ಜಾತಿ ಬೆಂಬಲವಿಲ್ಲದೆೆ ಬೆಳೆದ ಸಿಂಗ್‌


Team Udayavani, Jul 28, 2017, 1:50 AM IST

28-ANKANA-2.jpg

ಇದೇ ತಿಂಗಳು 12ರಂದು ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ವಿಭಾಗೀಯ ಸಮಾವೇಶದ ಬ್ಯಾನರ್‌ಗಳಿಂದ ಪಕ್ಷದ ವರಿಷ್ಠ ನಾಯಕ, ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಅವರ ಭಾವಚಿತ್ರವೇ ಮಾಯವಾಗಿತ್ತು. ಪಕ್ಷದೊಳಗಿನ ಕೆಲವು ಕಿಡಿಗೇಡಿಗಳ ಈ ಕೃತ್ಯದಿಂದ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಉಂಟಾಗಿ ರಾಜಕೀಯ ವಿವಾದವೇ ತಲೆದೋರಿತ್ತು. ಅಂದು ಬ್ಯಾನರ್‌ಗಳಿಂದ ಮಾಯವಾಗಿದ್ದ ಧರಂಸಿಂಗ್‌ ಮುಂದೆ ಎರಡೇ ವಾರಗಳಲ್ಲಿ ತಮ್ಮ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳಗಿಸಿ ಹೊರಟುಹೋಗಬಹುದೆಂದು ಯಾರೂ ಕೂಡ ಕನಸು ಮನಸಿನಲ್ಲಿ ಎಣಿಸಿರಲಿಲ್ಲ.

ಧರಂಸಿಂಗ್‌ ಅವರಿಗೆ ಯಾವುದೇ ರೋಗ -ರುಜಿನ ಇರಲಿಲ್ಲ, ವೃದ್ಧಾಪ್ಯವೊಂದೇ ಕಾಡುತ್ತಿತ್ತು. ಎಂಬತ್ತೂಂದರ ಇಳಿವಯಸ್ಸಿನಲ್ಲೂ ನೂರಾರು ಕಾರ್ಯಕರ್ತರನ್ನು ಅವರ ಹೆಸರಿನಿಂದಲೇ ಕರೆಯುತ್ತಿದ್ದುದ್ದು ಅವರ ನೆನಪಿನ ಶಕ್ತಿಯ ಅಗಾಧತೆಯನ್ನು ಸೂಚಿಸುತ್ತಿತ್ತು. ಸಾರ್ವಜನಿಕ ಜೀವನವನ್ನು ಶಾಸಕನಾಗಿ, ಸಂಸದನಾಗಿ, ಪಕ್ಷದ ಅಧ್ಯಕ್ಷನಾಗಿ, ವಿಪಕ್ಷದ ನಾಯಕನಾಗಿ  ಮತ್ತು ಮುಖ್ಯಮಂತ್ರಿಯಾಗಿ ಧರಂಸಿಂಗ್‌ರಂತೆ ಆನಂದಿಸಿದವರು ತೀರಾ ವಿರಳ. ನಾಲ್ಕೂವರೆ ದಶಕಗಳ ಕಾಲ ಅಪ್ಪಟ ಕಾಂಗ್ರೆಸ್ಸಿಗರಾಗಿಯೇ ಇದ್ದ ಅವರು, ದಿಢೀರ್‌ ನಾಯಕರಾಗಿ ಪ್ಯಾರಾಚೂಟ್‌ನಿಂದ ಇಳಿದವರಲ್ಲ. ಕಲಬುರಗಿ ನಗರಸಭೆಯ ಸದಸ್ಯ ಸ್ಥಾನದಿಂದ ರಾಜ್ಯದ ಅತ್ಯುನ್ನತ ರಾಜಕೀಯ ಪದವಿಗೇರಿದ ರಜಪೂತ ನಾಯಕ. ರಾಜ್ಯ ರಾಜಕಾರಣದಲ್ಲಿ ಆಲದ ಮರದಂತೆ ಬೆಳೆದು ವ್ಯಾಪಿಸಿದವರು.

