ಬರಿಗೈಯಿಂದ 124 ತೆಂಗಿನ ಕಾಯಿ ಒಡೆದ ಕೇರಳಿಗ!
Team Udayavani, Feb 21, 2017, 3:24 AM IST
ಗಿನ್ನೆಸ್ ದಾಖಲೆ ಪುಸ್ತಕ ಸೇರುವುದೆಂದರೆ ಸಾಮಾನ್ಯದ ಸಂಗತಿಯೇ? ಏನೆಲ್ಲಾ ಸಾಹಸಗಳನ್ನು ಮಾಡಿ ದಾಖಲೆ ಬರೆಯಬೇಕಾಗುತ್ತದೆ. ಕೇರಳದ 25 ವರ್ಷ ವಯಸ್ಸಿನ ವ್ಯಕ್ತಿ ಅಬೀಶ್ ಡಾಮಿನಿಕ್ 1 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 124 ತೆಂಗಿನ ಕಾಯಿಗಳನ್ನು ಮುಷ್ಟಿಯಲ್ಲಿ ಒಡೆದು ಹೋಳು ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಈ ಮೂಲಕ ಆಬೀಶ್ ನಿಮಿಷದೊಳಗೆ 118 ಕಾಯಿ ಒಡೆದಿದ್ದ ಜರ್ಮನಿಯ ಮುಹಮ್ಮದ್ ಕಹ್ರಿಮನೋವಿಕ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮೋಟಾರ್ ಮೆಕ್ಯಾನಿಕ್ ಆಗಿರುವ ಅಬೀಶ್ ಕೊಟ್ಟಾಯಂ ಜಿಲ್ಲೆಯ ಪೂಂಜಾರ್ನವರು. ಈಗಾಗಲೇ ಯುನಿವರ್ಸ್ ರೆಕಾರ್ಡ್ ಫೋರಂ, ಲಿಮ್ಕಾ ದಾಖಲೆ, ಅಮೆರಿಕನ್ ಸೆಟ್ಟರ್ ರೆಕಾರ್ಡ್ನಂಥ ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಹಲ್ಲಿನಿಂದ ಬಸ್ ಎಳೆಯುವುದು, ನಾಲಿಗೆ ಬಳಸಿ ತಿರುಗುವ ಫ್ಯಾನ್ ನಿಲ್ಲಿಸುವಂಥ ಮೈಜುಂ ಎನ್ನುವಂಥ ಸಾಹಸ ಪ್ರದರ್ಶನಗಳನ್ನು ಅವರು ನೀಡಿದ್ದಾರೆ.