದು 1950 ಜನವರಿ 26ರಂದು.

ಅಪರೂಪಕ್ಕೊಮ್ಮೊಮ್ಮೆ ನಮ್ಮ ಸಂವಿಧಾನದ ಕುರಿತು ನ್ಯಾಯಾಲಯಗಳ ಹೊರಗಡೆ ಜನ ಚರ್ಚೆ ಮಾಡುತ್ತಿರುತ್ತಾರೆ. ಇವುಗಳಲ್ಲಿ ಬಹುತೇಕ ಚರ್ಚೆಗಳು ಅಜ್ಞಾನ ಇಲ್ಲವೇ ಅಲ್ಪಜ್ಞಾನದವು. ಇದರಿಂದಾಗಿ ಸಂವಿಧಾನದ ಮೂಲ ಸ್ವರೂಪವು ಜನಮಾನಸದಲ್ಲಿ ನೈಜವಾಗಿ ಮೂಡಿಬಂದಿದೆಯೇ ಅಥವಾ ಬರಲಿದೆಯೇ ಎಂಬ ಸಂಶಯ ವಿಷಯ ತಜ್ಞರನ್ನು ಕಾಡುತ್ತದೆ. ಆದರೆ, ಪ್ರಜಾತಂತ್ರದಲ್ಲಿ ಬಹುಮತವೇ ಸತ್ಯವೆಂದು ಪ್ರಮಾಣಿತವಾಗುವ ಸಂದರ್ಭದಲ್ಲಿ ನಮ್ಮೆದುರು ಉಳಿಯುವುದು ಅರ್ಧಸತ್ಯದಂತೆ ಗೋಚರಿಸುವ ಆದರೆ ತನ್ನ ಹೊಟ್ಟೆಯಲ್ಲಿ ಪೂರ್ಣ ಸತ್ಯವನ್ನು ಹೊತ್ತ ನಮ್ಮ ಸಂವಿಧಾನ.

ಮಾಮೂಲಾಗಿ ಕಾನೂನುತಜ್ಞರ ವಲಯವಾದ ಸಂವಿಧಾನ ಮತ್ತು ಕಾನೂನುಗಳ ಕುರಿತು ಇಷ್ಟು ಚರ್ಚೆ ನಡೆಯುವುದಕ್ಕೆ ಕಾರಣವೇನು? ಪ್ರಾಯಃ ಕಾನೂನಿನ ಅಜ್ಞಾನವು ಕ್ಷಮಾರ್ಹವಲ್ಲ ಎಂಬ ಲೋಕರೂಢಿಯ ಉಕ್ತಿಯೇ ಇದಕ್ಕೆ ಕಾರಣವಿರಬೇಕು. ವಾಸ್ತವದಲ್ಲಿ ಕಾನೂನು ಅರ್ಥವಾಗುವುದೇ ಇಲ್ಲ. ಅದು ಕಾಲ-ಸಂದರ್ಭ ಮತ್ತು ಪ್ರದೇಶವನ್ನು ಅವಲಂಬಿಸಿ ವಿವಿಧಾರ್ಥಗಳನ್ನು ಹೊಳೆಯಿಸುತ್ತದೆ. ಆದ್ದರಿಂದ ಕಾನೂನಿನ ಬುನಾದಿಯಾದ ಸಂವಿಧಾನವು ನಮ್ಮ ನಮ್ಮ ಭಿನ್ನ ಅರಿವಿಗೆ ನಿಲುಕುತ್ತದೆಯೆಂಬ ಅಭಿಪ್ರಾಯವು ಜನಸಾಮಾನ್ಯರಲ್ಲಿದೆ.

ಅನೇಕ ದಶಕಗಳ ಅನಂತರ ನಮ್ಮ ಸಂವಿಧಾನದ ಕುರಿತು ಹಳ್ಳಿಯಿಂದ ದಿಲ್ಲಿಯವರೆಗೆ ಚರ್ಚೆ ನಡೆಯುತ್ತಿದೆ. ಪರ-ವಿರೋಧಗಳ ನಿಲುವಿಗೆ ಸಂಬಂಧಿಸಿದ್ದು. ಸಿದ್ಧಾಂತ, ವಿಚಾರ ಮತ್ತು ಮಾಹಿತಿಗೆ ತರ್ಕ-ವಾದ ಬೇಕಿಲ್ಲ. ಏನೀ ಸಂವಿಧಾನ? ಏನೀ ಪ್ರಜಾತಂತ್ರ?

ಆದ್ದರಿಂದಲೇ ಜನರಿಗೆ ಸಂವಿಧಾನದ ಕುರಿತು ಅರಿವು ಮತ್ತು ಎಚ್ಚರವನ್ನು ಮೂಡಿಸುವುದು ಕೂಡ ಸಾಂವಿಧಾನಿಕ ಅಗತ್ಯ; ಮಾತ್ರವಲ್ಲ ಕರ್ತವ್ಯ ಕೂಡ.

