ಲಗಾಮಿಲ್ಲದ ಮಾತುಗಳು

Team Udayavani, May 18, 2019, 5:50 AM IST

ಈ ಬಾರಿಯೂ ಕೆಲವು ಐತಿಹಾಸಿಕ ಪುರುಷರ ಹೆಸರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದೆ. ಈ ಪೈಕಿ ಮಹಾತ್ಮ ಗಾಂಧಿಯ ಹತ್ಯೆಯ ಕುರಿತಾಗಿ ಮಾಡಿದ ಪ್ರಸ್ತಾವ ಪೂರ್ಣರೂಪದ ವಿವಾದವಾಗಿ ಮಾರ್ಪಟ್ಟಿದೆ. ಮಹಾತ್ಮ ಗಾಂಧಿ ಹತ್ಯೆ ವಿಚಾರವನ್ನು ಮೊದಲಿಗೆ ಎತ್ತಿರುವವರು ರಾಜಕಾರಣಿಯಾಗಿ ಪರಿವರ್ತಿತರಾಗಿರುವ ನಟ ಕಮಲಹಾಸನ್‌. ತಮಿಳುನಾಡಿನ ಉಪಚುನಾವಣೆಗೆ ಪ್ರಚಾರ ಮಾಡುತ್ತಿದ್ದ ವೇಳೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದು ಎಂದು ಅವರು ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆಯನ್ನುದ್ದೇಶಿಸಿ ನೀಡಿದ ಹೇಳಿಕೆ ವಿವಾದದ ಕಿಡಿಯೆಬ್ಬಿಸಿತು. ಎಲ್ಲ ಕಡೆಗಳಿಂದ ಈ ಹೇಳಿಕೆಗೆ ವಿರೋಧ ವ್ಯಕ್ತವಾದ ಬಳಿಕ ಕಮಲಹಾಸನ್‌ ಎಲ್ಲ ಧರ್ಮಗಳಲ್ಲಿ ಭಯೋತ್ಪಾದಕರು ಇದ್ದಾರೆ ಎಂದು ತನ್ನಿಂದಾದ ಪ್ರಮಾದಕ್ಕೆ ತೇಪೆ ಹಚ್ಚುವ ಪ್ರಯತ್ನವನ್ನೇನೋ ಮಾಡಿದರು. ಆದರೆ ಮರುದಿನ ಭೋಪಾಲ್ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಗೋಡ್ಸೆ ಕುರಿತಾಗಿ ನೀಡಿದ ಹೇಳಿಕೆ ಈ ವಿವಾದ ಇನ್ನಷ್ಟು ಉಲ್ಬಣಿಸುವಂತೆ ಮಾಡಿದೆ ಮಾತ್ರವಲ್ಲ ಬಿಜೆಪಿಗೂ ಈ ಹೇಳಿಕೆಯಿಂದ ಬಹಳ ಮುಜುಗರವಾಗಿದೆ.

ಕಾಂಗ್ರೆಸಿನ ದಿಗ್ವಿಜಯ್‌ ಸಿಂಗ್‌ ಎದುರಾಗಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರನ್ನು ಕಣಕ್ಕಿಳಿಸಿದಾಗಲೇ ಭೋಪಾಲ್ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಪ್ರಜ್ಞಾ ಸಿಂಗ್‌ ವಿರುದ್ಧ ಮಾಲೇಗಾಂವ್‌ನಲ್ಲಿ ಬಾಂಬ್‌ಸ್ಫೋಟಿಸಿದ ಆರೋಪವಿದೆ. ಆರೋಪ ಇನ್ನೂ ಸಾಬೀತಾಗಿಲ್ಲ ಹಾಗೂ ಅವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಹೀಗಾಗಿ ಕಾನೂನಿನ ದೃಷ್ಟಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಹಕ್ಕು ಅವರಿಗಿದೆ. ಆದರೆ ನೈತಿಕವಾಗಿ ಭಯೋತ್ಪಾದನೆಯ ಆರೋಪ ಹೊತ್ತಿರುವ ವ್ಯಕ್ತಿಯನ್ನು ಕಣಕ್ಕಿಳಿಸಿದ್ದು ಸರಿಯೇ ಎಂಬ ಜಿಜ್ಞಾಸೆ ಆರಂಭದಿಂದಲೇ ಇತ್ತು. ಪ್ರಜ್ಞಾ ಸಿಂಗ್‌ ನಡೆನುಡಿಗಳು ಕೂಡಾ ಈ ಪ್ರಶ್ನೆ ಇನ್ನಷ್ಟು ಗಾಢವಾಗುವಂತೆ ಮಾಡಿದೆ. ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಪ್ರಜ್ಞಾ ಸಿಂಗ್‌ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ.

