ಮಾದರಿಯಾದ ಹರೇಕಳ ಸ್ವಯಂ ಲಾಕ್ ಡೌನ್! ಗ್ರಾಮದ ನಡೆಗೆ ಶಾಸಕರಿಂದ ಶ್ಲಾಘನೆ
Team Udayavani, Jul 6, 2020, 10:24 PM IST
ಉಳ್ಳಾಲ: ಹರೇಕಳ ಗ್ರಾಮದಲ್ಲಿ ಐದು ಕೋವಿಡ್-19 ಸೋಂಕು ದೃಢವಾದ ಹಿನ್ನಲೆಯಲ್ಲಿ ಸೋಂಕು ಹರಡದಂತೆ ತಡೆಯುವ ಪ್ರಯತ್ನವಾಗಿ ಇಂದಿನಿಂದ ಹರೇಕಳ ಗ್ರಾಮದಲ್ಲಿ ಲಾಕ್ಡೌನ್ ಆರಂಭಗೊಂಡಿದ್ದು, ಪೊಲೀಸ್ ಸಹಕಾರವಿಲ್ಲದೆ ಗ್ರಾಮದ ಸರ್ವಧರ್ಮದ ಜನರು, ವಿವಿಧ ಪಕ್ಷಗಳ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ನಿರ್ಣಯದಂತೆ ಮೊದಲ ದಿನದ ಲಾಕ್ಡೌನ್ ಯಶಸ್ವಿಯಾಗಿದೆ. ಗ್ರಾಮದ ಜನರು ಪಂಚಾಯತ್ ಅಧಿಕಾರಿಗಳು ವಿಶೇಷ ಸಭೆಯಲ್ಲಿ ತೀರ್ಮಾನಿಸಿದಂತೆ ಸೋಮವಾರ ಅಂಗಡಿಗಳು 12 ಗಂಟೆಯವರೆಗೆ ವ್ಯಾಪಾರ ನಡೆಸಿದ್ದು, ಬಸ್ ಸಂಚಾರ ಸೇರಿದಂತೆ ಹೊರಗಿನ ಖಾಸಗಿ ವಾಹನಗಳಿಗೆ ಗ್ರಾಮಕ್ಕೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ದ್ವಿಚಕ್ರ ವಾಹನ ಇರುವವರು ದೈನಂದಿನ ಕೆಲಸಗಳಿಗೆ ತೆರಳಲು ಆವಕಾಶ ನೀಡಿದ್ದು, ಉಳಿದಂತೆ ಗ್ರಾಮಚಾವಡಿ ನ್ಯೂಪಡ್ಪು ಮಾರ್ಗವಾಗಿ ಮಂಗಳೂರಿಗೆ ತೆರಳುವ ಕೋಟಿಪದವು, ಮಿಷನ್ ಕಂಪೌಂಡ್, ತಾಕಟೆ, ಸೇರಿದಂತೆ ಕೊಣಾಜೆ ಗ್ರಾಮದ ಜನರಿಗೆ ಸಂಚರಿಸಲು ಆವಕಾಶ ನೀಡಲಾಗಿದೆ.