ಸಂವಿಧಾನವೆಂದರೇನು? ನಾವೆಲ್ಲರೂ ಮನೆಯ ಶಿಸ್ತಿನಿಂದ ಆರಂಭವಾಗಿ, ಶಾಲೆಯಲ್ಲಿ ಏಕರೂಪದ ಸೂತ್ರವನ್ನು ಹೆಣೆದು, ಒಂದು ಸಂಘದ ಸ್ಥಾಪನೆಯಲ್ಲಿಯೂ ನಿಯಮಾವಳಿಗಳನ್ನು ರೂಪಿಸುತ್ತೇವೆ. ಅದನ್ನು ರೂಪಿಸುವವರೂ ನಾವೇ; ನಿರೂಪಿಸುವವರೂ ನಾವೇ. ಅದು ನಮಗೆ ನಾವೇ ನೀಡುವ ಶಾಸನಾಧಿಕಾರ. ಆದರೆ, ಅದನ್ನು ನಿಯಂತ್ರಿಸುವ ಕಾನೂನುಗಳಿರುತ್ತವೆ. ಆದರೆ, ಈ ಕಾನೂನುಗಳ ಮೂಲಕ್ಕೂ ಒಂದು ಶಾಸನಾಧಿಕಾರವಿರಬೇಕಲ್ಲ? ಅರಸೊತ್ತಿಗೆಯ/ರಾಜಸತ್ತೆಯ ಕಾಲದಲ್ಲಿ ರಾಜನೇ ಶಾಸನಾಧಿಕಾರಿ. ರಾಜಾ ಪ್ರತ್ಯಕ್ಷ ದೇವತಾಃ! ಬ್ರಿಟನ್‌ನಲ್ಲಿ ಡಿವೈನ್‌ ರೈಟ್‌ ಈಸ್‌ ಕಿಂಗ್‌ಶಿಪ್‌, ದ ಕಿಂಗ್‌ ಕೇನ್‌ ಡು ನೋ ರಾಂಗ್‌ ಎಂಬ ಹೇಳಿಕೆಯಿತ್ತು. ಅದನ್ನು 13ನೆಯ ಶತಮಾನದಲ್ಲಿ ಮ್ಯಾಗ್ನಕಾರ್ಟಾದ ಮೂಲಕ ಪ್ರಜೆಗಳ ನಿಯಂತ್ರಣಕ್ಕೆ ಬದಲಾಯಿಸಲಾಯಿತು. ಭಾರತದಲ್ಲಿ ಈ ಪ್ರತ್ಯಕ್ಷ ದೇವರುಗಳ ಹಬ್ಬ ಸರಿಸುಮಾರು ಬ್ರಿಟಿಷ್‌ ಆಡಳಿತ ಕೊನೆಗೊಳ್ಳುವವರೆಗೂ ಮುಂದುವರಿದಿತ್ತು. ಒಂದು ಮನಸ್ಸು ಅಥವಾ ಅದರ ನಿಯಂತ್ರಣದಲ್ಲಿರುವ ಒಂದು ಅಥವಾ ಇನ್ನು ಕೆಲವು ಮನಸ್ಸುಗಳು ಪ್ರಜೆಗಳ ಭವಿಷ್ಯವನ್ನು ನಿರ್ಧರಿಸುವ ಕಾಲ ಅದು. ಸರ್ವಾಧಿಕಾರದ ಏಕಪ್ರಭುತ್ವ (ಮೊನಾರ್ಖಿ) ಅಥವಾ ಕೆಲವೇ ಜನರ ಪ್ರಭುತ್ವ (ಓಲಿಗಾರ್ಖಿ) ಅದು.

ಸಂವಿಧಾನವು ನಮ್ಮ ಭೂಪ್ರದೇಶದ ಆಡಳಿತಾತ್ಮಕ ವ್ಯವಸ್ಥೆಯ ವ್ಯಾಪ್ತಿ ಮತ್ತು ಮಿತಿಯನ್ನು ಗುರುತಿಸುವ ಸಂರಚನೆ, ಚೌಕಟ್ಟು. ಪ್ರಜೆಗಳ ಹಕ್ಕನ್ನು ನಿರ್ಧರಿಸುವ ಕಶೇರುಕ. ಅದಕ್ಕೆ ಕಾನೂನು ಮತ್ತಿತರ ಸಾವಯವಗಳನ್ನು ಸೇರಿಸಿ ನಮ್ಮ ಜೀವನವು ಶಿಲ್ಪ/ಸಾಕಾರರೂಪನ್ನು ಪಡೆಯುತ್ತದೆ.

