ರಸ್ತೆ ಅಪಘಾತ ಹೆಚ್ಚುತ್ತಿವೆ


Team Udayavani, Nov 19, 2017, 6:00 AM IST

Fracture-first-aid.jpg

ದಿನವೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಮುಖ ಪ್ರಕರಣಗಳ ಸರಾಸರಿ ಪಟ್ಟಿ  ಹೀಗಿದೆ:

ಕೊಲೆ     – ಸೊನ್ನೆ
ಸುಲಿಗೆ     – ಸೊನ್ನೆ
ಕಳ್ಳತನ     – ಸೊನ್ನೆ
ದರೋಡೆ     – ಸೊನ್ನೆ
ಸ್ತ್ರೀ ಬಲಾತ್ಕಾರ     – ಸೊನ್ನೆ
ರಸ್ತೆ ಅಪಘಾತ     – ಎರಡು

ಇದು ಪೊಲೀಸ್‌ ವಿಭಾಗದಲ್ಲಿ  ಪ್ರಕಟಗೊಳ್ಳುವ ದೈನಂದಿನ ಅಂಕಿ – ಅಂಶ. ಅಪರಾಧ ನಿಟ್ಟಿನಲ್ಲಿ ಶಾಂತಿಯುತವಾದ ನಮ್ಮ ನಾಡಿನಲ್ಲಿ ರಸ್ತೆ ಅಪಘಾತ ಮಾತ್ರ ಒಂದು ಕಪ್ಪು ಚುಕ್ಕಿ! ದಿನ ನಿತ್ಯ ನಡೆಯುವ ಸಾಮಾನ್ಯ / ಭೀಕರ ರಸ್ತೆ ಅಪಘಾತದಲ್ಲಿ ಉಂಟಾಗುವ ಸಾವು ನೋವು ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ನಮ್ಮ ಬಂಧುಬಳಗದ ವ್ಯಕ್ತಿ ಕಣ್ಮರೆಯಾದಾಗ ಇಂತಹ ದುರ್ಘ‌ಟನೆಗಳು ಸಂಭವಿಸದೇ ಇರಲಿ ಎಂದು ಹಾರೈಸುತ್ತೇವೆ. ಆದರೆ ಇದು ಬರೀ ಆಸೆಯಾಗಿಯೇ ಉಳಿಯುತ್ತದೆ!

ರಸ್ತೆ ಅಪಘಾತವನ್ನು ತಡೆಯಬಹುದೇ? ಅಪಘಾತಕ್ಕೆ ಬಲಿಯಾದ ವ್ಯಕ್ತಿಗಳಿಗೆ ಮೂಳೆಮುರಿತ ಉಂಟಾಗಿದ್ದಲ್ಲಿ  ಯಾವ ಬಗೆಯ ಪ್ರಥಮ ಚಿಕಿತ್ಸೆ ನಡೆಸಬಹುದು? ಈ ರೋಗಿಗಳನ್ನು ಆಸ್ಪತ್ರೆಗೆ ಹೇಗೆ ಸಾಗಿಸಬಹುದು? … ಇಂತಹಾ ಪ್ರಶ್ನೆಗಳಿಗೆ ಬನ್ನಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ಪಡೆಯೋಣ.

ರಸ್ತೆ ಅಪಘಾತದತ್ತ ಒಂದು ನೋಟ
2013ನೇ ಇಸವಿಯಲ್ಲಿ ದಕ್ಷಿಣ ಕನ್ನಡದಲ್ಲಿ ಸಂಭವಿಸಿದ ರಸ್ತೆ ಅಪಘಾತದ ಪ್ರಮಾಣವೆಂದರೆ ವಾರ್ಷಿಕ 16% ಕಳೆದ 1-2 ಶತಮಾನದಿಂದ ಇತ್ತೀಚೆಗೆ ರಸ್ತೆ ಅಪಘಾತದ ದುರ್ಘ‌ಟನೆಯ ಪ್ರಮಾಣ ಏರಿಕೆ ಕಂಡಿದೆ. ಭವಿಷ್ಯದತ್ತ ನೋಟ ಹರಿಸಿದಾಗ ಸುಮಾರು 8.4 ಮಿಲಿಯನ್‌ ದುರ್ಮರಣ ಈ ಕಾರಣದಿಂದ ಜಗತ್ತಿನಲ್ಲಿ ಸಂಭವಿಸಲಿದೆ! ಈ ಅಪಘಾತಗಳಿಂದ ಉಂಟಾಗುವ ಸಾವು-ನೋವು, ಕಷ್ಟ – ನಷ್ಟ, ಜೀವ ಹಾನಿ -ಅಂಗಾಂಗಗಳ ನ್ಯೂನತೆ… ಊಹಿಸಲು ಅಸಾಧ್ಯ.

