ಗೇಣುದ್ದ ಹೊಟ್ಟೆಗೆ ಎಷ್ಟೊಂದು ವೈಭವದ ಮೆರವಣಿಗೆ?


Team Udayavani, Feb 18, 2017, 3:45 AM IST

brahmin.jpg

ದಾಸರು ಹೇಳಿದ್ದೂ ಗೇಣುದ್ದದ ಹೊಟ್ಟೆಯ ಬಗ್ಗೆಯೇ. ಈ ಹೊಟ್ಟೆಗೆ ಬೇಕಾದದ್ದೆಷ್ಟು ಎಂದು ಪ್ರಶ್ನೆಯನ್ನು ಕೇಳಿಕೊಂಡರೆ ಉತ್ತರ ಬಹಳ ಸರಳ. ಆದರೂ ದೊಡ್ಡಸ್ತಿಕೆಗೆ ಬಡತನ ಬರಬಾರದೆಂದು ಪೈಪೋಟಿಗೆ ಇಳಿದಿದ್ದೇವೆ. ಇದರಿಂದ ಸೃಷ್ಟಿಯಾಗುತ್ತಿರುವ ಅಪಾರ ಆಹಾರ ಸಂಪನ್ಮೂಲಗಳ ತ್ಯಾಜ್ಯವನ್ನು ಕಂಡೂ ಕಾಣದಂತಿದ್ದೇವೆ. ಇದೇ ದೊಡ್ಡ ದೌರ್ಭಾಗ್ಯ. ಅಡುಗೆ ಭಟ್ಟರು ಊಟ ಮಾಡುವುದನ್ನು ನೋಡಿದ್ದೀರಾ? ಇಲ್ಲವೆಂದಾದರೆ ಒಮ್ಮೆ ನೋಡಿ. ಸಾವಿರಾರು ಮಂದಿಗೆ ಭಕ್ಷ್ಯಗಳನ್ನು ಮಾಡಿ ಹಾಕಿ, ತರಹೇವಾರಿ ಬಗೆಗಳನ್ನು ಸಿದ್ಧಪಡಿಸಿಟ್ಟು ತಾವು ನಿರ್ಮೋಹಿ ರೀತಿಯಲ್ಲಿ ಕೈಮುಗಿದು ಕುಳಿತುಕೊಳ್ಳುವ ಅವರ ರೀತಿ ವಿಚಿತ್ರವೆನಿಸದಿರದು. 

ಒಮ್ಮೆ ಹೀಗೆಯೇ ಭೂರಿ ಭೋಜನದ ಮದುವೆಗೆ ಹೋಗಿದ್ದೆ. ಅವರು ಆ ಪ್ರಾಂತ್ಯದಲ್ಲಿ ಜಿಲೇಬಿ ಸೇರಿದಂತೆ ಕೆಲವು ಸಿಹಿತಿನಿಸುಗಳಿಗೆ ಬಹಳ ಪ್ರಸಿದ್ಧರು. ಅವರದ್ದು ಅಡುಗೆಯೆಂದು ಯಾರೂ ಬಂದು ಹೇಳಬೇಕಿರಲಿಲ್ಲ. ಹಾಗೆಯೇ ಮತ್ತೂಬ್ಬರು ಸಾರಿಗೆ ಪ್ರಸಿದ್ಧರು. ಅವರೇ ಸಿದ್ಧಪಡಿಸಿಟ್ಟುಕೊಟ್ಟ ಸಾರಿನ ಪುಡಿಧಿಯನ್ನು ನಾವು ಬೇಳೆ ಬೇಯಿಸಿ, ಸುರಿದು ಮಾಡಿದರೂ ಅವರ ಸಾರಿನಂತಾಗುತ್ತಿರಲಿಲ್ಲ ಎಂಬುದು ಎಲ್ಲೆಡೆಯೂ ಕೇಳಿಬರುತ್ತಿದ್ದ ಮಾತು. ಆ ಕಾರ್ಯಕ್ರಮದಲ್ಲಿ ನಿಜಕ್ಕೂ ಸಾರು ಬಹಳ ಚೆನ್ನಾಗಿತ್ತು. ಹಾಗೆಯೇ ಖರ್ಜೂರದ ಪಾಯಸ ಏವನ್‌ ಎನ್ನುವಂತಿತ್ತು. ಬಹಳ ಖುಷಿಯಿಂದ ಭಟ್ಟರನ್ನು ಒಮ್ಮೆ ಮಾತನಾಡಿಸಿ ಬರೋಣವೆಂದು ಅಡುಗೆ ಮನೆಯ ಬಳಿ ಹೋದೆ. ಒಲೆ ತಣ್ಣಗಾಗಿತ್ತು. ಪಾತ್ರೆಗಳೂ ಬಹುತೇಕ ಖಾಲಿಯಾಗಿದ್ದವು. ಎಲ್ಲವನ್ನೂ ಹೊರಗೆ ಬಡಿಸಲು ತೆಗೆದುಕೊಂಡು ಹೋಗಲಾಗಿತ್ತು. ಒಂದು ಒಲೆಯಲ್ಲಿ ಸಣ್ಣ ಉರಿ ಬಿಟ್ಟರೆ ಬೇರೇನೂ ಕಾಣುತ್ತಿರಲಿಲ್ಲ. ಮೂಲೆಯಲ್ಲಿ ಸಣ್ಣದೊಂದು ತುಂಡು ಎಲೆಯಲ್ಲಿ ಒಂದಿಷ್ಟು ಅನ್ನ ಹಾಕಿಕೊಂಡು, ಅದಕ್ಕೆ ಸಾರು ಹಾಕಿಸಿಕೊಳ್ಳುತ್ತಿದ್ದರು ಪ್ರಸಿದ್ಧ ಭಟ್ಟರು. ಜತೆಗೆ ಒಂದು ಲೋಟದಲ್ಲಿ ಬೆರಸಿದ ಮಜ್ಜಿಗೆ (ಶುಂಠಿ, ಕೊತ್ತಂಬರಿ ಸೊಪ್ಪು ಎಲ್ಲ ಹಾಕಿ ತಯಾರಿಸಿದ ನೀರು ಮಜ್ಜಿಗೆ). 