1947ರ ಆಗಸ್ಟ್‌ 15ರಂದು ಭಾರತವು ಸ್ವಾತಂತ್ರ್ಯವನ್ನು ಪಡೆಯಿತು. ಪ್ರತೀವರ್ಷ ಈ ದಿನವನ್ನು ಸ್ವಾತಂತ್ರ್ಯೋತ್ಸವ ಅಥವಾ ಸ್ವತಾತಂತ್ರ್ಯ ದಿನಾಚರಣೆಯೆಂದು ಆಚರಿಸಿಕೊಂಡು ಬರಲಾಗುತ್ತದೆ. ಸ್ವಾತಂತ್ರ್ಯ ಸಿಕ್ಕಾಗ ಈ ದೇಶದಲ್ಲಿ ಸಂವಿಧಾನವಿರಲಿಲ್ಲ. ಬ್ರಿಟಿಷ್‌ ಆಡಳಿತದ ಕಾನೂನುಗಳಷ್ಟೇ ಇದ್ದವು. ಆದರೆ, ಸ್ವತಂತ್ರ ಅದರಲ್ಲೂ ಪ್ರಜಾತಂತ್ರವನ್ನು ಸ್ವೀಕರಿಸಿದ ದೇಶಕ್ಕೊಂದು ಸಂವಿಧಾನವಿರಬೇಕಾದ್ದು ಆಡಳಿತದ ಮತ್ತು ಪ್ರಜಾತಂತ್ರದ ಅಪೇಕ್ಷಿತ ನೀತಿ. ಅದೇ ದೇಶದ ಭವಿಷ್ಯದ ಜೀವಜಲ: ಅಡಿಗಲ್ಲು. ಅದರ ಆಧಾರದಲ್ಲಿ ದೇಶದ ಕಾನೂನುಗಳು ರೂಪುಗೊಳ್ಳತಕ್ಕದ್ದು. ಇದಕ್ಕಾಗಿ ವಿವಿಧ ಕ್ಷೇತ್ರಗಳ ಪರಿಣತರನ್ನೊಳಗೊಂಡ ಒಂದು ಉನ್ನತ ಸಮಿತಿ ರಚನೆಯಾಯಿತು. ಇದರ ಅಧ್ಯಕ್ಷರು ಡಾ| ಬಾಬಾಸಾಹೇಬ್‌ ಭೀಮರಾವ್‌ ಅಂಬೇಡ್ಕರ್‌. 1949ರ ನವೆಂಬರ 26ರಂದು ಸಂವಿಧಾನ ಸಮಿತಿಯು ಈ ದೇಶಕ್ಕೊಂದು ಸಂವಿಧಾನವನ್ನು ರೂಪಿಸಿ ಅನುಮೋದಿಸಿತು. ಈ ದಿನವನ್ನು 2015ರಿಂದ ಸಂವಿಧಾನ ದಿನವೆಂದು ಆಚರಿಸಲಾಗುತ್ತದೆ. ಹೀಗೆ ಅಂಗೀಕರಿಸಿದ ಸಂವಿಧಾನವು 1950ರ ಜನವರಿ 26ರಂದು ಜಾರಿಗೆ ಬಂದಿತು. ಈ ದಿನವನ್ನು ಗಣರಾಜ್ಯೋತ್ಸವವೆಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯೋತ್ಸವದಷ್ಟೇ ಪ್ರಮುಖವಾಗಿ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುವುದಕ್ಕೆ ಕಾರಣವೆಂದರೆ ಸಂವಿಧಾನದ ಮಹತ್ವ.

ನಮಗೆ ನಾವೇ ನೀಡಿಕೊಂಡ ಸಂವಿಧಾನ
ಸಂವಿಧಾನವೆಂದು ಹೇಳುವಾಗ/ಹೇಳಿದಾಗ ಅದು ಭಾರತದ ಸಂವಿಧಾನವೇ ಅಥವಾ ನಮ್ಮ ಸಂವಿಧಾನವೇ ಎಂಬ ತೊಡಕುಂಟಾಗುತ್ತದೆ. “ಕೃತಿ’ರೂಪದಲ್ಲಿ ಅಂದರೆ ಮುದ್ರಿತರೂಪದಲ್ಲಿ ಭಾರತದ ಸಂವಿಧಾನವೆಂದೇ ಇದೆ. ಆದರೆ, ವಾಸ್ತವದಲ್ಲಿ ನಮ್ಮ ಸಂವಿಧಾನವೆಂದೇ ಇರಬೇಕು. ಹೇಗೆ ಹೇಳಿದರೂ ಸರಿಯೇ ಎಂಬ ಭಾವನೆ ಜನರಲ್ಲಿದೆ. ವಿದೇಶಗಳು ಅಥವಾ ವಿದೇಶಗಳಲ್ಲಿ ಭಾರತದ ಸಂವಿಧಾನ ಎಂದು ಗುರುತಿಗಾಗಿ, ಸ್ಪಷ್ಟತೆಗಾಗಿ ಹೇಳಬಹುದು. ಆದರೆ ಇಲ್ಲಿ, ಈ ದೇಶದ ಉದ್ದಗಲದಲ್ಲಿ ಇದು ನಮ್ಮ ಸಂವಿಧಾನ. ಈ ಸಂವಿಧಾನದ ಪೀಠಿಕೆಯನ್ನು ಗಮನಿಸಿ: ಅಲ್ಲಿ “ಭಾರತದ ಜನಗಳಾದ ನಾವು’ (ವಿ ದ ಪೀಪಲ್‌) ಎಂಬ ಪದಗಳು ಅರ್ಥಪೂರ್ಣ ಮತ್ತು ಮಹತ್ವಪೂರ್ಣ. “ನಾವು’ ಈ ಸಂವಿಧಾನವನ್ನು “ಆತ್ಮಾರ್ಪಿತ ಮಾಡಿಕೊಂಡಿದ್ದೇವೆ’ (ಗೀವ್‌ ಟು ಅವರ್‌ಸೆಲ್ವ್ಸ್) ಎಂದರೆ ನಮಗೆ ನಾವೇ ನೀಡಿಕೊಂಡ ಸಂವಿಧಾನ ಇದು. ಆದ್ದರಿಂದ, ಎಂದೆಂದಿಗೂ ಇದು “ನಮ್ಮ’ದು. ಇದು ಭಾರತದ್ದು ಎಂದರೆ ನಾವು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆ ತಕರಾರಿಗೆ ಹೋಗುವುದೇ ಬೇಡ. “ನಮ್ಮ’ದೇ ಆಗಿರಲಿ.

