ಹಾಕಿ ವಿಶ್ವ ಲೀಗ್: ಇಂದು ಸೆಮಿಫೈನಲ್; ಭಾರತಕ್ಕೆ ಆರ್ಜೆಂಟೀನಾ ಸವಾಲು
Team Udayavani, Dec 8, 2017, 1:27 PM IST
ಭುವನೇಶ್ವರ: ಭಾರತೀಯ ಹಾಕಿ ತಂಡವು ಹಾಕಿ ವಿಶ್ವ ಲೀಗ್ ಫೈನಲ್ ಕೂಟದ ಶುಕ್ರವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಮತ್ತು ಒಲಿಂಪಿಕ್ ಚಾಂಪಿಯನ್ ಆರ್ಜೆಂಟೀನಾ ತಂಡದ ಸವಾಲನ್ನು ಎದುರಿಸಲಿದೆ.
ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಆಡಿದ ಭಾರತವು ವಿಶ್ವದ ಮೂರನೇ ರ್ಯಾಂಕಿನ ಬೆಲ್ಜಿಯಂ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ ಸೋಲಿಸಿ ಅಚ್ಚರಿಗೊಳಿಸಿತ್ತು. ಶುಕ್ರವಾರದ ಸೆಮಿಫೈನಲ್ನಲ್ಲೂ ಭಾರತ ಅಂತಹುದೇ ನಿರ್ವಹಣೆ ನೀಡುವ ಉತ್ಸಾಹದಲ್ಲಿದೆ.
ಭಾರತ ತಂಡವನ್ನು ಸೋಲಿಸಲು ಅತ್ಯಂತ ಕಷ್ಟ. ಅವರು ಯಾವ ರೀತಿ ಆಡುತ್ತಾರೆಂದು ಊಹಿಸಲು ಸಾಧ್ಯವಿಲ್ಲ. ಇದನ್ನು ನಾವು ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಕಂಡಿದ್ದೇವೆ. ಈ ಕೂಟದ ಬಲಿಷ್ಠ ತಂಡಗಳಲ್ಲಿ ಒಂದಾದ ಬೆಲ್ಜಿಯಂ ತಂಡವನ್ನು ಸೋಲಿಸಿದ ಹುಮ್ಮಸ್ಸಿನಲ್ಲಿ ಭಾರತ ಇದೆ. ಹಾಗಾಗಿ ಭಾರತವನ್ನು ಹಗುರವಾಗಿ ಕಾಣಲು ಸಾಧ್ಯವಿಲ್ಲ ಎಂದು ಆರ್ಜೆಂಟೀನಾ ತಂಡದ ಡ್ರ್ಯಾಗ್ ಫ್ಲಿಕ್ ತಜ್ಞ ಗೊನಾjಲೊ ಪೀಲಟ್ ಹೇಳಿದ್ದಾರೆ.
ಅರ್ಜೆಂಟೀನಾ ತಂಡವು ಗುರುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಸೆಮಿಫೈನಲಿಗೇರಿದೆ. ಭಾರತವು ಪ್ರತಿದಾಳಿಯಲ್ಲಿ ಉತ್ತಮವಾಗಿದೆ. ಹಾಗಾಗಿ ನಾವು ಬಹಳ ಎಚ್ಚರಿಕೆಯಿಂದ ಆಡಬೇಕಾಗಿದೆ ಎಂದು ಪೀಲಟ್ ತಿಳಿಸಿದರು.