‘ನಮಸ್ಕಾರ. ಇಂದಿನ ಖರ್ಜೂರದ ಪಾಯಸ ಬಹಳ ಚೆನ್ನಾಗಿತ್ತು ಮಾರಾಯ್ರೆ’ ಎಂದೆ. ಅದಕ್ಕೆ ಅವರು, ‘ಹೌದಾ, ಇನ್ನೂ ಸ್ವಲ್ಪ ಚೆನ್ನಾಗಿ ಆಗಬೇಕಿತ್ತು. ಆದರೂ ಪರವಾಗಿಲ್ಲ’ ಎಂದು ಹ್ಞೂಗುಟ್ಟಿದರು. ನಾನು ಸುಮ್ಮನೆ, ‘ನೀವೇನು ಅದರ ರುಚಿಯೆಲ್ಲ ನೋಡೋಲ್ವಾ?’ ಎಂದು ಕೇಳಿದೆ. ಅದಕ್ಕೆ ಅಡುಗೆ ಭಟ್ಟರು ‘ನಮಗೆ ಮಾಡುವಾಗಲೇ ರುಚಿ ಗೊತ್ತಾಗಿರುತ್ತೆ. ಅದನ್ನು ತಿಂದು ನೋಡಬೇಕಾಗಿಲ್ಲ. ಒಂದು ಹಿಡಿ ಅನ್ನ, ಒಂದು ಲೋಟ ಸಾರು, ಮಜ್ಜಿಗೆ ಇದ್ದರೆ ಊಟ ಮುಗೀತು. ಇಷ್ಟೆಲ್ಲ ದಿನವೂ ತಿಂದರೆ ಹೊಟ್ಟೆ ಯಾಕಾಗುತ್ತೆ?’ ಎಂದು ಕೇಳಿದರು. ಅದರೊಳಗೆ ಉತ್ತರವೂ ಇತ್ತು, ಪ್ರಶ್ನೆಯೂ ಇತ್ತು. ಜತೆಗೆ ಆರೋಗ್ಯದ ಬಗೆಗಿನ ಕಾಳಜಿಯೂ ಇತ್ತು. ‘ಅದೂ ನಿಜವೇ’ ಎಂದು ಹೇಳಿ ಮತ್ತೇನೋ ಮಾತನಾಡಬೇಕೆನ್ನುವಷ್ಟರಲ್ಲಿ ಅಲ್ಲಿ ಮತ್ತೂಬ್ಬರು ಬಂದು, ‘ಎರಡು ಸೇರು ಅಕ್ಕಿ ಹಾಕಿ, ಸ್ವಲ್ಪ ಅನ್ನ ಬೇಕಾಗಬಹುದು’ ಎಂದು ಹೇಳಿದರು. ನಮ್ಮದೂ ಮಾತು ತುಂಡಾಯಿತು. ಇದು ಈ ಒಬ್ಬ ಭಟ್ಟರ ಮಾತಲ್ಲ. ಮತ್ತೂಬ್ಬರ ಬಳಿಯೂ ಮಾತನಾಡುತ್ತಾ, ನೀವೇಕೆ ಎಲ್ಲ ಐಟಂಗಳನ್ನು ತಿನ್ನುವುದಿಲ್ಲ ಎಂದು ಕೇಳಿದ್ದೆ. ಅದಕ್ಕೆ ಅವರೂ ಸಹ, ‘ನಮಗೆ ನೋಡಿಯೇ ಸಾಕಾಗಿರುತ್ತೆ. ಎಲ್ಲವನ್ನೂ ತಿನ್ನಬೇಕು ಎನಿಸುವುದೇ ಇಲ್ಲ’ ಎಂದಿದ್ದರು. ಅಂದರೆ ಇದೊಂದು ರೀತಿಯಲ್ಲಿ ವೈರಾಗ್ಯ.