ಬ್ರಿಟನ್‌ ಅಲಿಖೀತ ಸಂವಿಧಾನವನ್ನು ಹೊಂದಿದೆ. ಇನ್ನೂ ಅನೇಕ ದೊಡ್ಡ-ಸಣ್ಣ ದೇಶಗಳು ಮೌಖೀಕ ಸಂವಿಧಾನವನ್ನು ಹೊಂದಿವೆ. ನೈತಿಕತೆಯ ಚೌಕಟ್ಟನ್ನು ಅಕ್ಷರವಿಲ್ಲದೆ ನಿರ್ಧರಿಸುವ ಪರಿಣತಿ, ಪಕ್ವತೆಯಿದ್ದರೆ ಲಿಖೀತ ಸಂವಿಧಾನವೇ ಬೇಡ. ಆದರೆ, ಭಾರತದಂಥ ಬಹುಭಾಷಾ, ಬಹುಜನಾಂಗೀಯ, ಬಹುರೂಪಿ, ಬಹುಮುಖೀ ಸಮಾಜಕ್ಕೆ ಸಾಮಾನ್ಯ ಕಾರ್ಯಸೂಚಿಯನ್ನು ವಿಧಿಸುವ ಪಠ್ಯವನ್ನು ನಮ್ಮ ಹಿರಿಯರು ರೂಪಿಸಿದ ಬಗೆಯೇ ಒಂದು ಪವಾಡ. ಅದಕ್ಕೇ ನಮ್ಮ ಸಂವಿಧಾನವು ವಿಶ್ವದÇÉೇ ಅತಿ ದೀರ್ಘ‌/ಬೃಹತ್‌ ಸಂವಿಧಾನವೆಂಬ ಲಕ್ಷಣವನ್ನೊಳಗೊಂಡಿದೆ. ಅಂಕಿ-ಅಂಶಗಳನ್ನು ಹೇಳುವುದಾದರೆ ನಮ್ಮ ಸಂವಿಧಾನದಲ್ಲಿ 395 ವಿಧಿಗಳು, 12 ಅನುಚ್ಛೇದಗಳು ಮತ್ತು ಒಟ್ಟಾರೆ 1,46,385 (ಅಥವಾ ಅದರ ಆಸುಪಾಸಿನ ಸಂಖ್ಯೆಯ) ಪದಗಳು ಇವೆ.