ರಸ್ತೆ ಅಪಘಾತಕ್ಕೆ ಪ್ರಮುಖ ಕಾರಣಗಳೆಂದರೆ
ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಮಿತಿ ಮೀರಿದ ವೇಗದಿಂದ ವಾಹನ ಚಲಾಯಿಸುವಿಕೆ, “ರೈಟ್‌ ಪೋಯಿ, ಬೇಗ… ಬೇಗ…… ಜಪ್ಪುಲೆ… ಬಲೆ… ಬಲೆ’ ಎಂಬ ಅವಸರ, ವಾಹನಗಳನ್ನು ಹಿಂದಿಕ್ಕುವ ತವಕ, ರಸ್ತೆ ನಿಯಮಗಳ ಉಲ್ಲಂಘನೆ, ಪಾದಚಾರಿಗಳ ಬಗ್ಗೆ ನಿರ್ಲಕ್ಷ್ಯ, ಪುರಾತನ ಶಿಥಿಲಗೊಂಡಿರುವ ವಾಹನದ ಉಪಯೋಗ, ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವುದು, ಚಲಿಸುತ್ತಿರುವ ವೇಳೆ ಫೋನ್‌ನ ಸಂಭಾಷಣೆಯಲ್ಲಿ ತೊಡಗುವುದು, ಹದಗೆಟ್ಟ ರಸ್ತೆಯ ಸ್ಥಿತಿ, ತಿರುವು-ಮುರುವು ಹೊಂದಿರುವ ರಸ್ತೆಗಳು, ರಸ್ತೆಗಳ ಅವೈಜ್ಞಾನಿಕ ರೂಪದ ಉಬ್ಬುಗಳ ನಿರ್ಮಾಣ, ಸೀಟ್‌ಬೆಲ್ಟ್ ಅಥವಾ ಹೆಲ್ಮೆಟ್‌ ಧರಿಸುವಲ್ಲಿ ತೋರುವ ಉದಾಸೀನತೆ… ಹೀಗೆ ಕಾರಣಗಳು ನೂರಾರು.ನೀವೇ ಊಹಿಸುವಂತೆ ಹೆಚ್ಚಿನ ರಸ್ತೆ ಅಪಘಾತಗಳನ್ನು ತಾಳ್ಮೆ ಹಾಗೂ ಜಾಣತನ – ಜವಾಬ್ದಾರಿಯ ಮೂಲಕ ತಪ್ಪಿಸಬಹುದು.

ಅಪಘಾತಕ್ಕೊಳಗಾಗುವ 
ಶರೀರದ ಭಾಗಗಳು

ತೀವ್ರ ರೀತಿಯ ತಲೆ, ಕುತ್ತಿಗೆ, ಎದೆ, ಹೊಟ್ಟೆ ಅಥವಾ ಸೊಂಟದ ಭಾಗಗಳಿಗೆ ಜಖಂ ತಗುಲಿದಾಗ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಹಾಗೆಯೇ ದೊಡ್ಡ ಗಾಯಗಳಿಂದ ಉಂಟಾಗುವ ರಕ್ತಸೋರಿಕೆಯಿಂದ ವ್ಯಕ್ತಿ ಕುಸಿದು ಬೀಳಬಹುದು. ಈ ರೀತಿಯ ಪೆಟ್ಟುಗಳನ್ನು ಹೊರತು ಪಡಿಸಿದಲ್ಲಿ, ಉಳಿದ ವ್ಯಕ್ತಿಗಳನ್ನು ಸಮಯಪ್ರಜ್ಞೆ ಹಾಗೂ ಸೂಕ್ತ ಪ್ರಾಥಮಿಕ ಚಿಕಿತ್ಸೆಯ ತಿಳಿವಳಿಕೆಯ ಮೂಲಕ ಪ್ರಾಣಾಪಾಯದಿಂದ ಪಾರುಗೊಳಿಸಬಹುದು.