ಧರಂಸಿಂಗ್‌ ಅವರು ರಾಜಕೀಯ ಯಶಸ್ಸು ಅತ್ಯಪೂರ್ವವಾದದ್ದು. ಕರ್ನಾಟಕದ ಜಾತಿ, ಉಪಜಾತಿ ರಾಜಕಾರಣದ ಸಂದರ್ಭದಲ್ಲಂತೂ ಅವರ ಯಶಸ್ಸು ಒಂದು ವಿಸ್ಮಯವೇ ಸರಿ. ಚುನಾವಣಾ ರಾಜಕಾರಣದಲ್ಲಿ ಅವರಿಗೆ ತಮ್ಮದೇ ಆದ ಜಾತಿಯ ಬೆಂಬಲ ಇಲ್ಲವೇ ಇಲ್ಲ. ಜೇವರ್ಗಿಯಲ್ಲಿ ರಜಪೂತ ಜಾತಿಯ ಮತಗಳೇ ಇಲ್ಲ. ಲಿಂಗಾಯತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾಕರ ಕ್ಷೇತ್ರ ಅದು. ಆದಾಗ್ಯೂ ಸತತ ಎಂಟು ಬಾರಿ ಜೇವರ್ಗಿಯ ಜನತೆ ಅವರನ್ನು ವಿಧಾನಸಭೆಗೆ ಆರಿಸಿ ಕಳುಹಿಸಿದ್ದಾರೆ! ತಮ್ಮ ಚೊಚ್ಚಲ ಚುನಾವಣೆಯಲ್ಲಿಯೇ ಅಂದಿನ ಕಾಲದ ರಾಜಕೀಯ ದಿಗ್ಗಜರೆನಿಸಿದ, ಬಲಾಡ್ಯ ಲಿಂಗಾಯತ ಸಮುದಾಯದ ಮಹದೇವಪ್ಪ ರಾಂಪುರೆ ಅವರಿಗೆ ಭೀಮಾ ನದಿಯ ನೀರನ್ನು ಕುಡಿಸಿ ಒಂದು ರಾಜಕೀಯ ಪವಾಡವನ್ನು ಮೆರೆದರು. 1972ರಿಂದ ಆರಂಭವಾದ ಅವರ ಚುನಾವಣಾ ರಾಜಕೀಯ ಯಾತ್ರೆಗೆ ಬ್ರೇಕ್‌ ಬಿದ್ದದ್ದು 2008ರಲ್ಲಿ. ತಮಗೆ ಪುಟಿದೇಳುವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟರು. 2008ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಪರಾಭವಗೊಂಡರೂ ಅದರ ಮರು ವರುಷವೇ 2009ರ ಲೋಕಸಭಾ ಚುನಾವಣೆಯಲ್ಲಿ ತಮ್ಮದಲ್ಲದ ಬೀದರ ಕ್ಷೇತ್ರದಿಂದ ಆಯ್ಕೆಯಾಗಿ ರಾಜಕೀಯ ಪಂಡಿತರ ಹುಬ್ಬೇರುವಂತೆ ಮಾಡಿದರು. ಆದರೆ 2014ರ ಸಂಸತ್‌ ಚುನಾವಣೆಯಲ್ಲಿ ಚುನಾವಣೆಯಲ್ಲಿ ವಿಜಯಲಕ್ಷ್ಮೀಯು ಅವರಿಗೆ ಸಾಥ್‌ ನೀಡಲಿಲ್ಲ. ಅದೇ ಅವರ ಕೊನೆಯ ಚುನಾವಣೆ. 