ಇದಕ್ಕೆ ಹೋಲಿಸಿದರೆ ಮೊನಾಕೋ ಎಂಬ ಪುಟ್ಟ ರಾಷ್ಟ್ರದ ಸಂವಿಧಾನವು 10 ಅಧ್ಯಾಯ, 97 ವಿಧಿಗಳು ಮತ್ತು 3,814 ಪದಗಳನ್ನೊಳಗೊಂಡು ವಿಶ್ವದ ಅತಿ ಪುಟ್ಟ ಸಂವಿಧಾನವೆನ್ನಿಸಿದೆ. ಸಂವಿಧಾನದ ಮೂಲಪ್ರತಿಯನ್ನು ಕೈಯಲ್ಲಿ ಬರೆದರಂತೆ. ಗಣಕೀಕರಣದ ಈ ಕಾಲದಲ್ಲಿ ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಪ್ರತೀ ಪುಟದಲ್ಲೂ ಈ ದೇಶದ ಚರಿತ್ರೆ, ಪರಂಪರೆ, ಪುರಾಣ ಇತ್ಯಾದಿಗಳ ವ್ಯಕ್ತಿಗಳನ್ನು, ಪ್ರಸಂಗಗಳನ್ನು ಪುಟಪುಟದಲ್ಲೂ ಚೌಕಟ್ಟಾಗಿ ಕಾಣಿಸಲಾಗಿದೆ. ಇದರಲ್ಲಿ ರಾಮನೂ ಇದ್ದಾನೆ, ಹನುಮನೂ ಇ¨ªಾನೆ, ಝಾನ್ಸಿ ರಾಣಿಯೂ ಇದ್ದಾಳೆೆ, ಟಿಪ್ಪುಸುಲ್ತಾನನೂ ಇದ್ದಾನೆ. ಭಾರತವೆಂಬ ಮಹಾಮರವನ್ನು ಅಣುರೂಪದಲ್ಲಿ ತುಂಬಿಸಿಟ್ಟಂತೆ ಇದು; ಆದರೆ, ಬೃಹತ್‌ ರೂಪವನ್ನು ತಾಳುವುದಕ್ಕೆ ಏನೂ ಆಗಬೇಕಾಗಿಲ್ಲ. ಒಮ್ಮೆ ಸಂವಿಧಾನವೆಂಬ ಕಾಡನ್ನು ಹೊಕ್ಕರೆ ಅದರ ಸಸ್ಯ-ಪ್ರಾಣಿ ವೈವಿಧ್ಯದ ಸಮೃದ್ಧಿ ಗೋಚರಿಸುತ್ತದೆ. ಅಲ್ಲಿ ಹೊಸ ತಳಿಗಳಿಗೆ ಅವಕಾಶವಿದೆ.

ಇಷ್ಟೇ ಅಲ್ಲ, ನಮ್ಮ ಸಂವಿಧಾನವು ಈಗಾಗಲೇ 103 ತಿದ್ದುಪಡಿಗಳನ್ನು ಕಂಡಿದೆ. ಕಾಲಾನುಕಾಲಕ್ಕೆ ಸಂದರ್ಭಕ್ಕನುಸಾರವಾಗಿ ಈ ತಿದ್ದುಪಡಿಗಳು ಮಂಜೂರಾಗಿವೆ. ನಮ್ಮ ಪ್ರಾಕೃತಿಕ ವೈವಿಧ್ಯಕ್ಕನುಸಾರವಾಗಿ ಈ ಅನಿವಾರ್ಯತೆ. ಅಮೆರಿಕದ ಸಂವಿಧಾನವು ಕಳೆದ ಸುಮಾರು 300 ವರ್ಷಗಳಲ್ಲಿ ಕೇವಲ 26 ತಿದ್ದುಪಡಿಗಳನ್ನು ಕಂಡಿದೆ. ಅವರಿಗೆ ಅವರ ಅನುಕೂಲ; ನಮಗೆ ನಮ್ಮದು.

ಭಾರತೀಯ ಪರಂಪರೆಯಲ್ಲಿ ಆಕಾಶ, ಭೂಮಿ, ಅಗ್ನಿ, ನೀರು, ಗಾಳಿ ಎಂಬ ಪಂಚಭೂತಗಳನ್ನು ಗುರುತಿಸಲಾಗಿದೆ. ನಮ್ಮ ಸಂವಿಧಾನದ ಆರಂಭದಲ್ಲಿದ್ದ ಭಾರತವೆಂದರೆ ಸಂಪೂರ್ಣ ಪ್ರಭುತ್ವ ಸಂಪನ್ನ ಲೋಕತಂತ್ರಾತ್ಮಕ ಗಣರಾಜ್ಯ ಎಂಬ ಭಾರತ. ಅನಂತರ ಅದು ಸಂವಿಧಾನದ 42ನೆಯ ತಿದ್ದುಪಡಿಯಡಿಯಲ್ಲಿ ಸಾರ್ವಭೌಮ, ಸಮಾಜವಾದೀ, ಸರ್ವಧರ್ಮಸಮಭಾವದ, ಪ್ರಜಾಸತ್ತಾತ್ಮಕ, ಗಣರಾಜ್ಯ, ಎಂದು ಬದಲಾಯಿತು. ಇದೂ ಸರಿಯೇ. ಈ ಐದಂಶಗಳು ಹಳೆಯ ನಿರೂಪಣೆಯಲ್ಲೇ ಅಡಕವಾಗಿದ್ದರೂ ಅದನ್ನು ಸ್ಪಷ್ಟೀಕರಿಸುವ ಉದ್ದೇಶದಿಂದ ಈ ತಿದ್ದುವಿಕೆ. ಈ ತಿದ್ದುಪಡಿಯಿಂದಾಗಿ ದೇಶವು ಒಂದರ್ಥದಲ್ಲಿ ಗಾಂಧೀಜಿ ಸಾರಿದ ಕೊನೆಯವನಿಗೂ ಸಿಗಬೇಕಾದ ನ್ಯಾಯದ ಕಲ್ಪನೆಯನ್ನು ಸಾಕಾರಗೊಳಿಸಿದಂತಾಗಿದೆ. ಆದಾಯ ಮತ್ತು ಸ್ಥಾನಮಾನಗಳಲ್ಲಿ ಇರುವ ತಾರತಮ್ಯವನ್ನು ಹೋಗಲಾಡಿಸದಿದ್ದರೆ ನಮ್ಮ ಸ್ವಾತಂತ್ರ್ಯ ಬರಿಯ ಬೂಟಾಟಿಕೆಯ ಮತ್ತು ರಾಜಕೀಯ ಮಾತ್ರವಾದ ಸ್ವಾತಂತ್ರ್ಯವೆಂದು ಗಾಂಧಿ ಭಾವಿಸಿದ್ದರು. ಆದ್ದರಿಂದ ಈ ತಿದ್ದುಪಡಿಯ “ಸಮಾಜವಾದಿ’ ಮತ್ತು “ಸರ್ವಧರ್ಮಸಮಭಾವ’ವೆಂಬ ಎರಡಂಶಗಳು ಗಾಂಧೀಪ್ರಣೀತ ಸಮಾಜವಾದದ ಕನಸನ್ನು ಕಂಡಿದೆಯೆಂದು ನಂಬಬಹುದು.