ಮೂಳೆ ಮುರಿತ ಹಾಗೂ 
ಮಂಡಿ ಪಲ್ಲಟಗೊಳ್ಳುವುದು

ರಸ್ತೆ ಅಪಘಾತದಲ್ಲಿ ಸುಮಾರು 65-66% ವ್ಯಕ್ತಿಗಳಲ್ಲಿ ಮೂಳೆಮುರಿತ ಅಥವಾ ಕೀಲು ತಪ್ಪುವುದು ಕಂಡುಬರುತ್ತದೆ. ಕುತ್ತಿಗೆಯ ಅಥವಾ ಬೆನ್ನು ಹುರಿಯ ಮೂಳೆ ಮುರಿತಗೊಂಡಲ್ಲಿ  ನರಗಳಿಗೆ ಪೆಟ್ಟಾಗುವ ಕಾರಣ ವ್ಯಕ್ತಿ ಕೈಕಾಲುಗಳಲ್ಲಿ ಬಲ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಶ್ಚಲನಾಗಿ ಬಿದ್ದಿರುವ ದೃಶ್ಯ ಕಂಡು ಬರುತ್ತದೆ. ಇದು ಗಂಭೀರ ರೀತಿಯ ಅಪಘಾತ, ಇಂತಹ ನತದೃಷ್ಟ ವ್ಯಕ್ತಿಗಳನ್ನು ಎತ್ತಿ ಆಸ್ಪತ್ರೆಗೆ ಸಾಗಿಸುವಾಗ ಅತ್ಯಂತ ಜಾಗ್ರತೆ ವಹಿಸಬೇಕಾಗುತ್ತದೆ. ಬೇರೆ ರೀತಿಯ ಪೆಟ್ಟುಗಳು: ಒಂದು ಅಥವಾ ಹಲವು ಮೂಳೆಗಳ ಮುರಿತ, ಕೈ ಅಥವಾ ಕಾಲುಗಳಲ್ಲಿ ಕೀಲು ತಪ್ಪುವುದು, ನರಗಳಿಗೆ ಪೆಟ್ಟು ತಗಲುವುದು, ತರಚು ಗಾಯ, ಗಾಯದ ಮುಖಾಂತರ ಪೆಟ್ಟಾದ ಮೂಳೆ ಹೊರಗೆ ಇಣುಕಿ ಬರುವುದು…. ಇತ್ಯಾದಿ.

ಪ್ರಥಮ ಚಿಕಿತ್ಸೆ
ದುರ್ಘ‌ಟನೆ ನಡೆದ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡುವ ಬಗ್ಗೆ  ಎಲ್ಲ ನಾಗರಿಕರಿಗೆ ತಿಳಿವಳಿಕೆ ಜ್ಞಾನ ಅಗತ್ಯ. ಕ್ಲಪ್ತ ಸಮಯದಲ್ಲಿ  ನುರಿತ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಹಲವು ವ್ಯಕ್ತಿಗಳನ್ನು ಮೃತ್ಯುಕೂಪದಿಂದ ಕಾಪಾಡಬಹುದು.ಈ ಲೇಖನದಲ್ಲಿ ಕೇವಲ ಮೂಳೆ ಹಾಗೂ ಮಂಡಿಗಳಿಗೆ ಸಂಬಂಧಿಸಿದ ಹೊಡೆತದ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆಯೋಣ. ಚಿಕಿತ್ಸೆ ನೀಡುವಾಗ ಸಂಭವಿಸುವ ಎಡವಟ್ಟುಗಳನ್ನು ತಿಳಿದುಕೊಳ್ಳೋಣ. 

ಕಲಿತ ಪಾಠ
ಜಗತ್ತಿನಲ್ಲಿ ಪ್ರತೀ ವರ್ಷ ಸುಮಾರು 1.17 ಮಿಲಿಯನ್‌ ನಾಗರಿಕರು ರಸ್ತೆ ಅಪಘಾತದಲ್ಲಿ  ಸಿಲುಕಿ ಸಾಯುತ್ತಾರೆ! ಹಲವು ಅಪಘಾತಗಳು ಜೀವನದಲ್ಲಿ ನಡೆದೇ ಹೋಗುತ್ತವೆ. 