ಧರಂಸಿಂಗ್‌ ನಾರಾಯಣಸಿಂಗ್‌ ಮುಖ್ಯಮಂತ್ರಿಯಾದದ್ದು ಆಕಸ್ಮಿಕವೇನಲ್ಲ. ಅವರ ಜಾತಕದಲ್ಲಿ ಅಂತಹ ಒಂದು ಯೋಗ ಇದ್ದದ್ದು ನಿಜ. ಆದರೆ ಸಾಂದರ್ಭಿಕ ಒತ್ತಡ, ರಾಜಕೀಯ ಅನಿವಾರ್ಯತೆಯ ಕಾರಣಗಳು ಅವರು ಮೈಗೂಡಿಸಿಕೊಂಡಿದ್ದ ಸ್ವಭಾವಕ್ಕೆ ಹೇಳಿ ಮಾಡಿಸಿದಂತಿದ್ದವು. ಕಾಂಗ್ರೆಸ್‌ ಮತ್ತು ಜಾತ್ಯತೀತ ಜನತಾದಳದ ಮೈತ್ರಿಕೂಟ ಸರಕಾರದ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಧರಿಸಿದ್ದು ಕಾಂಗ್ರೆಸ್‌ ಪಕ್ಷವಲ್ಲ. ಅದು ಜೆಡಿ(ಎಸ್‌) ಪರಮೋಚ್ಚ ನಾಯಕ ದೇವೇಗೌಡ ಅವರ ಆಯ್ಕೆ. ಅದಕ್ಕೆ ಅಸ್ತು ಎಂದರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ. ಮೈತ್ರಿಕೂಟದ ಸಹಭಾಗಿ ಪಕ್ಷದ ವಿಪರೀತ ಒತ್ತಡ, ಬೇಡಿಕೆ, ರಾಜಕೀಯ ಅಸ್ಥಿರತೆ, ಅನಿಶ್ಚಿತತೆ, ಗೊಂದಲಗಳ ಕರ್ನಾಟಕದ ಮೊದಲ ಸಮ್ಮಿಶ್ರ ಸರಕಾರ ಯಾವಾಗಲಾದರೂ ಕುಸಿದು ಬೀಳುವ ಆತಂಕ. ಅದರ ಮಧ್ಯೆಯೇ ಸರಕಾರವನ್ನು 20 ತಿಂಗಳು ನಡೆಸಿಕೊಂಡು ಹೋದರು. “ಇಂತಹ ಅಯೋಮಯ ಸನ್ನಿವೇಶದಲ್ಲಿ ನನಗಂತೂ ಸರಕಾರದ ಸಾರಥ್ಯ ವಹಿಸಲು ಸಾಧ್ಯವಿಲ್ಲ. ಪ್ರಾಯಃ ಧರಂಸಿಂಗ್‌ ಅವರನ್ನು ಬಿಟ್ಟರೆ ಬೇರೆ ಯಾರಿಗೂ ಸಾಧ್ಯವಿಲ್ಲವೇನೋ!’ ಎಂದು ಧರಂಸಿಂಗ್‌ ಅವರ ತತ್‌ಕ್ಷಣದ ಪೂರ್ವಾಧಿಕಾರಿ ಎಸ್‌.ಎಂ. ಕೃಷ್ಣ ಅವರು ಪ್ರತಿಕ್ರಿಯಿಸಿದ್ದು ಸಿಂಗ್‌ ಅವರ ಸಾಮರ್ಥ್ಯಕ್ಕೆ ನೀಡಿದ ಪ್ರಮಾಣ ಪತ್ರವಾಗಿದೆ. ಪಕ್ಷದೊಳಗೆ ಅವರು ಹಲವು ಏಳು-ಬೀಳು, ಮಾನಾಪಮಾನಗಳನ್ನು ಕಂಡವರು. ಆದರೆ ಬಂದದ್ದೆಲ್ಲವನ್ನು ಸಮತೋಲನದಿಂದಲೇ ಸ್ವೀಕರಿಸಿದರು. 1999ರ ರಾಜ್ಯ ವಿಧಾನಸಭೆ ಚುನಾವಣೆ ಕೆಲವೇ ತಿಂಗಳಿರುವಾಗ ಧರಂಸಿಂಗ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಪದವಿಯಿಂದ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಲಾಯಿತು. ಎಸ್‌.ಎಂ. ಕೃಷ್ಣ ಪಾಂಚಜನ್ಯ ಊದುತ್ತ ಅವರ ಸ್ಥಾನಕ್ಕೆ ಬಂದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಕೃಷ್ಣ ಮುಖ್ಯಮಂತ್ರಿಯಾದರೂ ರಾಜಕಾರಣವೇನು ಧರ್ಮಕಾರಣವಲ್ಲವಲ್ಲ! ಆದರೆ ತಾಳ್ಮೆ ಧರಂಸಿಂಗ್‌ ಅವರನ್ನು ಉತ್ತುಂಗಕ್ಕೆ ಕೊಂಡೊಯ್ದಿತು! “ತಾಳಿದವನು ಬಾಳಿಯಾನು’ ಎಂಬ ಲೋಕೋಕ್ತಿಗೆ ಅವರೇ ಜ್ವಲಂತ ನಿದರ್ಶನ. 2004ರಲ್ಲಿ ಕಾಂಗ್ರೆಸ್‌ ಪಕ್ಷ ಸೋತರೂ ಅವರು ಮುಖ್ಯಮಂತ್ರಿಯಾದರು.