ಈ ದೇಶ ಗೌರವಿಸುವ ಮತ್ತು ಗೌರವಿಸಬೇಕಾದ ಅಂಶಗಳನ್ನು ಆರಂಭದಲ್ಲೇ ಗೊತ್ತುಪಡಿಸಲಾಗಿತ್ತು. ಅವು ಸ್ಥೂಲವಾಗಿ ನಮ್ಮ ದೇಶದ ಜೀವನಾಡಿಗಳು, ಪೂಜಾಸ್ಥಾನಗಳು. ನ್ಯಾಯ-ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ; ಸ್ವಾತಂತ್ರ್ಯ-ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ, ಸಮಾನತೆ-ಸ್ಥಾನಮಾನ ಮತ್ತು ಅವಕಾಶ; ಹಾಗೆಯೇ ಭಾತೃಭಾವನೆ-ವ್ಯಕ್ತಿಗೌರವ ಮತ್ತು ದೇಶದ ಏಕತೆ ಮತ್ತು ಅಖಂಡತೆಯನ್ನು ಎಲ್ಲರಲ್ಲೂ ವೃದ್ಧಿಗೊಳಿಸುವುದು; ಇವು ದೇಶದ ಅಗ್ನಿದಿವ್ಯ. ಇವು ಸಂವಿಧಾನವನ್ನು ಒಂದು ಜೀವಂತ ಮತ್ತು ಸಾವಯವ ಶಿಲ್ಪವಾಗಿಸಿದ ಕಲೆಯ ಬಲೆ.

ಕಾನೂನಿನಡಿ ಸಮಾನತೆಯು ಪ್ರಜಾತಂತ್ರದ ಬುನಾದಿ. ಸಮಾನಾವಕಾಶವು ಸಾಮಾಜಿಕ ನ್ಯಾಯದ ಬುನಾದಿ. ಆದರೆ, ನೈಜ ಸಮಾನತೆಯು ಸಮಾಧಿಯಲ್ಲಷ್ಟೇ ಸಾಧ್ಯವೆಂದು ಖೇದಪಡುತ್ತಾರೆ ಖ್ಯಾತ ಸಂವಿಧಾನಪಟು, ನ್ಯಾಯಶಾಸ್ತ್ರ ಪಂಡಿತ ನಾನೀಪಾಲ್ಕಿàವಾಲಾ. ಇಂತಹ ಚಿಂತೆ-ಚಿಂತನೆಗಳಿಗೆ ಹಾದಿ ಮಾಡಿಕೊಟ್ಟಿರುವುದೇ ನಮ್ಮ ಸಂವಿಧಾನ.