ಅದು ದೈವ ನಿಯಮ!! 
ಆದರೆ ಸೂಕ್ತ ಜಾಗರೂಕತೆಯ ನಡೆವಳಿಕೆಯ ಮೂಲಕ ಹೆಚ್ಚಿನ ಅಪಘಾತಗಳನ್ನು ತಡೆಯಬಹುದು. ಪ್ರಥಮ ಚಿಕಿತ್ಸೆಯ ಅರಿವು ಹಾಗೂ ಅಳವಡಿಕೆಯನ್ನು ಕ್ಲಪ್ತ ಸಮಯದಲ್ಲಿ ಸೂಕ್ತ ಕ್ರಮದ ಪ್ರಕಾರ ಬಳಸುವುದರ ಮೂಲಕ ಸಾವು-ನೋವು, ಅಳಿವು-ಉಳಿವುಗಳನ್ನು ಹತೋಟಿಗೆ ತರಲು ಸಾಧ್ಯ.

ಪ್ರಾಥಮಿಕ ಚಿಕಿತ್ಸೆಯಲ್ಲಿ “ತಪ್ಪು’ 
ಹಾಗೂ “ಸರಿ’ ವಿಧಾನಗಳು

– ಬೆನ್ನು ಮೂಳೆಯ ಮುರಿತ ಹಾಗೂ
 ನರಗಳ ಮೇಲೆ ಹತೋಟಿ ತಪ್ಪಿರುವುದು: 
ಇಂತಹಾ ವ್ಯಕ್ತಿ ಕೈಕಾಲುಗಳ ಮೇಲೆ ಸ್ವಾಧೀನ ಕಳೆದುಕೊಂಡು ಎದ್ದೇಳಲು ಸಾಧ್ಯವಾಗದೆ, ಬಿದ್ದಲ್ಲಿ ತೀವ್ರ ರೀತಿಯ ಕುತ್ತಿಗೆ ಅಥವಾ ಬೆನ್ನಿನಲ್ಲಿ ನೋವನ್ನು ಅನುಭವಿಸುತ್ತಾನೆ. ಇಂತಹ ವ್ಯಕ್ತಿಯನ್ನು ಎತ್ತಿ ಕುಳ್ಳಿಸುವುದಾಗಲೀ, ಮಗ್ಗುಲಿಗೆ ತಿರುಗಿಸುವುದಾಗಲೀ ಮಾಡಬಾರದು. ಇದರಿಂದ ನರದ ಬಳ್ಳಿಗೆ ಇನ್ನೂ ಹೆಚ್ಚಿನ ಜಖಂ ತಗಲುತ್ತದೆ. ಒಬ್ಬರೇ ಈ ವ್ಯಕ್ತಿಯನ್ನು  ಎತ್ತಿ ಸಾಗಿಸುವ ಪ್ರಯತ್ನ ಮಾಡಬಾರದು. ಇಬ್ಬರು ಅಥವಾ ಮೂವರು ಸಹಾಯಕರು ತಲೆ, ಕುತ್ತಿಗೆ ಹಾಗೂ ಬೆನ್ನನ್ನು ಜಾಗ್ರತೆಯಿಂದ ಆಧಾರ ನೀಡಿ ನಿಧಾನಕ್ಕೆ ಮಲಗಿದ ಸ್ಥಿತಿಯಲ್ಲಿಯೇ ಎತ್ತಿ ಸಾಗಿಸಬೇಕು. ಕುತ್ತಿಗೆಯ ಬಳಿ ಪೆಟ್ಟಾಗಿದ್ದರೆ ಕುತ್ತಿಗೆ ತಿರುಗಿಸಬಾರದು. ಕುತ್ತಿಗೆಯ ಎರಡೂ ಬದಿಗಳಲ್ಲಿ ದಪ್ಪವಾದ ಬಟ್ಟೆ ಅಥವಾ ತಲೆದಿಂಬು ಇರಿಸಿದರೆ ಉತ್ತಮ. ಅಥವಾ ಸಹಾಯಕ್ಕೆ ಜೀವ ರಕ್ಷಕ ವಾಹನ ಬಂದು ತಲುಪಿದಲ್ಲಿ, ಕೊರಳು ಪಟ್ಟಿಯನ್ನು ಆಧರಿಸಿ ಆಸ್ಪತ್ರೆಗೆ ಸಾಗಿಸುವುದು ಉತ್ತಮ. ಉಸಿರಾಡಲು ತೊಂದರೆ ಇದ್ದಲ್ಲಿ, ಆಮ್ಲಜನಕವನ್ನು ಕೊಡಲಾಗುತ್ತದೆ. 