ನಾವೇನು ಮೋಹಿಗಳೇ?
ಇಂದು ಮದುವೆ ಮನೆಯ ಊಟದ ಎಲೆಗೆ 120ರಿಂದ 150 ರೂ.ಗಳಿಗಿಂತ ಕಡಿಮೆ ಇಲ್ಲ. ಈ ಮಾತು ಹೇಳುತ್ತಿರುವುದು ಹಳ್ಳಿಸೊಗಡು ಇನ್ನೂ ಉಳಿದುಕೊಂಡಿರುವಂಥ ಊರುಗಳಲ್ಲಿನ ಸಾಂಪ್ರದಾಯಿಕ ಊಟಗಳ ಬಗ್ಗೆ. ಐಟಂಗಳು ಮತ್ತು ಕೊಂಚ ದರ ಪ್ರಾದೇಶಿಕವಾರು ವ್ಯತ್ಯಾಸ ಇರಬಹುದು. ಉಡುಪಿ, ದಕ್ಷಿಣಕನ್ನಡದ ಸುತ್ತಮುತ್ತ ಇರುವ ವಿದ್ಯಮಾನವಿದಾದರೆ, ಬೆಂಗಳೂರು ಭಾಗದ ಊಟದ ಕಥೆ ಹೇಳುವಂತೆಯೇ ಇಲ್ಲ. ಅದರಲ್ಲಿ  ವ್ಯರ್ಥವಾಗುವ ಆಹಾರದ ಪ್ರಮಾಣ ಮತ್ತು ನಮ್ಮ ಆಯ್ಕೆಗಳೆಂಬ ವಿಧಾನಗಳು ಸೃಷ್ಟಿಸಿರುವ ಅನಾಹುತ ಕುರಿತು ಬೇರೆಯೇ ಬರೆಯಬೇಕು. ಹಾಗಾದರೆ ನಾವೇನು ಮೋಹಿಗಳೇ? ಊಟವನ್ನೇ ಕಾಣದವರೇ? ಎಂಬ ಪ್ರಶ್ನೆಯೂ ಉದ್ಭವಿಸುವುದು ಸಹಜ. ಆದರೆ ಇತ್ತೀಚಿನ ಮದುವೆ ಇತ್ಯಾದಿ ಸಮಾರಂಭಗಳ ಮನೆಗಳಲ್ಲಿನ ವೈಭವ ನೋಡಿದರೆ, ಅದು ಕಂಡವರಿಗಾಗಿಯೇ ಹೊರತು ಅವರಿಗಾಗಿ ಖಂಡಿತ ಅಲ್ಲ. ಅವರು ಹಾಗೆ ಮಾಡಿದರು, ನಾವು ಅದಕ್ಕಿಂತ ಚೆನ್ನಾಗಿ ಮಾಡಬೇಕೆನ್ನುವ ಹಪಾಹಪಿಯೊಂದೇ ಎಷ್ಟೊಂದು ನಷ್ಟಕ್ಕೆ ಕಾರಣವಾಗುತ್ತದೆ ಎಂದರೆ ಲೆಕ್ಕವಿಲ್ಲ. 