ನಮ್ಮ ಸಂವಿಧಾನದ ವಿವಿಧ ಅಧ್ಯಾಯಗಳಲ್ಲಿ ದೇಶ ಹೇಗೆ ನಡೆಯಬೇಕೆಂಬ ಮತ್ತು ಅದನ್ನು ಸಂಬಂಧಿಸಿದವರು ಹೇಗೆ ನಡೆಸಬೇಕೆಂಬ ಪರಿಕಲ್ಪನೆಯಿದೆ. ವಿಧಿ-ವಿಧಾನಗಳನ್ನು ನಿರೂಪಿಸಲಾಗಿದೆ. ಯಾವುದು ಮುಖ್ಯ, ಯಾವುದು ಅಮುಖ್ಯವೆನ್ನಲಾಗದು. ಆದರೂ ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ವಿಚಾರಗಳನ್ನು 2ನೆಯ-ನಾಗರಿಕತ್ವ, 3ನೆಯ-ಮೂಲಭೂತ ಹಕ್ಕುಗಳು ಮತ್ತು 4ನೆಯ ರಾಜ್ಯನೀತಿಯ ನಿರ್ದೇಶಕ ತತ್ವ‌ಗಳು ಅಧ್ಯಾಯಗಳಲ್ಲಿ ಗುರುತಿಸಬಹುದು. 1976ರಲ್ಲಿ 42ನೆಯ ತಿದ್ದುಪಡಿಯ ಕಾಲಕ್ಕೆ 4-ಎ (ಮೂಲಭೂತ ಕರ್ತವ್ಯಗಳು) ಎಂಬ ಅಧ್ಯಾಯವನ್ನು ಸೇರಿಸಲಾಯಿತು. ಪ್ರತೀ ಪ್ರಜೆಗೂ ತನ್ನ ನಾಗರಿಕತ್ವದ ಬಗ್ಗೆ ಕಾಳಜಿಯಿರುತ್ತದೆ, ಇರಬೇಕು. ಆಗ ಸಂವಿಧಾನವೇ ಕೊನೆಗೂ ಆತನಿಗೆ ರಕ್ಷಣೆ ನೀಡುವ ಕೊಡೆ. ಹಾಗೆಯೇ ಮೂಲಭೂತ ಹಕ್ಕುಗಳನ್ನು- ಇವುಗಳಲ್ಲಿ ಕಾನೂನಿನೆದುರು ಸಮಾನತೆ, ಧರ್ಮ (ಮತ ಎಂಬರ್ಥದಲ್ಲಿ), ಜಾತಿ, ಪ್ರದೇಶ, ಪಂಗಡ, ಲಿಂಗದ ಆಧಾರದಲ್ಲಿ ತಾರತಮ್ಯ ನಿಷೇಧ, ಸಾರ್ವಜನಿಕ ನಿಯೋಜನೆಯಲ್ಲಿ ಸಮಾನಾವಕಾಶ, ಅಸ್ಪೃಶ್ಯತಾ ನಿವಾರಣೆ, ಬಿರುದು (ಬಾವಲಿ!)ಗಳ ರದ್ದತಿ, ಸ್ವಾತಂತ್ರ್ಯದ-ವಾಕ್‌, ಅಭಿವ್ಯಕ್ತಿ, ಶಾಂತಿಯಿಂದ ಹಾಗೂ ನಿರಾಯುಧರಾಗಿ ಸಭೆ ಸೇರುವ, ಸಂಸ್ಥೆ-ಸಂಘಗಳನ್ನು ರಚಿಸುವ, ದೇಶದಲ್ಲಿ ಸರ್ವತ್ರ ಸಂಚರಿಸುವ, ಹಾಗೆಯೇ ವಾಸ ಮಾಡುವ, ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವ (ಹಕ್ಕುಗಳನ್ನು)- ನೀಡಲಾಗಿದೆ. ಸರಕಾರವಾಗಲಿ ಇನ್ನಿತರ ಶಾಸನಾತ್ಮಕ ಸಂಸ್ಥೆಯಾಗಲಿ ಇವನ್ನು ಕಸಿದುಕೊಂಡಾಗ ಇಲ್ಲವೇ ಕಸಿದುಕೊಳ್ಳಲು ಪ್ರಯತ್ನಿಸಿದಾಗ ಅದನ್ನು ಈ ಆಧಾರದಲ್ಲೇ ಪ್ರಶ್ನಿಸಬೇಕಾಗುತ್ತದೆ. ಈ ಹಕ್ಕುಗಳಿಗೆ ವಿಶೇಷ ಸಂದರ್ಭಗಳಲ್ಲಿ ನಿಯಂತ್ರಣಕ್ಕೂ ಸಂವಿಧಾನವು ಅವಕಾಶ ಮಾಡಿಕೊಟ್ಟಿದೆ. ಅನೇಕ ಹು¨ªೆಗಳನ್ನು ಸಾಂವಿಧಾನಿಕವೆಂದು ನಿರೂಪಿಸಲಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಪ್ರತ್ಯೇಕಿಸಲಾಗಿದೆ. ಯಾರು ಹೆಚ್ಚು ಯಾರು ಕಡಿಮೆಯೆಂಬ ತರ್ಕಕ್ಕೆ ಅವಕಾಶವಿಲ್ಲ. ಆದರೆ, ಯಾವುದೇ ಶಾಸನ/ಕಾನೂನು ಸಂವಿಧಾನದ ನಿಕಷಕ್ಕೆ ತಲೆಯೊಡ್ಡಬೇಕಾಗುತ್ತದೆ. ಈ ಪರೀಕ್ಷೆಯ ಸ್ಥಾನಗೌರವವಿರುವುದು ನ್ಯಾಯಾಂಗಕ್ಕೆ. ಒಂದು ರೀತಿಯಲ್ಲಿ ನಮ್ಮ ಪರಂಪರೆಯ ತ್ರಿಮೂರ್ತಿಗಳು ಸೃಷ್ಟಿ-ಸ್ಥಿತಿ-ಲಯಗಳನ್ನು ಹೊಂದಿಸಿಕೊಂಡಂತೆ ಈ ಅಂಗಗಳು. ಇವರ ಮೇಲೆ ಸಂವಿಧಾನವೆಂಬ ಆದಿಮಾಯೆ. ಇದೊಂದು ರೀತಿಯ ಸಮತೋಲದ ನ್ಯಾಯವನ್ನು ನೀಡುವ ವಿಕ್ರಮ ಸಿಂಹಾಸನ.