– ಕೈ ಹಾಗೂ ಕಾಲುಗಳ ಮೂಳೆ ಮುರಿತ:
ಇಂತಹ ವ್ಯಕ್ತಿ ಪೆಟ್ಟಿಗೊಳಗಾದ ಕೈ ಅಥವಾ ಕಾಲನ್ನು ಎತ್ತಲು ಸಾಧ್ಯವಾಗುವುದಿಲ್ಲ. ನೋವಿನಿಂದ ನರಳುತ್ತಾನೆ. ತೀವ್ರ ತರದ ಮೂಳೆಮುರಿತಗೊಂಡಿದ್ದರೆ ಕೈ/ಕಾಲು ವಿಕೃತ ರೂಪದಲ್ಲಿ  ಬಗ್ಗಿ ಹೋಗಿರಬಹುದು. ಇದನ್ನು ನೇರ ಪಡಿಸಲು ಪ್ರಯತ್ನ ಮಾಡಬಾರದು. ಈ ರೀತಿ ಮಾಡುವುದರಿಂದ ನೋವು ಜಾಸ್ತಿಯಾಗುವುದಲ್ಲದೇ, ಮೂಳೆಯ ಆಸುಪಾಸಿನಲ್ಲಿರುವ ನರ, ರಕ್ತನಾಳಗಳಿಗೆ ಪೆಟ್ಟು ತಗಲಬಹುದು.

ಕೈಯ ಮೂಳೆ ಮುರಿತಗೊಂಡಿದ್ದಲ್ಲಿ, ಆಧಾರಕ್ಕೆ ಬೈರಾಸು ಅಥವಾ ವಸ್ತ್ರದ ತುಂಡನ್ನು ಬಳಸುವುದು ಸೂಕ್ತ ಕ್ರಮ. ಮರದ ತುಂಡು ಅಥವಾ ಅಡಿಕೋಲು ಇದ್ದರೆ ಪೆಟ್ಟಾದ ಜಾಗಕ್ಕೆ ಆಧರಿಸಿ ಬಟ್ಟೆಯಿಂದ ಸುತ್ತಿದರೆ ವ್ಯಕ್ತಿಯ ನೋವು ಕಮ್ಮಿಗೊಳ್ಳುತ್ತದೆ. ಕಾಲಿನ ಮೂಳೆ ತುಂಡಾಗಿದ್ದರೆ, ಇದೇ ರೀತಿ ಮರದ ತುಂಡನ್ನು ಆಧಾರಕ್ಕೆ ಉಪಯೋಗಿಸಬಹುದು. ಅಥವಾ ಎರಡೂ ಕಾಲನ್ನು ಜೋಡಿಸಿ ದೊಡ್ಡ ಬಟ್ಟೆ ಅಥವಾ ಹೊದಿಕೆ ಉಪಯೋಗಿಸಿ ಕಟ್ಟುವುದರಿಂದಲೂ ಲಾಭವಿದೆ. ಜೀವ ರಕ್ಷಕ ವಾಹನದಲ್ಲಿ ಇಂತಹಾ ವ್ಯಕ್ತಿಗಳನ್ನು ಸಲೀಸಾಗಿ ಸಾಗಿಸಲು ಅಳವಡಿಸುವ ಸೂಕ್ತ ಪಟ್ಟಿ ಸಲಕರಣೆಗಳು ಲಭ್ಯವಿದ್ದು ಅದರ ಪ್ರಯೋಜನ ಪಡೆಯಬಹುದು.