ನಮ್ಮ ಹೊಟ್ಟೆ ಚಿಕ್ಕದಾಗಿದೆ
ನೀವು ಯಾವುದೇ ಎಲೆಯ ಮುಂದೆ ಕುಳಿತು ಗಮನಿಸಿ. ಎಲ್ಲರಲ್ಲೂ ಆರೋಗ್ಯದ ಬಗ್ಗೆ ಕಾಳಜಿ ಬಂದು ಬಿಟ್ಟಿದೆ. ಮೂರು ಸ್ವೀಟ್‌ ಇದ್ದರೆ ಮೂರನ್ನೂ ಬೇಡ ಎಂದು ಹೇಳುವವರೇ ಹೆಚ್ಚಿದ್ದಾರೆ. ಹಾಗೆಯೇ ಪಲ್ಯ ಇತ್ಯಾದಿ 25 ಬಗೆಗಳಲ್ಲಿ ಅಡುಗೆ ಭಟ್ಟರಂತೆಯೇ ಮೂರೋ, ನಾಲ್ಕೋ ಐಟಂಗಳಿಗೆ ಊಟ ಮುಗಿಸಿ ಕೈ ತೊಳೆಯುವವರು ಎಷ್ಟು ಮಂದಿ ಬೇಕು? ಸಾರು, ಒಂಚೂರು ಪಲ್ಯ, ಒಂದು ಸೌಟು ಪಾಯಸ, ಒಂದು ಬಜ್ಜಿ ಮತ್ತು ಮಜ್ಜಿಗೆ ಇದ್ದರೆ ಸಾಕು. ಜೊತೆಗೆ ಎರಡು ಬಾರಿ ಒಂದೇ ಪದಾರ್ಥವನ್ನು ಹಾಕಿಕೊಳ್ಳುವ ಮನಸ್ಸೇ ಇಲ್ಲ. ಈ ಒಟ್ಟೂ ಬೆಳವಣಿಗೆ ಹೇಳುವ ಸರಳ ಅಂಶವೆಂದರೆ, ಜನರೂ ಗಡದ್ದು ಊಟದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ನಮ್ಮ ಹಿರಿಯರು ಎಡೆಬಿಡದೇ ಕೆಲಸ ಮಾಡುತ್ತಿದ್ದರು. ಚೆನ್ನಾಗಿ ಊಟ ಮಾಡುತ್ತಿದ್ದರು. ಸೊಂಪಾಗಿ ನಿದ್ದೆ ಮಾಡುತ್ತಿದ್ದರು. ನಾವು ಆ ಮೂರನ್ನು ಕಳೆದುಕೊಂಡಿದ್ದೇವೆ. ಕೆಲಸವೂ ಇಲ್ಲ, ದೇಹಕ್ಕೆ ಶ್ರಮವೂ ಇಲ್ಲ, ಊಟವೂ ಬೇಡ. 

ಯೋಗಿಯ ಲೆಕ್ಕಾಚಾರದಂತೆ ಒಂದು ಹೊತ್ತು ಉಂಡು ಸುಧಾರಿಸಿಕೊಂಡರೆ ಸಾಕೆನ್ನುವ ಸ್ಥಿತಿ ತಲುಪಿದ್ದೇವೆ. ಮಧುಮೇಹ, ರಕ್ತದೊತ್ತಡ, ಹೈಪರ್‌ ಟೆನ್ಶನ್‌-ಹೀಗೆ ಹತ್ತಾರು ಕಾಯಿಲೆಗಳು ಬಂದಿರುವುದು ಮತ್ತು ಬರುವ ಭಯ-ಎರಡೂ ಒಂದು ಬಗೆಯ ನಿರಾಸಕ್ತಿಯನ್ನು ಮೂಡಿಸಿವೆ. ಹಾಗಾಗಿ ಹೊಟ್ಟೆಯನ್ನು ಚಿಕ್ಕದಾಗಿಸಿಕೊಂಡಿದ್ದೇವೆ. ಯಾರಿಗೂ 25 ಐಟಂಗಳು ಬೇಕಾಗಿಲ್ಲ. ಹಾಗೆಂದು ಮದುವೆ ಮನೆಯವರಾದ ನಾವು ಮೆರವಣಿಗೆಯನ್ನು ಚುಟುಕುಗೊಳಿಸಿದ್ದೇವೆಯೇ? ಖಂಡಿತ ಇಲ್ಲ. ದಸರಾ ಜಂಬೂಸವಾರಿಯನ್ನು ಮೀರಿಸುವಂತೆ ಹೆಚ್ಚೆಚ್ಚು ವೈಭವಗೊಳಿಸುತ್ತಿದ್ದೇವೆ. 

ಸಂಪನ್ಮೂಲಗಳ ಬಗೆಗಿನ ಕಾಳಜಿ
ಪೆಟ್ರೋಲ್‌ ಮುಗಿಯಿತೆಂದುಕೊಳ್ಳಿ. ಆಗ ನಮ್ಮ ಮನೆಯ ಅಂಗಳದಲ್ಲಿದ್ದ ಎಲ್ಲ ವಾಹನಗಳೂ ಗುಜರಿಯನ್ನು ಸೇರಬೇಕಾಗುತ್ತದೆ. ಅಲ್ಲಿಯೂ ಕವಡೆ ಕಾಸಿನ ಕಿಮ್ಮತ್ತೂ ಸಹ ಆ ವಾಹನಗಳಿಗಿರದು. ನಮ್ಮಲ್ಲಿ ದುಡ್ಡು ರಾಶಿ ಬಿದ್ದಿರಬಹುದು; ಆದರೆ ಪೆಟ್ರೋಲ್‌ ಸಿಗುವುದಿಲ್ಲ. ಇದೇ ಸ್ಥಿತಿ ನಾವೀಗ ಆಹಾರ ಸಂಪನ್ಮೂಲಗಳಿಗೆ ಸೃಷ್ಟಿಸಿಕೊಳ್ಳುತ್ತಿದ್ದೇವೆ. ವಾಹನವನ್ನು ಗುಜರಿಗೆ ಹಾಕಬಹುದು. ಆದರೆ ಆಹಾರ ಸಂಪನ್ಮೂಲವೇ ಕೊರತೆಯಾದರೆ ನಮ್ಮ ಹೊಟ್ಟೆಯನ್ನೇನು ಗುಜರಿಗೆ ಹಾಕಲು ಸಾಧ್ಯವಾದೀತೇ? ಹಣಕ್ಕಿಂತ ಸಂಪನ್ಮೂಲ ದೊಡ್ಡದೆಂಬ ವಿವೇಕ ಮೂಡುವವರೆಗೂ ಇಂಥ ಆಡಂಬರದ ಮೆರವಣಿಗೆ ನಿಲ್ಲುವುದಿಲ್ಲ. ಮೂರು ಗಂಟೆಯ ಸಮಾರಂಭ ಮುಗಿದ ಬಳಿಕ ಒಂದು ಟನ್‌ನಷ್ಟು ಸಂಪನ್ಮೂಲ ವ್ಯರ್ಥವಾಗುವುದು ನಿಲ್ಲುವುದಿಲ್ಲ. ದಾಸರು ಹೇಳಿದ್ದೂ ಗೇಣುದ್ದದ ಹೊಟ್ಟೆಯ ಬಗ್ಗೆಯೇ. ಈ ಹೊಟ್ಟೆಗೆ ಬೇಕಾದದ್ದೆಷ್ಟು ಎಂದು ಪ್ರಶ್ನೆಯನ್ನು ಕೇಳಿಕೊಂಡರೆ ಉತ್ತರ ಬಹಳ ಸರಳ. ಆದರೂ ದೊಡ್ಡಸ್ತಿಕೆಗೆ ಬಡತನ ಬರಬಾರದೆಂದು ಪೈಪೋಟಿಗೆ ಇಳಿದಿದ್ದೇವೆ. ಇದರಿಂದ ಸೃಷ್ಟಿಯಾಗುತ್ತಿರುವ ಅಪಾರ ಆಹಾರ ಸಂಪನ್ಮೂಲಗಳ ತ್ಯಾಜ್ಯವನ್ನು ಕಂಡೂ ಕಾಣದಂತಿದ್ದೇವೆ, ಇದೇ ದೊಡ್ಡ ದೌರ್ಭಾಗ್ಯ. ಅದಕ್ಕಾಗಿಯೇ ಅಡುಗೆ ಭಟ್ಟರ ಊಟದ ಕ್ರಮವನ್ನು ನಾವೆಲ್ಲರೂ ಅಳವಡಿಸಿಕೊಂಡರೆ ಒಳ್ಳೆಯದು. ಸರಳತೆಯೊಂದಿಗೆ ನಾವೆಲ್ಲ ಮದುವೆ ಮಾಡಿಕೊಂಡರಷ್ಟೇ ಸಾಧ್ಯವಾದೀತು. ನಗರೀಕರಣದ ಪ್ರಜ್ಞೆ ನಮ್ಮನ್ನು ಇಂಥದೊಂದು ಸ್ಥಿತಿಗೆ ತಂದು ನಿಲ್ಲಿಸಿದರೆ ನಿಜಕ್ಕೂ ಅದು ಸ್ವಾಗತಾರ್ಹ.

– ಅರವಿಂದ ನಾವಡ

ಟಾಪ್ ನ್ಯೂಸ್

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.