ದೋಷಗಳಿಲ್ಲವೆ? ಇರುತ್ತವೆ. ಏಕೆಂದರೆ, ಒಂದು ತಲೆಮಾರಿನ ಸತ್ಯವನ್ನು ಇನ್ನೊಂದು ತಲೆಮಾರೇ ಒಪ್ಪಿಕೊಳ್ಳದ ಕಾಲದ ಓಟದಲ್ಲಿ ಎಂತಹ ಪರಂಪರೆಯೂ ಹೊಸ ಪ್ರಯೋಗಕ್ಕೆ ಜಾಗ ಮಾಡಿಕೊಡಬೇಕಾಗುತ್ತದೆ. ತಿದ್ದುಪಡಿಗಳೇ ಇದಕ್ಕೆ ಸಾಕ್ಷಿ. ಸರ್ವೋಚ್ಚ ನ್ಯಾಯಾಲಯವು ಕೇಶವಾನಂದ ಭಾರತಿ ಪ್ರಕರಣದಲ್ಲಿ ಹೇಳಿದಂತೆ ಸಂವಿಧಾನವನ್ನು ಹೇಗೆ ಬೇಕಾದರೂ ಎಷ್ಟು (ಬಾರಿ) ಬೇಕಾದರೂ ತಿದ್ದುಪಡಿಮಾಡಬಹುದು. ಅದು ಶಾಸಕಾಂಗದ ಹಕ್ಕು. ಆದರೆ, ಅದರ ಮೂಲ ಸ್ವರೂಪಕ್ಕೆ ಧಕ್ಕೆ ಬರಬಾರದು. ಈ ಮೂಲವಿಗ್ರಹವನ್ನು ಕಾಪಿಡುವ ಹೊಣೆ ನಮ್ಮದು.

ದೇಶವು ಕಳೆದ ಸುಮಾರು ಏಳು ದಶಕಗಳಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ನಮ್ಮ ಪಾದಸ್ಪರ್ಶವನ್ನು ಕ್ಷಮಿಸು ಎಂದು ಭೂಮಿಯನ್ನು ನಿತ್ಯ ಪ್ರಾರ್ಥಿಸಿದಂತೆ ನಾವು ಸಂವಿಧಾನಕ್ಕೆ ಅಪಚಾರವೆಸಗಿದಾಗಲೆಲ್ಲ ಈ ದೇಶ ನರಳುತ್ತದೆ. ಅದು ಕಾನೂನಿನಡಿಯಿರಬಹುದು, ಆಡಳಿತದಡಿಯಿರಬಹುದು, ಜನರ ನಿತ್ಯವ್ಯವಹಾರದಲ್ಲಿರಬಹುದು, ಪ್ರಾಮಾಣಿಕತೆ, ನೈತಿಕತೆ ಮುಂತಾದ ಸಾವಯವ ಮೌಲ್ಯಗಳ ಅಭಾವದಲ್ಲಿರಬಹುದು. ಪ್ರತೀ ಸಂದರ್ಭದಲ್ಲೂ ನಾವು ನಮ್ಮ ದೇಶಕ್ಕೆ ನ್ಯಾಯಕೊಡುತ್ತಿದ್ದೇವೆಯೇ ಎಂದು ಪ್ರಶ್ನಿಸಲು ಸಾಧ್ಯವಾಗುವುದು ನಮ್ಮ ಸಂವಿಧಾನದ ಆಶೋತ್ತರಗಳಲ್ಲೇ.

ಇಂತಹ ಅಪರಿಮಿತ ಸಾಧ್ಯತೆಗಳನ್ನು ಬಿಚ್ಚಿಡಬಲ್ಲ ನಮ್ಮ ಸಂವಿಧಾನಕ್ಕೆ ಶರಣು. ನಮ್ಮೆಲ್ಲ ಸಮಸ್ಯೆಗಳ ನಡುವೆಯೂ ನಮಗೆ ಅಶಾಕಿರಣವಾಗಿರುವ ಶ್ರೇಷ್ಠ ಧರ್ಮಗ್ರಂಥ ನಮ್ಮ ಸಂವಿಧಾನ. ನೂರು ದೇವರುಗಳರನ್ನೆಲ್ಲ ದೂರ ನೂಕಿದರೂ ಸಂವಿಧಾನವೇ ನಮ್ಮ ಯೋಗಕ್ಷೇಮದ ದೇವರು ಎಂಬ ಆಸ್ತಿಕತೆ ಎಲ್ಲರಿಗೂ ಹಿತ.

ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.