– ಕೈ ಅಥವಾ ಕಾಲುಗಳ 
ಮಂಡಿ ಸ್ಥಾನಪಲ್ಲಟಗೊಳ್ಳುವುದು:

ಮೂಳೆ ಮುರಿತದ ನೋವಿಗಿಂತಲೂ ಕೀಲು ತಪ್ಪಿದ ದುರ್ದೈವಿ ವ್ಯಕ್ತಿ ನರಕಯಾತನೆ ಅನುಭವಿಸುತ್ತಾನೆ. ಇದನ್ನು ದಾರಿ ಬದಿಯಲ್ಲಿಯೇ ಎಳೆದು ಸರಿಪಡಿಸಲು ಪ್ರಯತ್ನ ನಡೆಸಬಾರದು. ಇದಕ್ಕೆ ಆಸ್ಪತ್ರೆಯಲ್ಲಿ ಅರಿವಳಿಕೆಯ ಔಷಧ ನೀಡಿ ಮಂಡಿಯನ್ನು ಮೊದಲಿನ ಸ್ಥಾನದಲ್ಲಿ ಕುಳ್ಳಿರಿಸಬೇಕಾಗುತ್ತದೆ. ಸಹಾಯಕ್ಕೆ ವಸ್ತ್ರ ಹಾಗೂ ಬೈರಾಸನ್ನು ಉಪಯೋಗಿಸುವುದು ಒಳಿತು.

– ರಕ್ತ ಸೋರುತ್ತಿರುವ 
ಕೈಕಾಲುಗಳ ಗಾಯದ ಬಗ್ಗೆ:

ಗಾಯದ ತೀವ್ರತೆ ಅಥವಾ ಬಳಬಳನೆ ಸೋರುತ್ತಿರುವ ರಕ್ತವನ್ನು ನೋಡಿ ಕಂಗಾಲಾಗಬಾರದು. ಪೆಟ್ಟಾದ ಕೈ/ಕಾಲನ್ನು ಕೆಳಗೆ ಜೋತು ಬಿಡಬಾರದು. ಎತ್ತಿ ಹಿಡಿಯುವುದರ ಮೂಲಕ ರಕ್ತ ನಷ್ಟವನ್ನು ಕುಂಠಿತಗೊಳಿಸಬಹುದು. ಮೇಲು ತೋಳು ಅಥವಾ ತೊಡೆಯ ಸುತ್ತ ಗಟ್ಟಿಯಾಗಿ ಬಟ್ಟೆಯನ್ನು ಸುತ್ತುವುದರ ಮೂಲಕ ಕೈ ಹಾಗೂ ಕಾಲಿನ ಗಾಯದ ರಕ್ತ ಸೋರಿಕೆಯ ಪ್ರಮಾಣವನ್ನು ಹತೋಟಿಯಲ್ಲಿರಿಸಬಹುದು. 

ಗಾಯದ ಮೇಲೆ ಮೂಢನಂಬಿಕೆಯಿಂದ ಮಣ್ಣು ಎರಚುವುದು, ಕಾಫಿ ಅಥವಾ ಚಹಾದ ಪುಡಿ ಹಾಕುವುದು ಬಹಳ ಹಾನಿಕಾರಕ. ನೀರಿನಿಂದ ತೊಳೆಯಬಹುದು. ಜಾಣ್ಮೆಯ ಕ್ರಮವೆಂದರೆ ಗಾಯವನ್ನು ಮುಟ್ಟಲು ಹೋಗದೆ ಶುಭ್ರ ಕೈ ವಸ್ತ್ರ ಅಥವಾ ಬಟ್ಟೆಯಿಂದ ಮುಚ್ಚುವುದು. ಇದರಿಂದ ಗಾಯಕ್ಕೆ ಸೋಂಕು ತಗಲುವ ಪ್ರಮೇಯವನ್ನು ತಪ್ಪಿಸಬಹುದು. ಗಾಯದಲ್ಲಿ ಗಾಜಿನ ತುಂಡು, ಕಲ್ಲಿನ ಪುಡಿ, ಮರಗಿಡಗಳ ಎಲೆ… ಇತ್ಯಾದಿ ಕಂಡುಬಂದಲ್ಲಿ ಅವುಗಳನ್ನು ಬಲಾತ್ಕಾರವಾಗಿ ಎಳೆಯಲು ಹೋಗಬಾರದು. ಇದರಿಂದ ರಕ್ತ ಸೋರಿಕೆ ಇನ್ನೂ ಹೆಚ್ಚಾಗಬಹುದು.