ಸಾರ್ವಜನಿಕ ಜೀವನದಲ್ಲಿ ಧರಂಸಿಂಗ್‌ ಅವರಿಗೆ “ಅಜಾತಶತ್ರು’ ಎಂಬ ಅಭಿಧಾನವಿದೆ. ಎಂತಹ ವೈರಿಗಳೂ ಅವರ ಉದಾರತೆಗೆ ಮಾರು ಹೋಗಬೇಕು. ರಾಜಕಾರಣದಲ್ಲಿ ಜನ ಏನನ್ನಾದರೂ ಸಹಿಸಬಹುದು. ಆದರೆ ನಾಯಕನ ಅಹಂಕಾರವನ್ನು ಯಾರೂ ಸಹಿಸಲಾರರು. ಆದರೆ, ಅಹಂಕಾರದ ಛಾಯೆ ಅವರನ್ನು ತಟ್ಟಲೇ ಇಲ್ಲ. ಅಂತೆಯೇ ಜಾತಿ ಬಲವಿಲ್ಲದೆ ಸುದೀರ್ಘ‌ ರಾಜಕಾರಣ ಮಾಡಿ ರಾಜ್ಯದ ಅತ್ಯುನ್ನತ ಪದವಿಗೆ ಏರಿದರು. ಮೇಲ್ಜಾತಿಯ ರಾಜಕೀಯ, ಸಾಮಾಜಿಕ ಪ್ರಭಾವ ಮತ್ತು ಪ್ರಾಬಲ್ಯವನ್ನು ವ್ಯವಸ್ಥಿತವಾಗಿ ಮಟ್ಟ ಹಾಕುತ್ತಲೇ ಸೆಕ್ಯುಲರ್‌ ರಾಜಕಾರಣಿಯಾಗಿ ವಿಜೃಂಭಿಸಿದರು. ಜೇವರ್ಗಿಯಿಂದ ಅವರು ನಿರಂತರ ಚುನಾಯಿತರಾಗುವುದನ್ನು ಕಂಡು ಜನತಾ ಪಕ್ಷದ ನಾಯಕ ರಾಮಕೃಷ್ಣ ಹೆಗಡೆಯವರು, “ಜೇವರ್ಗಿಯನ್ನು ಧರಂಸಿಂಗ್‌ ಅವರಿಗೆ ಜಹಗೀರು ಬರೆದುಕೊಟ್ಟಂತಿದೆ’ ಎಂದು ಉದ್ಗರಿಸಿದ್ದರು. ನಿಜ. ಧರಂಸಿಂಗ್‌ ಅವರು ಜೇವರ್ಗಿಯ ಜಹಗೀರುದಾರರೇ ಸರಿ. ಅವರು ಮುಖ್ಯಮಂತ್ರಿ ಆಗಿದ್ದ ಅವಧಿ ತೀರಾ ಗೊಂದಲಮಯ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದೇ ಹುದ್ದೆಗೆ ಇಬ್ಬರು-ಮೂವರು ನಿಯುಕ್ತಿಯಾದದ್ದುಂಟು. ಅವರ 20 ತಿಂಗಳ ಅಲ್ಪಾವಧಿಯ ಅಧಿಕಾರದ ಸಾಧನೆಗಳನ್ನು ಹಿಡಿದಿಡುವುದು ಕಷ್ಟಕರ. ಆದರೆ ವೈದ್ಯಕೀಯ ಶಿಕ್ಷಣವನ್ನು ಸಾರ್ವಜನಿಕ ತೆಕ್ಕೆಗೆ ತಂದ ಶ್ರೇಯಸ್ಸು ಅವರ ಸರಕಾರಕ್ಕೆ ಸಲ್ಲಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಬಿ ಸರಕಾರವನ್ನು ಆಟವಾಡಿಸತೊಡಗಿದಾಗ, ಸರಕಾರ ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸುವುದೇ ಅಸಂಭವ ಎನ್ನುವ ಸ್ಥಿತಿ ಇದ್ದಾಗ, ಆರು ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಅವರ ಅವಧಿಯಲ್ಲಿಯೇ ಪ್ರಾರಂಭಿಸಲಾಯಿತು. ಮುಂದೆ ಅದು ಜಿಲ್ಲೆಗೊಂದು ಸರಕಾರಿ ವೈದ್ಯರೇ ಕಾಲೇಜು ಎಂಬ ನೀತಿಯಲ್ಲಿ ಪರ್ಯವಸಾನಗೊಂಡಿತು. ದಶಕಗಳ ಕನಸಾದ ಧಾರವಾಡ ಮತ್ತು ಕಲಬುರಗಿಯಲ್ಲಿ ಹೈಕೋರ್ಟ್‌ ಪೀಠಗಳನ್ನು ಪಟ್ಟು ಹಿಡಿದು ಸಾಕಾರಗೊಳಿಸಿದವರು. ಕುಖ್ಯಾತ ಕಾಡುಗಳ್ಳ ವೀರಪ್ಪನ್‌ ಹಾವಳಿಗೆ ಅಂತ್ಯ ಹಾಡಿದ್ದು ಅವರ ಸರಕಾರದ ಸಾಧನೆಗಳಲ್ಲೊಂದು. 