ತನ್ನನ್ನು ಬಂಧಿಸಿದ ಪೊಲೀಸ್‌ ಅಧಿಕಾರಿ ಹೇಮಂತ್‌ ಕರ್ಕರೆ ಸಾವಿಗೆ ತನ್ನ ಶಾಪವೇ ಕಾರಣ ಎಂಬ ಹೇಳಿಕೆ ಹಲವು ದಿನ ಚರ್ಚೆಯಲ್ಲಿತ್ತು. ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಕರ್ಕರೆಯನ್ನು ಸರಕಾರ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿಯಿತ್ತು ಗೌರವಿಸಿದೆ. ಇಂಥ ಅಧಿಕಾರಿಗೆ ಅವಮಾನವಾಗುವ ಹೇಳಿಕೆ ನೀಡುವ ಮೂಲಕ ಪ್ರಜ್ಞಾ ಬಿಜೆಪಿಯ ದೇಶಭಕ್ತಿಯನ್ನು ವಿಪಕ್ಷಗಳು ಲೇವಡಿ ಮಾಡುವಂತೆ ಮಾಡಿದ್ದರು.

ಇದೀಗ ಗೋಡ್ಸೆ ದೇಶಭಕ್ತರಾಗಿದ್ದನು, ಎಂದೆಂದೂ ದೇಶಭಕ್ತರಾಗಿ ಇರುತ್ತಾನೆ. ಅವನನ್ನು ದೇಶದ್ರೋಹಿ ಎನ್ನುವವರಿಗೆ ಜನರು ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎನ್ನುವ ಮೂಲಕ ಪಕ್ಷಕ್ಕೆ ಭಾರೀ ಹಾನಿ ಮಾಡಿದ್ದಾರೆ. ಕಡೇ ಹಂತದ ಚುನಾವಣೆ ನಡೆಯಲು ಬರೀ 48 ತಾಸುಗಳು ಬಾಕಿಯಿರುವಾಗ ನೀಡಿರುವ ಹೇಳಿಕೆಯಿಂದಾಗಬಹುದಾದ ಪರಿಣಾಮವನ್ನು ಊಹಿಸಲು ರಾಜಕೀಯಕ್ಕೆ ಹೊಸಬರಾಗಿರುವ ಪ್ರಜ್ಞಾರಿಂದ ಸಾಧ್ಯವಾಗದಿರಬಹುದು. ಆದರೆ ಪಕ್ಷಕ್ಕೆ ಅದು ಅರಿವಾಗಿದೆ. ಹೀಗಾಗಿ ಸ್ವತಃ ಮೋದಿಯೇ ಈ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕಾಗಿ ಬಂತು. ಗಾಂಧಿ ಕುರಿತು ಹಗುರವಾಗಿ ಮಾತನಾಡಿದ ಪ್ರಜ್ಞಾರನ್ನು ಕ್ಷಮಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಮೋದಿ ಈ ಹೇಳಿಕೆಯಿಂದಾಗಬಹುದಾದ ಹಾನಿಯನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಅಂತೆಯೇ ಪ್ರಜ್ಞಾ ಮತ್ತು ಅವರ ಹೇಳಿಕೆಯನ್ನು ಸಮರ್ಥಿಸಿ ಟ್ವೀಟ್ ಮಾಡಿರುವ ಇಬ್ಬರಿಗೆ ಅಧ್ಯಕ್ಷ ಅಮಿತ್‌ ಶಾ ನೊಟೀಸ್‌ ಜಾರಿಗೊಳಿಸಿದ್ದಾರೆ. ಓರ್ವ ನಾಯಕ ಅಮಾನತುಗೊಂಡಿದ್ದಾರೆ.