– ಕೈ ಕಾಲು, ಬೆರಳು 
ತುಂಡಾಗುವುದು:

ರಸ್ತೆ ಅಪಘಾತದಲ್ಲಿ ಕೈ ಅಥವಾ ಕಾಲಿನ ಬೆರಳು/ಬೆರಳುಗಳು ಕತ್ತರಿಸಲ್ಪಟ್ಟಾಗ ಅಥವಾ ನಜ್ಜುಗುಜ್ಜಾದಾಗ ಅದನ್ನು ಮರಳಿ ಜೋಡಿಸಿಕೊಳ್ಳುವ ಚಿಕಿತ್ಸೆಯ ಪ್ರಯೋಜನ ಹೊಂದುವ ಆಸೆ ಸಹಜವಾದದ್ದು. ಈ ಬೆರಳುಗಳನ್ನು ಬರೀ ಬಟ್ಟೆಯಲ್ಲಿ ಸುತ್ತಿ, ನೀರಿನಲ್ಲಿ ಹಾಕಿ ಅಥವಾ ಮಂಜುಗಡ್ಡೆ‌ಯ ಜತೆಗೆ ಹಾಕಿಡಬಾರದು. ಬೆರಳನ್ನು ಮೊದಲು ಶುಭ್ರವಾದ ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಅದನ್ನು ನೀರು ಅಥವಾ ಮಂಜುಗಡ್ಡೆ ಹೊಂದಿರುವ ಇನ್ನೊಂದು ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ಸಂಗ್ರಹಿಸಬೇಕು. ಈ ರೀತಿ ಬೇರ್ಪಟ್ಟ ಬೆರಳು/ಅಂಗ ಮಂಜುಗಡ್ಡೆಯ ಜತೆಗೆ ನೇರ ಸಂಪರ್ಕ ಹೊಂದದಂತೆ ಕಾಳಜಿ ವಹಿಸುವುದು ಅಗತ್ಯ. ಕನಿಷ್ಠ ಸಮಯದಲ್ಲಿ ಇದನ್ನು ರೋಗಿಯ ಜತೆಗೆ ಆಸ್ಪತ್ರೆಗೆ ತಲುಪಿಸಬೇಕಾಗುತ್ತದೆ. ಸುಮಾರು 4-6 ಗಂಟೆಗಳ ನಂತರ ನಡೆಸಲಾಗುವ ಶಸ್ತ್ರಚಿಕಿತ್ಸೆ ಫ‌ಲಪ್ರದವಾಗದೇ ಇರಬಹುದು. ಅಂತೆಯೇ ಸಂಪೂರ್ಣ ಜಜ್ಜಿಹೋದ ಅಥವಾ ಕಲ್ಮಶವಾದ ಬೆರಳು ಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿಯೆನಿಸುವುದಿಲ್ಲ.

ಕೊನೆಯದಾಗಿ ಗಮನದಲ್ಲಿಡಬೇಕಾದ ವಿಷಯವೆಂದರೆ ಅಪಘಾತದಿಂದ ಜರ್ಜರಿತವಾದ ವ್ಯಕ್ತಿಗೆ ಕೂಡಲೇ ನೀರು, ಎಳನೀರು, ಸೋಡಾ.. ಇತ್ಯಾದಿ ಕುಡಿಯಲು ಕೊಡಬಾರದು. ತುರ್ತು ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ  ರೋಗಿ ಕನಿಷ್ಠ 4-6 ಗಂಟೆ ಏನೂ ಆಹಾರ ಅಥವಾ ಪಾನೀಯ ತೆಗೆದುಕೊಳ್ಳದೇ ಇರಬೇಕು. ವ್ಯಕ್ತಿಯ ತುಟಿಗಳು ಒಣಗದೇ ಹಾಗೇ ಸ್ವಲ್ಪ ನೀರಿನ ಪಸೆಯನ್ನು ಹಚ್ಚಬಹುದೇ ವಿನಹಾ ಪಾನೀಯ ಕುಡಿಯಲು ಕೊಡುವುದರಿಂದ ಶಸ್ತ್ರಕ್ರಿಯೆ ನಡೆಸಲು ವಿಳಂಬವಾಗುತ್ತದೆ.

– ಡಾ| ಸೀತಾರಾಮ ರಾವ್‌ 
ವಿಭಾಗ ಮುಖ್ಯಸ್ಥರು
ಮೂಳೆ ಶಾಸ್ತ್ರ ವಿಭಾಗ
ಕೆಎಂಸಿ, ಮಂಗಳೂರು 

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.