National ಕ್ರೀಡಾ ಚಾಂಪಿಯನ್ಶಿಪ್ ; ಪಣಜಿ ಶಾಲೆಗಳಲ್ಲಿ ದೀಪಾವಳಿ ರಜೆ ಬದಲಾವಣೆ
Team Udayavani, Oct 6, 2023, 2:59 PM IST
ಪಣಜಿ: 37ನೇ ರಾಷ್ಟ್ರೀಯ ಕ್ರೀಡಾ ಚಾಂಪಿಯನ್ಶಿಪ್ ಈ ತಿಂಗಳು ಗೋವಾದಲ್ಲಿ ನಡೆಯುತ್ತಿದೆ. ಗೋವಾ ಸರ್ಕಾರ ಈ ಸ್ಫರ್ಧೆ ಯಶಸ್ವಿಗೆ ಸಿದ್ಧತೆ ನಡೆಸಿದೆ. ಅದೇ ಸಿದ್ಧತೆಯ ಭಾಗವಾಗಿ ಈಗ ಗೋವಾದ ಶಾಲೆಗಳ ದೀಪಾವಳಿ ರಜೆಯನ್ನು ಬದಲಾಯಿಸಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ನಿರ್ದೇಶಕ ಶೈಲೇಶ್ ಜಿಂಗ್ಡೆ ಆದೇಶ ಹೊರಡಿಸಿದ್ದಾರೆ.
ಗೋವಾದ ಶಾಲೆಗಳಿಗೆ ಈ ಹಿಂದೆ ನವೆಂಬರ್ 7 ರಿಂದ ನವೆಂಬರ್ 23 ರವರೆಗೆ ದೀಪಾವಳಿ ರಜೆ ಘೋಷಿಸಲಾಗಿತ್ತು. ನವೆಂಬರ್ 19 ರಿಂದ ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆರಂಭವಾಗುತ್ತಿದೆ. ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಹೀಗಾಗಿ ಶಾಲೆಗಳ ದೀಪಾವಳಿ ರಜೆಯನ್ನು ಬದಲಾಯಿಸಲಾಗಿದೆ. ಈಗ ಈ ರಜಾದಿನವು ಅ.25 ರಿಂದ ಶನಿವಾರ ನ. 18 ರವರೆಗೆ ಇರಲಿದೆ.
ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಸೋಮವಾರ ನ.20 ರಿಂದ ದೀಪಾವಳಿ ರಜೆಯ ನಂತರ ಶಾಲೆಗಳು ಪುನರಾರಂಭಗೊಳ್ಳಲಿವೆ. ಎಲ್ಲಾ ಇಲಾಖಾ ಮುಖ್ಯಸ್ಥರು ದೀಪಾವಳಿ ರಜೆಯಲ್ಲಿ ಈ ಬದಲಾವಣೆಯನ್ನು ಗಮನಿಸಲು ವಿನಂತಿಸಲಾಗಿದೆ.