ಮೋದಿ ಪ್ರಚಾರದ ಕಡೇ ದಿನ ಕಡೇ ಗಳಿಗೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು ಕೂಡಾ ಈ ಬಾರಿಯ ಚುನಾವಣೆಯ ಒಂದು ವಿಶೇಷತೆ. ಪ್ರಧಾನಿಯಾಗಿ ಐದು ವರ್ಷದಲ್ಲಿ ಮೋದಿ ಎದುರಿಸಿದ ಮೊದಲ ಪತ್ರಿಕಾಗೋಷ್ಠಿಯಿದು. ಐದು ವರ್ಷ ತನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ ಹೇಳುವ ಉದ್ದೇಶದಿಂದ ಮೋದಿ ಪತ್ರಿಕಾಗೋಷ್ಠಿಗೆ ಬಂದಿದ್ದರೂ ಪ್ರಜ್ಞಾಸಿಂಗ್‌ ಹೇಳಿಕೆಗೆ ಮತ್ತೂಮ್ಮೆ ಸ್ಪಷ್ಟೀಕರಣ ನೀಡುವುದೂ ಗೋಷ್ಠಿಯ ಇನ್ನೊಂದು ಉದ್ದೇಶವಾಗಿತ್ತು. ಮಾತ್ರವಲ್ಲದೆ ಪತ್ರಕರ್ತರನ್ನು ಎದುರಿಸದ ಪ್ರಧಾನಿ ಎಂಬ ಅಪವಾದವನ್ನು ತಪ್ಪಿಸುವ ಇರಾದೆಯೂ ಇರಬಹುದು. ಪತ್ರಿಕಾಗೋಷ್ಠಿಯ ಉದ್ದೇಶ ಏನೇ ಇದ್ದರೂ ಓರ್ವ ಅಭ್ಯರ್ಥಿಯ ಹೇಳಿಕೆಯಿಂದಾದ ಹಾನಿಯನ್ನು ಸರಿಪಡಿಸಲು ಮೋದಿಯಂಥ ಪ್ರಭಾವಿ ನಾಯಕರೇ ಬರಬೇಕಾಯಿತು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ದಿಗ್ವಿಜಯ್‌ ಸಿಂಗ್‌ ನೀಡಿದ ಹಿಂದು ವಿರೋಧಿ ಹೇಳಿಕೆಯ ಲಾಭ ಪಡೆಯಲು ಬಿಜೆಪಿ ಪ್ರಜ್ಞಾ ಸಿಂಗ್‌ರನ್ನು ಕಣಕ್ಕಿಳಿಸಿತ್ತು. ಆದರೆ ಪ್ರಜ್ಞಾ ಸಿಂಗ್‌ ಬೆನ್ನುಬೆನ್ನಿಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ತನ್ನ ರಾಜಕೀಯ ಅಪ್ರಬುದ್ಧತನವನ್ನು ಜಾಹೀರುಪಡಿಸಿದ್ದಾರೆ. ಭೋಪಾಲ್ ಹಿಂದಿನಿಂದಲೂ ಬಿಜೆಪಿಯ ಭದ್ರಕೋಟೆ. ಈ ಸಲ ಎಲ್ಲಿಯಾದರೂ ಇಲ್ಲಿ ಬಿಜೆಪಿ ಸೋತರೆ ಪಕ್ಷಕ್ಕೆ ಆಗುವ ಮುಜುಗರ ಅಷ್ಟಿಷ್ಟಲ್ಲ. ಅಭ್ಯರ್ಥಿಗಳನ್ನು ಆರಿಸುವಾಗ ಎಲ್ಲ ಆಯಾಮಗಳಿಂದಲೂ ಆಲೋಚಿಸಬೇಕಾಗುತ್ತದೆ ಎಂಬ ಪಾಠವನ್ನು ಈ ಆಯ್ಕೆ ಎಲ್ಲ ಪಕ್ಷಗಳಿಗೆ ಕಲಿಸಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಗಳಲ್ಲಿ ಅನೇಕ ಬಾರಿ ಪಾಕ್‌ ಪರವಾದ ಘೋಷಣೆ, ಪಾಕ್‌ ಗುಣಗಾನಗಳು ನಡೆದಿರುವುದು ಪ್ರತಿಭಟನೆಯ ನೈಜ ಉದ್ದೇಶವನ್ನು ಪ್ರಶ್ನಿಸುವಂತೆ...

  • ಹಲವು ಪ್ರಮುಖ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿ ರಾಕೇಶ್‌ ಮಾರಿಯಾ ಅವರ ದಕ್ಷತೆ ಬಗ್ಗೆ ಯಾರೂ ಅನುಮಾನ ಪಡುವಂತಿಲ್ಲ. ಭಯೋತ್ಪಾದನಾ ಪ್ರಕರಣಗಳ...

  • ಬ್ರಿಟಿಶ್‌ ಸಂಸದೆ ಡೆಬ್ಬಿ ಅಬ್ರಹಾಂ ಅವರ ವಿಸಾ ರದ್ದುಗೊಳಿಸಿ ಹಾಗೂ ಟರ್ಕಿಯ ಅಧ್ಯಕ್ಷ ಎರ್ಡೊಗನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ತಿರುಗೇಟು...

  • ಮಹಿಳೆಯರನ್ನು ಏಕೆ ಕಮಾಂಡ್‌ ಆಗಿ ನೇಮಿಸುತ್ತಿಲ್ಲ ಎನ್ನುವ ವಿಚಾರಕ್ಕೆ ಕೇಂದ್ರ ಎದುರಿಟ್ಟ ತರ್ಕ. ಮಹಿಳೆಯರನ್ನು ಕಮಾಂಡ್‌ ಆಗಿ ಸ್ವೀಕರಿಸಲು ಸೇನೆಯಲ್ಲಿರುವ...

  • ಪ್ರತಿಸಲ ಚುನಾವಣೆ ಮುಗಿದ ಕೂಡಲೇ ಚುನಾವಣಾ ಆಯೋಗ ಚಲಾವಣೆಯಾದ ಒಟ್ಟು ಮತಗಳ ಪ್ರಮಾಣವನ್ನು ಬಹಿರಂಗಪಡಿಸುತ್ತದೆ. ಒಂದು ವೇಳೆ ಮತದಾನ ಪ್ರಮಾಣ ಶೇ.80 ಆಗಿದ್ದರೆ ಅತ್ಯುತ್ತಮ...

ಹೊಸ ಸೇರ್ಪಡೆ