ತಮ್ಮ ರಾಜಕೀಯ ಜೀವನದ ಹರೆಯದಲ್ಲಿ ಎಡಪಂಥೀಯ ತಣ್ತೀಗಳಿಗೆ ಒಲವು ಹೊಂದಿದ್ದ ಅವರು ತೀರಾ ಧಾರ್ಮಿಕ ಸ್ವಭಾವದವರಾಗಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಒಬ್ಬ ನಿಗೂಢ ಯೋಗಿನಿಯ ದರ್ಶನಕ್ಕಾಗಿ ಐದು ಗಂಟೆಗೂ ಹೆಚ್ಚು ಕಾಯ್ದು ಕುಳಿತಿದ್ದರು. ವೀರಶೈವ-ಲಿಂಗಾಯತ ಮಠಾಧೀಶರನ್ನು ಸಂಪ್ರೀತಗೊಳಿಸಲು ಅವರು ಯಾವಾಗಲೂ ತುದಿಗಾಲ ಮೇಲೆ ನಿಂತಿರುತ್ತಿದ್ದರು. ಅದು ಅವರ ಚುನಾವಣೆಗಳಲ್ಲಿ ನಿರೀಕ್ಷಿತ ಫ‌ಲ ನೀಡುತ್ತಿತ್ತು. ಕೆಲವು ಜ್ಯೋತಿಷಿಗಳನ್ನು ಬಲವಾಗಿ ನಂಬುತ್ತಿದ್ದರು. ಎಡಚರಿಗೆ ಆತ್ಮವಿಶ್ವಾಸ, ಇಚ್ಛಾಶಕ್ತಿ ಸ್ವಲ್ಪ ಅಧಿಕವೇ ಇರುತ್ತದೆಯಂತೆ. ಅದೂ ಕೂಡ ಅವರ ನೆರವಿಗೆ ಬಂದಿದ್ದಿರಬಹುದು. ನಂಬಿದ ಸ್ನೇಹಿತರನ್ನು ಅವರು ಎಂದೂ ಕೈ ಬಿಟ್ಟವರಲ್ಲ. ತಮ್ಮ ಎಡಪಂಥೀಯ ಸ್ನೇಹಿತ, ಬೀದರನ ಸಂಗ್ರಾಮಪ್ಪ ಅವರು ಕ್ಯಾನ್ಸರ್‌ನಿಂದ ಮರಣ ಶಯೆಯಲ್ಲಿದ್ದಾಗ ಹೆಲಿಕಾಪ್ಟರ್‌ನಲ್ಲಿ ಕಲಬುರಗಿಗೆ ಧಾವಿಸಿ ಬಂದು ಕಂಡು ಮಾತಾಡಿಸಿದರು. ಧರಂಸಿಂಗ್‌ ಅವರ ಒಂದು ಸಣ್ಣ ತ್ಯಾಗ ಅವರನ್ನು ರಾಜಕಾರಣದ ರಾಜಮಾರ್ಗದಲ್ಲಿ ಮುನ್ನಡೆಸಿರುವುದು ಗಮನಾರ್ಹ. 1980ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಿಂದ ಆಯ್ಕೆಯಾಗಿದ್ದ ಧರಂಸಿಂಗ್‌ ತಮ್ಮ ನಾಯಕಿ ಇಂದಿರಾ ಗಾಂಧಿ ಅವರ ಆಣತಿಯ ಮೇರೆಗೆ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸುವ ಮುಂಚೆಯೇ ಸಿ.ಎಂ. ಸ್ಟೀಫ‌ನ್‌ ಅವರಿಗಾಗಿ ರಾಜೀನಾಮೆ ನೀಡಿದರು. ಈ ತ್ಯಾಗಕ್ಕೆ ದೊರೆತ ಪ್ರತಿಫ‌ಲ ಎಂದರೆ ಆರ್‌. ಗುಂಡೂರಾವ್‌ ಸರಕಾರದಲ್ಲಿ ಕ್ಯಾಬಿನೆಟ್‌ ಸಚಿವ ಪದವಿ! ಅಂದಿನಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಅಭಿವೃದ್ಧಿ ರಾಜಕಾರಣದಲ್ಲಿ ಅವರ ಪಾತ್ರ ಉಲ್ಲೇಖಾರ್ಹವಾಗಿಲ್ಲದಿದ್ದರೂ ಸುದೀರ್ಘ‌ ರಾಜಕೀಯ ಜೀವನದಲ್ಲಿ ಅವರು ಪಾಲಿಸಿಕೊಂಡು ಬಂದ ಸೆಕ್ಯೂಲರ್‌ ಪ್ರಣಾಳಿಕೆ ಮತ್ತು ಸುಸಂಸ್ಕೃತ ರಾಜಕಾರಣಕ್ಕೆ ಅವರು ನೀಡಿದ ಕಾಣಿಕೆ ಅನನ್ಯ. ಮುಖ್ಯಮಂತ್ರಿಯಾಗಿದ್ದಾಗ ಪಟ್ಟಾ ಭೂಮಿಯನ್ನು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟು ರಾಜ್ಯದ ಬೊಕ್ಕಸಕ್ಕೆ 23 ಕೋಟಿ ರೂ.ಗಳಷ್ಟು ನಷ್ಟ ಮಾಡಿದರೆಂಬ ಲೋಕಾಯುಕ್ತದ ಆರೋಪದ ಕಳಂಕವನ್ನು ಹೊತ್ತೇ ಅವರು ಅಂತಿಮ ಯಾತ್ರೆ ಮಾಡಿದ್ದು, ಸ್ವಲ್ಪ ಬೇಸರ ಉಂಟುಮಾಡುವಂತಹುದು.

ಶ್ರೀನಿವಾಸ ಸಿರನೂರಕರ್‌

ಟಾಪ್ ನ್ಯೂಸ್

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.